ಮಾರುಕಟ್ಟೆಗೆ ಮಿಣಿಕೆ ಹಣ್ಣು ಲಗ್ಗೆ

7

ಮಾರುಕಟ್ಟೆಗೆ ಮಿಣಿಕೆ ಹಣ್ಣು ಲಗ್ಗೆ

Published:
Updated:
ಮಾರುಕಟ್ಟೆಗೆ ಮಿಣಿಕೆ ಹಣ್ಣು ಲಗ್ಗೆ

ಚಾಮರಾಜನಗರ: ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದೆ. ನಾಗರಿಕರು ತಂಪುಪಾನೀಯ, ಎಳನೀರಿಗೆ ಮೊರೆ ಹೋಗಿದ್ದಾರೆ. ಈಗ ದೇಹಕ್ಕೆ ತಂಪು ನೀಡುವ ಮಿಣಿಕೆ ಹಣ್ಣು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತದ ರಸ್ತೆಬದಿಯಲ್ಲಿ ಮಿಣಿಕೆ ಹಣ್ಣಿನ ಮಾರಾಟ ಭರ್ಜರಿ ಯಾಗಿ ನಡೆಯುತ್ತಿದೆ. ಗಾತ್ರಕ್ಕೆ ಅನುಸಾರ ದರ ನಿಗದಿಪಡಿಸಲಾಗಿದೆ. ಈಗ ಮಾರುಕಟ್ಟೆ ಪ್ರವೇಶಿಸಿರುವ ಪರಿಣಾಮ 1 ಕೆಜಿ ಮಿಣಿಕೆ ಹಣ್ಣಿಗೆ ರೂ.20 ಧಾರಣೆ ಇದೆ.ಕೆಲವು ವ್ಯಾಪಾರಿಗಳು ತಳ್ಳುವಗಾಡಿಯಲ್ಲಿ ವಿವಿಧ ಬಡಾವಣೆಗಳಿಗೆ ತೆರಳಿ ಮಾರಾಟ ಮಾಡುವುದು ಉಂಟು. ಹಣ್ಣಿನ ಸಿಪ್ಪೆ ತೆಗೆದು ತಿರಿಳಿ ನೊಂದಿಗೆ ಬೆಲ್ಲ ಅಥವಾ ಸಕ್ಕರೆ ಬೆರೆಸಿ ತಿಂದರೆ ದೇಹಕ್ಕೆ ತಂಪು ಸಿಗಲಿದೆ. ಜೊತೆಗೆ, ತಂಪುಪಾನೀಯ ಅಂಗಡಿಗಳಲ್ಲಿ ಈ ಹಣ್ಣಿನ ಪಾನೀಯ ಕೂಡ ಲಭಿಸುತ್ತದೆ. ಆದರೆ, ಇದಕ್ಕೆ ಕೊಂಚ ಹೆಚ್ಚು ಹಣ ನೀಡಬೇಕಿದೆ.ಯಳಂದೂರು ತಾಲ್ಲೂಕು ಹಾಗೂ ಚಾಮರಾಜನಗರ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆದಿರುವ ಹಣ್ಣುಗಳೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಒಂದರಿಂದ ಒಂದೂವರೆ ತಿಂಗಳ ಅವಧಿವರೆಗೆ ಮಾತ್ರವೇ ಈ ಹಣ್ಣಿನ ಮಾರಾಟ ನಡೆಯುತ್ತದೆ. ಋತುಮಾನದ ಅನ್ವಯ ಬೆಳೆಯುವ ಈ ಹಣ್ಣುಗಳನ್ನು ವ್ಯಾಪಾರಿಗಳು ರೈತರ ಜಮೀನುಗಳಿಗೆ ತೆರಳಿ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದಾರೆ.ಈಚೆಗೆ ಸುರಿದ ತುಂತುರು ಮಳೆ ಜನರಿಗೆ ಕೊಂಚ ತಂಪು ನೀಡಿತ್ತು. ಆದರೆ, ಅಕಾಲಿಕ ಮಳೆ ಮುಂದುವರಿದರೆ ಹಣ್ಣು ಕೊಳೆತು ಹೋಗಲಿದೆ ಎಂಬ ಆತಂಕ ಕೇವಲ ರೈತರನ್ನಷ್ಟೇ ಅಲ್ಲ ವ್ಯಾಪಾರಿಗಳನ್ನೂ ಕಾಡುತ್ತಿದೆ. ಮಿಣಿಕೆ ಹಣ್ಣು ಈಗ ಮಾರುಕಟ್ಟೆ ಪ್ರವೇಶಿಸಿರುವ ಪರಿಣಾಮ 1 ಕೆಜಿ ಹಣ್ಣಿನ ದರ ರೂ.20 ಇದೆ. ಇನ್ನೊಂದು ವಾರ ಕಳೆದರೆ ರೂ. 30ರಿಂದ 40 ದಾಟಲಿದೆ ಎನ್ನುವುದು ವ್ಯಾಪಾರಿಗಳ ಅಂದಾಜು.ತಳ್ಳುವಗಾಡಿ ಅಥವಾ ರಸ್ತೆಬದಿಯಲ್ಲಿ ಈ ಹಣ್ಣುಗಳನ್ನು ತೆರೆದಿಟ್ಟುಕೊಂಡು ಮಾರಾಟ ಮಾಡುತ್ತಾರೆ. ಈ ವೇಳೆ ಬಿಸಿಲಿನ ತಾಪ ಹೆಚ್ಚಿದರೆ ಹಣ್ಣು ಬಿರುಕು ಬಿಡುತ್ತದೆ. ಇಂತಹ ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಾರೆ. ಆಗ ನಿಗದಿಪಡಿಸಿದಷ್ಟು ಬೆಲೆ ಸಿಗುವುದಿಲ್ಲ. ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ವ್ಯಾಪಾರಿಗಳ ಅಳಲು.`ಬೇಸಿಗೆಯ ಆರಂಭದ ದಿನಗಳಲ್ಲಿ ಮಿಣಿಕೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಅಕ್ಕಪಕ್ಕದ ರೈತರ ಜಮೀನುಗಳಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದೇವೆ. ಬಿಸಿಲಿನ ಝಳ ಹೆಚ್ಚಿದರೆ ಹಣ್ಣಿನ ಮಾರಾಟದ ಭರಾಟೆಯೂ ಹೆಚ್ಚುತ್ತದೆ. ಮತ್ತೊಂದೆಡೆ ಹಣ್ಣು ಸೀಳಾಗಿ ಒಡೆದು ಹೋಗದಂತೆ ನೋಡಿಕೊಳ್ಳುವುದು ಕೂಡ ಸವಾಲಿನ ಕೆಲಸ' ಎನ್ನುತ್ತಾರೆ ವ್ಯಾಪಾರಿ ಮಹಾದೇವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry