ಮಾಲ್ಡೀವ್ಸ್‌ನಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ

7

ಮಾಲ್ಡೀವ್ಸ್‌ನಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ

Published:
Updated:

ಮಾಲೆ (ಪಿಟಿಐ): ಹೊಸ ಸರ್ಕಾರವು ತಮ್ಮ ವಿರುದ್ಧ ಭಯೋತ್ಪಾದನೆ ಆಪಾದನೆ ಹೊರಿಸುವ ಬೆದರಿಕೆ ಹಾಕಿದೆ ಎಂದು ಪದಚ್ಯುತ ಅಧ್ಯಕ್ಷ ಮೊಹಮದ್ ನಶೀದ್ ಅವರ ಪಕ್ಷದ ಸಂಸದರು ಆಪಾದಿಸಿದ್ದಾರೆ. ಈ ಮಧ್ಯೆ ಪದಚ್ಯುತ ಅಧ್ಯಕ್ಷರ ನೂರಾರು ಬೆಂಬಲಿಗರು ಸಂಸತ್ತಿಗೆ ಮುತ್ತಿಗೆ ಹಾಕಿರುವುದರಿಂದ ಮಾಲ್ಡೀವ್ಸ್‌ನಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದೆ.ತಮ್ಮ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಹೊಸ ಸರ್ಕಾರವು ಬೆದರಿಕೆ ತಂತ್ರವನ್ನು ಬಳಸುತ್ತಿದೆ ಎಂದು ಮಾಲ್ಡೀವ್ಸ್ ಡೆಮಾಕ್ರೆಟಿಕ್ ಪಕ್ಷದ ಸಂಸದರು ಆಪಾದಿಸಿದ್ದಾರೆ.ತಮ್ಮ ಪಕ್ಷದ ಸಂಸದರ ವಿರುದ್ಧ ಭಯೋತ್ಪಾದಕ ಚಟುವಟಿಕೆ ಪ್ರಕರಣಗಳನ್ನು ದಾಖಲಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಡೆಮಾಕ್ರೆಟಿಕ್ ಪಕ್ಷದ ಸಂಸದೆ ಮತ್ತು ಪಕ್ಷದ ಮಾಜಿ ಅಧ್ಯಕ್ಷೆ ಮಾರಿಯಾ ದಿದಿ ಅವರು ಸಂಸತ್ ಭವನದ ಹೊರಗೆ ಪತ್ರಕರ್ತರಿಗೆ ತಿಳಿಸಿದ್ದಾರೆ.ಭಯೋತ್ಪಾದಕ ಚಟುವಟಿಕೆ ಕುರಿತಂತೆ ಪ್ರಕರಣ ದಾಖಲಿಸಿದರೆ 12 ವರ್ಷಗಳ ಕಾಲ ತಮ್ಮ ಪಕ್ಷದವರನ್ನು ಜೈಲಿನಲ್ಲಿ ಇಟ್ಟು ನೆಮ್ಮದಿಯಿಂದ ಆಡಳಿತ ನಡೆಸುವುದು ನೂತನ ಸರ್ಕಾರದ ಹುನ್ನಾರ ಎಂದು ಆರೋಪಿಸಿದ್ದಾರೆ.`ನಮ್ಮ ಪಕ್ಷದ ಅನೇಕ ಸಂಸದರನ್ನು ಬಂಧಿಸಿ ಅವರಿಗೆ ದೈಹಿಕ ಹಿಂಸೆ ನೀಡಲಾಗಿದೆ~ ಎಂದೂ ಅವರು ಆಪಾದಿಸಿದ್ದಾರೆ.ಪಕ್ಷದ ಅಂತರರಾಷ್ಟ್ರೀಯ ವಿಭಾಗದ ವಕ್ತಾರ ಹಮಿದ್ ಅಬ್ದುಲ್ ಗಫೂರ್ ಸಹ ಇದೇ ರೀತಿ ಆಪಾದನೆ ಮಾಡಿದ್ದಾರೆ.`ಸಂಸತ್ತಿನ ಹೊರಗಿದ್ದರೆ ನಮಗೆ ರಕ್ಷಣೆ ಇಲ್ಲ. ಭಯೋತ್ಪಾದನೆ ಪ್ರಕರಣ ಮತ್ತು ಬಂಧನದ ಭೀತಿ ನಮ್ಮನ್ನು ಕಾಡುತ್ತಿದೆ~ ಎಂದು ತಿಳಿಸಿದ್ದಾರೆ.ಆದರೆ ಸರ್ಕಾರದ ಮೂಲಗಳು ಈ ಆಪಾದನೆಯನ್ನು ತಳ್ಳಿಹಾಕಿದ್ದು, ಪರಿಸ್ಥತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿವೆ.ನಶೀದ್ ಅವರು ಅಧ್ಯಕ್ಷ ಸ್ಥಾನಕ್ಕೆ ಕಳೆದ ವಾರ ರಾಜೀನಾಮೆ ನೀಡಿದ ನಂತರ ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರ ನೂರಾರು ಬೆಂಬಲಿಗರು ಸಂಸತ್ ಕಟ್ಟಡಕ್ಕೆ ತೆರಳುವ ಮಾರ್ಗವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು ಮತ್ತು ನೂತನ ಅಧ್ಯಕ್ಷ  ಮೊಹಮದ್ ವಹೀದ್ ಹಸನ್ ವಿರುದ್ಧ ಘೋಷಣೆಗಳನ್ನು ಕೂಗಿದರು.ಪೊಲೀಸರು ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದ್ದಾರೆ. ಸಂಸತ್ ಭವನದ ಸುತ್ತ ಬಿಗಿ ಪೊಲೀಸ ಬಂದೋಬಸ್ತ್ ಮಾಡಲಾಗಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆ ವಿದೇಶಿ ಕರೆನ್ಸಿ ಮತ್ತು ನೀರಿನ ಬಾಟಲಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನಿಖೆಗೆ ಸಿದ್ಧ: ಹೊಸ ಸರ್ಕಾರ ಘೋಷಣೆ

ರಾಷ್ಟ್ರದಲ್ಲಿ ಅಧಿಕಾರ ವರ್ಗಾವಣೆ ಕುರಿತಂತೆ ಯಾವುದೇ ತನಿಖೆಗೆ ಸಿದ್ಧವಿರುವುದಾಗಿ ಕ್ಷಿಪ್ರಕ್ರಾಂತಿಯ ಆರೋಪ ಎದುರಿಸುತ್ತಿರುವ ಮಾಲ್ಡೀವ್ಸ್‌ನ ಹೊಸ ಸರ್ಕಾರ ಸೋಮವಾರ ಹೇಳಿದೆ.ಮೆಚ್ಚುಗೆ: ಮಾಲ್ಡೀವ್ಸ್ ರಾಜಕೀಯ ಬೆಳವಣಿಗೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಭಾರತವು ಪದಚ್ಯುತ ಅಧ್ಯಕ್ಷರ ಅಪಪ್ರಚಾರಕ್ಕೆ ಕಿವಿಗೊಡದೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ನೂತನ ಸರ್ಕಾರವು ಮೆಚ್ಚುಗೆ ವ್ಯಕ್ತಪಡಿಸಿದೆ.ಸರ್ಕಾರ ಬದಲಾವಣೆಯಿಂದ ಮಾಲ್ಡೀವ್ಸ್‌ನಲ್ಲಿ ಭಾರತದ ಹೂಡಿಕೆದಾರರಿಗೆ ತೊಂದರೆಯಾಗುವುದಿಲ್ಲ ಎಂಬ ಭರವಸೆಯನ್ನು ಅಧ್ಯಕ್ಷರು ನೀಡಿದ್ದಾರೆಂದು ಅವರ ಪತ್ರಿಕಾ ಕಾರ್ಯ ದರ್ಶಿ ಮಸೂದ್ ಇಮಾದ್ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry