ಸೋಮವಾರ, ಮೇ 23, 2022
30 °C

ಮಾರನ್ ಸೋದರರ ಬೆಂಬಲಕ್ಕೆ ಕರುಣಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ, (ಪಿಟಿಐ): ದಯಾನಿಧಿ ಮತ್ತು ಕಲಾನಿಧಿ ಮಾರನ್ ಸಹೋದರರ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ, ಸಾರ್ವಜನಿಕವಾಗಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಏರ್‌ಸೆಲ್- ಮ್ಯಾಕ್ಸಿಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ನಡೆದಿರುವ ಸಿಬಿಐ ದಾಳಿಯನ್ನು ಪ್ರಸ್ತಾಪಿಸಿರುವ ಅವರು, ಮಾರನ್ ಸಹೋದರರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

`ನನ್ನ ಮಗಳು ಕನಿಮೊಳಿ ಮತ್ತು ಮಾರನ್ ಸಹೋದರರನ್ನು ನಾನು ಸಮಾನವಾಗಿ ಕಾಣುತ್ತೇನೆ. ಅವರಲ್ಲಿ ಯಾವುದೇ ಭೇದ ಮಾಡುವುದಿಲ್ಲ. ಆದರೆ, ಡಿಎಂಕೆಯನ್ನು ಸಂಪೂರ್ಣವಾಗಿ ಹಾಳು ಮಾಡಲು ಹೊರಟಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಹೋದರರನ್ನು ನಾನು ಬೆಂಬಲಿಸುವುದಿಲ್ಲ ಎಂಬ ಸುದ್ದಿ ಹರಡಿವೆ~ ಎಂದು ಹೇಳಿದ್ದಾರೆ.

`ಸಿಬಿಐ ಪ್ರಕರಣ ಮತ್ತು ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೇಂದ್ರಹೇಳಿದ ಕಾರಣ ನಾನು 2ಜಿ ತರಂಗಾಂತರ ಹಗರಣದಲ್ಲಿ ಸೆರೆಯಲ್ಲಿರುವ ಕನಿಮೊಳಿ ಮತ್ತು ಸಹೋದರರ ಮನೆ ಮೇಲೆ ನಡೆದಿರುವ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಲು ಹೋಗಿಲ್ಲ~ ಎಂದು ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.

ಕಣ್ಣೊರೆಸುವ  ತಂತ್ರ: ಜಯಾ ಲೇವಡಿ

ಚೆನ್ನೈ, (ಪಿಟಿಐ):  ವಿವಾದಿತ ಏರ್‌ಸೆಲ್- ಮ್ಯಾಕ್ಸಿಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾರನ್ ಸಹೋದರರ ಮನೆಯ ಮೇಲೆ ನಡೆದಿರುವ ದಾಳಿ ಕೇವಲ ಕಣ್ಣೊರೆಸುವ ತಂತ್ರ ಎಂದು ಮುಖ್ಯಮಂತ್ರಿ ಜಯಲಲಿತಾ ಲೇವಡಿ ಮಾಡಿದ್ದಾರೆ.

ಹಗರಣ ಬೆಳಕಿಗೆ ಬಂದ ನಾಲ್ಕು ವರ್ಷಗಳಿಂದ ಸಿಬಿಐ ದಾಳಿ ನಡೆಸುತ್ತಿದೆ. ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ನಾಲ್ಕು ವರ್ಷಗಳಿಂದ ಮಹತ್ವದ ದಾಖಲೆಗಳನ್ನು ಇಬ್ಬರೂ ಸಹೋದರರು ಇನ್ನೂ ಮನೆಯಲ್ಲಿಯೇ ಇಟ್ಟಿರುತ್ತಾರೆ ಎಂಬುದನ್ನು ನಂಬುವುದು ಕಷ್ಟ. ಇದು ಜನರನ್ನು ದಾರಿ ತಪ್ಪಿಸುವ ತಂತ್ರ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಈಗ ನಡೆದಿರುವ ದಾಳಿಯಿಂದ ಏನಾದರೂ ಪ್ರಯೋಜನವಾದೀತೆ ಎಂದು ಕಾದು ನೋಡೋಣ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.