ಸೋಮವಾರ, ಮೇ 17, 2021
25 °C

ಮಾಯವಾಗುತ್ತಿರುವ ಮಮತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನನ್ನ ಬಾಲ್ಯದ ದಿನಗಳಲ್ಲಿ ಕಾಲ ಸಾವಧಾನವಾಗಿತ್ತು. ಆದರೆ ಇಂದು ಕಾಲವೇ ಸತ್ತು ಹೋಗಿದೆ ಎನ್ನುವಂತಾಗಿದ್ದು, ಎಲ್ಲಿ ನೋಡಿದರೂ ಅವಸರ, ಗಡಿಬಿಡಿಯ ಜೀವನವನ್ನೇ ಕಾಣಬಹುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕಿ ಜಾನಕಿ ಶ್ರೀನಿವಾಸ ಮೂರ್ತಿ (ವೈದೇಹಿ) ಅಭಿಪ್ರಾಯಪಟ್ಟರು.ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ  ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಮುಖಾಮುಖಿ (ಸಂವಾದ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಬಾಲ್ಯದ ದಿನಗಳಲ್ಲಿನ ಮೋಜು-ಮಜಾದಿಂದ ಈಗಿನ ಕಾಲದ ಮಕ್ಕಳು ವಂಚಿತರಾಗಿದ್ದಾರೆ. ಆಟವೇ ಇಲ್ಲದ ಮಕ್ಕಳ ಕಾಲ ಇದಾಗಿದ್ದು, ಇದಕ್ಕೆ ಶೂನ್ಯಕಾಲ ಎಂದು ಹೇಳಬಹುದು. ಅಂತೆಯೇ ಬದುಕಿನ ತುಂಬಾ ಶೂನ್ಯ ಆವರಿಸಿದೆ ಎಂದರು.ಆಗ ಕುಂದಾಪುರದ ನಮ್ಮ ಮನೆಯಂಗಳದಲ್ಲಿ ಜನ, ಜನ, ಹಾಡು, ಹಾಡು ಎನ್ನುವಂತಿತ್ತು. ಆದರೆ ಇಂದಿನ ಎಲ್ಲರ ಮನೆಗಳಲ್ಲಿ ನಿಶ್ಯಬ್ದ. ನೀರವತೆಯೇ ತುಂಬಿದೆ ಎಂದು ಬದಲಾಗಿರುವ ಕಾಲದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.ಎಲ್ಲವೂ ಕಾಣುವ ಕಾಲವನ್ನೇ ಆಧುನಿಕ ಕಾಲ ಎನ್ನುತ್ತಾರೆ. ಆದರೆ ಪ್ರೀತಿ-ವಿಶ್ವಾಸಗಳೇ ಮಾಯವಾಗಿರುವ ಇಂದಿನ ದಿನಮಾನಗಳಲ್ಲಿ ಪರಸ್ಪರ ಒಬ್ಬರಿಗೊಬ್ಬರು ಕಾಣುತ್ತಿಲ್ಲ. ಎಲ್ಲವೂ ದುಡ್ಡಿನ ಮೇಲೆಯೇ ಅವಲಂಬನೆಯಾಗಿದೆ. ಹೆಣ್ಣು ಕೂಡ ಇದರಲ್ಲಿ ಮಾರಾಟದ ಸರಕಾಗಿದ್ದಾಳೆ ಎಂದು ಖೇದ ವ್ಯಕ್ತಪಡಿಸಿದರು. ಹೀಗೆ ತಮ್ಮ ಭಾಷಣದುದ್ದಕ್ಕೂ ಬಾಲ್ಯದ ದಿನಗಳ ರಸಗಳಿಗೆ,  ಕಾವ್ಯ ಚಿಮ್ಮಿದ ಬಗೆ, ಕಥೆ ಬರೆದ ಸಂದರ್ಭವನ್ನು ಊಬಾಊಬಾ (ತಾಜಾ) ಎನ್ನುವಂತೆ ಹೇಳಿದರು.ಕಾಲೇಜಿನ ಪ್ರಾಚಾರ್ಯ  ಪ್ರೊ. ಸಿ.ಸಿ. ಪಾಟೀಲ ಸ್ವಾಗತಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ದಕ್ಷಿಣ ವಲಯ ಕಚೇರಿ ಅಧಿಕಾರಿ ಮೀನಲೋಚನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಈಶ್ವರಯ್ಯ ಮಠ ಕಾರ್ಯಕ್ರಮ ನಿರೂಪಿಸಿದರು. ಡಾ. ಶಾಂತಾ ಮಠ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.