ಮಾರುಕಟ್ಟೆಗಿಂತ ನಾಲ್ಕು ಪಟ್ಟು ಹೆಚ್ಚು ಬೆಲೆ

7
ಕೈಗಾರಿಕೆಗೆ ಜಮೀನು: ರೈತರ ಮನವೊಲಿಕೆ ಯತ್ನ

ಮಾರುಕಟ್ಟೆಗಿಂತ ನಾಲ್ಕು ಪಟ್ಟು ಹೆಚ್ಚು ಬೆಲೆ

Published:
Updated:

ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನ­ಸಭಾ ಕ್ಷೇತ್ರ ರೋಜೇನಹಳ್ಳಿ ಕ್ರಾಸ್‌ನಿಂದ ಮುದುವಾಡಿ ಗ್ರಾಮದವರೆಗೆ ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮಕ್ಕೆ ಸ್ವ ಇಚ್ಚೆಯಿಂದ ಜಮೀನು ನೀಡುವ ರೈತರಿಗೆ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಹಣ ನೀಡಲಾಗುವುದು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮದ ವತಿಯಿಂದ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಜಮೀನು ಪಡೆಯಲು ಶುಕ್ರವಾರ ಏರ್ಪಡಿಸಲಾಗಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಪರಮಶಿವಯ್ಯ ವರದಿ ಜಾರಿಗೆ ಪರಿಸರವಾದಿಗಳು, ವಿಜ್ಞಾನಿಗಳು ಹಾಗೂ ಎಂಜಿಯರ್‌ಗಳು ಪ್ರತ್ಯೇಕ ಗುಂಪುಗಳಾಗಿರುವುದು ಜನರ ನಿರುತ್ಸಾಹಕ್ಕೆ ಕಾರಣವಾಗಿದೆ. ಅಂತರ್ಜಲ ಕುಸಿತದಿಂದ ತೋಟಗಾರಿಕೆ ಸೊರಗಿದೆ ಇಂಥ ಸಂದರ್ಭದಲ್ಲಿ ಕೃಷಿಕರ ಸೌಭಾಗ್ಯವಾಗಿ ಈ ಅವಕಾಶ ಬಂದಿದೆ ಎಂದು ಅಭಿಪ್ರಾಯಪಟ್ಟರು.ತಾಲ್ಲೂಕಿನ ಮಾವು ಬೆಳೆಗಾರರು ಮಧ್ಯವರ್ತಿಗಳ ಶೋಷಣೆಗೆ ಒಳಗಾಗಿ ನಷ್ಟ ಅನುಭವಿಸುತ್ತಿದ್ದಾರೆ. ಮಳೆ ಕೊರೆತೆಯಿಂದ ಮಾವಿನ ಇಳುವರಿ ಕುಸಿಯುತ್ತಿದೆ. ಇದರಿಂದ ರೈತರು ಸ್ವಾಭಿಮಾನದಿಂದ ಕಷ್ಟದ ಬದುಕು ನಡೆಸುತ್ತಿದ್ದಾರೆ. ಕೈಗಾರಿಕೆ ಸ್ಥಾಪನೆಗೆ ಜಮೀನು ಕೊಡುವಂತೆ ರೈತರನ್ನು ಒತ್ತಾಯಿಸುವುದಿಲ್ಲ. ಕೈಗಾರಿಕೆಗಳು ಬಂದರೆ ರೈತರ ಅಭಿವೃದ್ಧಿಯೂ ಆಗುತ್ತದೆ ಎಂದು ಹೇಳಿದರು.ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ನನ್ನ ಆದ್ಯತೆಯಾಗಿದೆ. ಇಲ್ಲಿನ ಕೃಷಿಕರ ಮಕ್ಕಳು ಬೇರೆ ಬೇರೆ ಕಾರಣಗಳಿಂದ ಕೃಷಿಗೆ ಬೆನ್ನು ತೋರಿಸುತ್ತಿದ್ದಾರೆ. ಬಹುತೇಕ ಕೃಷಿಕ ಕುಟುಂಬಗಳ ಯುವಕರು ನಗರಗಳ ಕಡೆ ಮುಖ ಮಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಜಮೀನುಗಳಲ್ಲಿ ಬಿತ್ತನೆ ಮಾಡುವುದಿಲ್ಲ. ಈ ಬಗ್ಗೆ ರೈತರು ತೆರೆದ ಮನಸ್ಸಿನಿಂದ ಆಲೋಚಿಸಬೇಕು. ಬಂದಿರುವ ಅವಕಾಶ ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಹೇಳಿದರು.ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಅಧಿಕಾರಿಗಳಾದ ಉದಗಿ, ಚಕ್ರವರ್ತಿ ಮೋಹನ್‌, ಎಸ್.ರಂಗಪ್ಪ, ಅಶೋಕ್ ಮುನಾನಿ, ಟಿ.ಆರ್.ಸ್ವಾಮಿ, ಮೊಸಲಗಿ, ಮುಖಂಡರಾದ ಬಿ.ವೆಂಕಟರೆಡ್ಡಿ, ಎಲ್‌.ಗೋಪಾಲಕೃಷ್ಣ, ಕೆ.ಎಸ್.ರೆಡ್ಡೆಪ್ಪ, ಎನ್.ಜಿ.ಬ್ಯಾಟಪ್ಪ, ಎಚ್.ಅಕ್ಬರ್‌ ಷರೀಫ್‌, ರತ್ನಮ್ಮ ನಾಗರಾಜ, ಸಂಜಯ್‌ ರೆಡ್ಡಿ, ದಿಂಬಾಲ ಅಶೋಕ್, ರೋಣೂರು ಚಂದ್ರಶೇಖರ್, ಕೆ.ಕೆ.ಮಂಜುನಾಥ್, ವೆಂಕಟಾದ್ರಿ, ಜನ್ನಘಟ್ಟ ಕೃಷ್ಣಪ್ಪ, ಕೆ.ಎಸ್‌.ರೆಡ್ಡಪ್ಪ, ಪುರಸಭೆ ಸದಸ್ಯರಾದ ಬಿ.ಎಂ.ಪ್ರಕಾಶ್, ಮುನಿರಾಜು, ಟಿ.ಎಂ.ಬಿ. ಮುಕ್ತಿಯಾರ್, ಕೆ.ಅನಿಸ್ ಅಹಮದ್, ಎಸ್.ಎ.ಅಬ್ದುಲ್ ಸತ್ತಾರ್, ರತ್ನಮ್ಮ ನಾಗರಾಜ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry