ಮಾಲ್ಡೀವ್ಸ್‌ಗೆ ಸಹಕಾರ: ಸಿಂಗ್ ಭರವಸೆ

7

ಮಾಲ್ಡೀವ್ಸ್‌ಗೆ ಸಹಕಾರ: ಸಿಂಗ್ ಭರವಸೆ

Published:
Updated:

ಮಾಲೆ (ಪಿಟಿಐ): ಮಾಲ್ಡೀವ್ಸ್ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು  ಭಾರತ ಹೇಳಿದೆ. ಆದರೆ ಆ ರಾಷ್ಟ್ರದ ಜೊತೆ ಇರುವುದಾಗಿ ಸ್ಪಷ್ಟಪಡಿಸಿದೆ.ಪ್ರಧಾನಿ ಮನಮೋಹನ್ ಸಿಂಗ್ ಅವರ ವಿಶೇಷ ಪ್ರತಿನಿಧಿಯಾಗಿ ಇಲ್ಲಿಗೆ ಭೇಟಿ ನೀಡಿದ್ದ ವಿದೇಶಾಂಗ ವ್ಯವಹಾರ ಕಾರ್ಯದರ್ಶಿ (ಪಶ್ಚಿಮ) ಎಂ.ಗಣಪತಿ ಅವರು ನೂತನ ಅಧ್ಯಕ್ಷ ವಾಹಿದ್ ಹಸನ್, ಪದಚ್ಯುತ ಅಧ್ಯಕ್ಷ ನಶೀದ್ ಸೇರಿದಂತೆ ಹಲವು ಮುಖಂಡರನ್ನು ಭೇಟಿಯಾಗಿ ಶನಿವಾರ ನವದೆಹಲಿಗೆ ತೆರಳುವ ಮುನ್ನ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.ಆದರೆ, ಮಾಲ್ಡೀವ್ಸ್ ವಿಚಾರದಲ್ಲಿನ ಭಾರತದ ಪ್ರತಿಕ್ರಿಯೆಗೆ ನಶೀದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ವಾಸ್ತವ ಸ್ಥಿತಿ ಅರಿಯದೆ ಭಾರತ ವರ್ತಿಸಿದೆ ಎಂದು, ಹೊಸ ಅಧ್ಯಕ್ಷರಿಗೆ ಬೆಂಬಲ ಸೂಚಿಸಿರುವ ಪ್ರಧಾನಿ ಕ್ರಮವನ್ನು ಟೀಕಿಸಿದ್ದಾರೆ.ತಮ್ಮ ಭೇಟಿ ಅತ್ಯಂತ ಸ್ನೇಹಪರವಾಗಿತ್ತು ಎಂದಿರುವ ಗಣಪತಿ, ದೇಶದಲ್ಲಿ ಉದ್ಭವವಾಗಿರುವ ಸಂಕೀರ್ಣ ಪರಿಸ್ಥಿತಿಯನ್ನು ಉಭಯ ನಾಯಕರೂ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳುವರೆಂಬ ವಿಶ್ವಾಸ ಭಾರತಕ್ಕಿದೆ. ಇಲ್ಲಿ ಆದಷ್ಟು ಶೀಘ್ರ ಐಕ್ಯಮತದ ಸರ್ಕಾರ ರಚನೆಯಾಗಬೇಕೆಂಬುದು ಪ್ರಧಾನಿ ಸಿಂಗ್ ಅವರ ಆಶಯ ಸಹ ಆಗಿದೆ ಎಂದು ಹೇಳಿದರು.ನಶೀದ್ ಅವರು ಆಗ್ರಹಿಸಿರುವಂತೆ ಶೀಘ್ರ ಚುನಾವಣೆಯನ್ನು ಭಾರತ ಬೆಂಬಲಿಸುವುದೇ ಎಂಬ ಪ್ರಶ್ನೆಗೆ, ಈ ಬಗ್ಗೆ ಇಲ್ಲಿನ ರಾಜಕೀಯ ನಾಯಕರು ಕೈಗೊಳ್ಳುವ ನಿರ್ಧಾರವನ್ನು ನಾವು ಅನುಮೋದಿಸುತ್ತೇವೆ ಎಂದರು.ನಶೀದ್ ಅವರನ್ನು ಬೆಂಬಲಿಸಲು ಭಾರತ ಹಿಂಜರಿಯಿತೇ ಎಂಬ ಪ್ರಶ್ನೆಗೆ, ಹಾಗೆಂದು ಭಾವಿಸಲು ಇದೇನೂ ಕ್ರಿಕೆಟ್ ಮ್ಯಾಚ್ ಅಲ್ಲ. ಇದೊಂದು ಗಂಭೀರವಾದ ವಿಷಯ. ನಶೀದ್, ಅವರ ತಂಡದೊಟ್ಟಿಗೆ ನಾವು ಸದಾ ಇರುತ್ತೇವೆ. ಹೈ ಕಮಿಷನರ್ ಧ್ಯಾನೇಶ್ವರ್ ಮುಳೆ ಎಲ್ಲರೊಂದಿಗೂ ಸಂಪರ್ಕದಲ್ಲಿದ್ದಾರೆ. ನಾನು ಮಾತನಾಡಿದ ಎಲ್ಲ ಮುಖಂಡರೂ ಭಾರತದ ಬೆಂಬಲಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ನೂತನ ಗೃಹ ಸಚಿವ ಮೊಹಮ್ಮದ್ ಜಮೀಲ್ ಹಾಗೂ ಹಲವು ರಾಜಕೀಯ ನಾಯಕರನ್ನು  ಗಣಪತಿ ಭೇಟಿ ಮಾಡಿದ್ದರು.ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ದೇಶದ ಮೊದಲ ನಾಯಕ ನಶೀದ್ ಅವರ ವಿರುದ್ಧ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಹಸನ್ ಭಾರತದ ಪ್ರತಿನಿಧಿಗೆ ಭರವಸೆ ನೀಡಿದರು ಎನ್ನಲಾಗಿದೆ.ನೀರವ ಮೌನ: ಕಳೆದ ನಾಲ್ಕು ದಿನಗಳಿಂದ ಹಿಂಸಾಚಾರ, ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ನಗರದ ಬೀದಿಗಳಲ್ಲಿ ಈಗ ನೀರವ ಮೌನ ನೆಲೆಸಿದೆ. ಮುಚ್ಚಿದ್ದ ಅಂಗಡಿ ಮುಂಗಟ್ಟುಗಳನ್ನು ಶನಿವಾರ ತೆರೆಯಲಾಗಿದ್ದು, ಸಂಚಾರ ಎಂದಿನಂತಿತ್ತು. ವಿದೇಶಿಯರು ಮತ್ತು ಪ್ರವಾಸಿಗರನ್ನು ಹಿಂಸಾಚಾರ ಗುರಿಯಾಗಿಸಿಕೊಂಡಿಲ್ಲ. ಹೀಗಾಗಿ ಇಲ್ಲಿನ ಸ್ಥಿತಿಯಿಂದ ಪ್ರವಾಸಿಗರಿಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸುರಕ್ಷಿತ: ದ್ವೀಪ ರಾಷ್ಟ್ರದಲ್ಲಿ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಮೂಲಗಳು ತಿಳಿಸಿವೆ.ಒಟ್ಟು ಮೂರು ಲಕ್ಷ ಜನಸಂಖ್ಯೆ ಹೊಂದಿರುವ ದೇಶದಲ್ಲಿ 29,000 ಭಾರತೀಯರಿದ್ದಾರೆ. ಇವರಲ್ಲಿ 22,000 ಮಂದಿ ರಾಜಧಾನಿ ಮಾಲೆಯಲ್ಲೇ  ನೆಲೆಸಿದ್ದಾರೆ.

 

ಬದಲಾದ ಅಮೆರಿಕದ ನಿಲುವು...

ಈ ಮೊದಲು ಮಾಲ್ಡೀವ್ಸ್‌ನ ಹೊಸ ಸರ್ಕಾರವನ್ನು ಒಪ್ಪಿಕೊಂಡಿದ್ದ ಅಮೆರಿಕ, ಈಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಅಧಿಕಾರ ಬದಲಾವಣೆಯಿಂದ ಮಾಲ್ಡೀವ್ಸ್‌ನಲ್ಲಿ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದೆ.ಇದರ ಬೆನ್ನಲ್ಲೇ ಇಲ್ಲಿಗೆ ಭೇಟಿ ನೀಡಿರುವ ದಕ್ಷಿಣ ಏಷ್ಯಾಗೆ ಸಂಬಂಧಿಸಿದ ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ರಾಬರ್ಟ್ ಬ್ಲೇಕ್, ವಾಹಿದ್ ಹಾಗೂ ನಶೀದ್ ಇಬ್ಬರ ಅಹವಾಲನ್ನೂ ಪ್ರತ್ಯೇಕವಾಗಿ ಆಲಿಸಿದರು.

ಭಾರತೀಯ ಹೈ ಕಮಿಷನ್‌ಗೆ ಸಮೀಪದ ಹೋಟೆಲ್‌ನಲ್ಲಿ ಬ್ಲೇಕ್- ನಶೀದ್ ಮಾತುಕತೆ ನಡೆಸಿದ ವೇಳೆ, ಮಹಿಳೆಯರೂ ಸೇರಿದಂತೆ ನಶೀದ್ ಅವರ ನೂರಾರು ಬೆಂಬಲಿಗರು ಹೊರಗೆ ನಿಂತು ನಾಯಕನ ಪರ ಘೋಷಣೆಗಳನ್ನು ಕೂಗಿದರು. ಬಳಿಕ ಹಸನ್ ಅವರನ್ನೂ ಬ್ಲೇಕ್ ಭೇಟಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry