ಗುರುವಾರ , ನವೆಂಬರ್ 14, 2019
22 °C

ಮಾಯಸಂದ್ರ: ಐವರು ಶಾಸಕರ ಕೊಡುಗೆ

Published:
Updated:

ತುರುವೇಕೆರೆ: ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ತನ್ನದೇ ಮಹತ್ವ ಹೊಂದಿರುವ ಮಾಯಸಂದ್ರ ಹೋಬಳಿ ಐವರು ಶಾಸಕರನ್ನು ಕೊಡುಗೆಯಾಗಿ ನೀಡಿದ್ದು, ಈ ಬಾರಿ ಕೂಡ ನಾಲ್ವರು ಇಲ್ಲಿಂದ ಅದೃಷ್ಟ ಪರೀಕ್ಷೆಗೆ ಇಳಿಯುವ ಸಿದ್ಧತೆಯಲ್ಲಿದ್ದಾರೆ.ಸ್ವಾತಂತ್ರ್ಯ ಹೋರಾಟಕ್ಕೆ ಮಾಯಸಂದ್ರ ನೀಡಿರುವ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಸ್ವಾತಂತ್ರ್ಯ ಚಳವಳಿಗೂ ಮಾಯಸಂದ್ರಕ್ಕೂ ಅನ್ಯೋನ್ಯ ನಂಟು.ಸ್ವಾತಂತ್ರ್ಯ ಹೋರಾಟಗಾರರಾದ ಮಾ.ಕೃ.ನರಸಿಂಹಯ್ಯ, ತಾಳಕೆರೆ ಸುಬ್ರಹ್ಮಣ್ಯಂ, ಎಂ.ಪಿ.ಜ್ವಾಲನಯ್ಯ, ಎಂ.ಎನ್.ಶ್ರೀಕಂಠಯ್ಯ, ಅಂದಾನಯ್ಯ, ಅಬ್ದುಲ್ ಮುನಾಫ್, ನಡಕೇರಿಗೌಡ, ಹೊಸಮನೆ ತೋಪೇಗೌಡ, ಎಂ.ಬಿ.ದೋರ್ಬಲಯ್ಯ, ಜಡೆಯದ ಮರಿಗೌಡ ಇವರೆಲ್ಲ ಮಾಯಸಂದ್ರ ಹೋಬಳಿಗೆ ಸೇರಿದವರು. ಈ ನಾಯಕರ ಮಾರ್ಗದರ್ಶನದಲ್ಲೇ ತಾಲ್ಲೂಕಿನ ಸ್ವಾತಂತ್ರ್ಯ ಚಳವಳಿ ಹರಳುಗಟ್ಟಿದ್ದು ಎಂದು ಸ್ವಾತಂತ್ರ್ಯ ಹೋರಾಟಗಾರ ಮಾಯಸಂದ್ರದ ಎಂ.ಎಚ್.ನರಸಿಂಹಯ್ಯ ನೆನಪು ಮಾಡಿಕೊಳ್ಳುತ್ತಾರೆ.ಸ್ವಾತಂತ್ರ್ಯ ಪಡೆದ ನಂತರದ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲೂ ರಾಜ ಸಂಸ್ಥಾನಗಳನ್ನು ಭಾರತದ ಅಖಂಡ ಒಕ್ಕೂಟಕ್ಕೆ ಸೇರಿಸುವಂತೆ ಒತ್ತಾಯಿಸಿ ಹೋರಾಟ ಮಾಡಿದ್ದು ಈ ನಾಯಕರ ಮತ್ತೊಂದು ಅಗ್ಗಳಿಕೆ. ಮೈಸೂರು ರಾಜಮನೆತನವನ್ನು ಭಾರತ ಒಕ್ಕೂಟಕ್ಕೆ ಸೇರಿಸುವಂತೆ ಒತ್ತಾಯಿಸಿ ಅರಮನೆ ಸತ್ಯಾಗ್ರಹ ಅಥವಾ ಮೈಸೂರು ಚಲೋ ಚಳವಳಿಯಲ್ಲಿ ಪ್ರಮುಖವಾಗಿ ಪಾಲ್ಗೊಂಡವರು ಮಾಯಸಂದ್ರದ ಈ ಧುರೀಣರು.ಈ ನಾಯಕರನ್ನೇ ಜನ ತಮ್ಮ ಪ್ರತಿನಿಧಿಗಳು ಎಂದು ಗುರುತಿಸಿಕೊಂಡರು. ಒಕ್ಕಲಿಗ, ಲಿಂಗಾಯತರ ಪ್ರಭಾವವಿದ್ದಾಗ್ಯೂ ಅಲ್ಪಸಂಖ್ಯಾತ ಬ್ರಾಹ್ಮಣ ಜನಾಂಗಕ್ಕೆ ಸೇರಿದ ಮಾಯಸಂದ್ರದ ತಾಳಕೆರೆ ಸುಬ್ರಹ್ಮಣ್ಯಂ, ಎಂ.ಎನ್.ರಾಮಣ್ಣ ಶಾಸಕರಾಗಿ ಆಯ್ಕೆ ಆಗಿದ್ದು ಈ ಹಿನ್ನೆಲೆಯಲ್ಲೇ. ಆ ನಂತರ ಕ್ಷೇತ್ರ ಈ ಪ್ರಭಾವದಿಂದ ಹೊರಬಂದು ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಯಿತು. ಆದರೂ ಮಾಯಸಂದ್ರ ಹೋಬಳಿಯ ನಾಯಕರೇ ರಾಜಕೀಯದಲ್ಲಿ ಪರಿಣತರು, ಅನುಭವಿಗಳು ಎನಿಸಿದರು.ಮಾಯಸಂದ್ರ ಹೋಬಳಿ ಬೈತರಹೊಸಹಳ್ಳಿಯ ದಿ.ಬಿ.ಭೈರಪ್ಪಾಜಿ 2 ಬಾರಿ ಶಾಸಕರಾದರು. ಮುತ್ಸಂದ್ರದ ಎಂ.ಟಿ.ಕೃಷ್ಣಪ್ಪ ಕೂಡ ಎರಡು ಬಾರಿ ಶಾಸಕರಾದರು. ಜಡೆಯದ ಜಗ್ಗೇಶ್ ಕೂಡ ಶಾಸಕರಾಗಿ ಆಯ್ಕೆಯಾಗಿದ್ದರು. ಹತ್ತು ಜನ ಶಾಸಕರ ಪೈಕಿ ಮಾಯಸಂದ್ರ ಹೋಬಳಿಯ ಐವರು 30 ವರ್ಷ ಶಾಸಕರಾಗಿದ್ದರು.

ಪ್ರತಿಕ್ರಿಯಿಸಿ (+)