ಮಂಗಳವಾರ, ನವೆಂಬರ್ 19, 2019
22 °C

ಮಾಯಕೊಂಡ: ಟಿಕೆಟ್‌ಗಾಗಿಯೇ ಪೈಪೋಟಿ

Published:
Updated:

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ದೆಹಲಿ ಮತ್ತು ಬೆಂಗಳೂರಿನಲ್ಲಿ ತೀವ್ರಗೊಂಡಿದ್ದರೆ, ಜಿಲ್ಲೆಯಲ್ಲಿ ಹಾಲಿ ಶಾಸಕರನ್ನು ಘೇರಾವ್ ಮಾಡುವ ಮೂಲಕ ಚುನಾವಣೆಯ ರಾಜಕೀಯ ರಂಗತಾಲೀಮಿಗೆ ಮಾಯಕೊಂಡ ಕ್ಷೇತ್ರದ ಮತದಾರರು ಚಾಲನೆ ನೀಡಿದ್ದಾರೆ.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರು ಕ್ಷೇತ್ರಕ್ಕೆ ತಾಲ್ಲೂಕಿನ ಮಾನ್ಯತೆ ದೊರಕಿಸಿಕೊಟ್ಟಿಲ್ಲ. ಅಲ್ಲದೇ, ಅಭಿವೃದ್ಧಿ ಕಾರ್ಯಗಳನ್ನೂ ಮಾಡಿಲ್ಲ ಎಂದು ಮತದಾರರು ನೇರವಾಗಿಯೇ ಆರೋಪಿಸಿ ಚುನಾವಣೆ ಪ್ರಕ್ರಿಯೆಗೆ `ಬಿಸಿ' ಮುಟ್ಟಿಸಿದ್ದಾರೆ.ಚುನಾವಣೆಗೆ ತಿಂಗಳು ಬಾಕಿ ಇರುವಾಗಲೇ ಇಷ್ಟೊಂದು `ಗರಂ' ಆಗಿರುವ ಮಾಯಕೊಂಡ ಕ್ಷೇತ್ರದ ಮತದಾರರು, ಕಾಂಗ್ರೆಸ್ಸೇತರ ಪಕ್ಷಗಳತ್ತಲೇ ಹೆಚ್ಚು ಒಲವು ತೋರಿರುವುದು ಚುನಾವಣೆಯ ಇತಿಹಾಸದ ಪುಟಗಳಲ್ಲಿ ನಿಚ್ಚಳವಾಗಿ ದಾಖಲಾಗಿದೆ.

1978ಕ್ಕೂ ಮುನ್ನ ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲೇ ಇದ್ದ ಮಾಯಕೊಂಡ ಹೋಬಳಿ, 1978ರಲ್ಲಿ ಸ್ವತಂತ್ರ ವಿಧಾನಸಭಾ ಕ್ಷೇತ್ರವಾಯಿತು. 1978ರಿಂದ 2008ರವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಮಾಯಕೊಂಡ, 2008ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾಯಿತು. 1978ರಿಂದ 2008ರವರೆಗೆ ಕ್ಷೇತ್ರದಲ್ಲಿ 4 ಬಾರಿ ಬಿಜೆಪಿ, 2 ಬಾರಿ ಕಾಂಗ್ರೆಸ್, 2 ಬಾರಿ ಜನತಾ ಪಕ್ಷ ಅಧಿಕಾರದ ಗದ್ದುಗೆ ಏರಿವೆ.1978ರ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸುವ ಮೂಲಕ ಕಾಂಗ್ರೆಸ್ಸಿನ ನಾಗಮ್ಮ ಕೇಶವಮೂರ್ತಿ ಜಿಲ್ಲೆಯಿಂದ ವಿಧಾನಸಭೆ ಪ್ರವೇಶಿಸಿದ ಎರಡನೇ ಮಹಿಳೆ  ಖ್ಯಾತಿಗೆ ಪಾತ್ರರಾದರು. ನಾಗಮ್ಮ ಅವರಿಗಿಂತ ಮುನ್ನ 1952ರಲ್ಲಿ ಬಳ್ಳಾರಿ ಸಿದ್ದಮ್ಮ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಜಿಲ್ಲೆಯಿಂದ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1983ರಲ್ಲಿ ಸಮಾಜವಾದಿ ಕೆ.ಜಿ. ಮಹೇಶ್ವರಪ್ಪ ಹಾಗೂ 1985ರಲ್ಲಿ ಕೆ. ಮಲ್ಲಪ್ಪ ಜನತಾ ಪಕ್ಷ (ಜೆಪಿ)ದಿಂದ ಗೆದ್ದಿದ್ದರು. 1989ರಲ್ಲಿ ಪುನಃ ನಾಗಮ್ಮ ಅವರು ಗೆಲುವಿನ ಮೂಲಕ ಸಚಿವ ಸ್ಥಾನವನ್ನೂ ಅಲಂಕರಿಸಿದರು. 1994, 1999, 2004ರ ಚುನಾವಣೆಯಲ್ಲಿ ಹಾಲಿ ಸಚಿವ ಎಸ್.ಎ. ರವೀಂದ್ರನಾಥ್ `ಹ್ಯಾಟ್ರಿಕ್' ಗೆಲುವು ಸಾಧಿಸಿದ್ದಾರೆ.2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಸವರಾಜ ನಾಯ್ಕ ಅವರಿಗೆ ಟಿಕೆಟ್ ದೊರೆತಿರಲಿಲ್ಲ. ಆದರೆ, ಅಭ್ಯರ್ಥಿ ಹೆಸರು ಘೋಷಣೆಗೆ ಕೇವಲ 30 ನಿಮಿಷಗಳ ಮುಂಚೆ ಬಿಜೆಪಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದ ಬಸವರಾಜ ನಾಯ್ಕ ಅವರ ಪಾಲಿಗೆ  `ಅದೃಷ್ಟ ದೇವತೆ'ಯಾಗಿ ಬಿಜೆಪಿ ಕೈ ಹಿಡಿದಿತ್ತು. ಬಿಜೆಪಿಯ ನಾಮಬಲ ಮತ್ತು ರವೀಂದ್ರನಾಥ್ ಅವರ ಕೃಪಾ ಕಟಾಕ್ಷದಿಂದಾಗಿ ಶಾಸಕ ಮತ್ತು ರಾಜ್ಯ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಅದೃಷ್ಟವೂ ಬಸವರಾಜ ಅವರಿಗೆ ಒಲಿದು ಬಂದಿತ್ತು. ಈ ಕ್ಷೇತ್ರದಲ್ಲಿ 1985ರ ನಂತರ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್ ಮತ್ತು ಜೆಪಿ, ಬಿಜೆಪಿಯ ಸತತ ಗೆಲುವಿಗೆ ರತ್ನಗಂಬಳಿ ಹಾಸಿಕೊಟ್ಟಿವೆ.ಕ್ಷೇತ್ರದಲ್ಲಿ ಸಾಧು ಲಿಂಗಾಯತ ಮತದಾರರು ಪ್ರಾಬಲ್ಯ ಹೊಂದಿದ್ದಾರೆ ಎಂದು ಮೇಲ್ನೋಟಕ್ಕೆ ಗೋಚರಿಸಿದರೂ, ಪರಿಶಿಷ್ಟ ಜಾತಿ, ಪಂಗಡದ ಮತದಾರರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಉಳಿದಂತೆ ಮುಸ್ಲಿಂ, ಕುರುಬ, ಉಪ್ಪಾರ, ಬ್ರಾಹ್ಮಣ ಮತ್ತು ಇತರ ಜಾತಿಗಳ ಮತದಾರರೂ ಕ್ಷೇತ್ರದಲ್ಲಿದ್ದಾರೆ.  ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯಿಂದ ಬಸವರಾಜ ನಾಯ್ಕ, ಜೆಡಿಎಸ್‌ನಿಂದ ಕೆ.ಜಿ.ಆರ್. ನಾಯ್ಕ ಅಭ್ಯರ್ಥಿ ಎಂದು ಸ್ಪಷ್ಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗಿಲ್ಲ. ಉಳಿದಂತೆ ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಲ್ಲಿ ಆಕಾಂಕ್ಷಿಗಳ ದಂಡೇ ನೆರೆದಿದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಟಿಕೆಟ್ ಪಡೆಯುವುದು ಅಭ್ಯರ್ಥಿಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ. ಅಭ್ಯರ್ಥಿಗಳ ಘೋಷಣೆ ಬಳಿಕ ರಾಜಕೀಯ ಪಡಸಾಲೆಯಲ್ಲಿ ಗದ್ದುಗೆ ಯಾರು ಏರುತ್ತಾರೆ ಎಂಬ ಪ್ರಶ್ನೆಗೆ ಮತದಾರರ ಮನದಲ್ಲಿ ಉತ್ತರ ಭದ್ರವಾಗಿದೆ!

ಪ್ರತಿಕ್ರಿಯಿಸಿ (+)