ಮಾರುಕಟ್ಟೆಗೆ ಬಂತು ಕಲ್ಲಂಗಡಿ ಹಣ್ಣು

7

ಮಾರುಕಟ್ಟೆಗೆ ಬಂತು ಕಲ್ಲಂಗಡಿ ಹಣ್ಣು

Published:
Updated:
ಮಾರುಕಟ್ಟೆಗೆ ಬಂತು ಕಲ್ಲಂಗಡಿ ಹಣ್ಣು

ಚಾಮರಾಜನಗರ: ಈಗ ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ವಲ್ಪಮಟ್ಟಿಗೆ ಚಳಿ ಕಡಿಮೆಯಾಗಿದೆ. ನಿಧಾನವಾಗಿ ಬಿಸಿಲಿನ ಝಳ ಹೆಚ್ಚುತ್ತಿದೆ. ಕೆಲವೊಂದು ದಿನ ಮುಂಜಾನೆ ಚಳಿ ಇದ್ದರೂ ಮಧ್ಯಾಹ್ನದ ವೇಳೆಗೆ ಸೂರ್ಯ ನೆತ್ತಿ ಸುಡುತ್ತಾನೆ. ಹೀಗಾಗಿ, ನಾಗರಿಕರು ಎಳನೀರು, ಕಲ್ಲಂಗಡಿ ಹಣ್ಣು ತಿಂದು ದೇಹ ತಂಪು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.ಅರಣ್ಯ ಇಲಾಖೆ ವೃತ್ತ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತಕ್ಕೆ ಭೇಟಿ ನೀಡಿದರೆ ರಾಶಿ ಹಾಕಿಕೊಂಡು ಕಲ್ಲಂಗಡಿ ಹಣ್ಣು ಮಾರಾಟ ಮಾಡುವ ದೃಶ್ಯ ಸಾಮಾನ್ಯವಾಗಿದೆ. ನಾಗರಿಕರು, ಅಕ್ಕಪಕ್ಕದ ಶಾಲೆಗಳ ಮಕ್ಕಳು ಕಲ್ಲಂಗಡಿ ಹಣ್ಣು ತಿಂದು ಬಾಯಿ ಚಪ್ಪರಿಸುತ್ತಾರೆ. ತಳ್ಳುವ ಅಂಗಡಿಗಳಲ್ಲೂ ಮಾರಾಟ ನಡೆಯುತ್ತಿದೆ.ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಯುವ ವಿಸ್ತ್ರೀರ್ಣ ತುಂಬಾ ಕಡಿಮೆ. ಬೇಸಿಗೆ ವೇಳೆಗೆ ಕಲ್ಲಂಗಡಿ ಬೆಳೆ ಬರುವಂತೆ ಬೀಜ ನಾಟಿ ಮಾಡುವ ರೈತರು ಅತ್ಯಲ್ಪ. ಆದರೆ, ನೀರಾವರಿ ಪ್ರದೇಶದ ಬೆರಳೆಣಿಕೆಯಷ್ಟು ರೈತರು ಕೊಂಚ ಆದಾಯ ಪಡೆಯುವ ನಿಟ್ಟಿನಲ್ಲಿ ಕಲ್ಲಂಗಡಿ ಬೆಳೆಯುತ್ತಾರೆ. ಆದರೆ, ಗುತ್ತಿಗೆ ಲೆಕ್ಕದಲ್ಲಿ ಕಲ್ಲಂಗಡಿ ಬೆಳೆದ ಜಮೀನನ್ನೇ ವ್ಯಾಪಾರಿಗಳಿಗೆ ನೀಡುವ ಪರಿಣಾಮ ಕೆಲವೊಮ್ಮೆ ನಿರೀಕ್ಷಿತ ಆದಾಯ ಬರುವುದು ಕಡಿಮೆ.ಇಲ್ಲಿನ ವ್ಯಾಪಾರಿಗಳು ತಮಿಳುನಾಡು, ಕೇರಳದಿಂದ ಕಲ್ಲಂಗಡಿ ತಂದು ಮಾರಾಟ ಮಾಡುತ್ತಾರೆ. ಇನ್ನೂ ಬೇಸಿಗೆ ಆರಂಭಗೊಂಡಿಲ್ಲ. ಫೆಬ್ರುವರಿ ತಿಂಗಳು ಮುಗಿದರೆ ನೆರೆಯ ರಾಜ್ಯದಿಂದ ಕಲ್ಲಂಗಡಿ ಹಣ್ಣುಗಳು ಜಿಲ್ಲಾ ಕೇಂದ್ರಕ್ಕೆ ಲಗ್ಗೆ ಹಾಕುವುದು ಸಾಮಾನ್ಯ. ಪ್ರಸ್ತುತ ಮಾದಾಪುರ, ಸಂತೇಮರಹಳ್ಳಿ ಭಾಗದ ರೈತರು ಬೆಳೆದಿರುವ ಕಲ್ಲಂಗಡಿ ಹಣ್ಣು ನಗರದಲ್ಲಿ ಮಾರಾಟವಾಗುತ್ತಿದೆ.ಪ್ರತಿ 1 ಕೆಜಿಗೆ 12 ರೂಪಾಯಿ ದರ ನಿಗದಿಪಡಿಸಲಾಗಿದೆ. ಕೆಲವು ವ್ಯಾಪಾರಿಗಳು ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ ಮಾರಾಟ ಮಾಡುವುದು ಉಂಟು. 3ರಿಂದ 10ಕೆಜಿ ತೂಕ ತೂಗುವ ಹಣ್ಣುಗಳು ಮಾರುಕಟ್ಟೆಯಲ್ಲಿ ಬಿಕರಿಗೆ

ಲಭ್ಯವಿವೆ. ಬಿಸಿಲಿನ ಝಳ ಹೆಚ್ಚಿದರೆ ಮಾರಾಟದ ಭರಾಟೆ ಹೆಚ್ಚುತ್ತದೆ ಎಂಬುದು ವ್ಯಾಪಾರಿಗಳ ಅನಿಸಿಕೆ.ಜಿಲ್ಲೆಯ ಮಳೆಯಾಶ್ರಿತ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯುವುದು ಅಪರೂಪ. ಬಹುತೇಕ ನೀರಾವರಿ ಪ್ರದೇಶದಲ್ಲಿಯೇ ಬೆಳೆಯುವುದು ಹೆಚ್ಚು. ಈ ವರ್ಷ ಗಡಿ ಜಿಲ್ಲೆಯಲ್ಲಿ ಉತ್ತಮ ಮಳೆಯೂ ಬಿದ್ದಿಲ್ಲ. ವಿದ್ಯುತ್ ವ್ಯತ್ಯಯ, ಕೊಳವೆಬಾವಿಗಳಲ್ಲಿ ನೀರಿನ ಕೊರತೆಯಿಂದಾಗಿ ಇಳುವರಿಯೂ ಕಡಿಮೆಯಾಗಿದೆ. ಬೇಸಿಗೆ ಆರಂಭಗೊಂಡರೆ ನೆರೆಯ ರಾಜ್ಯಗಳ ಕಲ್ಲಂಗಡಿ ಹಣ್ಣುಗಳನ್ನೇ ಮಾರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.`ಮಾದಾಪುರದ ರೈತರೊಬ್ಬರು ಬೆಳೆದ ಕಲ್ಲಂಗಡಿ ತಂದು ಮಾರಾಟಕ್ಕೆ ಇಟ್ಟಿದ್ದೇನೆ. ಇನ್ನೂ ಭರ್ಜರಿ ವ್ಯಾಪಾರ ಆರಂಭಗೊಂಡಿಲ್ಲ. ಶಿವರಾತ್ರಿ ಕಳೆದರೆ ಮಾರಾಟ ಹೆಚ್ಚುತ್ತದೆ. ಕೊಂಚ ಚಳಿ ಇರುವ ಪರಿಣಾಮ ಜನರು ಕಲ್ಲಂಗಡಿ ಖರೀದಿಗೆ ಬರುವುದು ಕಡಿಮೆ. ಬಿಸಿಲಿನ ಝಳ ಹೆಚ್ಚಿದ್ದ ದಿನ ಮಾರಾಟ ಉತ್ತಮವಾಗಿ ನಡೆಯುತ್ತದೆ~ ಎನ್ನುತ್ತಾರೆ ವ್ಯಾಪಾರಿ ನಯೀಂ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry