ಮಂಗಳವಾರ, ನವೆಂಬರ್ 12, 2019
28 °C

ಮಾಯವಾದ ಆಶ್ರಯ ಮನೆಗಳು

Published:
Updated:

ಚನ್ನಗಿರಿ: ಪಟ್ಟಣದ ಕೋಟೆ ಪ್ರದೇಶ ವ್ಯಾಪ್ತಿಯ ರಂಗನಾಥ ಬಡಾವಣೆ ಸಮೀಪ ಆಶ್ರಯ ಲೇಔಟ್‌ನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಿಸುತ್ತಿದ್ದ ಮನೆಗಳ ಇಟ್ಟಿಗೆಗಳು ಕಾಣದಂತೆ ಮಾಯವಾಗಿವೆ.ಕಳೆದ ಒಂದೂವರೆ ವರ್ಷದ ಹಿಂದೆ ಪಟ್ಟಣದ ಬಡವರಿಗಾಗಿ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಸುಮಾರು 200ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಿ, ಈ ಯೋಜನೆಗೆ ್ಙ 7 ಕೋಟಿ ಅನುದಾನವನ್ನು ಬಿಡುಗಡೆ ಗೊಳಿಸಲಾಗಿತ್ತು. ವಸತಿ ಸಚಿವ ವಿ. ಸೋಮಣ್ಣ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಮನೆಗಳ ನಿರ್ಮಾಣದ ಗುತ್ತಿಗೆಯನ್ನು ಭೂ ಸೇನಾ ನಿಗಮದವರು ವಹಿಸಿಕೊಂಡಿದ್ದರು. ನಂತರ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿ ಸಿಮೆಂಟ್ ಇಟ್ಟಿಗೆಗಳನ್ನು ಬಳಸಿ ಹತ್ತಾರು ಮನೆಗಳ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದರು.ಪಟ್ಟಣ ಪಂಚಾಯ್ತಿ ವತಿಯಿಂದ ಪಟ್ಟಣದ ಸುಮಾರು 200ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮನೆಗಳನ್ನು ನೀಡಲು ತೀರ್ಮಾನವಾಗಿತ್ತು. ಅದರಂತೆ ಒಂದು ಮನೆ ನಿರ್ಮಾಣಕ್ಕೆ ್ಙ 2.30 ಲಕ್ಷ ಅನುದಾನವನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ್ಙ 30 ಸಾವಿರ ಫಲಾನುಭವಿಗಳಿಗೆ ಪಾವತಿಸಿದರೆ, ವಸತಿ ನಿಗಮದ ವತಿಯಿಂದ ್ಙ 50 ಸಾವಿರ ಸಬ್ಸಿಡಿ ನೀಡಲಾಗುತ್ತಿತ್ತು. ಉಳಿದ ್ಙ 1.5 ಲಕ್ಷ ಹಣವನ್ನು ಬ್ಯಾಂಕ್ ಸಾಲ ನೀಡುವುದಾಗಿ ಹೇಳಿ ಪಟ್ಟಣ ಪಂಚಾಯ್ತಿ ವತಿಯಿಂದ ಫಲಾನುಭವಿಗಳಿಂದ ತಲಾ ್ಙ 10 ಸಾವಿರ ಹಣದ ಡಿಡಿಯನ್ನು ಪಡೆದುಕೊಂಡಿದ್ದರು.ಆಶ್ರಯ ಲೇಔಟ್ ನಿರ್ಮಾಣಕ್ಕಾಗಿ ಪಟ್ಟಣ ಪಂಚಾಯ್ತಿ ಕೋಟೆ ಪ್ರದೇಶ ವ್ಯಾಪ್ತಿಯಲ್ಲಿ 4 ಎಕರೆ ಜಮೀನನ್ನು ಖರೀದಿಸಿಕೊಂಡಿತ್ತು. ಆದರೆ, ಈ ಜಮೀನು ಕೋಟೆ ಪ್ರದೇಶ ವ್ಯಾಪ್ತಿಯಲ್ಲಿ ಇರುವ ಪ್ರಯುಕ್ತ 300 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮನೆಗಳನ್ನು ನಿರ್ಮಿಸಬಾರದು ಎಂದು ಕೇಂದ್ರ ಪುರಾತತ್ವ ಇಲಾಖೆ ತಡೆ ಹಾಕಿದ ಪರಿಣಾಮವಾಗಿ ಕಾಮಗಾರಿ ಸ್ಥಗಿತಗೊಂಡಿತು. ಆದರೆ, ಈಗ ಹೋಗಿ ಈ ಪ್ರದೇಶದಲ್ಲಿ ನೋಡಿದರೆ ಸಿಮೆಂಟ್ ಇಟ್ಟಿಗೆಗಳು ಮಾಯವಾಗಿವೆ.

ಇಲ್ಲಿ ಮನೆಗಳನ್ನು ನಿರ್ಮಿಸಿದ್ದಾರೆ ಎಂಬ ಕುರುಹು ಇಲ್ಲದಂತೆ ಇಟ್ಟಿಗೆಗಳನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ. ಆ ಕಾರಣದಿಂದ ಅಬ್ಬರ ಪ್ರಚಾರದೊಂದಿಗೆ ಈ ಮನೆಗಳ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಅಶ್ರಯ ಮನೆಗಳು ಬಡವರ ಪಾಲಿಗೆ ಮರೀಚಿಕೆಯಾಗಿದೆ. ಕೋಟೆ ಪ್ರದೇಶ ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸಬಾರದು ಎಂಬ ಕನಿಷ್ಠ ಜ್ಞಾನ ಕೂಡಾ ಜನಪ್ರತಿನಿಧಿಗಳಿಗೆ ತಿಳಿಯದೇ ಇರುವುದು ಆಶ್ಚರ್ಯದ ವಿಷಯವಾಗಿದೆ. ಇನ್ನು ನಮಗೆ ಯಾವಾಗ ಮನೆಗಳು ಸಿಗುತ್ತವೆಯೋ ಎಂದು ಚಾತಕ ಪಕ್ಷಿಗಳಂತೆ ಕಾಯುವ ಸ್ಥಿತಿಯನ್ನು ಜನಪ್ರತಿನಿಧಿಗಳು ತಂದಿಟ್ಟಿದ್ದಾರೆ ಎನ್ನುತ್ತಾರೆ ಮಂಜುನಾಥ್, ಮಲ್ಲಿಕಾರ್ಜುನ್.

ಪ್ರತಿಕ್ರಿಯಿಸಿ (+)