ಶನಿವಾರ, ಜೂನ್ 19, 2021
27 °C

ಮಾರುಕಟ್ಟೆಯಾದ ಮಹಿಳಾ ಕಾಲೇಜು..!

ಪ್ರಜಾವಾಣಿ ವಾರ್ತೆ/ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದ, ಸ್ಥಳೀಯ ಅಲ್ಲಂ ಸುಮಂಗಲಮ್ಮ ಮಹಿಳಾ ಕಾಲೇಜಿನಲ್ಲಿ ವಾರಾಂತ್ಯಕ್ಕೆ ಎರಡು ದಿನಗಳ ಕಾಲ ನಡೆದ `ಸೃಷ್ಟಿ -2012 ಆಹಾರ ಮತ್ತು ಫ್ಯಾಷನ್ ಮೇಳ~ ಹತ್ತಾರು ಸಾವಿರ ಜನರನ್ನು ಆಕರ್ಷಿಸಿತು.ಬಿಕಾಂ ಮತ್ತು ಬಿಬಿಎಂ ವಿದ್ಯಾರ್ಥಿನಿಯರು ಆಯೋಜಿಸಿದ್ದ ಈ ಮೇಳದ ಅಂಗವಾಗಿ ಶನಿವಾರ ಮತ್ತು ಭಾನುವಾರ ಕಾಲೇಜು ಆವರಣವು ಮಾರುಕಟ್ಟೆಯಾಗಿ ಬದಲಾಗಿತ್ತು.ಜೋಳದರೊಟ್ಟಿ, ಚಟ್ನಿಯಿಂದ ಹಿಡಿದು, ಮಂಡಕ್ಕಿ ವಗ್ಗರಣೆ, ಮಿರ್ಚಿ, ಐಸ್ ಕ್ರೀಂ, ಹಣ್ಣಿನ ರಸಾಯನ, ಉತ್ತರ ಭಾರತದ ತಿನಿಸುಗಳು, ದೋಸೆ, ಚಹ, ಕಾಫಿ, ಹಣ್ಣಿನ ರಸ, ಪಿಜ್ಜಾ, ಬರ್ಗರ್ ಸೇರಿದಂತೆ ವಿಶೇಷ ತಿಂಡಿ- ತಿನಿಸುಗಳು, ಅತ್ಯಾಧುನಿಕ ಉಡುಗೆ- ತೊಡುಗೆಗಳು, ಪ್ರಸಾದನ ಸಾಧನಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಮಳಿಗೆಗಳನ್ನು ತೆರೆದಿದ್ದು, ಭರ್ಜರಿ ವ್ಯಾಪಾರ- ವಹಿವಾಟು ನಡೆಯಿತು.ಪ್ರತಿ ಗ್ರಾಹಕನಿಗೆ ರೂ 10 ಪ್ರವೇಶ ಶುಲ್ಕ ಆಕರಿಸಲಾಗಿತ್ತಲ್ಲದೆ, ಈ ಎಲ್ಲ ವಸ್ತುಗಳಿಗೂ ದುಪ್ಪಟ್ಟು ದರ ವಿಧಿಸಿ, ವಿದ್ಯಾರ್ಥಿನಿಯರೂ ವ್ಯಾಪಾರ ಮಳಿಗೆ ತೆರೆಯಲು ಅವಕಾಶ ನೀಡಲಾಗಿತ್ತು.ಪದವಿ ವಿದ್ಯಾರ್ಥಿನಿಯರೂ ತರಹೇವಾರಿ ಭಕ್ಷ್ಯ-  ಭೋಜನ, ತಿಂಡಿ- ತಿನಿಸು, ಹಣ್ಣಿನ ರಸ ತಯಾರಿಸಿ, ಮಾರಾಟ ಮಾಡಿ ವ್ಯಾಪಾರ- ವಹಿವಾಟಿನ `ಪ್ರಾಯೋಗಿಕ ಅನುಭವ~ ಗಳಿಸಿದರು.ಬಿ.ಬಿಎಂ, ಬಿ.ಕಾಂ ಮತ್ತು ಬಿ.ಎಸ್‌ಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಯರಿಗೆ ಹಲವು ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿತ್ತು.ಆದರೆ, ಅನೇಕ ಪಾಲಕರು, ಶಿಕ್ಷಣ ಪ್ರೇಮಿಗಳು ಪ್ರಸ್ತುತ ಮೇಳದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅನ್ಯ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ವ್ಯಾಪಾರಿ ಮನೋಭಾವವನ್ನೇ ಅಳವಡಿ ಸುವ ಇಂತಹ ಮೇಳವನ್ನು ಆಯೋಜಿಸುವುದಕ್ಕೆ ಮೊದಲು ಸಂಸ್ಥೆಯವರು ಆಲೋಚಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ವಿಶೇಷವಾಗಿ ವಾಣಿಜ್ಯ, ಬಿಸಿನೆಸ್ ಮ್ಯಾನೇಜ್‌ಮೆಂಟ್ ಓದುವ ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಅನುಭವದ ಹಿನ್ನೆಲೆಯಲ್ಲಿ ಇಂತಹ ಮೇಳಗಳನ್ನು ಆಯೋಜಿಸಬೇಕು ನಿಜ. ಆದರೆ, ಸಂಪೂರ್ಣ ವ್ಯಾಪಾರೀಕರಣಕ್ಕೆ ಆದ್ಯತೆ ನೀಡುವುದರ ಜತೆಗೆ ಬಡ ವಿದ್ಯಾರ್ಥಿನಿಯರಿಂದಲೂ ಮಳಿಗೆಗೆ ಬಾಡಿಗೆ ಆಕರಿಸಿ ಲಾಭವನ್ನು ನಿರೀಕ್ಷಿಸುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಅವರು ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಿದರು.ಮಳಿಗೆಗೆ ಬಾಡಿಗೆ: `ನಮಗೆ ಪ್ರತಿ ಮಳಿಗೆಗೆ ರೂ 2 ಸಾವಿರ ಬಾಡಿಗೆ ಆಕರಿಸಲಾಗಿದೆ. ಎರಡು ದಿನಗಳ ಕಾಲ ನಡಯುವ ವ್ಯಾಪಾರಕ್ಕೆ ಬಂಡವಾಳ ಹೂಡುವಂತೆ ತಿಳಿಸಲಾಗಿತ್ತು, ಐದಾರು ಸಾವಿರ ರೂಪಾಯಿಯನ್ನು ಪಾಲಕರಿಂದ ಇಸಿದುಕೊಂಡು ಬಂಡವಾಳ ಹೂಡಿದ್ದೇವೆ.ಮೇಳ ನಡೆಯುವ ಜಾಗೆಯ ಮುಖ್ಯದ್ವಾರದಿಂದ ಒಳಗೆ ಮಳಿಗೆ ನೀಡಿದ್ದರಿಂದ ವ್ಯಾಪಾರದಲ್ಲಿ ನಷ್ಟವೂ ಆಗಿದೆ~ ಎಂದು ಅನೇಕ ವಿದ್ಯಾರ್ಥಿನಿಯರು ತಿಳಿಸಿದರು.ಜೂಜು ಅಡ್ಡೆ: ಇಂತಹ ಮೇಳಗಳಲ್ಲಿ ಇರಿಸಲಾಗಿದ್ದ ಮಳಿಗೆಗಳಲ್ಲಿ ಜೂಜಾಟದ ಮಾದರಿಯ ಕೆಲವು ಆಟಗಳನ್ನೂ ಆಯೋಜಿಸಿರುವುದು ಸರಿಯಲ್ಲ. 20 ರೂಪಾಯಿ ಪಡೆದು, ಒಂದು ಗಾಜಿನ ಲೋಟದ ಮೇಲೆ ಒಂದು ಇಸ್ಪೀಟ್ ಎಲೆ ಇರಿಸಿ, ಅದರ ಮೇಲೆ ಒಂದು ನಾಣ್ಯವನ್ನು ಇರಿಸಿ, ಮಧ್ಯದ ಬೆರಳಿನಿಂದ ಇಸ್ಪೀಟ್ ಎಲೆಯನ್ನು ಚಿಮ್ಮಿ, 30 ಸೆಕೆಂಡ್‌ಗಳಲ್ಲಿ 15 ಬಾರಿ ನಾಣ್ಯವನ್ನು  ಲೋಟ ದೊಳಗೆ ಕೆಡವಿದರೆ ರೂ 100 ನೀಡುವಂತಹ ಆಟಗಳನ್ನು ನಡೆಸ ಲಾಗಿದೆ.

 

ಅಲ್ಲದೆ, ಕ್ಯಾಸಿನೋಗಳಲ್ಲಿ ನಡೆಯುವ ಜೂಜಾಟ ಮಾದರಿಯಲ್ಲೇ ಮತ್ತಷ್ಟು ಆಟಗಳನ್ನೂ ಆಯೋಜಿಸ ಲಾಗಿದೆ. ಕಾಲೇಜೊಂದರಲ್ಲಿ ಇಂತಹ ಆಟವನ್ನು ಉತ್ತೇಜಿಸಲು ಅವಕಾಶ ನೀಡಿದ್ದು ಸರಿಯಲ್ಲ ಎಂದು ವಿದ್ಯಾರ್ಥಿ ಮುಖಂಡ ಅಡವಿ ಸ್ವಾಮಿ ತೀವ್ರ ವಿಷಾದ ವ್ಯಕ್ತಪಡಿಸಿದರು.`ವರ್ತಕ~ ಸಂಘ: ವೀರಶೈವ ವಿದ್ಯಾವರ್ಧಕ ಸಂಘವು ವರ್ತಕರ ಸಂಘದಂತೆ ಈ ಮೇಳ ಆಯೋಜಿಸಿದ್ದು ಸರಿಯಲ್ಲ. ಉತ್ತಮ ಶಿಕ್ಷಣ ನೀಡುವ,  ಉದಾತ್ತ ಮೌಲ್ಯಗಳೊಂದಿಗೆ ಆರಂಭ ವಾದ ಈ ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿಯ ಮೇಳವನ್ನು ಆಯೋಜಿಸಿರು ವುದರಿಂದ ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ಪ್ರಯೋಜನವೂ ಆಗುವುದಿಲ್ಲ ಎಂದು ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ ಅನಿಸಿಕೆ ವ್ಯಕ್ತಪಡಿಸಿದರು.ಈ ರೀತಿ ವ್ಯಾಪಾರೀ ದೃಷ್ಟಿಯಿಂದ, ಪ್ರವೇಶ ದರವನ್ನೂ ಆಕರಿಸಿ, ಪಠ್ಯಕ್ಕೂ, ಶಿಕ್ಷಣಕ್ಕೂ ಸಂಬಂಧಿಸದ ಮೇಳ ಏರ್ಪಡಿಸಲಾಗಿದೆ. ಇದೊಂದು ಸಾಮಾನ್ಯ ಮೇಳದಂತೆಯೇ ಆಗಿದೆ. ಇದರಿಂದ ವಿದ್ಯಾರ್ಥಿನಿಯರಿಗೆ ಪ್ರಯೋಜನವೇ ಇಲ್ಲ ಎಂದು ಅವರು ಹೇಳಿದರು.ಬಿ.ಬಿಎಂ, ಬಿ.ಕಾಂ ವಿದ್ಯಾರ್ಥಿನಿ ಯರಿಗೆ ಅಗತ್ಯ ಮಾಹಿತಿ, ಶಿಕ್ಷಣ ನೀಡು ವಂತಹ ಮೇಳವನ್ನು ಆಯೋಜಿಸ ಬೇಕಿತ್ತು. ಬದಲಿಗೆ, ರ‌್ಯಾಂಪ್ ಶೋ, ಫ್ಯಾಶನ್ ಶೋ ಆಯೋಜಿಸಿರುವುದು ಅಕ್ಷಮ್ಯ ಎಂದು ಕಲ್ಲುಕಂಬ ಶಿವೇಶ್ವರ ಗೌಡ ತಿಳಿಸಿದರು.ಇಲ್ಲಿಗೆ ಆಗಮಿಸಿರುವ ಗ್ರಾಹಕರಲ್ಲಿ ಬಹುತೇಕರು ಪಾಲಕರೇ. ತಮ್ಮ ಮಕ್ಕಳೇ ಆಯೋಜಿಸಿರುವ ಮೇಳ ಎಂಬ ಉಮೇದಿಯಿಂದ ಇಲ್ಲಿಗೆ ಬಂದ ಪಾಲಕರ ಜೇಬಿಗೂ ಕತ್ತರಿ ಬಿದ್ದಿದೆ. ಇಲ್ಲಿ ದೊರೆಯುವ ಪ್ರತಿ ವಸ್ತುವಿನ ದರವೂ ದುಪ್ಪಟ್ಟು.

 

ಕಾಲೇಜುಗಳಲ್ಲಿ ನಡೆಯುವ ಇಂತಹ ಮೇಳಗಳಲ್ಲಿ ರಿಯಾಯಿತಿ ದರ ಆಕರಿಸಿ ಗ್ರಾಹಕರನ್ನು ಸೆಳೆದಿದ್ದರೆ ಸ್ವಾಗತಿಸಬಹುದಿತ್ತು. ಆದರೆ, ದರವನ್ನು ನಿಯಂತ್ರಿಸದೆ ಲಾಭದ ಉದ್ದೇಶ ಇಟ್ಟುಕೊಂಡೇ ಬೇಕಾಬಿಟ್ಟಿಯಾಗಿ ಇಂತಹ ಮೇಳ ಆಯೋಜಿಸಿದ್ದು ಸರಿಯಲ್ಲ ಎಂದೂ ಅನೇಕ ಪಾಲಕರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.