ಮಾರ್ಗ ಸರಳ... ಪಾದಚಾರಿ ನಿರಾಳ...

7

ಮಾರ್ಗ ಸರಳ... ಪಾದಚಾರಿ ನಿರಾಳ...

Published:
Updated:
ಮಾರ್ಗ ಸರಳ... ಪಾದಚಾರಿ ನಿರಾಳ...

ಮನೆಯೊಡತಿ ದುಂದುವೆಚ್ಚದ ಮನೋಭಾವದವಳಾದರೆ ಗಂಡನಿಗೆ ಪರಮ ಸಂಕಟ. ತಿಂಗಳ ಖರ್ಚಿನ ಗ್ರಾಫ್ ಯದ್ವಾತದ್ವಾ ಏರುತ್ತಲೇ ಇರುತ್ತದೆ. ದಿನಸಿ ಖರೀದಿಯೂ ಅವನಿಗೆ ದುಃಸ್ವಪ್ನವಾಗುವುದು ಸಹಜ.ನಮ್ಮ ಪಾಲಿಕೆ, ಬಿಡಿಎ ಕಾರ್ಯಗತಗೊಳಿಸುವ ಪಾದಚಾರಿ ಮಾರ್ಗಗಳ ಕತೆಯೂ ಹೀಗೇ.ಎಲ್ಲವೂ ಕೋಟಿ ಲೆಕ್ಕದ್ದು. ವೈಜ್ಞಾನಿಕ ಹಾಗೂ ಪ್ರಾಯೋಗಿಕ ಚಿಂತನೆಯುಳ್ಳ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸುವ ಮನಸ್ಸು ಇದ್ದಲ್ಲಿ ಸರಳ ಮಾರ್ಗಗಳು, ಯೋಜನೆಗಳು ಸಾಕಷ್ಟಿವೆ. ಆಕಾಶಕ್ಕೇ ಏಣಿ ಇಟ್ಟಂತಿರುವ ಸ್ಕೈವಾಕ್‌ಗಳು, ಅಂಡರ್‌ಪಾಸ್‌ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವ ಜೀವಂತ ನಿದರ್ಶನಗಳು ಇರುವಾಗ ಉತ್ತಮ ಪ್ರಯೋಗಳನ್ನು ಅನುಸರಿಸುವುದು ಸೂಕ್ತ ಅಲ್ಲವೇ?ಸಿಗ್ನಲ್ ದೀಪಗಳೇ ಸಾಕು!ಪಾದಚಾರಿಗಳು ರಸ್ತೆ ದಾಟುವ ನಿಗದಿತ ಸ್ಥಳಗಳಲ್ಲಿ ಸ್ವಯಂಚಾಲಿತ ಇಲ್ಲವೇ ಮನುಷ್ಯರೇ ನಿರ್ವಹಿಸುವ ಸಿಗ್ನಲ್ ದೀಪಗಳನ್ನು ಅಳವಡಿಸಬಹುದು.ಇವುಗಳ ಅಳವಡಿಕೆ ಅನುಷ್ಠಾನ ಕಾಲಾವಧಿ ಹಾಗೂ ಯೋಜನಾ ವೆಚ್ಚದ ನೆಲೆಯಲ್ಲಿ ಮಿತವ್ಯಯಕಾರಿ.ಸ್ಕೈವಾಕ್ ಅಥವಾ ಅಂಡರ್‌ಪಾಸ್ ನಿರ್ಮಾಣಕ್ಕೆ ತಗಲುವ ವೆಚ್ಚದ ಶೇ 5 ಇಲ್ಲವೇ ಶೇ 10ರಷ್ಟು ಹಣವನ್ನು ಈ ಯೋಜನೆಗಳಿಗೆ ವಿನಿಯೋಗಿಸಿದರೆ ಸಾಕು.ಬೆಂಗಳೂರಿನ ಕೆಲವೆಡೆ ಈಗಾಗಲೇ ಅನುಷ್ಠಾನಗೊಂಡಿದ್ದು ಜನಮೆಚ್ಚುಗೆ ಗಳಿಸಿರುವ ಇಂತಹ ಕಾರ್ಯಯೋಜನೆಗಳನ್ನು ನಗರದೆಲ್ಲೆಡೆ ಅಳವಡಿಸುವುದುಸೂಕ್ತ.ರಸ್ತೆಗಳ ಅಂದ ಚೆಂದದೊಂದಿಗೆ ಬಳಕೆದಾರಸ್ನೇಹಿ ಯೋಜನೆಗಳಿಗೂ ಹೆಸರಾದ ವಿದೇಶಗಳಲ್ಲಿ ಅಲ್ಪ ವೆಚ್ಚ, ದೀರ್ಘ ಬಾಳಿಕೆಯ ಇಂತಹ ಯೋಜನೆಗಳು ಭಾರೀ ಯಶಸ್ಸು ಕಂಡಿವೆ. ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ವಿದೇಶಿ ಮಾದರಿಯನ್ನೇ ಅನುಸರಿಸುವ ನಾವು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ಪರದೇಶದ `ಮಾದರಿ~ ಯೋಜನೆಗೆ ಜೈ ಅಂದರೆ ತಪ್ಪೇನು?ಆದ್ದರಿಂದ ಮೊದಲ ಆದ್ಯತೆಯಾಗಿ ಈ ಯೋಜನೆಯನ್ನು ನಮ್ಮ ಸ್ಥಳೀಯಾಡಳಿತ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕಾಗಿದೆ.ಹಂಪ್‌ಗಳೇ ಪಾದಚಾರಿ ಮಾರ್ಗಗಳಾಗಿ...

ಈ `ಟ್ರಾಫಿಕ್ ಸಿಗ್ನಲ್ ಕಮ್ ಪಾದಚಾರಿ ಮಾರ್ಗ~ಗಳು ರಸ್ತೆಗಳಿಂದ ಪ್ರತ್ಯೇಕವಾಗಿದೆ ಎಂಬ ರೀತಿ ಭಾಸವಾಗದಿರುವಂತೆ ವಿನ್ಯಾಸ ಮಾಡುವ ಅವಕಾಶವಿದೆ.

ಉದಾಹರಣೆಗೆ, ಈಗಿನ ರಸ್ತೆ ಉಬ್ಬುಗಳನ್ನು (ರೋಡ್ ಹಂಪ್ಸ್) ರಸ್ತೆಗಿಂತ ಆರು ಇಂಚು ಎತ್ತರ ಹಾಗೂ ಅಗಲವಾಗಿ ನಿರ್ಮಿಸಿದರಾಯಿತು.ಅಂಗವಿಕಲರು, ಗಾಲಿ ಕುರ್ಚಿ ಬಳಸುವವರು ರಸ್ತೆ ದಾಟುವುದನ್ನು ಸೂಚಿಸುವ ಸಿಗ್ನಲ್ ದೀಪಗಳನ್ನು ಅಳವಡಿಸುವುದು ಇನ್ನೊಂದು ಸುಲಭೋಪಾಯ. ಇದರಿಂದ ವಾಹನ ಸವಾರರು ವಾಹನದ ವೇಗ ನಿಯಂತ್ರಿಸಿ ಪಾದಚಾರಿಗೆ ರಸ್ತೆ ದಾಟಲು ಅನುವು ಮಾಡಿಕೊಡಬಹುದು.ಮೇಲ್ಸೇತುವೆ ಹತ್ತಿ ಇಳಿಯುವ, ಅಸುರಕ್ಷಿತ ಅಂಡರ್‌ಪಾಸ್‌ಗಳನ್ನು ಹಾದುಹೋಗುವ ಆತಂಕಗಳಿಲ್ಲದೆ ಸಹಜ ವಾತಾವರಣದಲ್ಲಿ ರಸ್ತೆ ದಾಟಬಹುದು.ತೀರಾ ಅನಿವಾರ್ಯವಾದ ಸ್ಥಳಗಳಲ್ಲಿ ಅಂಡರ್‌ಪಾಸ್ ನಿರ್ಮಿಸಿದರೂ ಯಥೇಚ್ಛ ಬೆಳಕಿನ, ಉತ್ತಮ ವಿನ್ಯಾಸದ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಿದರಾಯಿತು. ಸ್ಥಳೀಯಾಡಳಿತ ಸಂಸ್ಥೆಗಳು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಕೈಗೊಳ್ಳಲಿ ಎಂದು ಆಶಿಸೋಣವೇ?

(ಮುಗಿಯಿತು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry