ಭಾನುವಾರ, ಜನವರಿ 19, 2020
22 °C
ಅಕ್ರಮ ಕಟ್ಟಡ: ಕ್ರಮಕ್ಕೆ ಜಂಟಿ ಕಾರ್ಯಾಚರಣೆ

ಮಾಲೀಕರಿಗೆ ಎಚ್ಚರಿಕೆಯ ನೋಟಿಸ್‌

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೀಕರಿಗೆ ಎಚ್ಚರಿಕೆಯ ನೋಟಿಸ್‌

ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಬಡಾವಣೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳುವ ಸಲುವಾಗಿ ನಗರಸಭೆ ಮತ್ತು ರಾಮನಗರ– ಚನ್ನಪಟ್ಟಣ ನಗರಾಭಿವೃದ್ದಿ ಪ್ರಾಧಿಕಾರ (ಆರ್‌ಸಿಯುಡಿಎ) ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿತು.ನಗರಸಭೆ ಆಯುಕ್ತ ಜಿ.ಎ.ಯಶವಂತ್‌ ಕುಮಾರ್‌ ಹಾಗೂ ಆರ್‌ಸಿಯುಡಿಎ ಆಯುಕ್ತ ಪದ್ಮನಾಭ್ ಅವರ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಕೈಗೊಂಡು, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೆ ‘ಶಾಕ್‌’ ನೀಡಿತು.ಪ್ರಾಧಿಕಾರದ ಅನುಮತಿ ಮತ್ತು ನಗರಸಭೆಯ ಪರವಾನಗಿಗೆ ತಕ್ಕಂತೆ ಕಟ್ಟಡ ನಿರ್ಮಿಸದೆ, ನಿಯಮಗಳನ್ನು ಉಲ್ಲಂಘಿಸಿ ಹೆಚ್ಚುವರಿ ಮಹಡಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಎಂಟಕ್ಕೂ ಹೆಚ್ಚು ಕಟ್ಟಡಗಳ ಬಳಿ ತೆರಳಿದ ತಂಡ ಪರಿಶೀಲನೆ ನಡೆಸಿತು. ಅಲ್ಲದೆ ಕಟ್ಟಡಗಳಲ್ಲಿ ಇದ್ದ ಬಾಂಡ್ಲಿ, ಗುದ್ದಲಿ ಸೇರಿದಂತೆ ಮತ್ತಿತರ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡು, ಮಾಲೀಕರಿಗೆ ಅಂತಿಮ ಎಚ್ಚರಿಕೆಯ ನೋಟಿಸ್‌ ಅನ್ನು ನೀಡಿತು.ಬೆಂಗಳೂರು– ಮೈಸೂರು ಹೆದ್ದಾರಿಯ ಕನಕಪುರ ವೃತ್ತದ ಬಳಿ ಕಾರ್ಯ ನಿರ್ವಹಿಸುತ್ತಿರುವ ‘ದಿ ತಾಜ್‌ ಬಿರಿಯಾನಿ’ ಹೋಟೆಲ್‌ ಮೇಲೆ ಈ ತಂಡ ದಾಳಿ ನಡೆಸಿತು. ‘ನಗರಸಭೆಯಿಂದ ಹೋಟೆಲ್‌ಗೆ ಸಂಬಂಧಿಸಿದಂತೆ ಯಾವುದೇ ಪರವಾನಗಿ ಹಾಗೂ ಅನುಮತಿ ಪಡೆಯದಿರುವ ಕಾರಣ ಹೋಟೆಲ್‌ ಮೇಲೆ ದಾಳಿ ನಡೆಸಲಾಯಿತು’ ಎಂದು ನಗರಸಭೆ ಆಯುಕ್ತ ಯಶವಂತ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು. ಈ ದಾಳಿಯಲ್ಲಿ ಹೋಟೆಲ್‌ನ ಕೆಲ ಕುರ್ಚಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.ಅಕ್ರಮ ಬಡಾವಣೆ ನಾಶ: ನಗರದ ಕೇಂದ್ರ ಸ್ಥಾನದಲ್ಲಿರುವ ಕೈಗಾರಿಕಾ ಪ್ರದೇಶದ ಹಿಂಭಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಬಡಾವಣೆಯನ್ನು ಈ ಸಂದರ್ಭದಲ್ಲಿ ನಾಶ ಪಡಿಸಲಾಯಿತು.‘ಅರ್ಕಾವತಿ ನದಿ ಪಾತ್ರವನ್ನು ಒತ್ತುವರಿ ಮಾಡಿಕೊಂಡು ಈ ಬಡಾವಣೆ ನಿರ್ಮಾಣವಾಗಿದೆ. ನದಿ ಪಾತ್ರದ 45 ಮೀಟರ್‌ ಆಜು– ಬಾಜಿನ ಪ್ರದೇಶವನ್ನು ವಾಸ ಯೋಗ್ಯ ಪ್ರದೇಶ ಅಲ್ಲ ಎಂದು ಸರ್ಕಾರ ಘೋಷಿಸಿದೆ. ಹೀಗಿರುವಾಗ ಇಲ್ಲಿ ಬಡಾವಣೆ ನಿರ್ಮಿಸಲು ಬರುವುದಿಲ್ಲ. ಇಂತಹ ಅರ್ಜಿಗಳು ಪ್ರಾಧಿಕಾರಕ್ಕೆ ಬಂದರೂ ಅನುಮತಿ ದೊರೆಯುವುದಿಲ್ಲ. ಆದ್ದರಿಂದ ಅಕ್ರಮ ಬಡಾವಣೆಗಳ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು’ ಎಂದು ಪ್ರಾಧಿಕಾರದ ಆಯುಕ್ತ ಪದ್ಮನಾಭ್‌ ತಿಳಿಸಿದರು.27 ಅನಧಿಕೃತ ಕಟ್ಟಡ:  ರಾಮನಗರದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವ 27 ಕಟ್ಟಡಗಳನ್ನು ಗುರುತಿಸಲಾಗಿದ್ದು, ಕಟ್ಟಡ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಕೂಡಲೇ ಎಚ್ಚೆದ್ದುಕೊಂಡು, ನಿಯಮ ಪ್ರಕಾರ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಅವುಗಳ ತೆರೆವಿಗೆ ನಗರಸಭೆಯೇ ಮುಂದಾಗುತ್ತದೆ. ಅಲ್ಲದೆ ಅಂತಹ ಮಾಲೀಕರ ವಿರುದ್ಧ ಕ್ರಿಮಿನಲ್‌ ಪರಕಣ ದಾಖಲಿಸಬೇಕಾಗುತ್ತದೆ ಎಂದು ನಗರಸಭೆ ಆಯುಕ್ತ ಯಶವಂತ್‌ ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)