`ಮಾಯ'ದಂತ ಚುನಾವಣೆ ಬಂತಣ್ಣ...

7
ವಾರದ ವಿನೋದ

`ಮಾಯ'ದಂತ ಚುನಾವಣೆ ಬಂತಣ್ಣ...

Published:
Updated:
`ಮಾಯ'ದಂತ ಚುನಾವಣೆ ಬಂತಣ್ಣ...

ಯಶೋದಮ್ಮನ್ನ ಬೋಂಡದಂಗಡಿ ಮುಂದೆ ಕೂತ್ಕಂಡು `ಮಾಯದಂತ ಮಳೆ ಬಂತಣ್ಣ..ಮುದಗಾದ ಕೆರೆಗೆ..' ಅಂತ ದೀಕ್ಷಿತ ಮೂಗಲ್ಲೇ ಗೊಯ ಗೊಯ ಅಂತಿದ್ದ. ಅಲ್ಲೇ ಚುನಾವಣಾ ಧ್ಯಾನದಲ್ಲಿ ಮುಳುಗಿದ್ದ ಪರ್ಮೇಶಿ  `ಸಾಕು ನಿಲ್ಸಲೇ! ಎಲ್ಲೈತ್ಲಾ ಮಳೆ? ಬಂದದ್ದು ಮಳೆಯಲ್ಲ, ಮಾಯದಂತ ಚುನಾವಣೆ. ಮುಟ್ಟಿ ನೋಡ್ಕಳೋ ಅಂಗಾಗಿದೆ. ಇವನೇನೋ ಇಲ್ಲಿ  ಮೊಳೆ ಕುಯ್ತಿದಾನೆ' ಎಂದು ರೇಗಿದ.`ಯಾಕೆ ಪರ್ಮೇಶಿ, ಇಷ್ಟು ಅಪ್‌ಸೆಟ್ಟಾಗಿದೀಯ?' ನಾಣಿ ಕೇಳಿದ.

`ಥೂ ಇದರಜ್ಜೀನ್! ಎಡವಟ್ಟಾಗೋಯ್ತಲ್ಲೋ? ದುರ್ಭಿಕ್ಷದಲ್ಲಿ ಅಧಿಕ ಮಾಸ ಅನ್ನೋ ಹಾಗೆ  ವಿಧಾನಸಭೆ ಚುನಾವಣೆಗೆ ಮುಂಚೆನೇ ಪಂಚಾಯ್ತಿ ಎಲೆಕ್ಷನ್ ಬಂದು ರೇಜಿಗೆ ಆಗೋಗೈತೆ' ಹಲುಬಿದ ಪರ್ಮೇಶಿ.`ಯಾಕ್ಲಾ ಪರ್ಮೇಶಿ? ಏನಾಯ್ತಲೇ? ಪಂಚಾಯ್ತಿ ಎಲೆಕ್ಷನ್‌ಗೆ ಟಿಕೆಟ್ ಸಿಕ್ಲಿಲ್ವಾ ಎಂಗೆ?'

`ಟಿಕೇಟ್ ಕೊಡಕ್ಕೆ ಎಲ್ಲಾ ಸಾಲುಮಕ್ಕೆ ನಿಂತವ್ರೆ. ಆದ್ರೆ ಎಲೆಕ್ಷನ್‌ಗೆ ನಿಂತ್ಕಳೋ ಅಂಗಿಲ್ಲ, ಸುಮ್ಕಿರೋ ಅಂಗಿಲ್ಲ ಅನ್ನೋ ಅಂಗಾಗೈತೆ'

`ನಿಂದು ಬತಾಸ್ ನಗರ ಮಾಮೂಲಿ ತಾನೇ? ಅಲ್ಲಿಂದಲೇ ನಿಂತ್ಕೊ'`ಎಂಗೆ ನಿಂತ್ಕಂತೀಯ? ಜನ ಓಟು ಕೇಳಕ್ಕೆ ಓದ್ರೆ ಕೆರ ತಗಂಡು ಒಡೀತಾರೆ ಅಷ್ಟೇ..!'

`ಯಾಕೆ? ಅಂತಾದ್ದೇನು ಮಾಡಿದೀಯ ನೀನು?'`ಏನು ಮಾಡಿದಾನೆ ಅಂತ ಅಲ್ಲ, ಏನೂ ಮಾಡಿಲ್ಲ ಅಂತಾನೇ ಜನ ರೊಚ್ಚಿಗೆದ್ದಿರೋದು'  ದೀಕ್ಷಿತ ಸಿಬಿರು ಎಬ್ಬಿದ.

`ಯಾವ್ ನನ್ ಮಗ ಅಂಗಂದೋನು?' ಗುಟುರು ಹಾಕಿದ ಪರ್ಮೇಶಿ.`ಯಾರೇನು ಹೇಳೋದು? ಆ ಗೂರಲುಮಠ `ಬಗಡಿ ಗೂಟ' ಪತ್ರಿಕೇಲಿ ನಿನ್ನ ಬಗ್ಗೆ ಕೆಮ್ಮಿ, ಕ್ಯಾಕರಿಸಿ ಉಗುದು ಮಡಗವ್ನೆ..'

`ಆ ಗೂರಲಿಗೆ ಏನ್ಲಾ ಗೊತ್ತು ನನ್ ಕಷ್ಟ, ಮಾಡಕ್ಕೆ ಬೇರೆ  ಕ್ಯಾಮೆ ಇಲ್ದೆ ಒರಲವ್ನೆ. ಅದ್ನೆಲ್ಲಾ ನೀವೂ ನಂಬ್ತೀರೇನ್ಲಾ?'

`ಜನ ನಂಬ್ತಾರೆ ! ಅಲ್ಲ ಕಣಲೇ! ಆ ಗೂರಲುಮಠಂಗೆ ಒಂದಿಷ್ಟು  ಬಿಸಾಕಿ ಅಡ್ಜೆಸ್ಟ್ ಮಾಡ್ಕಳಕಿಲ್ಲವಾ?'`ನಂಗೆ ಅಷ್ಟು ಗೊತ್ತಾಗಕಿಲ್ವಾ? ಆ ಗೂರುಲುಮಠ ಉಂಗುರ, ವಾಚು ಏನೂ ಮುಟ್ಟಾಕಿಲ್ಲ, ನಾ ಚಮಚಾ ಅಲ್ಲ, 24 ಕ್ಯಾರೆಟ್ ಸಾಚಾ ಅಂತಾನೆ ಬಡ್ಡಿಮಗ. ನಮ್ ಜಗದೀಶ ಶೆಟ್ರು ಭಾರೀ ಭಾರೀ ಮಠಕ್ಕೆಲ್ಲಾ ಕೋಟಿ ಕೋಟಿ ಸುರುದ್ರು. ಆದರೇನು ಪ್ರಯೋಜನ? ಚಿಕ್ಕಮಠ ಅವರನ್ನ ಒಲಿಸಿಕೊಳ್ಳಕ್ಕಾಯ್ತೊ? ಅಂಗೇ ಈ ಗೂರಲೂಮಠನೂ ಚಿಕ್ಕಮಠ ಅವರಪ್ಪ. ಯಾತಕ್ಕೂ ಬಗ್ಗಲ್ಲ ಅಂತಾನೆ..'

`ಅದು ಹಾಳಾಗೋಗ್ಲಿ, ನೀನಾದ್ರೂ ಜನಕ್ಕೆ ಒಂದಿಷ್ಟು ಅಭಿವೃದ್ಧಿ ಅಂತ ಮಾಡಬಾರದಾಗಿತ್ತಾ?'`ನಂಗೇನ್ಲಾ ಗೊತ್ತಿತ್ತು- ಇಷ್ಟು ಬಿರ‌್ರನೆ ಪಂಚಾಯ್ತಿ ಎಲೆಕ್ಷನ್ ಬತ್ತದೆ ಅಂತ. ಅವಸರದಲ್ಲಿ ಅಜ್ಜಿ ಮೈ ನೆರುದ್ಲು ಅನ್ನೋ ಅಂಗಾಗಿದೆ. ಸಾಲದ್ದಕ್ಕೆ ನನ್ ಲೆಕ್ಕಾಚಾರನೇ ತಲೆಕೆಳಕಾಗೈತೆ..'`ಏನದು? ನಿನ್ನ ಲೆಕ್ಕಾಚಾರ?'

`ಮೀಸಲಾತಿ ಬದಲಾಯ್ತದೆ..ಎಂಗಿದ್ರೂ ಬತಾಸ್ ನಗರ ಕೈ ಬಿಟ್ಟಂಗೇಯ ಅಂದ್ಕಂಡಿದ್ದೆ. ಈಗ ನೋಡುದ್ರೆ ಹಳೇ ಗಂಡನ ಪಾದವೇ ಗತಿ ಅನ್ನೋ ಅಂಗಾಗಿದೆ..'`ಓಗ್ಲಿ ಅತ್ಲಾಗೆ ಈ ಸಾರಿ ಎಲೆಕ್ಸನ್ ಆಸೆ ಬಿಡ್ಬಿಡು..'

`ಎಲ್ಲಾರ ಉಂಟೇನ್ಲಾ? ಖೋಡೆ ಎಣ್ಣೆ ಬಂದಾಗ ಕಣ್ ಮುಚ್ಕಂಡ್ರು ಅಂದಂಗಾಯ್ತು. ಪಂಚಾಯ್ತಿ ಎಲೆಕ್ಸನ್ ದೊಡ್ ಎಲೆಕ್ಷನ್‌ಗೆ ಚಿಮ್ಮು ಹಲಗೆ ಇದ್ದಂಗೆ. ಈಗ ಇದು ಗುಮ್ಮು ಹಲಗೆ ಆಗೈತೆ. ಇಲ್ ಸೋತ್ರೆ ಯಾವ್ ನನ್ಮಗ  ಎಂಎಲ್‌ಎ ಎಲೆಕ್ಷನ್‌ಗೆ ನನ್ನನ್ನ ಹಿಂದ್ ಬಿಟ್ಕಂಡಾನು? 500 ಓಟು ಹಾಕ್ಸೋ ಯೋಗ್ಯತೆ ಇಲ್ಲ ಅಂತ ಛೀ, ಥೂ, ಹಚಾ ಅಂತ ನಾಯಿ ತರ ಅಟ್ತಾರೆ. ಕಾಸು ಎಂಗೆ ಗೆಬರಿಕೊಳ್ಳೋದು ಅಂತ ಯೋಚ್ನೆ ಆಗೋಗೈತೆ..'`ಅಲ್ಲ ಪರಿಸ್ಥಿತಿ ಯಾಕೆ ಹೀಗಾಯ್ತು ಅಂತ..'

`ಈ ಚರಂಡಿಗೆ ಕೈ ಹಾಕಿದ್ದೇ ಅಲ್ಲ ನೋಡು..'`ರಸ್ತೆ ಕಂಟ್ರಾಕ್ಟಲ್ಲಿ ಕಂಠಮಟ್ಟ ನುಂಗಿದ್ಯಲ್ಲ ಈ ಚರಂಡಿಗೆ ಯಾಕೆ ಕೈ ಹಾಕ್ದೆ. ಅದೇನೋ ಹೇಳ್ತಾರಲ್ಲ, ಬೀದಿ ಬಾಗಲಲ್ಲಿ ಹೋಗೋದು ಬಿಟ್ಟು ಬಚ್ಚಲು ಬಾಯಲ್ಲಿ ಹಿಡ್ಕಂಡ್ರು ಅಂತ..'`ಚರಂಡಿ ಅಂದ್ರೆ ಮಾಮೂಲಿ ಚರಂಡಿ ಅಲ್ಲಲೇ ಒಳ ಚರಂಡಿ. ಊರೆಲ್ಲಾ ಅಗೆದು ಅಂಗೇ ಬಿಟ್ಟು ಓಗವ್ರೆ. ಒಳ ಚರಂಡಿ ಆಗಗಂಟ  ಡಾಂಬರು ರಸ್ತೆ ಆಗಂಗಿಲ್ಲ. ನಲ್ಲಿ ಪೈಪು, ಫೋನ್ ವೈರು ಎಲ್ಲಾ ಕಿತ್ತು ಇಟ್ಟಾಡಿ ಓಗವ್ನೆ. ಜನ ನನ್ನನ್ನ ಅಟ್ಟಾಡಿಸಿಕೊಂಡು ಒಡೆಯಕ್ಕೆ ಕಾಯ್ತೊವ್ರೆ..'`ಯಾಕೆ ಇಂಜಿನಿಯರ‌್ರು ಸರಿಯಾಗಿ ಪ್ಲಾನ್ ಮಾಡಿತ್ತಿಲ್ವಾ?'`ಆ ಇಂಜಿನಿಯರ್ ಜೋಗೇಂದ್ರ ಕುಡಿದ ಅಮಲಲ್ಲಿ ಊರ ಹೊಲಸೆಲ್ಲಾ ಪಂಚಾಯ್ತಿ ಆಫೀಸ್ ಒಳಗೇ ಬರೋ ಅಂಗೆ ಪ್ಲಾನ್ ಮಾಡಿಟ್ಟವ್ನೆ. ಈ ನನ್ ಮಕ್ಳಿಗೆ ಐಡಿಯಾ ಇಲ್ಲ ಅಂತ ನಾವೇ ತಿಪ್ಪೆ, ಚರಂಡಿ ಅಧ್ಯಯನ ಮಾಡಕ್ಕೆ ಹೊಂಟ್ವಿ..'

`ಆಮೇಲೆ..?'`ಅಧ್ಯಯನ ಅದ್ವಾನ ಆಗೋಯ್ತು. ಆಪರೇಶನ್ ಕಮಲ ಮಾಡಿ ವಿಮಲನ್ನ ಪ್ರೆಸಿಡೆಂಟ್ ಮಾಡಿದ್ವಾ? ಆ ವಮ್ಮ ಮದ್ವೆ ಮಾಡ್ಕಂಡು ಹನಿಮೂನ್‌ಗೆ ಒಂಡಕ್ಕೆ ತುದಿಗಾಗಲ್ಲಿ ನಿಂತಿತ್ತು. ಹನಿಮೂನ್‌ಗೆ ಪಂಚಾಯ್ತಿ ದುಡ್ಡಲ್ಲಿ ಓಗಕ್ಕೆ ಆಗಕಿಲ್ಲ ಅಂತ ಸೂರಜ್‌ಕುಂಡ್‌ಗೆ ತಿಪ್ಪೆ ಅಧ್ಯಯನ ಮಾಡಕೆ ಓಯ್ತೀವಿ ಅಂತ ಒಂದಷ್ಟು ಜನಕ್ಕೆ ರೈಲು ಹತ್ತಿಸಿ ಅವರು ಊಟಿ ಕಡೆಗೆ ಹೋದ್ರು. ನಮ್ ಶಂಬಣ್ಣ ಒಂದಷ್ಟು ಮೆಂಬರ್ ಕರ‌್ಕಂಡು ಅಲ್ಲೂ ಬಿಡ್ದೆ ವಿಮಲನ ಇಂದೇ ಓಗವ್ನೆ. ಅವಳ ಗಂಡಂಗೆ ಗಾಳ ಹಾಕಿ ನೀನೇ ಇನ್ನೂ 12 ತಿಂಗಳು ಪ್ರೆಸಿಡೆಂಟು ಅಂತ ಆಸೆ ತೋರ‌್ಸಿ ವಿಮಲನ್ನ ಕೆಜೆಪಿಗೆ ಎಳೆದವ್ರೆ. ಆ ವಮ್ಮ ಬಂದು  ರಾಜಕೀಯ ಮಾಡಿ ನಮ್ ಏರಿಯಾಗೆ ಮಣ್ ಹಾಕವ್ಳೆ..'`ಅದು ಹಾಳಾಗ್ಲಿ ಬಿಡು, ಏರಿಯಾಗೆ ಸರಿಯಾಗಿ ನೀರು ಯಾಕೆ ಬಿಡುಸ್ಲಿಲ್ಲ..'

`ಜಯಲಲಿತಂದು ಕಾಟ ಕಣ್ಲಾ. ನಾನ್ ಎಂಗ್ಲಾ ನೀರು ಬಿಡಿಸಕ್ಕಾಯ್ತದೆ..?'`ಪರ್ಮೇಶಿ ಮಾತು ಕೇಳಿ ಎಲ್ಲಾ ಅವಾಕ್ಕಾದರು; ಅಲ್ಲಲೇ ಜಯಲಲಿತಂಗೂ ನಿಮ್ಮ ಊರು ನೀರಿಗೂ ಎತ್ತಣದಿಂದೆತ್ತ ಸಂಬಂಧನೋ?'`ಸಂಬಂಧ ಐತೆ ಕಣ್ಲಾ..? ಆ ವಮ್ಮಂಗೆ ಬಿಡಕ್ಕೆ ಕಾವೇರಿಲಿ ನೀರು ಸಾಲ್ದು ಅಂತ ಹೇಮಾವತಿ ಡ್ಯಾಮ್ ನೀರೂ ಬಸ್ಕಂಡ್ರಾ? ಅಂಗಾಗಿ ತರ‌್ಲೆಕ್ಯಾತ್‌ನಳ್ಳಿ ಕೆರೆಗೆ ನೀರೇ ಬಿಡ್ಲಿಲ್ಲ. ಸಾವಿರಡಿ ಕೊಳವೆ ಬಾವಿ ಕೊರಸುದ್ರೂ ಕಣ್ಣಲ್ಲಿ ನೀರು ಬತ್ತದೇ ಹೊರತು ಹನಿ ನೀರು ಜಿನುಗಕಿಲ್ಲ. ನಾವೇ ಬೀರು ಕುಡ್ಕಂಡು ಬದುಕಿದೀವಿ. ಜನಕ್ಕೆ ಎಂಗ್ಲಾ ನೀರು ಕುಡಿಸೋದು?'`ಇಡೀ ಏರಿಯಾದಲ್ಲಿ ಕರೆಂಟಿಲ್ಲ ಅಂತ ಕಂಪ್ಲೇಂಟ್ ಇದೆಯಲ್ಲ..'`ಎಲ್ಲಿ ನೋಡುದ್ರೂ ಪವರ್ ಕಟ್. ಯಡ್ಡಿ ಶೆಟ್ಟರ್ ಪವರ್‌ಕಟ್ ಮಾಡಿದಾರೆ. ಶೋಭಾ ಧನಂಜಯ ಕುಮಾರ್ ಪವರ್‌ಕಟ್ ಮಾಡಿದಾರೆ. ಇಡೀ ರಾಜ್ಯವೇ ಲೋಡ್‌ಶೆಡ್ಡಿಂಗ್‌ನಲ್ಲಿ ಮುಳುಗಿದೆ. ವಿಮಲ ಹೇಳಿ ಕೇಳಿ ಕೆಜೆಪಿ..! ಅದಕ್ಕೇ ಬಿಜೆಪಿಯೋರು ಕರೆಂಟ್ ತೆಗಸೋದಿರಲಿ,ಕಂಬನೇ ತೆಗುಸ್ತಾವ್ರೆ'.`ಹಾಳಾಗಿ ಹೋಗಲಿ, ನಿಮ್ ಬತಾಸ್ ನಗರಕ್ಕೆ ನೀನೇ ಈಗಲಾದರೂ  ಒಂದೆರಡು ಲೈಟ್ ಹಾಕ್ಸು..'`ಲೇಯ್! ಸುಮ್ಕಿರಲೇ. ನಿಂಗೇನು ತಲೆ ಕೆಟ್ಟಿದೆಯೇನ್ಲಾ? ಓಗಿ ಓಗಿ ಲೈಟ್ ಹಾಕ್ಸು ಅಂತಿದೀಯಲ್ಲ. ಲೈಟ್ ಹಾಕುಸ್‌ಬುಟ್ರೆ ರಾಜಾ ವಿಸ್ಕಿ ಎಂಗ್ಲಾ ಅಂಚಕ್ಕಾಯ್ತದೆ. ಲೈಟಿಲ್ದೆ ಜನ ಟೈಟಾದ್ರೆ ನಂಗೆ ಅಷ್ಟೋ ಇಷ್ಟೋ ಗಿಟ್ಟೋದು ಅಂತ ನಾನೇ ಎಲ್ಡು ಲೈಟು ಡಮಾರ್ ಅನಿಸಿವ್ನಿ. ಇವ್ನ ಲೈಟ್ ಹಾಕ್ಸು ಅಂತಾವ್ನೆ. ರಾಜಕೀಯ ಮಾಡಕ್ಕೆ ಬರಕಿಲ್ಲ ಏನಿಲ್ಲ, ಸುಮ್ಕೆ ಏಳಕ್ಕೆ ಬಂದ್ ಬುಟ್ರು. ಇದು ಮೌಲ್ಯಗಳ ಕಾಲ ಅಲ್ಲಲೇ. ಮಲ್ಯ ಕಾಲ!. ಪುಗ್ಸಟ್ಟೆ ಸಿಕ್ಕೈತೆ. ಒಂದೊಂದು ಕ್ವಾರ್ಟು ಆಕ್ಕಂಡು ತೆಪ್ಪಗೆ ಓಗಿ ಬಿದ್ಕಳಿ' ಎಂದು ಪರ್ಮೇಶಿ ಕೂದಲು ಕಿತ್ತುಕೊಂಡು ಎದ್ದು ಹೋದ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry