ಮಾರಾಟ ಜಾಲ ಮತ್ತೆ ಸಕ್ರಿಯ

7

ಮಾರಾಟ ಜಾಲ ಮತ್ತೆ ಸಕ್ರಿಯ

Published:
Updated:

ಹುಬ್ಬಳ್ಳಿ:  `ಗುಜ್ಜರ್ ಮದುವೆ' ನೆಪದಲ್ಲಿ  ಕಳೆದೊಂದು ದಶಕದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಆಗಾಗ ಸದ್ದು ಮಾಡಿ ತಣ್ಣಗಾಗುತ್ತಿದ್ದ ಯುವತಿಯರ ಮಾರಾಟ ಜಾಲ, ಇದೀಗ ಜಿಲ್ಲೆಯಲ್ಲಿ ಮತ್ತೆ ಸಕ್ರಿಯವಾಗಿದೆ.ಕಲಘಟಗಿ ಪೊಲೀಸರು ತಾಲ್ಲೂಕಿನ ಕಾಮಧೇನು ಗ್ರಾಮದ ಯುವತಿಯನ್ನು ರಾಜಸ್ತಾನದಿಂದ ರಕ್ಷಿಸಿ ಕರೆತಂದ ಬೆನ್ನಲ್ಲಿಯೇ ಹುಬ್ಬಳ್ಳಿಯ ಗೋಕುಲ ಠಾಣೆ ಪೊಲೀಸರು 14 ವರ್ಷದ ಬಾಲಕಿಯೊಬ್ಬಳನ್ನು ರಕ್ಷಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.`ಗುಜ್ಜರ್ ಮದುವೆ' ನೆಪದಲ್ಲಿ ರಾಜಸ್ತಾನದ ವರನೊಂದಿಗೆ ಹಸೆಮಣೆ ಏರಲು ಸಿದ್ಧವಾಗಿದ್ದ ಬಾಲಕಿಯನ್ನು ಕಳೆದ ವಾರ ರಕ್ಷಿಸಿದ್ದು, ಸದ್ಯ ಬಾಲಕಿ ಇಲ್ಲಿನ ಘಂಟಿಕೇರಿಯ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ದಾಳೆ.ಇಲ್ಲಿನ ಜಗದೀಶ ನಗರದ ನಿವಾಸಿಯಾದ ಬಾಲಕಿಗೆ ತಾಯಿ ಇಲ್ಲ. ತಂದೆ ಮದ್ಯವ್ಯಸನಿಯಾಗಿದ್ದು, ಬಾಲಕಿಯೇ ಗೋಕುಲ ಗ್ರಾಮದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡಿ ಮನೆ ನಿರ್ವಹಣೆ ಮಾಡುತ್ತಿದ್ದಳು. ಇತ್ತೀಚೆಗೆ ಬಾಗಲಕೋಟೆ ಜಿಲ್ಲೆ ಜಮಖಂಡಿಯ ವ್ಯಕ್ತಿಯೊಬ್ಬ ಬಾಲಕಿಯ ತಂದೆಗೆ 30 ಸಾವಿರ ರೂಪಾಯಿ ನೀಡಿ, ರಾಜಸ್ತಾನದ ವ್ಯಕ್ತಿಯೊಂದಿಗೆ ಬಾಲಕಿಯ ಮದುವೆಗೆ ಸಿದ್ಧತೆ ನಡೆಸಿದ್ದನು.ಮದುವೆ ವಿಚಾರ ಇಟ್ಟಿಗೆ ಭಟ್ಟಿ ಮಾಲೀಕರ ಗಮನಕ್ಕೆ ತಂದ ಬಾಲಕಿ, ತಾನು ರಾಜಸ್ತಾನಕ್ಕೆ ತೆರಳುತ್ತಿದ್ದು, ಇನ್ನು ಮುಂದೆ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದ್ದಾಳೆ.ಕುತೂಹಲಗೊಂಡ ಇಟ್ಟಿಗೆ ಭಟ್ಟಿ ಮಾಲೀಕರು ಬಾಲಕಿಯಿಂದ ಮದುವೆ ಸಂಬಂಧದ ಹಿನ್ನೆಲೆ ತಿಳಿದುಕೊಂಡು ಗೋಕುಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ದಾಳಿ ನಡೆಸಿ ಬಾಲಕಿಯ ತಂದೆ ರಾಮಚಂದ್ರ ಗಾಣಿಗ ಹಾಗೂ ಮಧ್ಯವರ್ತಿ ಜಾವೇದ್‌ಮುಲ್ಲಾಎಂಬುವನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry