ಮಾಯಾಲೋಕ

7

ಮಾಯಾಲೋಕ

Published:
Updated:

ನನಗಾಗಿ ಯಾರು ಬರೆದಿದ್ದು ಆ ಮಾತುಗಳನ್ನು? ಸುರಕ್ಷಿತ ತಾಣವ ಹುಡುಕುತ್ತ ನನ್ನ ಮುದ್ದಿನ ಮಗಳನ್ನು ಎಳೆದುಕೊಂಡು ಓಡುವಾಗ ನನ್ನ ಪರ್ಸಿನಿಂದ ಜಾರಿಬಿದ್ದ ಪೆನ್ನೇ ಇದನ್ನು ಬರೆದಿದ್ದು? ಅಥವ, ತನ್ನ ಹೊಸ ಚರ್ಮವಾದ ಪ್ಲಾಸ್ಟಿಕ್ ಚೀಲಗಳೊಳಗೆ ತೂರಿಸಲ್ಪಡುವ ನನ್ನ ದೇಹ ಬರೆದಿದ್ದೆ?‘ದೇಹ’ ಎಂದು ಹೇಳುವಾಗ ಈ ನರಕದಲ್ಲಿ ಉಳಿದಿರುವ ಚೂರುಪಾರು ಮಾಂಸದ ತುಂಡುಗಳನ್ನೇ ನಾನು ಪ್ರಸ್ತಾಪಿಸುತ್ತಿದ್ದೇನೆ ಎಂಬುದನ್ನು ನೀವುಗಳು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಈ ಮಾಂಸದ ಮುದ್ದೆಗೂ, ತುಸು ಮುಂಚೆ ಒಂದು ಕೈಯಲ್ಲಿ ಕಾರಿನ ಬೀಗದ ಕೈಯನ್ನು, ಇನ್ನೊಂದರಲ್ಲಿ ಮುದ್ದು ಮರಿ ನೈನಾರ್‌ಳ ಬೆರಳುಗಳನ್ನು ಹಿಡಿದುಕೊಂಡು ಸೂಪರ್ ಮಾರ್ಕೆಟ್‌ನತ್ತ ನಡೆಯುತ್ತಿದ್ದ ಆ ಎತ್ತರದ ಆಕೃತಿಗೂ ಯಾವುದೇ ಸಂಬಂಧವಿಲ್ಲ. ನೈನಾರ್- ಹೆತ್ತವರ ಪ್ರೀತಿಯ ದೇವತೆ, ಅವರುಗಳ ಉಸಿರು, ಜಗತ್ತು ಎಲ್ಲವೂ... ಅವರ ಬದುಕಿಗೆ ಪ್ರತಿ ದಿನವೂ ಹೊಸಹೊಸ ಬಣ್ಣವನ್ನೂ ಸುಗಂಧವನ್ನು ನೀಡುತ್ತಿದ್ದಳು.ಅವತ್ತು ಶನಿವಾರ. ಮುಂಜಾನೆ ಬೇಗನೆ ಎದ್ದು ರೂಮಿಗೆ ಬಂದು ನಿದ್ರಿಸುತ್ತಿದ್ದ ನನ್ನ ಎಬ್ಬಿಸಿದಳು, ನೈನಾರ್. ನಿದ್ದೆಗಣ್ಣಲ್ಲಿ ‘ಏನ್ ಮರಿ?’ ಎಂದು ಕೇಳಿದೆ. ‘ಎದ್ದೇಳು ಬೇಗ, ಇವತ್ತು ಸೂಪರ್ ಮಾರ್ಕೆಟ್‌ನಲ್ಲಿ ಆ ಕ್ಯಾಬೇಜ್ ಗೊಂಬೆಯನ್ನು ಕೊಡಿಸ್ತೀನಿ ಅಂತ ನೀನು ಹೇಳಿದಿಯ... ಬೇಗ ಎದ್ದು ರೆಡಿಯಾಗು’.ಅವಳನ್ನು ಸಮಾಧಾನಪಡಿಸುವಂತೆ ‘ರಾತ್ರಿ ಕನಸಲ್ಲೂ ಆ ಕ್ಯಾಬೇಜ್ ಗೊಂಬೇನೆ ತುಂಬಿಕೊಂಡಿತ್ತಾ?’ ಎಂದು ನಗುತ್ತಾ ಕೇಳಿದೆ. ಅವಳಿಗೆ ನನ್ನ ಪ್ರಶ್ನೆ ಇಷ್ಟವಾಗಲಿಲ್ಲ. ಉತ್ತರ ನೀಡುವ ಗೋಜಿಗೆ ಹೋಗದೆ ನನ್ನ ಕೈಗಳ ಹಿಡಿದು ಎಳೆಯುತ್ತಿದ್ದಳು. ದಿನಸಿ ಸಾಮಾನುಗಳನ್ನು ಇವತ್ತು ತರಬೇಕು ಎಂದು ಎರಡು ದಿನಗಳ ಹಿಂದೆಯೇ ಅಂದುಕೊಂಡಿದ್ದೆ, ಹೇಗೊ ನೈನಾರಳಿಗೂ ಆ ಗೊಂಬೆಯನ್ನು ಇವತ್ತು ಕೊಡಿಸಬಹುದು. ಇಲ್ಲದಿದ್ದರೆ ಇವಕ್ಕೆಲ್ಲ ನನಗೆ ಸಮಯವಿಲ್ಲ. ಕೆಲಸಕ್ಕೆ ಹೋಗುವ ಹೆಣ್ಣಾದರಿಂದ ನಾನು ದೇವರನ್ನು, ನನ್ನ ಉನ್ನತ ಅಧಿಕಾರಿಗಳನ್ನು ಮತ್ತು ಕುಟುಂಬದ ಯಜಮಾನನನ್ನು ತೃಪ್ತಿಪಡಿಸುವ ಬಗೆಯಲ್ಲಿ ನನ್ನ ಪ್ರತಿ ನಿಮಿಷವನ್ನು ಯೋಜಿಸಿಕೊಳ್ಳಬೇಕು.‘ಇನ್ನು ಎರಡು ಗಂಟೆ ಇದೆ ಚಿನ್ನ... ಸೂಪರ್ ಮಾರ್ಕೆಟ್ ಹತ್ತಿರದಲ್ಲೇ ಇದೆ. ಗ್ಯಾರಂಟಿ ತಗೊಳ್ಳೋಣ’ ಎಂದೆ. ನಾನು ಹೇಳುತ್ತಿರುವುದನ್ನು ಆಕೆ ಗಮನಿಸುತ್ತಿರುವಂತೆ ಕಾಣಲಿಲ್ಲ. ಕಾರಿನ ಕಿಟಕಿಯಾಚೆ ಕಾಣುತ್ತಿರುವ ಸಮುದ್ರವನ್ನು ಆಶ್ಚರ್ಯಚಕಿತಳಾಗಿ ಅವಳು ನೋಡುತ್ತಿದ್ದಳು. ನನ್ನ ಇರುವಿಕೆಯನ್ನೂ ಆಕೆ ಮರೆತವಳಂತಿದ್ದಳು. ಕಾರ್ ನಿಲ್ಲಿಸಿ ಇಬ್ಬರೂ ಸೂಪರ್ ಮಾರ್ಕೆಟ್‌ನೊಳಗೆ ಹೋದೆವು. ಇಲ್ಲ, ನಾನು ನಡೆದುಹೋದೆ. ನೈನಾರ್ ಜೇನ್ನೊಣದಂತೆ ಸುತ್ತುತ್ತ ಓಡಿದಳು.

 

ಆ ಗಳಿಗೆಯಲ್ಲಿ ಅವಳು ಮಧು ಚೆಲ್ಲುವ, ಗುಲಾಬಿ ಬಣ್ಣದ ಅಪರೂಪದ ಹೂವಿನಂತೆ ಕಾಣುತ್ತಿದ್ದಳು. ಸಾಮಾನುಗಳನ್ನು ಇಟ್ಟುಕೊಳ್ಳುವ ತಳ್ಳೋ ಗಾಡಿಯೊಂದನ್ನು ಎಳೆಯುತ್ತ- ‘ನಾವು ಇಲ್ಲಿಂದ ಶುರು ಮಾಡೋಣ’ ಎಂದು ಆರ್ಡರ್ ಮಾಡಿದಳು. ಅವಳ ಮೃದು ಕೈಗಳ ಸಣ್ಣ ಬೆರಳುಗಳು ಗೊಂಬೆ ವಿಭಾಗವನ್ನು ತೋರಿಸುತ್ತಿದ್ದವು. ಮೊದಲಿಗೆ ಮನೆಗೆ ಬೇಕಾದ ದಿನಸಿ ಸಾಮಾನುಗಳ ತೆಗೆದುಕೊಂಡು, ಆಮೇಲೆ ಆ ಮಾಯಾಲೋಕಕ್ಕೆ ಹೋಗೋಣ ಎಂದೆ. ನನ್ನ ಯೋಚನೆ ಅವಳಿಗೆ ಇಷ್ಟವಾಯ್ತು. ಆದರೆ ಒಂದು ವಿಚಾರ ಆಕೆಯ ಕೋಪಕ್ಕೂ ಗೊಂದಲಕ್ಕೂ ಗುರಿಯಾಯ್ತು.‘ಯಾಕೆ, ಗೊಂಬೆ ಮಾತ್ರ ಮನೆಗೆ ಬೇಕಾದ ಸಾಮಾನಲ್ವ?’ ಮನ್ನಿಸಲಾಗದಂತಹ ನನ್ನ ತಪ್ಪನ್ನು ಮುಗುಳ್ನಗೆಯಿಂದ ಮರೆಸಲು ಯತ್ನಿಸಿದೆ.

‘ಹೌದು ಬಂಗಾರ, ಗೊಂಬೆಯೂ ಮನೆಗೆ ಬೇಕಾದದ್ದೇ. ಆದರೆ ಅದು ದಿನಸಿ ಸಾಮಾನುಗಳಿಗಿಂತ ಮುಖ್ಯವಾದುದು. ಸೋ, ಅದನ್ನು ಕೊಂಡುಕೊಳ್ಳುವುದನ್ನು ಕೊನೆಯಲ್ಲಿ ಇಟ್ಟುಕೊಂಡರೆ ನಿಧಾನವಾಗಿ ನೋಡಿ ತೆಗೆದುಕೊಳ್ಳಬಹುದು’ ಎಂದು ನಾ ಹೇಳಿದ್ದು ಅರ್ಥವಾಗಿಯೋ ಅಥವಾ ನನ್ನ ದನಿಯಲ್ಲಿ ಕಂಡ ಅಕ್ಕರೆಯ ಗಮನಿಸಿಯೋ ಒಟ್ಟಿನಲ್ಲಿ ಶಾಂತವಾದಳು ನೈನಾರ್.ಗೊಂಬೆಗಳ ವಿಭಾಗಕ್ಕೆ ಬೇಗನೆ ಹೋಗುವ ಧಾವಂತದಲ್ಲಿ ಸಾಮಾನುಗಳ ತೆಗೆಯಲು ನನಗೆ ಸಹಾಯ ಮಾಡುತ್ತಿದ್ದಳು. ಜನ ತುಂಬಿಕೊಂಡಿದ್ದರು. ಶನಿವಾರದ ರಷ್. ನನ್ನ ಹಾಗೆಯೆ ಹಲವು ಹೆಂಗಸರು ತಮ್ಮತಮ್ಮ ಮಕ್ಕಳೊಂದಿಗೆ ಬಂದಿದ್ದರು. ಈಚಿನ ದಿನಗಳಲ್ಲಿ ಸೂಪರ್ ಮಾರ್ಕೆಟ್‌ಗೆ ಬರುವುದೆಂದರೇನೆ ಒಂದು ಪ್ರವಾಸಕ್ಕೆ ಹೋದಂತೆ. ಆದರೆ ಜನರ ಪ್ರತಿ ನಡೆಯಲ್ಲೂ ಬಹು ದೊಡ್ಡ ಅಪಾಯವ ಎದುರುಗೊಳ್ಳುವ ಭಯ ಕಾಣುತ್ತಿತ್ತು.ಏಕೆಂದರೆ, ಅಪಾಯ ಎನ್ನುವುದು ಒಂದು ನಿರ್ದಿಷ್ಟ ಗಳಿಗೆಯಾಗಿಯೋ ಅಥವ ಜಾಗಕ್ಕಾಗಿಯೋ ಇರುವ ವಿಷಯವೇ ಅಲ್ಲ. ಎಲ್ಲಿಂದಲೊ ಗೊತ್ತಿಲ್ಲದ ಜಾಗದಿಂದ ರೆಕ್ಕೆ ಕಟ್ಟಿಕೊಂಡು ನಮ್ಮ ಮನೆಗಳಿಗೂ, ನಗರಗಳಿಗೂ ಬಂದು ಬಿದ್ದಿದೆ ಅಪಾಯ. ಅದು ಬಿದ್ದ ನಂತರ ನೋಡಿದರೆ ಆ ಜಾಗ ಮನುಜರು ಬದುಕಿದ ಕುರುಹುಗಳೇ ಇಲ್ಲದ ಸುಡುಗಾಡಿನಂತೆ ಕಾಣುತ್ತದೆ. ಕೆಲ ದಿನಗಳ ಹಿಂದೆಯೂ ಹಾಗೆಯೇ ಆಯ್ತು. ನಮ್ಮ ಪ್ರತಿ ಹೆಜ್ಜೆಯಲ್ಲೂ ಆ ಭಯ ಕಾಣುತ್ತಿತ್ತು.ನಾವದನ್ನು ಮರೆಯೋಣ ಎಂದುಕೊಂಡರೂ ನೆನಪು ಎಂಬ ನರಕದ ಗುಂಡಿಗೆ ಮತ್ತೆ ಮತ್ತೆ ತಳ್ಳಲ್ಪಡುತ್ತಲೇ ಇದ್ದೇವೆ. ನೆನ್ನೆ ಒಂದು ಜಾಗ, ಮೊನ್ನೆ ಒಂದು ಜಾಗ, ಅದಕ್ಕಿಂತ ಮುಂಚೆ ಒಂದು ಜಾಗ; ಮುಂದೆ ಹಿಂದೆ, ಅಲ್ಲಿ ಇಲ್ಲಿ ಎಂದು ಎಲ್ಲಾ ಜಾಗಗಳಲ್ಲೂ ನಮಗಾಗಿ ಕಾಯುತ್ತಿತ್ತು ಸಾವು. ‘ಅಮ್ಮ, ಅದು ಒಂದು ಹೊಸ ಗೊಂಬೆ. ಅರಬಿಯಲ್ಲಿ ಅದರ ಅರ್ಥ ಗೆಡ್ಡೆಕೋಸು. ಒಂದು ಬಟ್ಟೆಯಲ್ಲಿ ಗೆಡ್ಡೆಕೋಸನ್ನು ಸುತ್ತಿಟ್ಟ ಹಾಗೆ ಇರುತ್ತೆ. ನಾನಾಳಿಗೆ ಅದು ಲಂಡನ್‌ನಲ್ಲಿ ಸಿಕ್ಕಿತು, ಜೂಜೂಳಿಗೆ ಅವಳ ಅತ್ತೆ ಕೊಡಿಸಿದ್ದಾರೆ.ನನಗೂ ಒಂದು ಕೊಡಿಸು ಅಮ್ಮ. ನನಗೆ ಆ ಗೊಂಬೆ ಅಂದ್ರೆ ತುಂಬಾ ಇಷ್ಟ’. ನನ್ನ ಅನುಮತಿಗೂ ಕಾಯದೆ ಒಂದು ಗೊಂಬೆಯ ಎತ್ತಿ, ತನ್ನ ಎದೆಗೆ ಒತ್ತಿಕೊಂಡು ಅದಕ್ಕೆ ಮುತ್ತಿಟ್ಟಳು ನೈನಾರ್. ಅವಳ ನೋಡಿ ನನಗೆ ಹೊಟ್ಟೆಕಿಚ್ಚಾಯ್ತು. ನಾನು ಅವಳ ವಯಸ್ಸಿನವಳಾಗಿದ್ದಾಗ ನಮಗೆಲ್ಲ ಇಷ್ಟು ಗೊಂಬೆಗಳು ಇರಲಿಲ್ಲ. ಜಾಸ್ತಿಯೆಂದರೆ, ಬಟ್ಟೆ ಮೆಷಿನ್‌ಗಳಿಂದ ಬೀಳುತ್ತಿದ್ದ ಪೀಸುಗಳಿಂದ ಮಾಡಿದ ಗೊಂಬೆಗಳು ಸಿಗುತ್ತಿದ್ದವು ಅಷ್ಟೆ.ಅವುಗಳನ್ನಿಟ್ಟುಕೊಂಡೇ ನಮ್ಮ ಸೃಷ್ಟಿ ಪ್ರತಿಭೆಯ ಅನಾವರಣಗೊಳಿಸುತ್ತಿದ್ದೆವು. ಕಣ್ತೆರೆದು ಮುಚ್ಚುವುದರೊಳಗೆ ಆ ಹರಿದ ಬಟ್ಟೆ ಪೀಸುಗಳು ಒಂದು ಸುಂದರ, ನೀಲ ಕಣ್ಣುಗಳ ಗೊಂಬೆಯಾಗಿ ಬದಲಾಗುತ್ತಿದ್ದವು. ಗೊಂಬೆ ಆದ ಮರುಕ್ಷಣವೆ ಅದಕ್ಕೆ ಹೆಸರಿಡುವ ಕಾರ್ಯ ಶುರುವಾಗುವುದು. ನಮ್ಮ ಊರಲ್ಲೇ ಇರದ ಹೆಸರುಗಳ ಹುಡುಕುತ್ತಿದ್ದೆವು. ಮಾರ್ಸಿಬಾನ್, ಫರ್ ಫರ್, ಷೆನ್ ಷೆನ್, ಟುಟ್ಟ. ಅರ್ಥವೇ ಇಲ್ಲದ ಈ ಶಬ್ದಗಳು ನಮ್ಮ ಗೊಂಬೆಗಳ ಹೆಸರುಗಳಾಗಿ ಬದಲಾದ ನಂತರ ಅವುಗಳಿಗೆ ಹೊಸಬಗೆಯದೇ ಅರ್ಥ ಬರುತ್ತಿತ್ತು.   ನೈನಾರ್‌ಳ ಕಾಲದವರು ಅದೃಷ್ಟ ಮಾಡಿದವರು. ಅವರ ಗೊಂಬೆಗಳು ಸುಂದರವಾದ ಬಣ್ಣಬಣ್ಣದ ಪೆಟ್ಟಿಗೆಗಳಲ್ಲಿ ಬರುತ್ತವೆ. ಬಟ್ಟೆ ಮೆಷಿನ್‌ಗಳಿಂದ ಬೀಳುವ ತುಂಡು ಬಟ್ಟೆಗಳಿಗೆ ಕಾಯಬೇಕಾದ ಅವಶ್ಯಕತೆಯೇ ಇಲ್ಲ. ಗೊಂಬೆ ಗೊಂಬೆಯಂತೆಯೇ ಕಾಣುತ್ತದೆಯೇ ಅಥವಾ ದೆವ್ವದಂತೆ ಆಗಿಬಿಡುತ್ತದೆಯೇ ಎಂಬ ಹೆದರಿಕೆಗಳಿಗೆ ಆಸ್ಪದವೇ ಇಲ್ಲ. ನೈನಾರ್‌ಳಿಗೂ ಅವಳ ಸಮವಯಸ್ಕರಿಗೂ ಇಷ್ಟವಾದ ಆ ಕ್ಯಾಬೇಜ್ ಗೊಂಬೆ ನಿಜಕ್ಕೂ ಹೇಗಿತ್ತೆಂದರೆ ಮಾನವರಿಗೂ ಸೈತಾನ್‌ಗೂ ಕಳಚಿಹೋದ ಕೊಂಡಿಯನ್ನು ಸೇರಿಸುವಂತೆ ಇತ್ತು. ಮಕ್ಕಳಿಗೆ ಈ ಗೊಂಬೆ ಅಷ್ಟು ಇಷ್ಟವಾಗಲು ಅದೂ ಒಂದು ಕಾರಣವೆ? ಅಥವಾ ಕಂಪನಿಗಳ ಜಾಹೀರಾತುಗಳ ಪ್ರಭಾವವೆ?ಈ ಸಂಶೋಧನೆಗಳೆಲ್ಲ ಯಾಕೆ ನನಗೀಗ? ಈ ಹೊತ್ತಿನ ಪ್ರಶ್ನೆ ಏನೆಂದರೆ, ಅಷ್ಟು ದುಡ್ಡು ತೆತ್ತು ಇಂತಹ ಕೆಟ್ಟ ಗೊಂಬೆಯನ್ನು ಕೊಳ್ಳಬೇಕೆ?

ಇದೆಲ್ಲವನ್ನು ನಾನು ನೈನಾರ್‌ಳಿಗೆ ಹೇಳಲಿಲ್ಲ. ಏನೇನೊ ಹೇಳಿ ಚಿಕ್ಕ ಮಗುವೊಂದರ ಕನಸುಗಳನ್ನು ಅಳಿಸಿಹಾಕುವುದು ಸರಿಯೆ? ಆದರೆ ಈ ಕ್ಯಾಬೇಜ್ ಗೊಂಬೆಗೆ ಬದಲಾಗಿ ಬೇರೊಂದು ಗೊಂಬೆ ತೆಗೆದುಕೊ ಎಂದೆ. ‘ಅವೆಲ್ಲ ಹಳೆಯ ಫ್ಯಾಷನ್ ಗೊಂಬೆಗಳು’ ಎಂದಳು ನೈನಾರ್.

ನನ್ನ ಮಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು.ಆದರೆ ಒಂದು ಜನಾಂಗಕ್ಕೂ ಇನ್ನೊಂದು ಜನಾಂಗಕ್ಕೂ ನಡುವಿನ ಅಂತರವನ್ನು ಅರಿಯುವಷ್ಟು ಬೆಳೆದಿದ್ದಾಳೆ ಎಂದು ನನಗೆ ಗೊತ್ತಿರಲಿಲ್ಲ. ನನಗಿಷ್ಟವಾದುದೆಲ್ಲ ಅವಳಿಗೂ ಇಷ್ಟವಾಗಲೇಬೇಕು ಎಂದೇನು ಇಲ್ಲ ಎಂಬುದನ್ನೇ ನಾ ಅರಿತುಕೊಳ್ಳಬೇಕು. ನನ್ನ ಪರ್ಸ್ ತೆಗೆದು ನನ್ನ ಕೈಯಲ್ಲಿಟ್ಟಳು ನೈನಾರ್. ಇನ್ನು ಇದರ ಬಗ್ಗೆ ಯೋಚಿಸಿ ಉಪಯೋಗವಿಲ್ಲ. ‘ನೀನು ಪ್ರಾಮಿಸ್ ಮಾಡಿದ್ದೆ ಅಲ್ವಾ, ಈ ಗೊಂಬೆಯನ್ನು ಕೊಡಿಸ್ತೀನಿ ಅಂತ. ಕೊಡಿಸ್ತೀಯಾ, ಇಲ್ವಾ...’ ಎಂದು ಕೇಳುವಂತಿತ್ತು ಅವಳ ನೋಟ.‘ಇಗಾ... ತೊಗೊಳ್ಳೆ...’ ಮಾತು ಪೂರ್ಣ ಆಗುವುದರೊಳಗೆ ಅದು ನಡೆದುಹೋಗಿತ್ತು. ತೆರೆದ ಬಾಯಿಯ ಮುಚ್ಚುವುದರೊಳಗೆ ಬಾಯಿಯನ್ನೇ ಕಳೆದುಕೊಂಡಂತೆ ಬಾಸವಾಯ್ತು. ಹಣ ತೆಗೆಯಲು ಪರ್ಸಿನೊಳಗೆ ಬಿಟ್ಟ ಕೈ ನನ್ನಿಂದ ಕಿತ್ತುಕೊಂಡು ಎಲ್ಲೋ ಹಾರಿ ಹೋಯ್ತು. ನನಗಾದಂತೆ ಅಲ್ಲಿದ್ದ ಎಲ್ಲರಿಗೂ ಆಯ್ತು. ಒಬ್ಬೊಬ್ಬರು ಚಿಂದಿಚಿಂದಿಯಾಗಿ ಸಿಡಿದುಹೋದರು. ಅರೆ, ನೈನಾರ್ ಎಲ್ಲಿ ಹೋದಳು? ನನ್ನ ಹತ್ತಿರದಲ್ಲೇ ನಿಂತಿದ್ದಳು! ಕ್ಯಾಬೇಜ್ ಗೊಂಬೆಯನ್ನು ಬಿಗಿಯಾಗಿ ಅಪ್ಪಿಕೊಂಡು ನಗು ಸೂಸುತ್ತ ಸನಿಹದಲ್ಲಿದ್ದಳಲ್ಲ! ನನ್ನ ಸನಿಹದಲ್ಲಿ... ನನ್ನ ಸನಿಹ ಎಂದರೆ? ನಾನು ಯಾರು? ಈ ಹಿಂದೆ ನಾನಿದ್ದೆ... ಆದರೆ ಈಗ? ಮಿಂಚಿಗಿಂತ ವೇಗವಾಗಿ ನನ್ನ ‘ನಾನು’ ಸಿಡಿದು ನೂರಾರು ಚೂರುಗಳಾಗಿ ಆ ಜಾಗವೆಲ್ಲ ಹರಿದ ಮಾಂಸದ ತುಂಡುಗಳಾಗಿವೆ.ಬಾಂಬ್ ಸದ್ದು ನನಗೆ ಕೇಳಲಿಲ್ಲ ಎನ್ನುವುದು ನಿಜ. ಆ ಬಾಂಬ್ ಸದ್ದು ನನ್ನ ಕಿವಿಗಳ ತಲುಪುವುದರೊಳಗೆ ನನ್ನ ಕಿವಿಗಳು ಕಿತ್ತುಹೋಗಿರಲೂಬಹುದು.ಸರಿಯಾಗಿ ಏನೊಂದು ಗೊತ್ತಾಗುತ್ತಿಲ್ಲ. ನಾನಾ ಮೂಲೆಗಳಲ್ಲಿ ನಾನು ಸಿಡಿದುಬಿದ್ದಿದ್ದೆ. ನನ್ನ ಕಾಲುಗಳು ಮಾತ್ರ ಓಕ್ ಮರದ ಕೊಂಬೆಗಳಂತೆ ನಿಂತ ಜಾಗದಲ್ಲೇ ನಿಂತಿದ್ದವು. ಆದರೆ ನನ್ನ ಇತರೆ ಅಂಗಗಳು ಕಾಣುತ್ತಿಲ್ಲ. ರೆಕ್ಕೆ ಕಟ್ಟಿಕೊಂಡಿದ್ದ ನನ್ನ ನೆನಪು ನೈನಾರ್‌ಳ ಮುಖವ ಹೊತ್ತು ತಂದಿತು. ಇಲ್ಲ. ಅದು ನೈನಾರ್‌ಳ ಮುಖವೇ ಅಲ್ಲ! ಅದು ನೈನಾರ್‌ಳ ಆತ್ಮ. ಎಷ್ಟೋ ವರ್ಷಗಳ ದಾಟಿ ಸಾಗುತ್ತಿರುವ ಆತ್ಮ... ಅರೆ! ನನ್ನತ್ತಲೇ ಅದು ಬರುತ್ತಿದೆ.ಸಂತೋಷ ಉಕ್ಕಿ ಕೂಗಿಕೊಂಡೆ; ಆದರೆ ಗಂಟಲಿಲ್ಲದೆ ಹೇಗೆ ಕೂಗಿಕೊಳ್ಳುವುದು? ಅಗೊ ಅಲ್ಲಿ ಬಿದ್ದಿದೆ ನನ್ನ ಪರ್ಸ್. ನನ್ನ ಪ್ರಜ್ಞೆ ಅದನ್ನು ಗುರುತಿಸುತ್ತಿದೆ. ನಾ ತಂದಿದ್ದ ವಸ್ತುಗಳೆಲ್ಲ ಬಾಗಿಲ ಹೊರಗೆ ಹಾರುತ್ತಿವೆ! ಆದರೆ ಬಾಗಿಲುಗಳೆ ಇಲ್ಲವಲ್ಲ? ಮೇಲೆ ಆಕಾಶ ಕಾಣುತ್ತಿದೆ. ಅಲ್ಲಿ ಬೆಂಕಿ ಮಳೆ ಹೊತ್ತಿ ಉರಿಯುತ್ತಿದೆ. ಹೌದು, ಎಲ್ಲಾ ಕಡೆ ಹೊಗೆ ತುಂಬಿದೆ. ಆದರೆ ಹೊಗೆ ಮುಗಿದ ತಕ್ಷಣ ಎಲ್ಲವೂ ಎಂದಿನಂತೆ ಆಗುತ್ತವೆ. ಬಾಂಬ್ ಸಿಡಿದ ಜಾಗದಿಂದಲೇ ಹೊಗೆ ಬರುತ್ತಿದೆ. ದ್ವೇಷದ ಹೊಗೆ. ವಿರೋಧದ ಹೊಗೆ.ಈ ಕಥೆಯನ್ನು ಇಲ್ಲಿಗೆ ಮುಗಿಸಲು ನೀವು ನನಗೆ ಅನುಮತಿ ನೀಡುವಿರಿ ಎಂದುಕೊಳ್ಳುತ್ತೇನೆ. ಇನ್ನು ಕಥೆಯ ಮುಂದುವರಿಸಲು ನನ್ನಿಂದ ಖಂಡಿತಾ ಸಾಧ್ಯವಿಲ್ಲ. ನನ್ನ ದೇಹ, ಮುಖ, ಬಾಯಿ ಎಲ್ಲವೂ ಸಿಡಿದು ಚೂರುಚೂರಾಗಿ ಬೆಂಕಿಯಲ್ಲಿ ಕರಿದು ಕರಕಲಾಗಿವೆ. ನನ್ನ ಪ್ರೀತಿಯ ಹೂ, ಆ ಸುಂದರ ಗುಲಾಬಿ, ನೈನಾರ್... ಗೊಂಬೆಯನ್ನು ತೆಗೆದುಕೊಳ್ಳದೆ ಅವಳು ಈ ಸೂಪರ್ ಮಾರ್ಕೆಟ್ ಬಿಟ್ಟು ಹೇಗೆ ಹೊರನಡೆದಳು? ಅರೆ! ನಾನು ಆ ಗೊಂಬೆಗೆ ಹಣವನ್ನೇ ಕೊಡಲಿಲ್ಲವಲ್ಲ! ಹೌದು, ಇನ್ನೂ ಚೆನ್ನಾಗಿ ನೆನಪಿದೆ- ಅದಕ್ಕೆ ನಾ ಹಣ ಕೊಡಲೇ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry