ಭಾನುವಾರ, ಆಗಸ್ಟ್ 25, 2019
21 °C

`ಮಾರ್ಕ್ಸ್ ಚಿಂತನೆಯಿಂದ ಸಮಸ್ಯೆ ನಿವಾರಣೆ'

Published:
Updated:

ಹಾಸನ: ಜಗತ್ತಿನಲ್ಲಿ ಸೃಷ್ಠಿಯಾಗಿರುವ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಮಾರ್ಕ್ಸ್ ವಾದದಿಂದ ಮಾತ್ರ ನಿವಾರಿಸಲು ಸಾಧ್ಯ ಎಂದು ಸಿ.ಪಿ.ಐ. (ಎಂ) ರಾಜ್ಯ ಘಟಕದ ಕಾರ್ಯ ದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಅಭಿಪ್ರಾಯಪಟ್ಟರು.ನಗರದ ಎಂ.ಕೆ. ಕನ್ವೆನ್‌ಷನ್ ಹಾಲ್‌ನಲ್ಲಿ ಭಾನುವಾರ ನಡೆದ ಸಿ.ಪಿ.ಐ (ಎಂ) ಪಕ್ಷದ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು `ಮಾರ್ಕ್ಸ್‌ವಾದ ಚಿಂತನೆಗಳ ಆಧಾರದ ಮೇಲೆ ಸಿ.ಪಿ.ಐ (ಎಂ) ಪಕ್ಷವನ್ನು ಕಟ್ಟಲಾಗಿದ್ದು, ಪಕ್ಷದ ಕಾರ್ಯಕರ್ತರು ಮಾರ್ಕ್ಸ್ ವಾದ ಚಿಂತನೆಗಳ ಬಗ್ಗೆ ಅಧ್ಯಯನ ನಡೆಸಬೇಕಾದ ಅವಶ್ಯಕತೆ ಇದೆ. ಬಹು ರಾಷ್ಟ್ರೀಯ ಕಂಪೆನಿಗಳು ದೇಶದಲ್ಲಿ ಮಾರ್ಕ್ಸ್‌ವಾದ ಯುಗ ಮುಗಿದಿದೆ ಎಂಬ ವಾದವನ್ನು ಹಾಗೂ ತತ್ವಗಳನ್ನು ಸಮೂಹ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ಮೂಲಕ ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. 2007 ರಲ್ಲಿ ಆರಂಭವಾದ ಆರ್ಥಿಕ ಬಿಕ್ಕಟ್ಟನ್ನು ಇದುವರೆಗೂ ಬಗೆಹರಿಸಲು ಸಾಧ್ಯವಾಗಿಲ್ಲ. ದೇಶದಲ್ಲಿ ಅರ್ಥಿಕತೆ ಸಮಸ್ಯೆಯನ್ನು ಬಗೆಹರಿಸಬೇಕಾದಲ್ಲಿ ಮಾರ್ಕ್ಸ್ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ.ಮಾರ್ಕ್ಸ್ ಚಿಂತನೆಗಳನ್ನು ಅಳವಡಿಸಿಕೊಂಡಿ ರುವ ಸಿ.ಪಿ.ಐ (ಎಂ) ಪಕ್ಷವನ್ನು ಎಡ ಪಕ್ಷಗಳು ಮೂಲೆಗುಂಪು ಮಾಡಿದ್ದು, ಈಚೆಗೆ ಪಶ್ಚಿಮ ಬಂಗಾಲದಲ್ಲಿ ಚುನಾವಣೆಗಳಲ್ಲಿ ಸಿ.ಪಿ.ಐ (ಎಂ) ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಮೂಲಕ ಹಲವರನ್ನು ಕೊಲೆ ಮಾಡಲಾಯಿತು. ಮಾರ್ಕ್ಸ್ ಚಿಂತನೆಗಳನ್ನು ಅಳವಡಿಸಿಕೊಂಡಿರುವ ಕಾರ್ಯಕರ್ತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಇಂದಿಗೂ ಸಹ ಇಂತಹ ಘಟನೆಗಳು ನಡೆಯುತ್ತಲೆ ಬಂದಿದೆ. ಅಲ್ಲದೇ ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಪಕ್ಷಕ್ಕೆ ಹೊರತಾಗಿ ತೃತೀಯ ರಂಗ ಸ್ಥಾಪನೆಯಾಗುವ ಕುರಿತು ಚರ್ಚೆ ನಡೆಯಲಾಗುತ್ತಿದ್ದು, ಸಿ.ಪಿ.ಐ (ಎಂ) ಪಕ್ಷವನ್ನು ತೃತೀಯ ರಂಗದಿಂದ ಕಡೆಗಣಿಸುವ ಮೂಲಕ ಪಕ್ಷವನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಈಚೆಗೆ ದೇಶದಲ್ಲಿ 21 ರಷ್ಟು ಮಾತ್ರ ಬಡವರ ಇದ್ದಾರೆ ಎಂಬ ಅವೈಜ್ಞಾನಿಕ ಅಂಕಿ ಅಂಶವನ್ನು ಪ್ರಕಟಣೆ ಮಾಡಿದ್ದು, ಇದರಿಂದ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡಿದೆ. ದೇಶದಲ್ಲಿ ಕಡಿಮೆ ಬಡವರ ಸಂಖ್ಯ ಇದೆ ಎಂದು ಹೇಳುವ ಮೂಲಕ ದೇಶಕ್ಕೆ ಬಹುರಾಷ್ಟ್ರೀಯ ಕಂಪೆನಿ ಸ್ಥಾಪಿಸುವ ದುರುದ್ದೇಶದಿಂದ ಈ ತರನಾದ ಅಂಕಿಅಂಶ ಪ್ರಕಟಿಸಿದೆ' ಎಂದು ಆರೋಪಿಸಿದರು.ಪುಸ್ತಕ ಬಿಡುಗಡೆಗೊಳಿಸಿದ ಸಿ.ಪಿ.ಐ. (ಎಂ) ರಾಜ್ಯ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್. ನಾಗರಾಜ್ `ಮಾರ್ಕ್ಸ್‌ವಾದ ಚಿಂತನೆಗಳಿಂದ ಹೊಸ ಸಮಾಜವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. 80 ದಶಕದಲ್ಲಿ ರಾಜ್ಯದಲ್ಲಿ ಆರಂಭವಾದ ದಲಿತ, ಸಾಂಸ್ಕೃತಿಕ, ರೈತರ ಚಳವಳಿಗೆ ಸಿ.ಪಿ.ಐ (ಎಂ) ಪಕ್ಷ ನೀಡಿದ ಪ್ರೋತ್ಸಾಹದಿಂದ ಅಂದು ಎಲ್ಲಾ ಚಳವಳಿಗಳು ಪ್ರಬಲಗೊಳ್ಳಲು ಸಹಕಾರಿಯಿತು.ನಂತರ    ಮಾರ್ಕ್ಸ್ ಚಿಂತನೆ ಕೈ ಬಿಟ್ಟ ರೈತ ಹಾಗೂ ದಲಿತ ಸಂಘಟನೆಗಳು ಇಂದು ಹಲವು ಭಾಗಗಳಾದ ವಿಂಗಡಣೆಯಾಗಿದೆ. ಆದರೇ ಇಂದಿಗೂ  ಮಾರ್ಕ್ಸ್‌ವಾದ ಸೈದ್ಧಾಂತಿಕ ಫಲದಿಂದ ಸಿ.ಪಿ.ಐ. (ಎಂ) ಪಕ್ಷ ಒಗ್ಗಟ್ಟಾಗಿ ಉಳಿದುಕೊಂಡು ನಿರಂತರವಾಗಿ ಬೆಳೆಯುತ್ತಿವೆ' ಎಂದು ನುಡಿದರು.ಸಿ.ಪಿ.ಐ. (ಎಂ) ರಾಜ್ಯ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಜೆ.ಕೆ. ನಾಯರ್ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಘಟಕದ ಸದಸ್ಯೆ ವರಲಕ್ಷ್ಮಿ, ಜಿಲ್ಲಾ ಸಂಘಟನಾ ಸಮಿತಿ ಸಂಚಾಲಕ ವಿ. ಸುಕುಮಾರ್, ಜಿಲ್ಲಾ ಮಟ್ಟದ ಸದಸ್ಯರಾದ ನಿತ್ಯಾನಂದ, ಧರ್ಮೇಶ್, ಮಾಧವ, ಶಂಕರ್, ಹರೀಶ್ ಹಾಗೂ ಸತ್ಯನಾರಾಯಣ ಹಾಗೂ ಇತರರು    ಹಾಜರಿದ್ದರು.

Post Comments (+)