ಭಾನುವಾರ, ಏಪ್ರಿಲ್ 18, 2021
32 °C

ಮಾಲಿನ್ಯ ನಿಯಂತ್ರಣ ಮಂಡಳಿ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾವಳ್ಳಿಪುರ ಬಳಿಯ ತ್ಯಾಜ್ಯ ವಿಲೇವಾರಿ ಘಟಕವನ್ನು ಮುಚ್ಚುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಬಿಎಂಪಿಗೆ ನಿರ್ದೇಶನ ನೀಡಿ ಬುಧವಾರ ಆದೇಶ ಹೊರಡಿಸಿದೆ.ನಗರದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಗುತ್ತಿಗೆ ಪಡೆದಿರುವ ರಾಮ್ಕಿ ಕಂಪೆನಿಯು ತ್ಯಾಜ್ಯವನ್ನು ಮಾವಳ್ಳಿಪುರ ಬಳಿ ವಿಲೇವಾರಿ ಮಾಡುತ್ತಿರುವುದರಿಂದ ಅಲ್ಲಿನ ನಿವಾಸಿಗಳ ಬದುಕು ದುಸ್ತರವಾಗಿದೆ. ಈಗಾಗಲೇ ಒಬ್ಬರು ಸಾವನ್ನಪ್ಪಿದ್ದು, ಸ್ಥಳೀಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಪರಿಶೀಲಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.`ಮೂರು ತಿಂಗಳೊಳಗೆ ತ್ಯಾಜ್ಯ ವಿಲೇವಾರಿ ಘಟಕವನ್ನು ಮುಚ್ಚಬೇಕು. ಪರ್ಯಾಯವಾಗಿ ವೈಜ್ಞಾನಿಕ ಪದ್ದತಿಯ ಮೂಲಕ ತ್ಯಾಜ್ಯವನ್ನು ಮಂಡೂರು ಬಳಿ ವಿಲೇವಾರಿ ಮಾಡಲು ಆದೇಶಿಲಾಗಿದೆ. ಈ ನಿರ್ದೇಶನವನ್ನು ಪಾಲಿಸುವಲ್ಲಿ ಪಾಲಿಕೆ ವಿಫಲವಾದರೆ `1986ರ ಪರಿಸರ ಸಂರಕ್ಷಣಾ ಕಾಯ್ದೆ~ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು~ ಎಂದು ಮಂಡಳಿ ಎಚ್ಚರಿಸಿದೆ.`ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪಾಲಿಕೆ ಮತ್ತು ರಾಮ್ಕಿ ಕಂಪೆನಿ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ. ಇದರಿಂದ ಇಲ್ಲಿನ ಜನರ ಆರೋಗ್ಯ ಕೆಡುತ್ತಿದೆ. ಘನತ್ಯಾಜ್ಯ  ವಿಲೇವಾರಿಯ ಅಧಿಕಾರ 2010ರ ಡಿಸೆಂಬರ್ 31ಕ್ಕೆ ಮಾನ್ಯತೆ ಕಳೆದುಕೊಂಡಿದ್ದು, ಅದರ ನವೀಕರಣದಲ್ಲಿ  ಪಾಲಿಕೆ ಮತ್ತು ರಾಮ್ಕಿ ಕಂಪೆನಿ ವಿಫಲವಾಗಿವೆ~ ಎಂದು ಮಂಡಳಿ ಆರೋಪಿಸಿದೆ.ಸೆಸ್ ದುಪ್ಪಟ್ಟು?: `ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಮಾವಳ್ಳಿಪುರದ ಬಳಿಯ ಘನತ್ಯಾಜ್ಯ ಘಟಕವನ್ನು ಮುಚ್ಚಿದರೆ ನಗರದಿಂದ ತ್ಯಾಜ್ಯ ವಿಲೇವಾರಿಯು ಕಷ್ಟವಾಗಲ್ದ್ದಿದು, ತ್ಯಾಜ್ಯ ವಿಲೇವಾರಿ ಮೇಲಿನ ಸೆಸ್ ದುಪ್ಪಟ್ಟಾಗಲಿದೆ~ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ ಹೇಳಿದ್ದಾರೆ.ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶಕ್ಕೆ ಪ್ರತಿಕ್ರಿಯಿಸಿದ ಅವರು, `ಮಂಡಳಿಯ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ, ನಗರದಿಂದ ತ್ಯಾಜ್ಯವನ್ನು ಎಲ್ಲಿಗೆ ಸಾಗಿಸುವುದು ಎಂಬ ಪ್ರಶ್ನೆ ಎದುರಾಗುತ್ತದೆ. ಕಾರ್ಖಾನೆಗಳು, ಹೋಟೆಲ್‌ಗಳು ಮತ್ತು ಕಲ್ಯಾಣ ಮಂಟಪಗಳಿಂದ ತ್ಯಾಜ್ಯದ ಸೆಸ್ ತಿಂಗಳಿಗೆ ಎರಡು ಸಾವಿರದಿಂದ ಐದು ಸಾವಿರ ರೂಪಾಯಿ ಮತ್ತು ನಾಗರಿಕರಿಂದ 30 ರಿಂದ 40 ರೂಪಾಯಿ ವಸೂಲಿ ಮಾಡಲಾಗುತ್ತಿದೆ.ಆದರೆ, ಮಂಡಳಿಯ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ದುಪ್ಪಟ್ಟು ಹಣವನ್ನು ವಸೂಲಿ ಮಾಡಬೇಕಾಗುತ್ತದೆ~ ಎಂದು ಅವರು ತಿಳಿಸಿದ್ದಾರೆ.ಮಾವಳ್ಳಿಪುರಕ್ಕೆ ಪರ್ಯಾಯವಾಗಿ ತ್ಯಾಜ್ಯವನ್ನು ದೊಡ್ಡಬಳ್ಳಾಪುರದ ಟೆರ‌್ರಾಫರ್ಮಾ ಬಯೊಟೆಕ್ನಾಲಜಿ ಲಿಮಿಟೆಡ್‌ಗೆ ಕಳಿಸಬೇಕಾಗುತ್ತದೆ. ಇದರಿಂದ ಸಾರಿಗೆ ವೆಚ್ಚ ಸಹಜವಾಗಿಯೇ ಹೆಚ್ಚಾಗಲಿದೆ~ ಎಂದರು.

 

`ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ~

`ಮಾವಳ್ಳಿಪುರ ಘಟಕದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದ ಬಗ್ಗೆ ಮಂಡಳಿ ನೀಡಿರುವ ಆದೇಶವನ್ನು ಹೇಗೆ ತೆಗೆದುಕೊಳ್ಳುತ್ತದೆ ಎಂಬುದು ಪಾಲಿಕೆಗೆ ಬಿಟ್ಟ ವಿಚಾರ~ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವ ತಿಳಿಸಿದ್ದಾರೆ.ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು, `ಈ ಪತ್ರದ ಮೂಲಕ ಘಟಕದಿಂದಾಗುವ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಿದ್ದೇವೆ. ಮಾವಳ್ಳಿಪುರದ ಬಳಿ ಅಸಮರ್ಪಕ ತ್ಯಾಜ್ಯ ವಿಲೇವಾರಿಯ ಸಂಬಂಧ ಅಲ್ಲಿನ ಸ್ಥಳೀಯರು ಮಂಡಳಿಗೆ ದೂರು ನೀಡಿದ್ದರಿಂದ ಮಂಡಳಿಯು ತನಿಖೆ ನಡೆಸಿದೆ. ಪಾಲಿಕೆ ಮತ್ತು ಕಂಪೆನಿ ತ್ಯಾಜ್ಯ ನಿರ್ವಹಣೆಯ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿಲ್ಲ ಎಂಬುದು ಸ್ಪಷ್ಟಗೊಂಡಿದೆ~ ಎಂದು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.