ಭಾನುವಾರ, ನವೆಂಬರ್ 17, 2019
21 °C

ಮಾಲೂರಿನಲ್ಲಿ `ವರ'ನಿಲ್ಲದ ಬಿಜೆಪಿ

Published:
Updated:

ಕೋಲಾರ: ಮದುವೆ ಒಲ್ಲದ ಗಂಡು ಅಥವಾ ಹೆಣ್ಣು ತಾಳಿ ಕಟ್ಟುವ ವೇಳೆ ಬರುವವರೆಗೂ ಸುಮ್ಮನಿದ್ದು, ಮದುವೆ ಮಂಟಪದಲ್ಲಿ ಅತಿಥಿ, ಅಭ್ಯಾಗತರ ಮುಂದೆ ಮದುವೆ ಒಲ್ಲೆ ಎನ್ನುವುದು, ದಿಢೀರನೆ ನಾಪತ್ತೆಯಾಗುವುದು ಸಾಮಾನ್ಯ ಸಂಗತಿ. ಚುನಾವಣೆಯಲ್ಲೂ ಅಭ್ಯರ್ಥಿ ಎನ್ನಿಸಿಕೊಂಡವರು ಹೀಗೇ ಮಾಡಿದರೆ ?`ಆದರೆ' ಎನ್ನುವ ಊಹೆಗೆ ಈಗ ಅವಕಾಶವಿಲ್ಲ. ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವೆಂಕಟೇಶಗೌಡ ಎಂಬುವವರು ಕೊನೆ ಘಳಿಗೆವರೆಗೂ ಸುಮ್ಮನಿದ್ದು, ನಂತರ ನಾಮಪತ್ರ ಸಲ್ಲಿಸದೇ ಹೊರಬಂದಿದ್ದಾರೆ! ಈ ಕ್ಷೇತ್ರದಲ್ಲಿ ಈಗ ಬಿಜೆಪಿ ಸ್ಥಿತಿ ವರನಿಲ್ಲದ ಮದುವೆ ಮಂಟಪದಂತಾಗಿದೆ.ಈ ಮಂಟಪದ ಸದ್ಯದ ಅತಂತ್ರ ಸ್ಥಿತಿಗೆ ಟಿಕೆಟ್ ವಂಚಿತ ಬಿಜೆಪಿ ಶಾಸಕ ಕೃಷ್ಣಯ್ಯಶೆಟ್ಟರೂ ಸೇರಿದಂತೆ ಹಲವು ಪ್ರಮುಖರ ಸೂತ್ರದಾಟವೂ ಇದೆ ಎಂಬ ಆರೋಪವೂ ಕೇಳಿಬರುತ್ತಿದೆ.ಶೆಟ್ಟರಿಗೆ ಕ್ಷೇತ್ರದಲ್ಲಿ ಟಿಕೆಟ್ ನೀಡದಿರುವುದರಿಂದ, ಇಲ್ಲಿ ಬಿಜೆಪಿ ಅಭ್ಯರ್ಥಿಯೇ ಇಲ್ಲದಂತೆ ಮಾಡುವ ಹುನ್ನಾರ ಪೂರ್ವನಿಯೋಜಿತವಾಗಿತ್ತು ಎನ್ನಲಾಗುತ್ತಿದೆ.ಏನಾಯಿತು: ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಬುಧವಾರ ಬಿಜೆಪಿಯ ಘೋಷಿತ ಅಭ್ಯರ್ಥಿ ವೆಂಕಟೇಶಗೌಡ ನಾಮಪತ್ರ ಸಲ್ಲಿಸುತ್ತಾರೆ ಎಂದೇ ಬಹುತೇಕರು ನಿರೀಕ್ಷಿಸಿದ್ದರು. ನಂಬಿಯೂ ಇದ್ದರು.ಮಧ್ಯಾಹ್ನ ಮೂರು ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಾಗಿದ್ದು ನಿಯಮ. ಆದರೆ ಚುನಾವಣಾಧಿಕಾರಿಗಳ ಕಚೇರಿಯ ಬಳಿಯೇ ಕಾಣಿಸಿಕೊಂಡಿದ್ದ ವೆಂಕಟೇಶಗೌಡ ನಾಮಪತ್ರ ಸಲ್ಲಿಸದೆ ಎಲ್ಲರನ್ನೂ ಕಾತರದಲ್ಲಿಟ್ಟಿದ್ದರು. ನಾಮಪತ್ರ ಸಲ್ಲಿಸುವ ಅವಧಿ ಮುಗಿಯಲು 15 ನಿಮಿಷ ಉಳಿದಿದೆ ಎನ್ನುವ ಹೊತ್ತಿಗೆ, ಮಧ್ಯಾಹ್ನ 2.45ರ ವೇಳೆಗೆ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ, ಅವರ ಪತ್ನಿ ಸುನೀತಾ ಅವರೊಡನೆ ಗೌಡರು ಚುನಾವಣಾಧಿಕಾರಿ ಕೊಠಡಿಗೆ ತೆರಳಿದರು. ಆ ಮೂಲಕ ವೆಂಕಟೇಶಗೌಡರು ನಾಮಪತ್ರ ಸಲ್ಲಿಸಿದರು ಎಂದೇ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು, ಬೆಂಬಲಿಗರು ನಂಬಿದ್ದರು. ನಂತರ ಮೂವರೂ ಸ್ಥಳದಿಂದ ನಿರ್ಗಮಿಸಿದ್ದರು.ಸಂಜೆಯಾದರೂ ನಾಮಪತ್ರ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗದ ಕಾರಣ, ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ ಎಂಬ ಸಂಗತಿ ಯಾರಿಗೂ ಗೊತ್ತಾಗಲಿಲ್ಲ. ಆದರೆ ಅನುಮಾನಗೊಂಡ ಪತ್ರಕರ್ತರು, ಕೆಲವು ಕಾರ್ಯಕರ್ತರು ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿದ ಬಳಿಕ ಅಸಲಿ ಸಂಗತಿ ಬೆಳಕಿಗೆ ಬಂತು. ಮದುವೆ ಮಂಟಪವನ್ನು ಹತ್ತಿದ ವರನನ್ನು ಒಮ್ಮೆ ಮನೆಯೊಳಗಿದ್ದವರೇ ಸದ್ದಿಲ್ಲದೆ ಹೊರಗೆ ಕರೆತಂದಿದ್ದರು!ಕೈವಾಡ: ಈ ದಿಢೀರ್ ಬೆಳವಣಿಗೆಯಲ್ಲಿ ಕೃಷ್ಣಯ್ಯಶೆಟ್ಟರ ಕೈವಾಡವಿದೆ. ಪಕ್ಷದಲ್ಲಿ ತಮಗಿಲ್ಲದ ಅವಕಾಶ ಬೇರೆಯವರಿಗೂ ಸಿಗುವುದು ಬೇಡ ಎಂಬ ಅವರ ನಿಲುವಿಗೆ ರಾಜ್ಯಮಟ್ಟದ ಕೆಲವು ಮುಖಂಡರೂ ಬೆಂಬಲ ನೀಡಿದ್ದರು. ಅದರ ಪರಿಣಾಮ ಇಂದಿನ ಸನ್ನಿವೇಶ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಈ ನಡುವೆಯೇ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕ್ಷೇತ್ರದಲ್ಲಿ ಮುಖವಿಲ್ಲದ ಸ್ಥಿತಿಯನ್ನು ತಲುಪಿದೆ.

ಮಾಲೂರು: 18 ನಾಮಪತ್ರ ಸಲ್ಲಿಕೆ

ಮಾಲೂರು: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಒಟ್ಟು 18 ಮಂದಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌ನಿಂದ ಬಿಳಿಶಿವಾಲೆ ಚೆನ್ನಕೇಶವ, ಅಂಬೇಡ್ಕರ್ ಜನತಾ ಪಕ್ಷದಿಂದ ಸಿ.ಎನ್.ಸಂಜೀವಯ್ಯ, ಕೆಜೆಪಿಯಿಂದ ಕೆ.ನಾರಾಯಣಸ್ವಾಮಿ, ಆರ್‌ಪಿಐನಿಂದ ಎಂ.ಗೋವಿಂದಪ್ಪ, ಬಿಎಸ್‌ಆರ್‌ನಿಂದ ಜಯಲಕ್ಷ್ಮಿ ಜಯರಾಮಯ್ಯ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಚಿಕ್ಕತಿರುಪತಿ ನಾಗೇಶ್, ಪಕ್ಷೇತರರಾಗಿ ಬಿ.ವಿ.ನಾಗೇಶ್, ಎಸ್.ಆರ್.ಕೃಷ್ಣಯ್ಯಶೆಟ್ಟಿ, ಮಂಜುನಾಥಗೌಡ, ಸತೀಶ್ ಆರಾಧ್ಯ, ಸುನಿತಾ ಕೆ.ಶೆಟ್ಟಿ, ಕೆ.ಎಂ.ಮಂಜುನಾಥ್, ವಿ.ನಾಗೇಶ್, ಮಂಜುನಾಥ್, ಟಿ.ಮುನಿರಾಜು, ಎಸ್.ಎನ್.ಕೃಷ್ಣಯ್ಯಶೆಟ್ಟಿ, ಸಿ.ಕೆ.ಮಂಜುನಾಥ್, ಎಸ್.ಎನ್.ಕೃಷ್ಣಯ್ಯಶೆಟ್ಟಿ ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)