ಗುರುವಾರ , ಮೇ 19, 2022
23 °C

ಮಾರಕ ರೋಗ ತಡೆಗೆ ಕ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಮಾರಕ ರೋಗಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆಯ ಜತೆಗೆ ಯುವಜನತೆ ಸಹಕರಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎಲ್. ಪಾಲಾಕ್ಷ ಅಭಿಪ್ರಾಯಪಟ್ಟರು.ಚಳ್ಳಕೆರೆ ತಾಲ್ಲೂಕು ದೊಡ್ಡೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಏಡ್ಸ್ ಕುರಿತ ಜನಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಾರಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಕೊಂಡಿದ್ದು, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ರೋಗಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಏಡ್ಸ್ ಸೋಂಕಿತರಿಗೆ ಸಲಹೆ, ಮಾರ್ಗದರ್ಶನ ಹಾಗೂ ಜೀವನ ವಿಧಾನಗಳ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಪ್ತ ಸಲಹಾ ಕೇಂದ್ರಗಳನ್ನು ತೆರೆಯಲಾಗಿದೆ. ಇದರ ಸದುಪಯೋಗ ಪಡೆಯುವಂತೆ ಸೂಚಿಸಿದರು.ಏಡ್ಸ್ ರೋಗ ಗುಣಪಡಿಸಲು ಸಾಧ್ಯ ಇಲ್ಲದೇ ಇರುವುದರಿಂದ ಇದನ್ನು ಹತೋಟಿಯಲ್ಲಿಡಲು ಕೆಲವು ಪರಿಹಾರೋಪಾಯ ಗುರುತಿಸಲಾಗಿದೆ. ಇವುಗಳನ್ನು ಪಾಲನೆ ಮಾಡುವ ಮೂಲಕ ರೋಗಿಯಾದವರು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಸಮಾಜದಲ್ಲಿ ಬದುಕಬೇಕಾಗಿದೆ ಎಂದು ನುಡಿದರು.ಏಡ್ಸ್ ಆಪ್ತ ಸಲಹಾ ಕೇಂದ್ರದ ಸಮಾಲೋಚಕ ಗಂಗಾಧರಯ್ಯ ಮಾತನಾಡಿ, 1981ರಲ್ಲಿ ಕರ್ನಾಟಕದಲ್ಲಿ ಸೋಂಕಿತರನ್ನು ಪತ್ತೆ ಹಚ್ಚಲಾಯಿತು. ಪ್ರಸ್ತುತ ಜಿಲ್ಲೆಯಲ್ಲಿ 625 ಏಡ್ಸ್ ಸೋಂಕಿತರನ್ನು ಗುರುತಿಸಲಾಗಿದೆ ಹಾಗೂ ಇದರ ಬಗ್ಗೆ ಇಲಾಖೆ ಕೈಗೊಂಡಿರುವ ಮಾಹಿತಿಯ ಅಂಕಿ-ಅಂಶಗಳನ್ನು ವಿವರಿಸಿದರು.ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಏಡ್ಸ್ ಜಾಗೃತಿ ಮೂಡಿಸಲು ಕಲಾವಿದರಿಂದ ವೀರಗಾಸೆ ನೃತ್ಯ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅನಂತಕೃಷ್ಣ ಜೋಯಿಸ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಮಹೇಶ್ವರಪ್ಪ, ವಕೀಲ ಈರಣ್ಣ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಮ್ಮ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.