ಮಂಗಳವಾರ, ನವೆಂಬರ್ 19, 2019
29 °C
ದ್ವೇಷಪೂರಿತ ಭಾಷಣ ಕಡಿವಾಣಕ್ಕೆ ಸೂಚನೆ

ಮಾರ್ಗಸೂಚಿ ರಚನೆಗೆ ಕೇಂದ್ರದ ಅಭಿಪ್ರಾಯ ಕೇಳಿದ `ಸುಪ್ರೀಂ'

Published:
Updated:

ನವದೆಹಲಿ (ಪಿಟಿಐ): ಸಂವಿಧಾನದ ಆಶಯಕ್ಕೆ ವಿರುದ್ಧವಾದ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ `ದ್ವೇಷಪೂರಿತ' ಭಾಷಣಗಳಿಗೆ ಕಡಿವಾಣ ಹಾಕಲು ಮಾರ್ಗಸೂಚಿ ರಚಿಸಬಾರದೇಕೆ ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಕೇಳಿದೆ.ರಾಜಕಾರಣಿಗಳು ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರ ದ್ವೇಷಪೂರಿತ ಭಾಷಣಗಳಿಗೆ ಕಡಿವಾಣ ಹಾಕಲು ಮಾರ್ಗಸೂಚಿಗಳನ್ನು ರಚಿಸುವಂತೆ ಕೋರಿ ಪ್ರವಾಸಿ ಭಾಲೈ ಸಂಘಟನೆ ಎಂಬ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್, ಈ ಕುರಿತು ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದರು.ಭಾರಿ ವಿವಾದ ಹುಟ್ಟು ಹಾಕಿದ ಅಕ್ಬುರುದ್ದೀನ್ ಓವೈಸಿ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರ ದ್ವೇಷಪೂರಿತ ಭಾಷಣಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸರ್ಕಾರಗಳಿಗೆ ಇದೇ ವೇಳೆ ಕಬೀರ್ ನೋಟಿಸ್ ಜಾರಿ ಮಾಡಿದರು.`ಒಂದು ನಿರ್ದಿಷ್ಟ ಧರ್ಮ, ಕೋಮು, ಪ್ರದೇಶ, ಜಾತಿ ಮತ್ತು ಜನ್ಮಸ್ಥಳವನ್ನು ಗುರಿಯನ್ನಾಗಿಸಿಕೊಂಡು ನಡೆಯುವ ದ್ವೇಷಪೂರಿತ ಭಾಷಣಗಳ ನಿಗ್ರಹಕ್ಕೆ ಕಟ್ಟುನಿಟ್ಟಿನ ಕಾನೂನು ಅಗತ್ಯ' ಎಂದು ಸಂಘಟನೆ ಅರ್ಜಿಯಲ್ಲಿ ಮನವಿ ಮಾಡಿದೆ.

ಪ್ರತಿಕ್ರಿಯಿಸಿ (+)