ಮಾರುಕಟ್ಟೆ ಚೇತರಿಕೆ

7

ಮಾರುಕಟ್ಟೆ ಚೇತರಿಕೆ

Published:
Updated:

ಮುಂಬೈ (ಪಿಟಿಐ): ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಬುಧವಾರ 56  ಪೈಸೆಗಳಷ್ಟು ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 333 ಅಂಶಗಳಷ್ಟು ಏರಿಕೆ ಪಡೆಯಿತು.`ಆರ್‌ಬಿಐ'ನ ಹೊಸ ಗವರ್ನರ್ ಆಗಿ ರಘುರಾಂ ರಾಜನ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಭರವಸೆ ಮೂಡಿದೆ. ಇದರ ಬೆನ್ನಲ್ಲೇ, ಗೃಹ ಸಾಲಕ್ಕೆ ಸಂಬಂಧಿಸಿದಂತೆ `ಆರ್‌ಬಿಐ' ಬ್ಯಾಂಕುಗಳಿಗೆ ನೀಡಿದ ಸೂಚನೆಯಿಂದ ಲೋಹ, ರಿಯಲ್ ಎಸ್ಟೆಟ್ ವಲಯದ ಷೇರುಗಳು ಚೇತರಿಕೆ ಕಂಡಿವೆ. ಈ ಎಲ್ಲ ಸಕಾರಾತ್ಮಕ ಸಂಗತಿಗಳಿಂದ ದಿನದಂತ್ಯಕ್ಕೆ `ಬಿಎಸ್‌ಇ' ಶೇ 1.83ರಷ್ಟು ಏರಿಕೆ ದಾಖಲಿಸಿ 18,567 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ' ಕೂಡ 106 ಅಂಶಗಳಷ್ಟು (ಶೇ 2) ಚೇತರಿಕೆ ಕಂಡು 5,448 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ ರೂ716.16 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ `ಸೆಬಿ' ಹೇಳಿದೆ.ರೂಪಾಯಿ ಚೇತರಿಕೆ

ಸಿರಿಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಂಗಳವಾರ 165 ಪೈಸೆಗಳಷ್ಟು ಅಪಮೌಲ್ಯ ಕಂಡಿದ್ದ ರೂಪಾಯಿ ಬುಧವಾರ ವಹಿವಾಟಿನ ಒಂದು ಹಂತದಲ್ಲಿ ಮತ್ತೆ ರೂ68.50ರವರೆಗೂ ಜಾರಿತು. ನಂತರ ಅಪಮೌಲ್ಯ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ `ಆರ್‌ಬಿಐ' ಖಚಿತ ಹೇಳಿಕೆ ನೀಡಿದ ನಂತರ 56  ಪೈಸೆಗಳಷ್ಟು ಚೇತರಿಕೆ ಕಂಡು ರೂ67.07ರಲ್ಲಿ ವಹಿವಾಟು ಅಂತ್ಯಗೊಳಿಸಿತು.ರೂಪಾಯಿ ಮೌಲ್ಯ ಆ.28ರಂದು ಸಾರ್ವಕಾಲಿಕ ದಾಖಲೆ ಮಟ್ಟವಾದ ರೂ68.85ಕ್ಕೆ ಕುಸಿದಿತ್ತು.`ಇಸಿಬಿ' ಸಡಿಲಿಕೆ

`ಬಾಹ್ಯ ವಾಣಿಜ್ಯ ಸಾಲಕ್ಕೆ (ಇಸಿಬಿ) ವಿಧಿಸಿದ್ಧ ನಿರ್ಬಂಧಗಳನ್ನು `ಆರ್‌ಬಿಐ' ಬುಧವಾರ ಸಡಿಲಗೊಳಿಸಿದೆ. ಇದರಿಂದ ಕಂಪೆನಿಗಳು ಸಾಗರೋತ್ತರ ಮಾರುಕಟ್ಟೆಯಿಂದ ಪಡೆದ ಸಾಲವನ್ನು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗೂ ಬಳಸಿಕೊಳ್ಳಬಹುದು.ಸಾಗರೋತ್ತರ ಮಾರುಕಟ್ಟೆಯಲ್ಲಿ ಭಾರತೀಯ ಕಂಪೆನಿಗಳ ಹೂಡಿಕೆ ಮೇಲೆ ಹೇರಿದ್ದ ನಿರ್ಬಂಧವನ್ನೂ `ಆರ್‌ಬಿಐ' ಸಡಿಲಗೊಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry