ಗುರುವಾರ , ಮೇ 6, 2021
23 °C

ಮಾಲಿನ್ಯ: ಭೂಮಿ, ನೀರು ವಿಷಮಯ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ಇಲ್ಲಿನ ಭಾಗ್ಯನಗರ ಸೀರೆ ಉತ್ಪಾದನಾ ಘಟಕಗಳ ರಾಸಾಯನಿಕಯುಕ್ತ ತ್ಯಾಜ್ಯ ನೀರು ಹಾಗೂ ಕೂದಲು ಸಂಸ್ಕರಣ ಘಟಕಗಳ ತ್ಯಾಜ್ಯ ಕೂದಲು ಹಿರೇಹಳ್ಳಕ್ಕೆ ಸೇರುತ್ತಿರುತ್ತಿದೆ. ಇದರಿಂದಾಗಿ ಮಾಲಿನ್ಯ ಉಂಟಾಗಿದೆ.ಇದೇ ಹಳ್ಳದಿಂದ ಜಾಕ್‌ವೆಲ್ ಮೂಲಕ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯಿದೆ. ಹಳ್ಳಕ್ಕೆ ಕೂದಲು ಹಾಗೂ ಸೀರೆಗಳಿಗೆ ಬಳಸುವ ರಾಸಾಯನಿಕ  ಬಣ್ಣದ ತ್ಯಾಜ್ಯ ನೀರು ಸೇರುತ್ತಿರುವುದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಭಾಗ್ಯನಗರ-ಯತ್ನಟ್ಟಿ ಮಾರ್ಗದಲ್ಲಿ ರಾಶಿರಾಶಿ ತ್ಯಾಜ್ಯ ಕೂದಲು ಬಿದ್ದಿರುವುದು ಕಾಣಬಹುದು. ಗಾಳಿಗೆ ಹಾರಿ ನೇರವಾಗಿ ಊಟದ ತಟ್ಟೆಗೆ ಬೀಳುತ್ತದೆ. ಅಸಹನೀಯ ವಾತಾವರಣ ಸೃಷ್ಟಿಸಿದೆ ಎಂದು ಗ್ರಾಮಸ್ಥ ಸುರೇಶ ಬೇಸರ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹಳ್ಳದಲ್ಲಿ ಕೂದಲು ಹಾಕದಂತೆ ಸೂಚನೆ ನೀಡಿದ್ದರೂ ಸಂಸ್ಕರಣಾ ಘಟಕದವರು ಕಣ್ಣುತಪ್ಪಿಸಿ ಹಳ್ಳದಲ್ಲಿ ಸುರಿಯುತ್ತಿದ್ದಾರೆ. ಜತೆಗೆ ಮನೆ ಮನೆಯಲ್ಲಿ ಸೀರೆ ತಯಾರಿಸುವುದರಿಂದ ಅಲ್ಲಿ ಮಾಲಿನ್ಯ ನಿಯಂತ್ರಣದ ಯಾವ ಮಾನದಂಡಗಳನ್ನೂ ಅನುಸರಿಸುತ್ತಿಲ್ಲ. ಗ್ರಾಮ ಪಂಚಾಯ್ತಿಯೂ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಲಿನ್ಯ ನಿಯಂತ್ರಣಾಧಿಕಾರಿ ಆನಂದ ಅವರು, ಕೂದಲು ಹಳ್ಳ ಸೇರುತ್ತಿರುವ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗೂ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಾಕಷ್ಟು ಬಾರಿ ಮನವರಿಕೆ ಮಾಡಲು ಪ್ರಯತ್ನಿಸಲಾಗಿದೆ. ಕೂದಲನ್ನು ಪ್ರತ್ಯೇಕ ಸ್ಥಳದಲ್ಲಿ ಸಂಗ್ರಹಿಸಿ ಘನತ್ಯಾಜ್ಯದ ಜತೆ ಬೆರೆಸಿ ಎರೆಗೊಬ್ಬರ ತಯಾರಿಸಬಹುದು. ಇಲ್ಲವಾದರೆ, ಹಿರೇಸಿಂಧಗಿ ಮಾರ್ಗದಲ್ಲಿರುವ ನಗರಸಭೆಯ ತ್ಯಾಜ್ಯ ಸಂಗ್ರಹಾಗಾರದಲ್ಲಿ ಪ್ರತ್ಯೇಕವಾಗಿ ಹಾಕಬಹುದು. ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯೂ ಮನಸ್ಸು ಮಾಡಿದಲ್ಲಿ ಇದರ ನಿಯಂತ್ರಣ ಸಾಧ್ಯ. ಇಲ್ಲಿ ಪ್ರತಿ ತಿಂಗಳೂ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಕೂದಲು ಸೃಷ್ಟಿಯಾಗುತ್ತಿದೆ. ತ್ಯಾಜ್ಯ ನೀರು ಸಂಸ್ಕರಣೆಗೂ ಭಾಗ್ಯನಗರ ಪ್ರದೇಶದಲ್ಲಿ ಘಟಕ ಸ್ಥಾಪಿಸಬೇಕು. ಅದಕ್ಕಾಗಿ ಯಾವುದೇ ತಾಂತ್ರಿಕ ನೆರವು ಒದಗಿಸಲು ಸಿದ್ಧ. ಮುಖ್ಯವಾಗಿ ಆಯಾ ಉದ್ದಿಮೆ ಘಟಕ ನಡೆಸುವವರೂ ಪರಿಸರ ಕಾಳಜಿ ಹೊಂದಿರಬೇಕು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.