ಭಾನುವಾರ, ಜೂನ್ 20, 2021
25 °C

ಮಾಯಕೊಂಡ ನನ್ನ ತವರು ಮನೆ: ಸಿಎನ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ತಾಯಿ ಮಕ್ಕಳದ್ದು ಅವಿನಾಭಾವ ಸಂಬಂಧ. ಮಾಯಕೊಂಡ ಜನತೆ ಇಂತಹ ಮಾತೃ ಸ್ಥಾನ ನೀಡಿದ್ದಾರೆ. ಬೆಂಗಳೂರು ನನ್ನ ಹುಟ್ಟೂರಾದರೂ ಕೂಡ ಮಾಯಕೊಂಡ ನನ್ನ ತವರು ಮನೆ ಎಂದು ವನಿತಾ ಸಮಾಜದ ಗೌರವ ಅಧ್ಯಕ್ಷೆ, ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅಭಿಪ್ರಾಯಪಟ್ಟರು.ನಗರದ ರೋಟರಿ ಬಾಲ ಭವನದಲ್ಲಿ ನಾಗಮ್ಮ ಕೇಶವಮೂರ್ತಿ ಅಭಿಮಾನಿ ಬಳಗ ಸೋಮವಾರ ಗೌರವ ಡಾಕ್ಟರೇಟ್ ಪಡೆದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಮೂಲತಃ ಬೆಂಗಳೂರಿನವಳಾದ ನಾನು ದಾವಣಗೆರೆಗೆ ಪ್ರತಿಷ್ಠಿತ ಚನ್ನಗಿರಿ ಮನೆತನಕ್ಕೆ ಸೊಸೆಯಾಗಿ ಬಂದೆ. ಅಂದು ದೊಡ್ಡ ಮನೆತನದ ಹೆಣ್ಣು ಮಕ್ಕಳು ಮನೆ ಹೊರಗೆ ಹೋಗುವಂತಹ ವಾತಾವರಣ ಇರಲಿಲ್ಲ. ಆಗ 1968ರಲ್ಲಿ ಮಾಯಕೊಂಡ ಕ್ಷೇತ್ರದಿಂದ ಶಾಸಕಳಾದೆ. ಅಲ್ಲಿನ ಜನತೆ ನನ್ನನ್ನು ಪ್ರೀತಿ, ವಿಶ್ವಾಸ, ಅಭಿಮಾನ, ಗೌರವದಿಂದ ತಾಯಿಯಂತೆ ಕಂಡಿದ್ದಾರೆ. ಇದು ಶಾಸಕ, ಸಚಿವ ಸ್ಥಾನಕ್ಕಿಂತ ದೊಡ್ಡದು. ಅಧಿಕಾರ ಶಾಶ್ವತವಲ್ಲ. ಜನರ ಪ್ರೀತಿ, ವಿಶ್ವಾಸ, ಅಭಿಮಾನವನ್ನು ಎಂದೆಂದಿಗೂ ಮರೆಯಲು ಆಗದು ಎಂದು ಆನಂದಭಾಷ್ಪ ಮಿಡಿದು ಹೇಳಿದರು.ಅಭಿಮಾನಿ ಬಿ.ಎಂ. ಸತೀಶ್ ಮಾತನಾಡಿ, ಸಮಾಜ ಸೇವಕರು ರಾಜಕೀಯಕ್ಕೆ ಬಂದರೆ ಆ ಕ್ಷೇತ್ರಕ್ಕೆ ಶೋಭೆ ಹೆಚ್ಚುತ್ತದೆ. ಕೆಲವರು ಅಧಿಕಾರಕ್ಕಾಗಿ ರಾಜಕೀಯ ಪ್ರವೇಶ ಮಾಡುತ್ತಾರೆ. ಆದರೆ, ನಾಗಮ್ಮ ಕೇಶವಮೂರ್ತಿ ಅವರು ಸಮಾಜಸೇವೆಗಾಗಿ ರಾಜಕಾರಣ ಮಾಡಿದರು. ಗ್ರಾಮೀಣ ಪ್ರದೇಶದ ದಲಿತರ ಕೇರಿಗಳಿಗೆ ನಾಗರಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರಮಿಸಿದರು. ನಾಗಮ್ಮ ಅವರು ಪ್ರಾಮಾಣಿಕ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದರು. ಹೂವಿನಮಡು ಚಂದ್ರಣ್ಣ ಮಾತನಾಡಿ, ನಾಗಮ್ಮ ಕೇಶವಮೂರ್ತಿ ಅವರು `ದಾವಣಗೆರೆ ಇಂದಿರಾಗಾಂಧಿ~. ಶೋಷಿತರ, ದನಿಯಿಲ್ಲದವರ ದನಿ ಆಗಿದ್ದಾರೆ ಎಂದು ಬಣ್ಣಿಸಿದರು.ಕುಕ್ಕವಾಡ ರುದ್ರೇಗೌಡ, ಕಂದಗಲ್ ಭರಮಪ್ಪ, ಅತ್ತಿಗೆರೆ ರವಿ, ಬಸಾಪುರ ತಿಪ್ಪೇಶ್, ಗುರುಶಾಂತಪ್ಪ, ನಂದಿಗೌಡ, ಕೋಲ್ಕುಂಟೆ ನಾಗರಾಜಪ್ಪ, ಕುಕ್ಕವಾಡ ಮಹೇಶಪ್ಪ, ಕೆ. ಮಂಜುಳಾ, ಕೈದಾಳೆ ರುದ್ರಪ್ಪ, ಚಂದ್ರಣ್ಣ ಮೂಲಿಮನೆ ಉಪಸ್ಥಿತರಿದ್ದು, ಅನುಭವ ಹಂಚಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.