ಮಾರ್ಚ್ 7ಕ್ಕೆ ಚುನಾವಣೆ

7
ಪೌರಸಂಸ್ಥೆ: ಕೊನೆಗೂ ಹೊರಬಿತ್ತು ವೇಳಾಪಟ್ಟಿ: ಇಂದಿನಿಂದಲೇ ನೀತಿಸಂಹಿತೆ

ಮಾರ್ಚ್ 7ಕ್ಕೆ ಚುನಾವಣೆ

Published:
Updated:
ಮಾರ್ಚ್ 7ಕ್ಕೆ ಚುನಾವಣೆ

ಬೆಂಗಳೂರು: ರಾಜ್ಯದ 7 ಮಹಾನಗರ ಪಾಲಿಕೆಗಳು, 43 ನಗರಸಭೆಗಳು, 93 ಪುರಸಭೆಗಳು ಮತ್ತು 65 ಪಟ್ಟಣ ಪಂಚಾಯತಿಗಳಿಗೆ ಮಾರ್ಚ್ 7 ರಂದು ಚುನಾವಣೆ ನಡೆಯಲಿದೆ.ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎದುರಾಗಿದ್ದ ಅಡೆತಡೆಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪರಿಹರಿಸಿಕೊಂಡ ರಾಜ್ಯ ಚುನಾವಣಾ ಆಯೋಗ, ವೇಳಾಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಅಲ್ಲದೆ ಶುಕ್ರವಾರದಿಂದಲೇ (ಫೆ. 15) ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದೂ ಪ್ರಕಟಿಸಿದೆ.`ರಾಜ್ಯದಲ್ಲಿ ಪಿಯು ಪರೀಕ್ಷೆಗಳು ಮಾರ್ಚ್ 13ರಿಂದ ಆರಂಭವಾಗಲಿವೆ. ಅದಕ್ಕೂ ಮುನ್ನ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮಾ. 11ರಂದು ಮತ ಎಣಿಕೆ ನಡೆಯಲಿದೆ' ಎಂದು ರಾಜ್ಯ ಚುನಾವಣಾ ಆಯುಕ್ತ ಸಿ.ಆರ್. ಚಿಕ್ಕಮಠ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.`ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನುಸಾರ ಚುನಾವಣೆ ನಡೆಸಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಸಿಬ್ಬಂದಿ ಮತ್ತು ಸಂಪನ್ಮೂಲವನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ನ್ಯಾಯಾಲಯ ಸಹ ಇದನ್ನೇ ಹೇಳಿದೆ. ಆರು ತಿಂಗಳುಗಳಿಂದ ಚುನಾವಣಾ ಸಿದ್ಧತೆ ನಡೆದಿದೆ. ಜಿಲ್ಲಾಧಿಕಾರಿಗಳ ಜೊತೆ ವಲಯವಾರು ಸಭೆಗಳು ಜನವರಿಯಲ್ಲೇ ನಡೆದಿವೆ' ಎಂದು ವಿವರಿಸಿದರು.ಈ ಬಾರಿ ಎಲ್ಲ ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಬಳಸಲಾಗುವುದು. ಆಯೋಗದ ಬಳಿ ಈಗಾಗಲೇ 40 ಸಾವಿರ ಮತಯಂತ್ರಗಳು ಇವೆ. ಇವುಗಳನ್ನೆಲ್ಲ ಬಿಇಎಲ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ತಪಾಸಣೆ ಮಾಡಿ, `ಸುಸ್ಥಿತಿಯಲ್ಲಿವೆ' ಎಂಬ ಪ್ರಮಾಣಪತ್ರ ನೀಡಿದೆ. ಈ ಚುನಾವಣೆಗೆ ಅಂದಾಜು ್ಙ 30 ಕೋಟಿ ಖರ್ಚಾಗಲಿದೆ ಎಂದು ಹೇಳಿದರು.ಮೀಸಲಾತಿ ಪಟ್ಟಿ: 2001ರ ಜನಗಣತಿ ಆಧಾರದ ಮೇಲೆ 2007ರಲ್ಲಿ ಸಿದ್ಧಪಡಿಸಿದ   ವಾರ್ಡ್‌ವಾರು ಮೀಸಲಾತಿ ಪಟ್ಟಿ ಅನ್ವಯವೇ ಚುನಾವಣೆ ನಡೆಯಲಿದೆ. ಏಕೆಂದರೆ, ಫೆಬ್ರುವರಿ 4ರೊಳಗೆ ರಾಜ್ಯ ಸರ್ಕಾರ ಹೊಸ ಮೀಸಲಾತಿ ಪಟ್ಟಿಯನ್ನು ಆಯೋಗಕ್ಕೆ ನೀಡದಿದ್ದರೆ ಲಭ್ಯ ಮೀಸಲಾತಿ ಪಟ್ಟಿಯನ್ನೇ ಚುನಾವಣೆಗೆ ಬಳಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಸರ್ಕಾರ ಮೀಸಲು ಪಟ್ಟಿ ನೀಡಿರಲಿಲ್ಲ. ಸಾಕಷ್ಟು ಮೀನಮೇಷ ಎಣಿಸಿ ಗುರುವಾರ ಬೆಳಿಗ್ಗೆ 9.45ರ ಸುಮಾರಿಗೆ ಸರ್ಕಾರ ಕೊಟ್ಟ ಪಟ್ಟಿಯನ್ನು ಆಯೋಗ ಪರಿಗಣನೆಗೇ ತೆಗೆದುಕೊಂಡಿಲ್ಲ.2007ರ ಮೀಸಲಾತಿ ಪಟ್ಟಿಯಂತೆ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ದೊರೆಯಲಿದೆ. ಸರ್ಕಾರ ನೀಡಿದ ಹೊಸ ಪಟ್ಟಿಯನ್ನು ಅನುಸರಿಸಿದ್ದರೆ ಮಹಿಳಾ ಮೀಸಲಾತಿ ಶೇ 50ಕ್ಕೆ ಏರುತ್ತಿತ್ತು.ನೂರೆಂಟು ವಿಘ್ನಗಳು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲು ಎಲ್ಲ ರಾಜಕೀಯ ಪಕ್ಷಗಳು ಸಾಕಷ್ಟು ಪ್ರಯಾಸ ಪಟ್ಟಿದ್ದವು. `ಚುನಾವಣೆ ಮುಂದೂಡಬೇಕು' ಎಂದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇದಕ್ಕೆ ಆಯೋಗ ಮಾನ್ಯತೆ ನೀಡಿರಲಿಲ್ಲ.ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ನಿಗದಿ ಸಂಬಂಧ ಸರ್ಕಾರದ `ಸಮ್ಮತಿ' ಪಡೆಯುವುದನ್ನು ಕಡ್ಡಾಯಗೊಳಿಸಿ ವಿಧಾನಮಂಡಲ ಮಂಗಳವಾರ ತರಾತುರಿಯಲ್ಲಿ ಅಂಗೀಕರಿಸಿದ   `ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ'ಗೆ ಅಂಕಿತ ಹಾಕಲು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಬುಧವಾರ ನಿರಾಕರಿಸಿದ್ದರು. `ಸುಪ್ರೀಂ ಕೋರ್ಟ್ ನಿರ್ದೇಶನ ಮೀರಿ ನಾನು ನಡೆದುಕೊಳ್ಳಲಾರೆ' ಎಂದು ರಾಜ್ಯಪಾಲರು ಖಡಾಖಂಡಿತವಾಗಿ ಹೇಳ್ದ್ದಿದರು ಎನ್ನಲಾಗಿದೆ.ಈ ನಡುವೆ ಚುನಾವಣೆಯನ್ನು ಮುಂದೂಡಲು, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲು ಮಾಡಲಾಯಿತು. ಇವುಗಳ ಆಧಾರದಲ್ಲಿ ಚುನಾವಣೆ ಮುಂದೂಡಲು ಹೈಕೋರ್ಟ್ ನಿರಾಕರಿಸಿತು. ಈ ಅರ್ಜಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿದವು. ಆದರೆ ಅಲ್ಲಿಯೂ, ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ಸುಪ್ರೀಂ ಕೋರ್ಟ್ ಪದೇಪದೇ ಸರ್ಕಾರದ ಕಿವಿಹಿಂಡಿ, `ಚುನಾವಣೆಗೆ ಸಹಕಾರ ನೀಡಲೇಬೇಕು' ಎಂದು ತಾಕೀತು ಮಾಡಿತ್ತು.ದುರುದ್ದೇಶ ಇರಲಿಲ್ಲ

ಚುನಾವಣೆ ನಡೆಸಬಾರದು ಎನ್ನುವ ಉದ್ದೇಶ ಸರ್ಕಾರಕ್ಕೆ ಇರಲಿಲ್ಲ. 2011ರ ಜನಗಣತಿಯ ವಿವರಗಳು ಸರ್ಕಾರಕ್ಕೆ 2012ರ ಜೂನ್ ವೇಳೆಗೆ ಸಿಗಬೇಕಿತ್ತು. ಆ ಪ್ರಕಾರ ಆಗಿದ್ದರೆ 2012ರ ನವೆಂಬರ್-      ಡಿಸೆಂಬರ್‌ನಲ್ಲೇ ಚುನಾವಣೆ ನಡೆಸಲಾಗುತ್ತಿತ್ತು. ಜನಗಣತಿಯ ವಿವರ ಸಿಗುವುದು ವಿಳಂಬವಾದ ಕಾರಣ ಚುನಾವಣೆ ಕೂಡ ತಡ ಆಯಿತು. ಚುನಾವಣೆ ನಡೆಸುವುದು ಸರ್ಕಾರದ ಕರ್ತವ್ಯ. ಆ ಕೆಲಸ ಈಗ ಮಾಡುತ್ತೇವೆ.

- ಎಸ್.ಸುರೇಶಕುಮಾರ್, ಕಾನೂನು ಸಚಿವಸಾಮಾಜಿಕ ನ್ಯಾಯಕ್ಕೆ ಧಕ್ಕೆ

ಚುನಾವಣೆ ಘೋಷಣೆಯಿಂದ ಗೊಂದಲ ಸೃಷ್ಟಿಯಾಗಿದೆ. 2001ರ ಜನಗಣತಿ ಪ್ರಕಾರ ಚುನಾವಣೆ ನಡೆಯುತ್ತಿರುವುದರಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಸರ್ಕಾರ ಕಾನೂನು ಹೋರಾಟ ಮಾಡಿ, ಚುನಾವಣೆ ಮುಂದೂಡಲು ಕ್ರಮ ತೆಗೆದುಕೊಳ್ಳಬೇಕು. ದಿನಾಂಕ ನಿಗದಿ ಸಂಬಂಧ ಸರ್ಕಾರದ ಸಮ್ಮತಿ ಕಡ್ಡಾಯಗೊಳಿಸುವ ತಿದ್ದುಪಡಿ ಮಸೂದೆ ಜಾರಿಗೆ ಬಾರದಿರುವುದು ನೋವಿನ ಸಂಗತಿ.

ಡಾ ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry