ಮಾರ್ಜಾಲ ಪ್ರೀತಿಯ ಕುಚಿಂಗ್!

7

ಮಾರ್ಜಾಲ ಪ್ರೀತಿಯ ಕುಚಿಂಗ್!

Published:
Updated:

ಬೆಕ್ಕು ಎಂದಾಕ್ಷಣ ಅದೊಂದು ಅಪಶಕುನ ಎಂದು ಮೂದಲಿಸುವವರೇ ಹೆಚ್ಚು. ಆದರೆ ಇಲ್ಲಿ ಬೆಕ್ಕು ಅದೃಷ್ಟದ ಸಂಕೇತ. ವಿಶಾಲವಾದ ರಸ್ತೆಗಳ ಮಧ್ಯಭಾಗದಲ್ಲಿ, ದೊಡ್ಡ ದೊಡ್ಡ ಮಾಲ್‌ಗಳಲ್ಲಿ, ಅಂಗಡಿಗಳಲ್ಲಿ ಬೆಕ್ಕಿನ ಪ್ರತಿಮೆಗಳು ಕಾಣುತ್ತವೆ. ಬಹುತೇಕ ಎಲ್ಲರ ಮನೆಯಲ್ಲೂ ಜೀವಂತ ಬೆಕ್ಕುಗಳನ್ನು ಸಾಕಿದ್ದಾರೆ. ಈ ರೀತಿ `ಬೆಕ್ಕು ಮಯ~ವಾದ ತಾಣವೇ ಕುಚಿಂಗ್ ಸಿಟಿ.ಬೆಕ್ಕಿನ ನಗರವೆಂದೇ ಪ್ರಸಿದ್ಧವಾಗಿರುವ ಕುಚಿಂಗ್ ಪೂರ್ವ ಮಲೇಶಿಯಾ ದೇಶದಲ್ಲಿದೆ. ಇದು ಮಲೇಶಿಯಾ ದೇಶದ ನಾಲ್ಕನೇ ಅತಿದೊಡ್ಡ ನಗರ. ಹತ್ತು ಲಕ್ಷ ಜನಸಂಖ್ಯೆಯುಳ್ಳ ಕುಚಿಂಗ್ ನಗರ ಸರಾವಕ್ ರಾಜ್ಯದ ರಾಜಧಾನಿ. ಅದ್ಭುತವಾದ ನಿಸರ್ಗ ಕುಚಿಂಗ್‌ನ ಪ್ರಮುಖ ಆಕರ್ಷಣೆ.ಈ ನಗರವೊಂದು ಮಲೇಶಿಯಾದ ಪ್ರಮುಖ ಪ್ರವಾಸಿ ಕೇಂದ್ರವೂ ಕೂಡ. ನಗರದ ಸುತ್ತಮುತ್ತ ಹಲವು ವೈವಿಧ್ಯಮಯ ಪ್ರವಾಸಿ ತಾಣಗಳಿವೆ. ಈ ಪ್ರದೇಶದ ಭಾಷೆ, ಸಂಸ್ಕೃತಿ, ಇತಿಹಾಸ- ಎಲ್ಲವೂ ಸಮೃದ್ಧ, ಸ್ವಾರಸ್ಯಕರ.

 

ರಸ್ತೆಗಳ ಇಕ್ಕೆಲಗಳಲ್ಲಿ ಬೃಹದಾಕಾರದ ಎತ್ತರದ ಕಟ್ಟಡಗಳು, ಅಂಗಡಿಗಳು, ವಾಣಿಜ್ಯ ಕೇಂದ್ರಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮನರಂಜನಾ ಕೇಂದ್ರಗಳು ಹಾಗೂ ಮಸಾಜ್ ಪಾರ್ಲರ್‌ಗಳು ಇವೆ. ಕತ್ತಲಾಗುತ್ತಿದ್ದಂತೆ ಝಗಮಗಿಸುವ, ಸೂರ್ಯನನ್ನೇ ನಾಚಿಸುವ ದೀಪಗಳು, ಕಣ್ಣು ಕೋರೈಸುವ ಜಾಹೀರಾತು ಫಲಕಗಳು ನಗರದ ವೈಭವವನ್ನು ಸೂಚಿಸುವಂತಿವೆ.ಸರಾವಕ್‌ನ ಹೃದಯ ಭಾಗದಲ್ಲಿರುವ ಕುಚಿಂಗ್ ನಗರದಲ್ಲಿ ಚೀನಿಯರ `ಟ್ಯೂಯ ಪೆಕ್ ಕಾಂಗ್~ ಹೆಸರಿನ ದೇವಸ್ಥಾನವಿದೆ. ದೇವಸ್ಥಾನವನ್ನು ನೋಡುವುದೇ ಒಂದು ಚಂದ. ಭಕ್ತರು ಅಲ್ಲಿ ತಮ್ಮ ಆರಾಧ್ಯ ದೈವಕ್ಕೆ ದೊಡ್ಡ ದೊಡ್ಡ ಊದುಬತ್ತಿಗಳಿಂದ ಪೂಜಿಸುತ್ತಾರೆ. ದೇವಸ್ಥಾನದಲ್ಲೊಂದು ದಿವ್ಯ ಮೌನ.ನಗರದ ಮಧ್ಯಭಾಗದಲ್ಲಿ ವಿಶ್ವದಲ್ಲೇ ಎತ್ತರವಾದ ಬೆಕ್ಕಿನ ಪ್ರತಿಮೆ ಇದೆ. ಅದು ಶುಭ್ರ ಬಿಳಿ ಬಣ್ಣದಿಂದ ಕೂಡಿದ್ದು ನೋಡಲು ಅತ್ಯದ್ಭುತವಾಗಿದೆ. 18ನೇ ಶತಮಾನದ ಕೊನೆಯಲ್ಲಿ ಇಲ್ಲಿ ವಿಪರೀತ ಬೆಕ್ಕುಗಳಿದ್ದವಂತೆ.ಒಮ್ಮೆ ಈ ಸ್ಥಳವನ್ನು ನೋಡಿದ ಆಗಿನ ಚಾರ್ಲ್ಸ್ ಬ್ರೂರ್ ಎಂಬ ದೊರೆ ಈ ಸ್ಥಳಕ್ಕೆ ಕುಚಿಂಗ್ ಎಂದು ಕರೆದರಂತೆ. ಮಲೆ ಭಾಷೆಯಲ್ಲಿ ಕುಚಿಂಗ್ ಎಂದರೆ ಬೆಕ್ಕು ಎಂದರ್ಥ. ಬೆಕ್ಕಿನ ಪ್ರತಿಮೆಗಳ ಸಂಗ್ರಹಾಲಯವೂ ಈ ನಗರದಲ್ಲಿದೆ.ಕುಚಿಂಗ್ ನಗರದ ಹೊರಭಾಗವು ಮಳೆಕಾಡುಗಳಿಂದ ಆವೃತ್ತವಾಗಿದೆ. ಇಲ್ಲಿ ಜಿಂಕೆ, ಹಾವು, ಸರಿಸೃಪಗಳು, ಕೀಟಗಳು ಹಾಗೂ ಸಸ್ಯ ಪ್ರಭೇದಗಳ ವೈವಿಧ್ಯತೆಯಿದೆ. ಹಲವು ಬಗೆಯ ಕಾಡು ಜನರೂ ಇಲ್ಲಿದ್ದಾರೆ. ಪ್ರವಾಸಿಗರನ್ನು ಅವರು ತಮ್ಮದೇ ಆದ ಶೈಲಿಯಲ್ಲಿ ಬರಮಾಡಿಕೊಳ್ಳುತ್ತಾರೆ.

ಗೈಡ್‌ಗಳು ಪ್ರವಾಸಿಗರಿಗೆ ಸಹಾಯ ಮಾಡುತ್ತಾರೆ. ಕಾಡುಜನರ ವೇಷ ಭೂಷಣ, ನೃತ್ಯ ಹಾಗೂ ಹಾಡು ಕೇಳುವುದೇ ಒಂದು ಸೊಗಸು. ಕಾಡು ಜನರು ವಾಸಿಸುವ ಸ್ಥಳವನ್ನು `ಸಂಸ್ಕೃತಿಯ ಊರು~ ಎಂದು ಕರೆಯುತ್ತಾರೆ.

 

ಇಲ್ಲಿನ ಕಾಡುಜನರು ತಮ್ಮ ಜೀವನಕ್ಕಾಗಿ ಬಿದಿರಿನಿಂದ ಬುಟ್ಟಿಗಳು, ಬೀಸಣಿಕೆ, ಆಟಿಕೆಗಳು ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ನಗರದ ಮಾರುಕಟ್ಟೆಗೆ ಒಯ್ಯುತ್ತಾರೆ. ನಗರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಕಾಡುಜನರು ಬಹು ಉತ್ಸುಕತೆಯಿಂದ ಪಾಲ್ಗೊಂಡು ಪ್ರವಾಸಿಗರ ಮನ ತಣಿಸುತ್ತಾರೆ.ಕುಚಿಂಗ್‌ನಲ್ಲಿ ಅನೇಕ ರಾಷ್ಟ್ರೀಯ ವನ್ಯಧಾಮಗಳಿವೆ. ಅದರಲ್ಲಿ ಪ್ರಮುಖವಾದದ್ದು ಸೇಮೆಂಗ್ಹೊ ವನ್ಯಜೀವಿಧಾಮ. ಇದು ಪ್ರಪಂಚದ ಮೊದಲ ಒರಾಂಗುಟಾನ್ ಪ್ರಾಣಿಯ ಸಂರಕ್ಷಣೆ ಮತ್ತು ಪುನರ್ವಸತಿ ತಾಣ. ಕೈಯಳತೆಯ ಅಂತರದಲ್ಲಿ ಒರಾಂಗುಟಾನ್‌ಗಳನ್ನು ವೀಕ್ಷಿಸುವ ಅವಕಾಶವಿದೆ.ಸೇಮಂಗ್ಹೊ ಧಾಮದ ಉದ್ದೇಶ ಪ್ರವಾಸಿಗರಿಗೆ ವಿನಾಶದಂಚಿನಲ್ಲಿರುವ ಒರಾಂಗುಟಾನ್ ಸಂತತಿಯನ್ನು ಹತ್ತಿರದಿಂದ ಪರಿಚಯಿಸುವುದು. 1999ರಲ್ಲಿ ಬರೀ ಮೂರು ಒರಾಂಗುಟಾನ್‌ಗಳೊಂದಿಗೆ ಆರಂಭವಾದ ಕೇಂದ್ರದಲ್ಲಿ ಈಗ ಸುಮಾರು 25 ಒರಾಂಗುಟಾನ್‌ಗಳು ಇವೆ.ಮನುಷ್ಯರನ್ನು ಹೋಲುವ ಇವುಗಳಿಗೆ ಹಣ್ಣೆಂದರೆ ಬಲು ಇಷ್ಟ. ಇವುಗಳು ಹಣ್ಣನ್ನು ಸವಿಯುತ್ತಾ ಫೋಟೊ ತೆಗೆಸಿಕೊಳ್ಳಲು ಪೋಜ್ ನೀಡುತ್ತವೆ. ಕುಚಿಂಗ್‌ಗೆ ಭೇಟಿ ನೀಡಲು ಮಾರ್ಚ್‌ನಿಂದ ಅಕ್ಟೋಬರ್ ತಿಂಗಳವರೆಗೂ ಸೂಕ್ತ ಸಮಯ.ಕ್ವಾಲಲಾಂಪುರದಿಂದ ಇಲ್ಲಿಗೆ ವಿಮಾನದಲ್ಲಿ ಸುಮಾರು ಎರಡು ಗಂಟೆಗಳ ಪ್ರಯಾಣ.

 

ಕುಚಿಂಗ್ ಸಿಟಿಯ ಪ್ರವಾಸ ಒಂದು ವಿಶಿಷ್ಟ ಅನುಭವ. ಅಲ್ಲಿನ ಚೆಲವು ಅನುಪಮವಾದದ್ದು. ಸಂಸ್ಕೃತಿ ಮೆಚ್ಚುವಂತಹದ್ದು, ನೆನಪಿರಲಿ ಕುಚಿಂಗ್ ಸಿಟಿ ಸಾಮಾನ್ಯ ಊರಲ್ಲ. ಅದು ಪ್ರವಾಸಿಗರ ನೆಚ್ಚಿನ ಹಾಗೂ ಬೆಕ್ಕಿನ ಸಿಟಿ!! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry