ಬುಧವಾರ, ಡಿಸೆಂಬರ್ 11, 2019
26 °C
ಪಾರ್ಕಿಂಗ್ ಬರೆ

ಮಾರ್ಗಸೂಚಿ ಗಾಳಿಗೆ; ವಾಹನಗಳು ಬೀದಿಗೆ!

ಪ್ರವೀಣ ಕುಲಕರ್ಣಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಗಸೂಚಿ ಗಾಳಿಗೆ; ವಾಹನಗಳು ಬೀದಿಗೆ!

ಬೆಂಗಳೂರು: ನಗರದ ಪ್ರತಿಯೊಂದು ಕಟ್ಟಡದಲ್ಲೂ ಪಾರ್ಕಿಂಗ್‌ ಸೌಲಭ್ಯ ಇರಬೇಕು ಎನ್ನುತ್ತದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಯ್ದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಸುಮಾರು 28.5 ಲಕ್ಷ ಆಸ್ತಿಗಳಲ್ಲಿ (25 ಲಕ್ಷ ಮನೆಗಳು, 3.5 ವಾಣಿಜ್ಯ ಕಟ್ಟಡಗಳು) ಶೇ 70ರಷ್ಟು ಕಟ್ಟಡಗಳು ಪಾರ್ಕಿಂಗ್‌ಗೆ ಸೌಲಭ್ಯವನ್ನೇ ಹೊಂದಿಲ್ಲ.ನಗರದ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ನಿಯಮಾವಳಿ ಪ್ರಕಾರ ಪಾರ್ಕಿಂಗ್‌ ಸೌಲಭ್ಯ ಇಲ್ಲದ್ದರಿಂದ ವಾಹನಗಳು ‘ವಿಶ್ರಾಂತಿ’ ಪಡೆಯಲು ರಸ್ತೆಯನ್ನೇ ಆಶ್ರಯಿಸಿವೆ. ವಸತಿ ಪ್ರದೇಶದ ಇಕ್ಕಟ್ಟಾದ ರಸ್ತೆಗಳ ಎಡ–ಬಲ ಬದಿಗಳಲ್ಲಿ ಕಾರುಗಳನ್ನು ನಿಲ್ಲಿಸುವ ಕಾರಣ ವಾಹನ ಸಂಚಾರಕ್ಕೆ ಅಡಿಗೊಂದು ಅಡಚಣೆ ಎದುರಾಗುತ್ತದೆ.ಫುಟ್‌ಪಾತ್‌ನ ಪೂರ್ಣ ಮತ್ತು ರಸ್ತೆಯ ಅರ್ಧ ಭಾಗವನ್ನು ವಾಹನಗಳು ನುಂಗಿ ಕುಳಿತಿರುತ್ತವೆ. ಎದುರು ಬದಿಯಿಂದ ಒಂದು ಬೈಕ್‌ ಬಂದರೂ ಸಾಕು, ಇತ್ತ ಕಡೆಯಿಂದ ಹೊರಟ ಗಾಡಿಗೆ ಪಕ್ಕಕ್ಕೆ ಸರಿಯಲು ಸ್ಥಳವೇ ಇರುವುದಿಲ್ಲ. ವಾಹನಗಳ ನಡುವಿನ ಸಣ್ಣ–ಪುಟ್ಟ ಘರ್ಷಣೆಗಳು ಅವುಗಳ ಚಾಲಕರ ಮಧ್ಯೆ ದೊಡ್ಡ ಕಿಡಿಯನ್ನೇ ಹೊತ್ತಿಸುತ್ತವೆ. ವಾಗ್ವಾದಗಳು, ಬೈಗುಳದ ವಿನಿಮಯಗಳು ನಗರದ ರಸ್ತೆಗಳಲ್ಲಿ ನಿತ್ಯವೂ ಸಾಮಾನ್ಯ. ಕಟ್ಟಡಗಳಲ್ಲಿ ಪಾರ್ಕಿಂಗ್‌ ಸೌಲಭ್ಯ ಇಲ್ಲದಿರುವುದೇ ಸಮಸ್ಯೆಗೆ ಮೂಲ ಕಾರಣ.ಕಟ್ಟಡಗಳಿಗೆ ಪೂರ್ಣಗೊಂಡ ಪ್ರಮಾಣ ಪತ್ರ (ಸಿ.ಸಿ) ಕೊಡುವಾಗ ಪಾರ್ಕಿಂಗ್‌ ವ್ಯವಸ್ಥೆ ಇದೆಯೋ, ಇಲ್ಲವೋ ಎಂಬುದನ್ನು ಬಿಬಿಎಂಪಿ ಸಿಬ್ಬಂದಿ ತಪಾಸಣೆಯನ್ನೇ ಮಾಡಿಲ್ಲ. ಮಾರ್ಗಸೂಚಿಯನ್ನು ರೂಪಿಸಿದ ಬಳಿಕವೂ ಬಿಬಿಎಂಪಿ ಪಾರ್ಕಿಂಗ್‌ ಸ್ಥಳದ ವಿಷಯವಾಗಿ ತಲೆ ಕೆಡಿಸಿಕೊಳ್ಳಲು ಹೋಗಿಲ್ಲ. ಅದರ ಅನುಷ್ಠಾನಕ್ಕೆ ಗಮನ ನೀಡಿಲ್ಲ. ಹೊಸದಾಗಿ ತಲೆ ಎತ್ತುತ್ತಿರುವ ಕಟ್ಟಡಗಳಲ್ಲೂ ವಾಹನ ನಿಲುಗಡೆಗೆ ಜಾಗ ಬಿಡುತ್ತಿಲ್ಲ. ಪಾರ್ಕಿಂಗ್‌ ಸೌಲಭ್ಯ ಇಲ್ಲದ ಕಟ್ಟಡಗಳನ್ನು ಪ್ರತಿ ರಸ್ತೆಯಲ್ಲೂ ಕಾಣಬಹುದಾಗಿದ್ದು, ಯಾವ ಕ್ರಮವನ್ನೂ ಜರುಗಿಸಲಾಗಿಲ್ಲ.‘ರಸ್ತೆ– ರಸ್ತೆಗಳಲ್ಲಿ ಗಂಟೆಗಳ ಲೆಕ್ಕದಲ್ಲಿ ಪಾರ್ಕಿಂಗ್‌ ಸೌಲಭ್ಯವನ್ನು ಕಲ್ಪಿಸಿ, ಅದರಿಂದ ಹಣ ಮಾಡುವ ಸಲುವಾಗಿ ಏನೂ ಬಿಬಿಎಂಪಿ ಇಲ್ಲ. ಸಂಚಾರ ವ್ಯವಸ್ಥೆ ಸುಗಮಗೊಳಿಸಿ, ವಾಹನಗಳು ಸರಾಗವಾಗಿ ಓಡಾಡುವಂತೆ ನೋಡಿಕೊಳ್ಳುವುದೇ ಅದರ ಪ್ರಮುಖ ಆದ್ಯತೆ ಆಗಬೇಕು’ ಎಂದು ಹೇಳುತ್ತಾರೆ ನಗರ ವಿಷಯಗಳ ತಜ್ಞ ಅಶ್ವಿನ್‌ ಮಹೇಶ್‌.‘ಒಳ್ಳೆಯ ರಸ್ತೆ, ಉತ್ತಮ ಮೂಲ ಸೌಕರ್ಯ, ಉತ್ಕೃಷ್ಟ ಸಾರಿಗೆ ಸಂಪರ್ಕ ಮತ್ತು ಜನರ ಓಡಾಟಕ್ಕೆ ಗುಣಮಟ್ಟದ ಪಾದಚಾರಿ ಮಾರ್ಗದ ವ್ಯವಸ್ಥೆಯನ್ನು ಮಾಡುವುದು ಅಗತ್ಯವಾಗಿದೆ’ ಎಂದು ಅವರು ಸಲಹೆ ನೀಡುತ್ತಾರೆ.‘ಜಗತ್ತಿನ ಪ್ರಮುಖ ನಗರಗಳ ಮಾರುಕಟ್ಟೆ ಪ್ರದೇಶಗಳಲ್ಲಿ ಪಾರ್ಕಿಂಗ್‌ ಸೌಲಭ್ಯವೇ ಇಲ್ಲ. ಅಲ್ಲಿನ ನಿವಾಸಿಗಳು ಸಾರ್ವಜನಿಕ ಸಾರಿಗೆ ಮೂಲಕವೇ ಅಲ್ಲಿಗೆ ಬರುತ್ತಾರೆ. ನಮ್ಮಲ್ಲೂ ಅಷ್ಟೊಂದು ಉತ್ಕೃಷ್ಟ ದರ್ಜೆ ಸಾರಿಗೆ ಸೌಲಭ್ಯವನ್ನು ಒದಗಿಸಬೇಕು ಮತ್ತು ಕಾರುಗಳ ಮೂಲಕ ಓಡಾಡುವುದನ್ನು ಹೆಚ್ಚಾಗಿ ಉತ್ತೇಜಿಸಬಾರದು’ ಎಂದು ಅವರು ಹೇಳುತ್ತಾರೆ.‘ಕ್ಯಾಬ್‌ಗಳ ಕೊರತೆ ನಮ್ಮ ನಗರವನ್ನು ದೊಡ್ಡದಾಗಿ ಕಾಡುತ್ತಿದೆ. ಬೀದಿಗಳಲ್ಲಿ ಕ್ಯಾಬ್‌ಗೆ ನಿಂತು ಕಾಯ್ದರೆ ಒಂದೂ ಸಿಗುವುದಿಲ್ಲ. ಜನ ಸ್ವಂತ ಕಾರು ಹೊಂದಲು ಇದೂ ಕಾರಣ’ ಎನ್ನುತ್ತಾರೆ ಅಶ್ವಿನ್‌.ನಿವೇಶನದ ಬೆಲೆ ಬುಡದಲ್ಲಿ ರಾಕೆಟ್‌ ಕಟ್ಟಿಕೊಂಡಂತೆ ಒಂದೇ ಸಮನೆ ಗಗನಮುಖಿಯಾಗಿ ಚಿಮ್ಮುತ್ತಿದೆ. ಸಿಕ್ಕ ಅಲ್ಪ ಜಾಗವನ್ನೇ ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳಲು ಜನ ಹಾತೊರೆಯುತ್ತಾರೆ. ಸ್ಥಳವನ್ನು ಉಳಿಸಲು ಮುಂದಾಗುವ ಬಿಲ್ಡರ್‌ಗಳು ಪಾರ್ಕಿಂಗ್‌ಗೆ ‘ತಾವು’ ಕಲ್ಪಿಸುವುದಿಲ್ಲ. ಹೀಗಾಗಿ ವಾಹನಗಳು ಬೀದಿಗೆ ಬೀಳುವುದು ಅನಿವಾರ್ಯವಾಗಿಬಿಟ್ಟಿದೆ.‘ಬಾಡಿಗೆ ಮನೆಗಳಲ್ಲಿ ಸಾಮಾನ್ಯವಾಗಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಸಿಗುವುದಿಲ್ಲ. ಹೀಗಾಗಿ ಕಾರುಗಳನ್ನು ಅಸುರಕ್ಷಿತವಾಗಿ ರಸ್ತೆ ಮೇಲೇ ಬಿಡಬೇಕಿದೆ. ರಾತ್ರಿ ಯಾರು ಧಕ್ಕೆ ಮಾಡುತ್ತಾರೋ, ಕಳ್ಳರು ಕದ್ದುಕೊಂಡು ಹೋಗುತ್ತಾರೋ ಹೇಳಬರುವುದಿಲ್ಲ’ ಎಂದು ಮಲ್ಲೇಶ್ವರದ ಎಂ. ಮಹೇಶಕುಮಾರ್‌ ಹೇಳುತ್ತಾರೆ. ‘ಪಾರ್ಕಿಂಗ್‌ಗೆ ಜಾಗ ಬಿಡುವ ಬದಲು ಅಲ್ಲೊಂದು ಒಂದು ರೂಮ್‌ ಕಟ್ಟಿದರೆ ಬಾಡಿಗೆ ಬರುತ್ತದೆ ಎಂಬ ಆಸೆ ಮನೆ ಮಾಲೀಕರಿಗೆ.ಆದ್ದರಿಂದಲೇ ವಾಹನ ನಿಲುಗಡೆಗೆ ಸ್ಥಳ ಸಿಗಲ್ಲ’ ಎಂದರು.ವಾಣಿಜ್ಯ ಕಟ್ಟಡಗಳ ನೆಲಮಹಡಿ ಬಹುಮಟ್ಟಿಗೆ ವಾಹನ ನಿಲುಗಡೆಗಾಗಿ ಮೀಸಲಿರಬೇಕು. ಆದರೆ, ಆ ಸ್ಥಳದಲ್ಲೂ ಮಳಿಗೆಗಳು ತಲೆ ಎತ್ತಿವೆ. ಕ್ಯಾಂಟೀನ್‌ಗಳಿಗೆ, ವರ್ಕ್‌ಶಾಪ್‌ಗಳಿಗೆ, ಗುಜರಿ ಸಂಗ್ರಹಕ್ಕೆ... ಹೀಗೆ ಮೊದಲಾದ ಉದ್ದೇಶಗಳಿಗೆ ಪಾರ್ಕಿಂಗ್‌ ಸ್ಥಳವನ್ನೇ ಧಾರೆ ಎರೆಯಲಾಗಿದೆ. ಬಹುತೇಕ ವಾಣಿಜ್ಯ ಕಟ್ಟಡಗಳಲ್ಲಿ ಈ ಸಮಸ್ಯೆ ಇದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ‘ಬೆಂಗಳೂರು ಉಳಿಸಿ’ ಸಂಘಟನೆ ಆಕ್ರೋಶ ಹೊರಹಾಕುತ್ತದೆ. ನಗರದ ದೊಡ್ಡ, ದೊಡ್ಡ ಮಾಲ್‌ಗಳಲ್ಲಿ ವಾಹನ ನಿಲುಗಡೆ ಸೌಕರ್ಯವನ್ನೇನೋ ಕಲ್ಪಿಸಲಾಗಿದೆ.ಆದರೆ, ಅವುಗಳ ಶುಲ್ಕ ದುಬಾರಿಯಾಗಿದ್ದು, ಗಂಟೆಗಳ ಲೆಕ್ಕದಲ್ಲಿ ಇದೆ. ಗಂಟೆಗೆ ₨ 30 ಕೊಟ್ಟು ವಾಹನ ನಿಲ್ಲಿಸಲು ಜನರಿಗೆ ಹಿಂಜರಿಕೆ. ದ್ವಿಚಕ್ರ ವಾಹನಕ್ಕೆ ಡಾ. ರಾಜಕುಮಾರ್‌ ರಸ್ತೆಯ ವರ್ಲ್ಡ್ ಟ್ರೇಡ್‌ ಸೆಂಟರ್‌ನಲ್ಲಿ ಗಂಟೆಗೆ ₨ 30, ಫೋರಂ ಮಾಲ್‌ನಲ್ಲಿ ನಾಲ್ಕು ಗಂಟೆಗೆ ₨ 50 ಶುಲ್ಕ ಪಡೆಯಲಾಗುತ್ತದೆ. ಹೀಗಾಗಿ ಶಾಪಿಂಗ್‌ ಕಾಂಪ್ಲೆಕ್ಸ್‌ಗಳು ಮತ್ತು ಮಾಲ್‌ಗಳಿಗೆ ಬರುವ ಗ್ರಾಹಕರ ವಾಹನಗಳ ಭಾರವನ್ನೂ ರಸ್ತೆಯೇ ಹೊರಬೇಕಿದೆ. ಒಂದೆಡೆ ಪಾರ್ಕಿಂಗ್‌ ಸೌಲಭ್ಯ ಇಲ್ಲ. ಇನ್ನೊಂದೆಡೆ ವಾಹನ ನಿಲುಗಡೆಗೆ ಬೇಕಾದಷ್ಟು ಜಾಗ ಇದ್ದರೂ ದುಬಾರಿ ಬೆಲೆಯಿಂದ ಜನ ಬರುತ್ತಿಲ್ಲ. ಎರಡರ ಬಿಸಿಯೂ ರಸ್ತೆಗೆ ತಟ್ಟುತ್ತಿದೆ.‘ಎಲ್ಲ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ವಾಹನ ನಿಲುಗಡೆಗೆ ಮೀಸಲಿಟ್ಟ ಸ್ಥಳದ ಅತಿಕ್ರಮಣ ತೆರವುಗೊಳಿಸಿದರೆ ಕನಿಷ್ಠ ಅರ್ಧದಷ್ಟು ಪಾರ್ಕಿಂಗ್‌ ಸಮಸ್ಯೆ ಬಗೆಹರಿಯಲಿದೆ’ ಎಂದು ಸಂಚಾರ ವ್ಯವಸ್ಥೆ ತಜ್ಞರು ಸಲಹೆ ನೀಡುತ್ತಾರೆ. ‘ಈ ಕೆಲಸ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಿದಂತೆ. ಅತಿಕ್ರಮಣ ತೆರವಿಗೆ ಮುಂದಾದರೆ ವಿಧಾನಸೌಧ, ಬಿಬಿಎಂಪಿ ಮುಖ್ಯ ಕಚೇರಿ ಎಲ್ಲಿಂದ ಬೇಕಾದರೂ ದೂರವಾಣಿ ಕರೆ ಬರುತ್ತದೆ. ಕೊನೆಗೆ ಎಲ್ಲದಕ್ಕೂ ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಸಮಸ್ಯೆಯ ಇನ್ನೊಂದು ಆಯಾಮವನ್ನು ಬಿಚ್ಚಿಡುತ್ತಾರೆ. 

ಪ್ರತಿಕ್ರಿಯಿಸಿ (+)