ಶುಕ್ರವಾರ, ಮೇ 7, 2021
26 °C

ಮಾರುಕಟ್ಟೆ ಬೆಲೆಗಿಂತ ಕಡಿಮೆ ಮೌಲ್ಯ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಮನಗರ ಜಿಲ್ಲೆಯ ಅರ್ಚಕರಹಳ್ಳಿಯಲ್ಲಿ ಸರ್ಕಾರ ರೈತರ ಅನುಮತಿ ಇಲ್ಲದೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸುತ್ತಿದ್ದು, ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ರೈತರಿಂದ ಭೂಮಿ ಪಡೆಯುತ್ತಿರುವುದು ರೈತ ವಿರೋಧಿ ವರ್ತನೆಯಾಗಿದೆ~ ಎಂದು ಅರ್ಚಕರಹಳ್ಳಿ ಭೂ ಸ್ವಾಧೀನ ವಿರೋಧಿ ರೈತರ ಹೋರಾಟ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಎನ್. ವೆಂಕಟಾಚಲಯ್ಯ ಆರೋಪಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಅರ್ಚಕರಹಳ್ಳಿಯ 216 ಎಕರೆ ಕೃಷಿ ಭೂಮಿಯನ್ನು ವಿಶ್ವವಿದ್ಯಾಲಯ ಸ್ಥಾಪನೆಗೆ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಭೂಮಿಯಲ್ಲಿ ನೂರಾರು ಕುಟುಂಬಗಳು ವ್ಯವಸಾಯ ಮಾಡುತ್ತಿವೆ. ಪಕ್ಕದ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿರುವ 2.500 ಎಕರೆ ಸರ್ಕಾರಿ ಜಮೀನಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗದೆ, ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ನಮ್ಮ ವಿರೋಧವಿದೆ ಎಂದರು.ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಭೂಸ್ವಾಧೀನ ಕೈಬಿಡುವಂತೆ ಆದೇಶಿಸಿದ್ದರು. ಆದರೆ ಸರ್ಕಾರದ ಕೆಲ ಅಧಿಕಾರಿಗಳು ಮತ್ತೆ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಅಲ್ಲದೆ ಈಗಿನ ಮಾರುಕಟ್ಟೆ ಬೆಲೆ ಕೂಡ ನೀಡುತ್ತಿಲ್ಲ ಎಂದು ದೂರಿದರು.ಸಮಿತಿಯ ಅಧ್ಯಕ್ಷ ಕೆ.ಹೊನ್ನಯ್ಯ ಮಾತನಾಡಿ, `ರೈತರ ಅಭಿಪ್ರಾಯ ಕೇಳದೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಪ್ರತಿ ಎಕರೆಗೆ 20 ಲಕ್ಷ ರೂಪಾಯಿಯಿಂದ 40 ಲಕ್ಷ ನೀಡಿ ಈಗಾಗಲೇ 80 ಎಕರೆಗೆ ಪರಿಹಾರ ನೀಡಲಾಗಿದೆ. ಆದರೆ ಈಗಿನ ಮಾರುಕಟ್ಟೆ ಬೆಲೆಯಂತೆ ಪ್ರತಿ ಎಕರೆಗೆ ರೂ 1.25 ಕೋಟಿ ಪರಿಹಾರ ನೀಡಬೇಕು. ಪರಿಹಾರ ವಿತರಣೆಯಲ್ಲೂ ಸರ್ಕಾರ ತಾರತಮ್ಯ ಎಸೆಗುತ್ತಿದೆ~ ಎಂದು ಆಪಾದಿಸಿದರು.`ಸರ್ಕಾರವು ದೊಡ್ಡಮಣ್ಣುಗುಡ್ಡೆಯಲ್ಲಿರುವ ಸರ್ಕಾರಿ ಜಮೀನಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ನಮ್ಮ ಅಡ್ಡಿಯಿಲ್ಲ. ಅರ್ಚಕರಹಳ್ಳಿಯ ಕೃಷಿ ಭೂಮಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದೇ ಆದರೆ ಪ್ರತಿ ಎಕರೆಗೆ ರೂ 1.25 ಕೋಟಿ ರೂಗಳಂತೆ ಪರಿಹಾರ ನೀಡಬೇಕು ಹಾಗೂ ದೊಡ್ಡಮಣ್ಣುಗುಡ್ಡೆಯಲ್ಲಿ ರೈತರಿಗೆ ಪ್ರತಿ ಎಕರೆಗೆ 2 ಎಕರೆ ವ್ಯವಸಾಯ ಯೋಗ್ಯವಾದ ಭೂಮಿಯನ್ನು ಪರ್ಯಾಯವಾಗಿ ನೀಡಬೇಕು~ ಎಂದು ಮನವಿ ಮಾಡಿದರು`ಈ ವಿಷಯ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರೈತರ ಹಾಗೂ ರೈತ ಮುಖಂಡರ ಸಭೆಯನ್ನು ತಕ್ಷಣ ಕರೆಯಬೇಕು ಎಂದು ಆಗ್ರಹಿಸಿದ ಅವರು, ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಇದೇ 23 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಬೇಡಿಕೆ ಈಡೇರಿಸಲು ಮುಂದಾಗದಿದ್ದರೆ ಮುಖ್ಯಮಂತ್ರಿಗಳ ನಿವಾಸದ ಎದುರು ಧರಣಿ ನಡೆಸಲಿದ್ದೇವೆ~ ಎಂದು ಉಪಾಧ್ಯಕ್ಷ ಸೋಮಶೇಖರ್ ಅವರು ತಿಳಿಸಿದರು.ಜಿಲ್ಲಾ ಘಟಕದ ಸಂಚಾಲಕ ಎಂ.ಶ್ರೀನಿವಾಸ್, ಕಾರ್ಯದರ್ಶಿ ಕೆ.ಟಿ.ಮೋಹನ್ ಇತರರು ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.