ಮಾರುಕಟ್ಟೆಗೆ ಲಗ್ಗೆ ಇಟ್ಟ ಸೀತಾಫಲ

7

ಮಾರುಕಟ್ಟೆಗೆ ಲಗ್ಗೆ ಇಟ್ಟ ಸೀತಾಫಲ

Published:
Updated:

ರಾಯಚೂರು: ಒಂದರ ಹಿಂದೊಂದು ಹಬ್ಬಗಳು ಸಾಲಾಗಿ ಬುರುತ್ತಿದ್ದು, ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳ ಮಾರಾಟ ಜೋರಾಗಿದೆ. ಸೇಬು, ಪಪ್ಪಾಯಿ, ಕಲ್ಲಂಗಡಿ ಮಾರುಕಟ್ಟೆಯಲ್ಲಿ ಹೆಚ್ಚು ಕಂಡು ಬರುತ್ತಿದ್ದು, ಬೆಲೆ ಮಾತ್ರ ಕೈಗೆಟುಕದ ರೀತಿ ನಿಗದಿಗೊಂಡಿರುವುದು ಗ್ರಾಹಕರ ಜೇಬಿಗೆ ಕತ್ತರಿ ಹಾಕುವಂತಿದೆ.ಈ ಎಲ್ಲ ಹಣ್ಣುಗಳ ನಡುವೆ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿರುವುದು `ಸೀತಾಫಲ ಹಣ್ಣು~. ಮಾರುಕಟ್ಟೆ ಪ್ರದೇಶ, ನಗರದ ಪ್ರಮುಖ ರಸ್ತೆ, ವಿವಿಧ ವೃತ್ತಗಳು, ರಸ್ತೆ ಅಕ್ಕಪಕ್ಕ ಎಲ್ಲೆಂದರಲ್ಲಿ `ಸೀತಾಫಲ ಹಣ್ಣು~ ಗ್ರಾಹಕರ ಗಮನ ಸೆಳೆಯುತ್ತಿದೆ. ಇರುವ ಹಣ್ಣುಗಳಲ್ಲಿ ತಮ್ಮ ಜೇಬಿಗೆ ಬಿಸಿ ಮುಟ್ಟಿಸದ ಹಣ್ಣು ಎಂದರೆ ಇದೇ ಎಂದು ಭಾವಿಸುವ ಗ್ರಾಹಕರು ಈ ಹಣ್ಣು ಕೊಂಡೊಯ್ಯುತ್ತಿರುವುದು ಕಂಡು ಬರುತ್ತಿದೆ.ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಎದುರಿಗೆ, ತರಕಾರಿ ಮಾರುಕಟ್ಟೆಯಲ್ಲಿ, ಮಹಾವೀರ ವೃತ್ತ, ತೀನ್ ಕಂದೀಲ್, ಸೂಪರ್ ಮಾರ್ಕೆಟ್, ಜೈನ್ ಟೆಂಪಲ್ ಹತ್ತಿರದ ವೃತ್ತ, ಚಂದ್ರಮೌಳೇಶ್ವರ ವೃತ್ತ ಹೀಗೆ ಹಲವು ಕಡೆ ಸೀತಾಫಲ ಹಣ್ಣು ಮಾರಾಟ ಕಾಣಿಸುತ್ತದೆ.ವಿಶೇಷವಾಗಿ ರೈಲ್ವೆ ಸ್ಟೇಶನ್ ರಸ್ತೆಯ ಸಾರ್ವಜನಿಕ ಉದ್ಯಾನವನ ಪಕ್ಕ ರಾಶಿಗಟ್ಟಲೆ ಸೀತಾಫಲ ಹಣ್ಣು ತಂದು ತಳ್ಳುವ ಗಾಡಿಯಲ್ಲಿ ಗುಡ್ಡೆ ಹಾಕಿ ಮಾರಾಟ ಮಾಡುವ ದೃಶ್ಯ ಭಾನುವಾರ ಕಂಡು ಬಂದಿತು.ಹಣ್ಣು ಮಾರಾಟ ಮಾಡುವ ಅಂಗಡಿಯಲ್ಲಿ ಕೆಜಿಗೆ 50ರಿಂದ 60 ರೂಪಾಯಿ ಬೆಲೆ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದರೆ ತರಕಾರಿ ಮಾರುಕಟ್ಟೆ, ಮಹಾವೀರ ವೃತ್ತ, ಜೈನ್ ಟೆಂಪಲ್ ಹತ್ತಿರ ಡಜನ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ಒಬ್ಬರು ಡಜನ್‌ಗೆ 80 ಹೇಳಿದರೆ ಮತ್ತೊಬ್ಬರು 60-70 ಹೇಳುತ್ತಾರೆ.  ಕೆಲವರು 20 ರೂಪಾಯಿಗೆ ಆರು, ಹತ್ತು ರೂಪಾಯಿ ಮೂರು ಹೀಗೆ ಗ್ರಾಹಕರ ಚೌಕಾಸಿ ಹೇಗಿರುತ್ತದೋ ಹಾಗೆ ಮಾರಾಟ ಮಾಡುತ್ತಿರುವುದು ಕಂಡು ಬರುತ್ತದೆ.ಈವರೆಗೂ ಸೀತಾಫಲ ಹಣ್ಣೂ ಮಾರುಕಟ್ಟೆಯಲ್ಲಿ ದುಬಾರಿಯೇ ಆಗಿತ್ತು. ಈಗ ಬೆಲೆ ಕಡಿಮೆ ಆಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಸೀತಾಫಲ ಹಣ್ಣು ಮಾರುಕಟ್ಟೆಗೆ ಹೆಚ್ಚು ಬರುತ್ತಿದೆ. ಇದು ಬೆಲೆ ಕಡಿಮೆ ಆಗಲು ಕಾರಣವಾಗಿದೆ. ಗ್ರಾಹಕರು ಖರೀದಿಸುತ್ತಿದ್ದಾರೆ. ಕೆಲ ದಿನ ಕಳೆದರೆ ಮತ್ತೊಂದಿಷ್ಟು ಬೆಲೆ ಕಡಿಮೆ ಆಗಬಹುದು ಎಂದು ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಹಣ್ಣಿನ ವ್ಯಾಪಾರಸ್ಥರು ಪ್ರಜಾವಾಣಿಗೆ ತಿಳಿಸಿದರು.ಆಂಧ್ರಪ್ರದೇಶದ ಶಾದನಗರ, ಮೆಹಬೂಬನಗರದಿಂದ ಸೀತಾಫಲ ಹಣ್ಣು ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸಾಮಾನ್ಯ ದಿನಗಳಲ್ಲಿ ಸೀತಾಫಲ ಹಣ್ಣು ಚಿಕ್ಕ ಗಾತ್ರದಲ್ಲಿರುತ್ತದೆ. ಬೆಲೆಯೂ ಹೆಚ್ಚು. ಸೀಸನ್‌ನಲ್ಲಿ ದೊಡ್ಡ ಗಾತ್ರದ ಹಣ್ಣುಗಳು ಸಿಗುವುದರಿಂದ ಗ್ರಾಹಕರು ಖರೀದಿಸುತ್ತಾರೆ. ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಬೆಳೆಯಲಾಗುವ ಸೀತಾಫಲ ಸಕತ್ ಫೇಮಸ್. ಆದ್ರೆ ಈಗ  ಆ ಹಣ್ಣುಗಳು ಮಾರುಕಟ್ಟೆಯಲ್ಲಿ ಕಡಿಮೆ ಆಗಿದೆ. ಬಂದ್ರೂ ಅಲ್ಪಸ್ವಲ್ಪ ಬರುತ್ತದೆ. ಹೀಗಾಗಿ ಆಂಧ್ರಪ್ರದೇಶದಿಂದ ಖರೀದಿಸಿ ತಂದು ಮಾರಾಟ ಮಾಡಲಾಗುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry