ಶನಿವಾರ, ಜುಲೈ 24, 2021
26 °C

ಮಾರಿಷಸ್ ಬ್ಯಾಂಕುಗಳಲ್ಲಿ ಮಿಂಚಿನ ಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋರ್ಟ್ ಲೂಯಿಸ್ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣದ ಹಿನ್ನೆಲೆಯಲ್ಲಿ  ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಯಾವುದೇ ಮಹತ್ವದ ಮಾಹಿತಿ ಲಭ್ಯವಾಗದಂತೆ ನೋಡಿಕೊಳ್ಳಲು ಮಾರಿಷಸ್‌ನ ಕೆಲವು ಬ್ಯಾಂಕುಗಳು ಪ್ರಯತ್ನಿಸುತ್ತಿವೆ ಹಾಗೂ ಈ ಬ್ಯಾಂಕುಗಳು ತಮ್ಮ ಹುಳುಕು ಮಚ್ಚಿಕೊಳ್ಳಲು ಈಗ ಅವಧಿ ಮೀರಿ ಕೆಲಸ ಮಾಡುತ್ತಿರುವ ಅಂಶ ಬಯಲಾಗಿದೆ.ಹೆಸರು ಹೇಳಲಿಚ್ಛಿಸದ ಮಾರಿಷಸ್‌ನಲ್ಲಿರುವ ಕೆಲವು ಅಧಿಕಾರಿಗಳು ಈ ವಿಷಯವನ್ನು ಈಗ ದೃಢಪಡಿಸಿದ್ದಾರೆ.ಮಾರಿಷಸ್‌ನ ಕೆಲವು ಬ್ಯಾಂಕುಗಳು 2ಜಿ ಸ್ಪೆಕ್ಟ್ರಂ ಹಗರಣದ ಅಕ್ರಮ ಹಣವನ್ನು ಹೊಂದಿರುವ ಶಂಕೆಯಿದೆ. ಇವುಗಳಿಂದ  ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವುದೇ ಸಮಯದಲ್ಲಾದರೂ ಮಾಹಿತಿ ಕೋರುವ ನಿರೀಕ್ಷೆ ಇದೆ ಎನ್ನಲಾಗಿದೆ.ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜಂಟಿ ತಂಡವೊಂದು ಮುಂದಿನ ವಾರ ಇಲ್ಲಿಗೆ ಭೇಟಿ ನೀಡಲಿದೆ ಮತ್ತು ಈ ತಂಡವು 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಬ್ಯಾಂಕುಗಳಿಗೆ ಸಂದಾಯವಾಗಿರುವ ಹಣದ ಮಾಹಿತಿಗಳನ್ನು ಕಲೆ ಹಾಕಲಿದೆ. ಮಾರಿಷಸ್‌ನ ಆರ್ಥಿಕ ಸಚಿವಾಲಯ, ಸಾಗರೋತ್ತರ ಬ್ಯಾಂಕಿಂಗ್ ಅಧಿಕಾರಿಗಳು ಮತ್ತು ಕಂಪೆನಿಗಳ ರಿಜಿಸ್ಟ್ರಾರ್ ಜೊತೆ ಈ ತಂಡವು ಮಹತ್ವದ ಮಾತುಕತೆ ನಡೆಸಲಿದೆ ಎಂದು ಹೇಳಲಾಗಿದೆ.ಈ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿ ಕಚೇರಿ ಹಾಗೂ ಭಾರತೀಯ ಬ್ಯಾಂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಬಳಿ ಇಲ್ಲಿನ ಕೆಲವು ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳು ತೆರಳಿವೆ. ‘ಇಲ್ಲಿಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂದಾಗ ಅವರಿಗೆ ಯಾವ ಮಹತ್ವದ ಮಾಹಿತಿಗಳನ್ನೂ ಒದಗಿಸಬೇಡಿ ಎಂದು ಅವರಿಗೆ ದುಂಬಾಲು ಬಿದ್ದಿವೆ’ ಎಂದು ಈ ಅನಾಮಧೇಯ ಅಧಿಕಾರಿ ವಿವರಿಸಿದ್ದಾರೆ.‘ಕೆಲವರಂತೂ ಮಾರಿಷಸ್ ಸರ್ಕಾರದ ಮೇಲೆ ಅತೀವ ಒತ್ತಡ ಹಾಕುತ್ತಿದ್ದು ಬ್ಯಾಂಕಿನ ಅಧಿಕಾರಿಗಳು ಯಾವ ಮಾಹಿತಿಯನ್ನೂ ಸೋರಿಕೆ ಮಾಡದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.ರಾಜಧಾನಿ ಪೋರ್ಟ್ ಲೂಯಿಸ್‌ನಲ್ಲಿರುವ ಎಡಿತ್ ಕ್ಯಾವೆಲ್ ರಸ್ತೆಯಲ್ಲಿನ ಒಂದು ಕಟ್ಟಡದಲ್ಲಿ ಒಂದೇ ವಿಳಾಸ ಹೊಂದಿದ ಹತ್ತಾರು ನಕಲಿ ಕಂಪೆನಿಗಳು ಅಸ್ತಿತ್ವದಲ್ಲಿವೆ. ಈ ಕಂಪೆನಿಗಳು ವಿವಿಧ ನಮೂನೆಗಳಲ್ಲಿ ಷೇರುಗಳನ್ನು ಹಂಚಿರುವುದು ಮತ್ತು 2ಜಿ ಸ್ಪೆಕ್ಟ್ರಂ ಹಗರಣದ ಹಣವನ್ನು ತಮ್ಮಲ್ಲಿ ಈ ವಿವಿಧ ಷೇರುಗಳ ಮುಖಾಂತರ ಇರಿಸಿಕೊಂಡಿರುವುದು ಸಿಬಿಐ ಹುಬ್ಬೇರಿಸುವುದಕ್ಕೆ ಮೂಲ ಕಾರಣವಾಗಿದೆ.ಇವುಗಳಲ್ಲಿ ಕೆಲವು ಕಂಪೆನಿಗಳಂತೂ ಈಗ ಮಾರಿಷಸ್ ಸರ್ಕಾರವನ್ನು ಸಂಪರ್ಕಿಸಿ ತಮ್ಮ ಅಸ್ತಿತ್ವದ ನಿಜ ದಾಖಲೆಗಳನ್ನು ಸೃಷ್ಟಿಸಿಕೊಳ್ಳಲು ಭರದ ಪ್ರಯತ್ನ ನಡೆಸಿವೆ ಎನ್ನಲಾಗಿದೆ.ತೆರಿಗೆಗಳ್ಳತನ: ದುಪ್ಪಟ್ಟು ತೆರಿಗೆ ತಪ್ಪಿಸಿಕೊಳ್ಳಲು ಅನುಕೂಲವಾಗುವಂತಹ ಒಂದು ಒಪ್ಪಂದವು ಭಾರತ ಮತ್ತು ಮಾರಿಷಸ್ ನಡುವೆ ಅಸ್ತಿತ್ವದಲ್ಲಿದೆ. ಈ ಒಪ್ಪಂದ 28 ವರ್ಷಗಳಷ್ಟು ಹಳೆಯದಾದದ್ದು. ಇದರಲ್ಲಿನ ಸಾಕಷ್ಟುಲೋಪದೋಷಗಳನ್ನು ಭಾರತದ ತೆರಿಗೆಗಳ್ಳರು ಈಗ ದುರುಪಯೋಗ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.ಇತ್ತೀಚೆಗಷ್ಟೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಮಾರಿಷಸ್‌ಗೆ ಭೇಟಿ ನೀಡಿದಾಗ ಈ ದುಪ್ಪಟ್ಟು ತೆರಿಗೆ ತಪ್ಪಿಸಿಕೊಳ್ಳುವ ಒಪ್ಪಂದದ ಬಗ್ಗೆ ಚರ್ಚೆ ನಡೆದಿತ್ತು. 1983ರ ಈ ಒಪ್ಪಂದದ ಬಗ್ಗೆ ಪುನರಾವಲೋಕನ ನಡೆಯಬೇಕು ಎಂದು ಭಾರತದ ಆರ್ಥಿಕ ಇಲಾಖೆಯು ಈ ಸಂದರ್ಭದಲ್ಲಿ ಬಯಸಿತ್ತು.ಮಾರಿಷಸ್‌ನಲ್ಲಿನ ಬ್ಯಾಂಕುಗಳಿಂದ ಸುಲಭವಾಗಿ ಮಾಹಿತಿ ಪಡೆಯಲು ಹಾಗೂ ಇಲ್ಲಿರುವ ಕಪ್ಪು ಹಣದ ಬಗ್ಗೆ ವಿವರಗಳನ್ನು ಪಡೆಯಲು ಅನುಕೂಲವಾಗುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಈ ಚರ್ಚೆಯ ವೇಳೆ  ಅಭಿಪ್ರಾಯಪಡಲಾಗಿತ್ತು.ಮಾರಿಷಸ್‌ನಲ್ಲಿರುವ ಬ್ಯಾಂಕುಗಳಲ್ಲಿ ಸದ್ಯ ಶೇಕಡ 44ರಷ್ಟು ವಿದೇಶಿ ನೇರ ಬಂಡವಾಳದ ಹಣ ಇದೆ ಎನ್ನಲಾಗಿದೆ. ಭಾರತದ ರಿಯಲ್ ಎಸ್ಟೇಟ್ ಮತ್ತು ದೂರಸಂಪರ್ಕ ಕ್ಷೇತ್ರಗಳ ಕಪ್ಪು ಹಣವೂ ಇಲ್ಲಿ ಯಥೇಚ್ಛವಾಗಿ ಜಮೆಯಾಗಿದೆ ಎಂದು ಅಂದಾಜಿಸಲಾಗಿದೆ.ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ (ಒಇಸಿಡಿ) ಇತ್ತೀಚೆಗೆ ನಡೆಸಿದ ತನ್ನ ಅಧ್ಯಯನದಲ್ಲಿ, ಮಾರಿಷಸ್‌ನಲ್ಲಿನ ಬ್ಯಾಂಕುಗಳು ಜಾಗತಿಕ ಗುಣಮಟ್ಟವನ್ನು ಹೊಂದಿಲ್ಲ ಎಂದು ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.