ಮಾರಾಟವಾಗುತ್ತಿರುವ ಅಂಗನವಾಡಿ ಆಹಾರ!

7
ತನಿಖೆಗೆ ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಧರ್ ಆಗ್ರಹ

ಮಾರಾಟವಾಗುತ್ತಿರುವ ಅಂಗನವಾಡಿ ಆಹಾರ!

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿರುವ ಕಾಳು, ಎಣ್ಣೆ ಇತರ ಆಹಾರ ಪದಾರ್ಥಗಳು ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸದಸ್ಯ ಟಿ.ಶ್ರೀಧರ್ ಆಗ್ರಹಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ವಿಷಯ ಪ್ರಸ್ತಾಪಿಸಿದರು. ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರಿಗೆ ಪೌಷ್ಟಿಕ ಆಹಾರ ನೀಡಬೇಕು. ಆದರೆ ಈ ಪೌಷ್ಟಿಕ ಆಹಾರ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಆದರೂ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸದಸ್ಯ ಪುಟ್ಟಸ್ವಾಮಿ ಮಾತನಾಡಿ, ತಾಲ್ಲೂಕಿನ ಗಡಿಭಾಗದಲ್ಲಿ ಭೂ ಮಾಫಿಯಾ ತಲೆ ಎತ್ತಿದೆ. ಮೈಸೂರಿಗೆ ಹತ್ತಿರ ಇರುವ ಗ್ರಾಮಗಳ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ. ಕೃಷಿ ಭೂಮಿಯನ್ನೇ ನಿವೇಶನ ಎಂದು ನಂಬಿಸಿ ಮಾರಾಟ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮುದ್ರೆ ಹಾಗೂ ಸಹಿಯನ್ನು ನಕಲಿ ಮಾಡುತ್ತಿದ್ದು, ಅಮಾಯಕರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿವಳಿಕೆ ನೀಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಅಮರನಾಥ್ ಅವರಿಗೆ ಹೇಳಿದರು.ಕೈಗಾರಿಕಾ ಇಲಾಖೆಯಿಂದ ವಿತರಿಸುತ್ತಿರುವ ಹೊಲಿಗೆ ಯಂತ್ರಗಳು ಕಳಪೆಯಿಂದ ಕೂಡಿದ್ದು ಗುಣಮಟ್ಟದ ಯಂತ್ರಗಳನ್ನು ವಿತರಿಸಬೇಕು. ಸದಸ್ಯರ ಗಮನಕ್ಕೆ ತಂದು ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದು ಸದಸ್ಯರಾದ ಮಂಜುಳಾ, ನಿರ್ಮಿತಾ, ಸುಮಲತಾ ತಾಕೀತು ಮಾಡಿದರು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 2011-12ನೇ ಸಾಲಿಗೆ ನಾಗರಿಕ ಸೌಲಭ್ಯ ಕಲ್ಪಿಸಲು ಒಟ್ಟು ರೂ.26.3 ಲಕ್ಷ ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವಂತೆ ಕಾರ್ಯನಿರ್ವಾಹಕ ಅಧಿಕಾರಿ ಮನವಿ ಮಾಡಿದ ಮೇರೆಗೆ ಸಭೆ ಒಪ್ಪಿಗೆ ನೀಡಿತು. ಪರಿಶಿಷ್ಟ ಜಾತಿ/ ವರ್ಗದ ಒಟ್ಟು 425 ವಿದ್ಯಾರ್ಥಿಗಳಿಗೆ 13ನೇ ಹಣಕಾಸು ಯೋಜನೆಯಡಿ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ರೇಷ್ಮೆ ಇಲಾಖೆಯಿಂದ ಫಲಾನುಭವಿಗಳಿಗೆ ಚೆಕ್ ವಿತರಣೆ ನಡೆಯಿತು.ನಗುವನಹಳ್ಳಿ, ಗಾಮನಹಳ್ಳಿ, ಪಿ.ಹೊಸಹಳ್ಳಿ ಹಾಗೂ ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರನ್ನು ತಾಲ್ಲೂಕು ಪಂಚಾಯಿತಿ ಸಹ ಸದಸ್ಯರನ್ನಾಗಿ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಅಧ್ಯಕ್ಷೆ ರಾಜೇಶ್ವರಿ ನಂದೀಶ್‌ಕುಮಾರ್, ಉಪಾಧ್ಯಕ್ಷೆ ಕೆಂಪಮ್ಮ ಮರೀಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಸಜ್ಜೇಗೌಡ, ಸದಸ್ಯರಾದ ಟಿ.ಬಿ.ಕೆಂಪೇಗೌಡ, ಕೆ.ಸಿ.ಸೋಮಶೇಖರ್, ಗೀತಾ ಮಹೇಶ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry