ಮಾರ್ಕೆಟ್: ಹೆಸರು ಸೂಪರ್; ಕೊಳಕು ಬಂಪರ್

7

ಮಾರ್ಕೆಟ್: ಹೆಸರು ಸೂಪರ್; ಕೊಳಕು ಬಂಪರ್

Published:
Updated:
ಮಾರ್ಕೆಟ್: ಹೆಸರು ಸೂಪರ್; ಕೊಳಕು ಬಂಪರ್

ರಾಯಚೂರು: ನಗರದ ಹೃದಯ ಭಾಗದಲ್ಲಿ ಇರುವ ಈ ಮಾರ್ಕೆಟ್ ಹೆಸರು ಸೂಪರ್ ಮಾರ್ಕೆಟ್( ಭಗತ್‌ಸಿಂಗ್ ವೃತ್ತ). ಅಬ್ಬಾ ಈ ಮಾರ್ಕೆಟ್ ಸೂಪರ್ ಆಗಿರಬಹುದಲ್ವಾ ಎಂದು ಭಾವಿಸಿ ತೆರಳಿದರೆ ಕಂಡಲೆಲ್ಲಾ ಅಸ್ವಚ್ಛತೆ. ದುರ್ನಾತವೋ ದುರ್ನಾತ!ಇಂಥ ದುರ್ನಾತದ ಸೂಪರ್ ಮಾರ್ಕೆಟ್‌ನಲ್ಲಿಯೇ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ನೂರಾರು ಅಂಗಡಿಕಾರರು ವ್ಯಾಪಾರ ಮಾಡುತ್ತಾರೆ. ಬಟ್ಟೆ, ಪಾದರಕ್ಷೆ, ಬೇಕರಿ, ತಳ್ಳುವ ಗಾಡಿಗಳು, ಸೊಂಟದ ಪಟ್ಟಿ ಮಾರಾಟ, ಮಿರ್ಚಿ ಮಾರಾಟ, ರಸ್ತೆ ಮೇಲೆಯೇ ಬಟ್ಟೆ ವ್ಯಾಪಾರ. ಸಂಘ ಸಂಸ್ಥೆಗಳ ಪ್ರತಿಭಟನೆ, ವಾಹನ ನಿಲುಗಡೆ, ಚಿಲ್ಲರೆ ಟೀ ವ್ಯಾಪಾರ, ಖಾನಾವಳಿ, ಹೊಟೆಲ್ ಹೀಗೆ ಏನೆಲ್ಲ ವ್ಯಾಪಾರ ಇಲ್ಲಿ ನಡೆಯುತ್ತದೆ.

ನಗರದ ಹೃದಯ ಭಾಗದಲ್ಲಿಯೇ ಇರುವ ಈ ಮಾರುಕಟ್ಟೆ ಸದಾ ಜನಸಂದಣಿ ಪ್ರದೇಶ. ಹಾಗೆಯೇ ಅನಾರೋಗ್ಯ ತಾಣವೂ ಹೌದು! ಈ ಸೂಪರ್ ಮಾರ್ಕೆಟ್‌ನಲ್ಲಿಯೇ ಐತಿಹಾಸಿಕ ಕೋಟೆ, ದರವಾಜಾಗಳಿದ್ದರೂ ಅವುಗಳ ಸಂರಕ್ಷಣೆ, ಅವುಗಳ ಮಹತ್ವ ಸಾರಿ ಸುತ್ತಮುತ್ತಲಿನ ಜನತೆಗೆ ಪ್ರಜ್ಞೆ ಮೂಡಿಸಬೇಕಾದ ಜವಾಬ್ದಾರಿಯನ್ನು ಆಡಳಿತ ವರ್ಗ ಮರೆತಿದೆ. ನಗರಸಭೆಯಂತೂ ಈ ಕೋಟೆ ಬಗ್ಗೆ ಕಾಳಜಿ ಹೊಂದಿದೆ ಎಂಬುದಕ್ಕೆ ಆ ಸ್ಥಳಕ್ಕೆ ಭೇಟಿ ನೀಡಿಯೇ ನೋಡಬೇಕು.

ನಿತ್ಯ ಸಾವಿರಾರು ಜನ ಸಂಚರಿಸುವ, ವ್ಯಾಪಾರ ವಹಿವಾಟಿನ ಸ್ಥಳವಾದ ಈ ಪ್ರದೇಶದಲ್ಲಿ ಕನಿಷ್ಠ ಒಂದೂ ಸಾರ್ವಜನಿಕ ಮೂತ್ರಾಲಯವಿಲ್ಲ.

 

ಹೀಗಾಗಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಐತಿಹಾಸಿಕ ಕೋಟೆ ಗೋಡೆಯನ್ನೇ ಮೂತ್ರಾಲಯವಾಗಿ ಬಳಸುತ್ತಿದ್ದಾರೆ. ಇದರ ಪಕ್ಕದ ಅಂಗಡಿಮುಂಗಟ್ಟುಗಳ ಗೋಡೆಗಳೂ ಮೂತ್ರಾಲಯ ಸ್ವರೂಪ ಪಡೆದಿದೆ. ಬಟಾ ಬಯಲಿನಲ್ಲಿಯೇ ಸಾರ್ವಜನಿಕರು ಕೋಟೆ ಗೋಡೆಗೆ ಮೂತ್ರ ವಿಸರ್ಜನೆ ಮಾಡುವುದು ನಿತ್ಯ ಕಾಣುವ ಸಾಮಾನ್ಯ ದೃಶ್ಯ.ಇಲ್ಲಿನ ಜನತೆಯೂ ಈ ವಾತಾವರಣಕ್ಕೆ ಹೊಂದಿಕೊಂಡಿದ್ದಾರೋ ಏನೋ. ಏನ್ ಮಾಡೋದ್ರಿ... ಮುನ್ಸಿಪಾಲಿಟಿಯವರ ಕಣ್ಣಿಗೆ ಇದು ಕಾಣಂಗಿಲ್ಲ. ಇಂಥಾ ಮಾರ್ಕೆಟ್‌ನ್ಯಾಗ ಜನ ಎಲ್ಲಿಗೆ ಹೋಗ್ಬೇಕ್. ಅದಕ್ಕ ಹೊಯ್ತಾರ... ಎಂದು ಇಲ್ಲಿನ ಸಮಸ್ಯೆ ವಿವರಿಸುತ್ತಾರೆ.ಕೋಟೆ ಗೋಡೆಗೆ, ಅಕ್ಕಪಕ್ಕದ ಚರಂಡಿಗಳ ಪಕ್ಕ, ಅಂಗಡಿಮುಂಗಟ್ಟುಗಳ ಗೋಡೆಗೆ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡಿ ದುರ್ನಾತ ಬೀರಿದಾಗ ನಗರಸಭೆಯವರು ಬಂದು ಪೌಡರ್ ಹಾಕಿ ಹೋಗ್ತಾರ. ಇದರಿಂದ ರೋಗ ಹರಡುವುದು, ಅನಾರೋಗ್ಯ ವಾತಾವರಣವೇನೂ ಬದಲಿ ಆಗುವುದಿಲ್ಲ.

 

ಪೌಡರ್ ಹಾಕಿ ಏನೋ ಕೆಲ್ಸಾ ಮಾಡಿದ್ದೇವೆ ಎಂದು ತೋರಿಸುವ ನಗರಸಭೆಯು ಈ ಸ್ಥಳದಲ್ಲಿ ಸಾರ್ವಜನಿಕರಿಗೆ `ಮೂತ್ರಾಲಯ ನಿರ್ಮಾಣ~ ಮಾಡುವ ಬಗ್ಗೆ ಗಮನಹರಿಸಿಲ್ಲ. ಅದು ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಇಲ್ಲಿನ ಜನತೆ ಆಕ್ರೋಷ ವ್ಯಕ್ತಪಡಿಸುತ್ತಾರೆ.ಒಂದೆರಡು ವರ್ಷಗಳ ಹಿಂದೆ ಕಾಟಾಚಾರಕ್ಕೆ ಒಂದು ಮೂತ್ರಾಲಯ ನಿರ್ಮಾಣ ಮಾಡಲಾಗಿತ್ತು. ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆ ನೆಪದಲ್ಲಿ ಆ ಮೂತ್ರಾಲಯವನ್ನೇ ಜೆಸಿಬಿಗಳು ಧ್ವಂಸಗೊಳಿಸಿದವು.ಮೂತ್ರಾಲಯಕ್ಕೂ... ಅತಿಕ್ರಮಣ ಕಟ್ಟಡಕ್ಕೂ ಏನೂ ಸಂಬಂಧ? ಆಡಳಿತ ವರ್ಗ ಇಂಥ ಕೆಲ್ಸಾ ಮಾಡ್ತಾರೆ. ಜನರಿಗೆ ಅಗತ್ಯವಾದದ್ದೂ ಏನೂ ಮಾಡೋಲ್ಲ. ಏನಾದ್ರೂ ಸಮಸ್ಯೆ ಹೇಳುವುದಕ್ಕೆ ಹೋದ್ರೆ ಇನ್ನೊಂದು ಸಮಸ್ಯೆ ಸೃಷ್ಟಿ ಮಾಡ್ತಾರೆ. ಅದೇ ಇಲ್ಲಿ ಆಗಿರೋದು ಎಂದು ಇಲ್ಲಿನ ಜನ ಗೋಳು ತೋಡಿಕೊಂಡ್ರು.

ಜನತೆಯ ಈ ಸಮಸ್ಯೆ ಪರಿಹರಿಸಲು ನಗರಸಭೆಗೆ ಅದೆಂದು ಕಾಲ ಕೂಡಿಬರುತ್ತದೋ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry