ಶನಿವಾರ, ನವೆಂಬರ್ 23, 2019
17 °C

ಮಾರ್ಮಿಕ ನಿರ್ಧಾರ

Published:
Updated:

ಎನ್.ಡಿ.ಎ. ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ವಿಷಯದಲ್ಲಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ರವರು ಎತ್ತಿರುವ ಆಕ್ಷೇಪ, ಈವರೆಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಬಂದಿದ್ದ ಬಿಜೆಪಿಗೆ ಭಾರಿ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಇತ್ತೀಚೆಗೆ ನಡೆದ ಜೆ.ಡಿ.ಯು. ಪಕ್ಷದ ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ನಿತೀಶ್‌ಕುಮಾರ್‌ರವರು ತಮ್ಮ ಪಕ್ಷದ ಈ ನಿರ್ಣಯವನ್ನು ಬಹಿರಂಗ ಪಡಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್‌ಕುಮಾರ್‌ರವರು ತಮ್ಮ ಭಾಷಣದ ಉದ್ದಕ್ಕೂ ಎಲ್ಲೂ ನರೇಂದ್ರಮೋದಿ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಿರುವುದಿಲ್ಲ. ಆದರೆ, ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂಬ ವಿಷಯದಲ್ಲಿ ತಮ್ಮ ಭಾಷಣದ ಉದ್ದಕ್ಕೂ ನರೇಂದ್ರಮೋದಿ ಅವರನ್ನೂ ಅವರ ಕೋಮುವಾದಿ ನಾಯಕತ್ವವನ್ನೂ ಪರೋಕ್ಷವಾಗಿ ವಿರೋಧಿಸುತ್ತ, ಆ ವಿಷಯದಲ್ಲಿ ತಮ್ಮ ಪಕ್ಷದ ನಿರ್ಧಾರವನ್ನು ಸಾಕಷ್ಟು ಮಾರ್ಮಿಕವಾಗಿಯೇ ವ್ಯಕ್ತಪಡಿಸಿದ್ದಾರೆ.ಹಾಗೆ ನೋಡಿದರೆ, ನರೇಂದ್ರಮೋದಿ ಮುಂದಿನ ಪ್ರಧಾನಿ ಸ್ಥಾನದ ಅಭ್ಯರ್ಥಿ ಎಂಬ ಬಿಜೆಪಿ. ನಾಯಕರ ಅಭಿಪ್ರಾಯವನ್ನು ವಿರೋಧಿಸುವವರು, ಸ್ವತಃ ಬಿಜೆಪಿಯಲ್ಲೇ ಸಾಕಷ್ಟು ಮಂದಿ ಇದ್ದರೂ ಸಹ, ಅದನ್ನವರು ಬಹಿರಂಗವಾಗಿ ವ್ಯಕ್ತಪಡಿಸುವುದು ಅಸಾಧ್ಯವಾಗಿದೆ. ಮೂಲತಃ 2002ರ ಗೋದ್ರಾದಲ್ಲಿ ನಡೆದ ಸಾವಿರಾರು ಮುಸ್ಲಿಮರ ಹತ್ಯಾಕಾಂಡ ಮತ್ತು ಕೋಮುವಾದಕ್ಕೆ ಹೆಸರಾದ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು, ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಬಿಂಬಿಸುತ್ತಿರುವುದನ್ನು ಎನ್.ಡಿ.ಎ. ಮೈತ್ರಿಕೂಟದಲ್ಲಿ ಬಿಜೆಪಿಯನ್ನು ಹೊರತುಪಡಿಸಿ, ಅನ್ಯ ಯಾವ ಮಿತ್ರಪಕ್ಷಗಳೂ ಈವರೆಗೂ ಸಮರ್ಥಿಸದಿರುವುದು ಕೂಡ ಗಮನಿಸಲೇಬೇಕಾದಂತಹ ಸಂಗತಿ. ವಾಸ್ತವವಾಗಿ, ನಿತೀಶ್‌ಕುಮಾರ್‌ರವರ ಈ ನಿಲುವು ಆರ್.ಎಸ್.ಎಸ್., ಬಿಜೆಪಿಗೆ ಒಂದು ರೀತಿಯ ಶಾಕ್ ಟ್ರೀಟ್‌ಮೆಂಟ್ ಕೂಡ ಆದಂತಿದೆ.

- ಡಾ. ಮ. ನ. ಜವರಯ್ಯ ,ಮೈಸೂರು .

ಪ್ರತಿಕ್ರಿಯಿಸಿ (+)