ಬುಧವಾರ, ಮೇ 19, 2021
26 °C

ಮಾರುಕಟ್ಟೆ ಮಾಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೌಕ್ರಿಬಿಟ್ಟ ಬಿಕ್ ಚಂದಾನಿ!

ಆ ವ್ಯಕ್ತಿ ಬೇರೆಯವರಿಗೆ ನೌಕರಿ ಹುಡುಕಿಕೊಡಬೇಕು ಎಂದೇ ಇದ್ದ ಕೆಲಸವನ್ನೂ ಬಿಟ್ಟು `ನೌಕರಿ ಬೇಟೆ~ ಶುರುಹಚ್ಚಿದವರು!



22 ವರ್ಷಗಳ ಹಿಂದೆ ಹಾರ್ಲಿಕ್ಸ್ ಕಂಪನಿಯ ಮಾರುಕಟ್ಟೆ ವಿಭಾಗದ ಉದ್ಯೋಗ ತ್ಯಜಿಸಿದ ಸಂಜೀವ್ ಬಿಕ್‌ಚಂದಾನಿ, 1997ರಲ್ಲಿ `ಇಂಡ್ ಮಾರ್ಕೆಟ್ ಅಂಡ ಇನ್‌ಫೊಎಡ್ಜ್~ ಹಾಗೂ `ನೌಕ್ರಿ ಡಾಟ್ ಕಾಂ~ ಎಂಬ ಎರಡು ಕಂಪನಿಗಳನ್ನು ಹುಟ್ಟುಹಾಕಿದರು. ಸದ್ಯ ಇವೆರಡರೊಟ್ಟಿಗೆ `ಜೀವನ್‌ಸಾಥಿ.ಕಾಂ~, ರಿಯಲ್ ಎಸ್ಟೇಟ್ ಮತ್ತು `ಶಿಕ್ಷಾ.ಕಾಂ~ ಸಂಸ್ಥೆಗಳನ್ನು ನಡೆಸುತ್ತಾ ವಾರ್ಷಿಕ 300 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ.



`ಅಂದು ಕೆಲಸ ಬಿಟ್ಟ ನಾನು ಇಂದು ನೌಕ್ರಿ.ಕಾಂ ವೆಬ್‌ಸೈಟ್ ಮೂಲಕವೇ ಪ್ರತಿ ವರ್ಷ 10ರಿಂದ 15 ಲಕ್ಷ ಮಂದಿಗೆ ನೌಕರಿ ಅವಕಾಶ ದೊರಕಿಸಿಕೊಡುತ್ತಿರುವೆ~ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಸಂಜೀವ್.



ಪ್ರತಿದಿನ ಏನಿಲ್ಲವೆಂದರೂ 12 ಸಾವಿರ ಮಂದಿ ನೌಕರಿ ಅರಸುತ್ತಾ ವೆಬ್‌ಸೈಟ್‌ಗೆ ವ್ಯಕ್ತಿ ವಿವರ ದಾಖಲಿಸುತ್ತಾರೆ. 1 ಲಕ್ಷ ಮಂದಿ ತಮ್ಮ ವಿವರಗಳನ್ನು ಪರಿಷ್ಕರಿಸುತ್ತಿರುತ್ತಾರೆ

ಎನ್ನುತ್ತಾರೆ ನೌಕ್ರಿ.ಕಾಂ ಮಾಲೀಕ.





ಮಾತೇ ಮುತ್ತು-ಮಾತೇ ದುಡ್ಡು...


ಮಾತು ಮನೆ ಕೆಡಿಸಿತು... ಇದು ಬಹಳ ಹಿಂದೆ ಹಿರಿಯರಿಂದ ಕೇಳಿಬರುತ್ತಿದ್ದ ಗಾದೆಮಾತು.

ಆದರೆ, ಈಗಿನ ದೂರಸಂಪರ್ಕ ಸೇವಾ ಸಂಸ್ಥೆಗಳ ಪಾಲಿಗೆ `ಮಾತು ಬಹಳ ಮುಖ್ಯವಾಗಿದೆ. ಮೊಬೈಲ್ ಫೋನ್ ಚಂದಾದಾರರ ಮಾತೇ ಆ ಕಂಪನಿಗಳ ಪಾಲಿಗೆ ಮುತ್ತಾಗಿದೆ. ಹಾಗಾಗಿಯೇ ಮೊಬೈಲ್‌ನಲ್ಲಿ ಹೆಚ್ಚು ಹೆಚ್ಚು ಮಾತನಾಡುವಂತೆ ಎಲ್ಲ ಸೆಲ್ಯುಲರ್ ಆಪರೇಟರ್ ಕಂಪನಿಗಳೂ ಗ್ರಾಹಕರನ್ನು ಪ್ರಚೋದಿಸುತ್ತಿವೆ. ಅದಕ್ಕಾಗಿ ಬಣ್ಣಬಣ್ಣದ ಜಾಹೀರಾತುಗಳನ್ನೂ, ಕಡಿಮೆ ದರದ ಕರೆಗಳ ಆಮಿಷಗಳನ್ನೂ ಒಡ್ಡುತ್ತಲೇ ಇವೆ.



ಇಷ್ಟೆಲ್ಲ ಆಸೆ-ಆಮಿಷ- ಜಾಹೀರಾತುಗಳ ಮಧ್ಯೆಯೂ ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ದೇಶದಲ್ಲಿನ ಎಲ್ಲ ಟೆಲಿಕಮ್ಯುನಿಕೇಷನ್ಸ್ ಕಂಪನಿಗಳ ಒಟ್ಟಾರೆ ಆದಾಯದಲ್ಲಿ ಕುಸಿತವಾಗಿದೆ. ಕೋಟ್ಯಂತರ ಮೊಬೈಲ್ ಚಂದಾದಾರರು ಮಾತು-ಮೆಸೇಜ್-ಇಂಟರ್ನೆಟ್ ಸೇವೆ ಬಳಸುತ್ತಲೇ ಇದ್ದರೂ ಟೆಲಿಕಾಂ ಕಂಪನಿಗಳ ಆದಾಯ 2011ರ ಡಿಸೆಂಬರ್ 31ಕ್ಕೆ ಕೊನೆಗೊಂಡ 3ನೇ ತ್ರೈಮಾಸಿಕದಲ್ಲಿ 49,365.18 ಕೋಟಿಯಷ್ಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ. 1.16ರಷ್ಟು ಕುಸಿತ ಕಂಡಿದೆ.



ಅಂದರೆ ಭಾರತೀಯರು ಮಾತು ಕಡಿಮೆ ಮಾಡಿದ್ದಾರೆಯೇ? ಹಾಗೇನಿಲ್ಲ. ಇದು ದರ ಸಮರದ ಪರಿಣಾಮ ಎನ್ನುತ್ತಾರೆ ಮಾರುಕಟ್ಟೆ ಪಂಡಿತರು.



ಏರ್‌ಟೆಲ್ 10,487.65 ಕೋಟಿ (ಶೇ. 4.07ರಷ್ಟು ಹೆಚ್ಚಳ ಮಾತ್ರ) ಗಳಿಕೆಯೊಂದಿಗೆ ಅತಿಹೆಚ್ಚು ಆದಾಯ ಗಳಿಸಿದ ಕಂಪನಿ ಎನಿಸಿಕೊಂಡಿದೆ. 



ವಡಾಫೋನ್ ಶೇ. 6.94ರ ವೃದ್ಧಿಯೊಂದಿಗೆ 7887.85 ಕೋಟಿ ಗಳಿಸಿ ಎರಡನೇ ಸ್ಥಾನದಲ್ಲಿದೆ.



ಆದಾಯ ಗಳಿಕೆ ಹೆಚ್ಚಳದಲ್ಲಿ ಶೇ. 24ರ ಉತ್ತಮ ಸಾಧನೆ ತೋರಿರುವ ಯೂನಿನಾರ್ ಕಂಪನಿ, 807.75 ಕೋಟಿ ಆದಾಯ ಪಡೆದಿದೆ.



ಆದರೆ, ಬಿಎಸ್‌ಎನ್‌ಎಲ್ ಮಾತ್ರ ಸಾಕಷ್ಟು ಆದಾಯ ಕಳೆದುಕೊಂಡಿದೆ. ಅದರ ಗಳಿಕೆಯಲ್ಲಿ (4,166.73 ಕೋಟಿ ರೂ.) ಶೇ. 11.19ರಷ್ಟು   ಕುಸಿತವಾಗಿದೆ!





ಇಷ್ಟದ ನೌಕರಿ-ಕೈತುಂಬಾ ಆದಾಯ!

ಕಾರ್ಪೊರೇಟ್ ಪ್ರಪಂಚದಲ್ಲಿ ನೌಕರಿ ಮಾಡುವುದು ನಿಮಗೆ ಇಷ್ಟವಿಲ್ಲವೇ?

ಹೆಚ್ಚಿನವರು ಭಾರಿ ಸಂಬಳದ, ವಿವಿಧ ಭತ್ಯೆಗಳನ್ನು ಒಳಗೊಂಡ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗವೇ ಸರ್ವಶ್ರೇಷ್ಟ ಎಂದುಕೊಂಡಿದ್ದಾರೆ.



ಆದರೆ, ಸ್ವತಂತ್ರ ಆಲೋಚನೆ, ಮುಕ್ತ ಜೀವನ ಶೈಲಿ ಬಯಸುವವರಿಗೆ ಕಾರ್ಪೊರೇಟ್ ಜಗತ್ತು, ಅಲ್ಲಿನ ಕೆಲಸ ಹೇಳಿಮಾಡಿಸಿದ್ದಲ್ಲ ಎಂದುಕೊಳ್ಳುವ ಮಂದಿಯೂ ಇದ್ದಾರೆ. ಇವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.



ವೃತ್ತಿ ಬದುಕಿನಲ್ಲಿಯೂ ಸ್ವತಂತ್ರ ಬದುಕು ಬಯಸುವವರಿಗಾಗಿ ಕಾರ್ಪೊರೇಟ್ ನೌಕರಿಗಳಲ್ಲದ, ಹಾಗಿದ್ದೂ ಹೆಚ್ಚು ಉತ್ಪತ್ತಿ ತರುವ ಹತ್ತು ಬಗೆಯ ವಿವಿಧ ಉದ್ಯೋಗಗಳನ್ನು ಪಟ್ಟಿ ಮಾಡಿದ್ದಾರೆ `ಮೆನ್‌ಎಕ್ಸ್‌ಪಿ.ಕಾಂ~ನ ನಮ್ರತಾ ನೋಂಪಿಯರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.