ಸೋಮವಾರ, ಮೇ 17, 2021
26 °C

ಮಾಲ್ ಹಾದಿಯತ್ತ...

-ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಮಾಲ್ ಹಾದಿಯತ್ತ...

ಗಡಿಬಿಡಿಯಿಂದ ನಡೆದುಕೊಂಡು ಬಂದ ಜೋಡಿಗಳು ಟಿಕೆಟ್ ಕೌಂಟರ್‌ನತ್ತ ನೋಡುತ್ತಿದ್ದವು. ತಾವೇ ತಡವಾಗಿ ಬಂದಿದ್ದೇವೆ ಎಂದು ಅಂದುಕೊಂಡ್ದ್ದಿದ ಅವರಲ್ಲಿ ಕೆಲವರು ಪದೇಪದೇ ಕೈ ಗಡಿಯಾರ ನೋಡುತ್ತಿದ್ದರು. `ಯಾಕೆ ಸಿನಿಮಾ ಶುರುವಾಗಿಲ್ವಾ' ಎಂದು ಆಶ್ಚರ್ಯದಿಂದ ನಿಂತಿದ್ದ ಅವರಿಗೆ ಅಲ್ಲಿದ್ದ ವಾಚ್‌ಮನ್ `ಚಿತ್ರಮಂದಿರ ಮುಚ್ಚಲಾಗಿದೆ' ಎಂಬ ಬೋರ್ಡ್ ತೋರಿಸಿದರು. ಎರಡೂ ಜೋಡಿಗಳೂ ಮುಖ ಸಪ್ಪೆಮಾಡಿಕೊಂಡು ಹೋದವು.ಮೊನ್ನೆಯಷ್ಟೇ ಇದ್ದ ಸಾಗರ್ ಚಿತ್ರಮಂದಿರ ಕಾಲದ ಹೊಡೆತಕ್ಕೆ ಸಿಕ್ಕಿ ಈಗ ಇತಿಹಾಸದ ಪುಟಗಳಲ್ಲಿ ಮುಚ್ಚಿಹೋಗಿದೆ.

ಗುಜರಾತ್‌ನಿಂದ 1950ರಲ್ಲಿ ಬೆಂಗಳೂರಿಗೆ ಬಂದ ರಾವೋಜಿ ಬಾಯಿ ಪಟೇಲ್ ಅವರಿಗೆ ಚಿತ್ರಮಂದಿರದ ಕುರಿತು ಒಲವು. ಗುಬ್ಬಿವೀರಣ್ಣ ನಾಟಕ ಕಂಪನಿ ಇದ್ದ ಸ್ಥಳ ಖರೀದಿಸಿ ಚಿತ್ರಮಂದಿರ ಕಟ್ಟುವ ತಮ್ಮ ಕನಸನ್ನು ನನಸಾಗಿಸಿಕೊಂಡರು. `ಸಾಗರ್' ಎಂದು ಹೆಸರಿಟ್ಟರು.1969ರಲ್ಲಿ ಹರ್ಷದ್ ಆರ್. ಪಟೇಲ್ ಅವರು ಸಾಗರ್ ಚಿತ್ರಮಂದಿರವನ್ನು ನವೀಕರಣಗೊಳಿಸಿದರು. ಆಗ ಸುಮಾರು ರೂ50 ಲಕ್ಷ ಹಣವನ್ನು ಈ ಚಿತ್ರಮಂದಿರಕ್ಕೆ ಅವರು ಖರ್ಚು ಮಾಡಿದರು. ಅವರ ಮಕ್ಕಳು ನೀಲ್‌ಕೇಶ್ ಪಟೇಲ್, ರಾಜೇಶ್ ಪಟೇಲ್, ಅಜಯ್ ಪಟೇಲ್. ನೀಲ್‌ಕೇಶ್ ಮತ್ತು ರಾಜೀವ್ ಪಟೇಲ್ ಮರಣಾ ನಂತರ ಅಜಯ್ ಪಟೇಲ್ ಹೆಗಲಿಗೆ ಚಿತ್ರಮಂದಿರದ ಜವಾಬ್ದಾರಿ ಬಿತ್ತು. ಈಗ ಅಜಯ್ ಮತ್ತು ಅವರ ಮಗ ಹರ್ಷ ಪಟೇಲ್ ಹಾಗೂ ರಾಜೇಶ್ ಪಟೇಲ್ ಅವರ ಮಗ ಸಾಹಿಲ್ ಪಟೇಲ್ ಆಡಳಿತ ನಡೆಸುತ್ತಿದ್ದಾರೆ.

ಮೊದಲಿನಿಂದಲೂ ಹಿಂದಿ ಸಿನಿಮಾಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದ ಈ ಚಿತ್ರಮಂದಿರದಲ್ಲಿ ಸೂಪರ್ ಹಿಟ್ ಆದ ಚಿತ್ರಗಳ ಪಟ್ಟಿ ಉದ್ದವಿದೆ. `ಜಂಗ್ಲಿ', `ದಿಲ್ ತೋ ಪಾಗಲ್ ಹೈ', `ಫಿರ್ ವಹಿ ದಿಲ್ ಲಾಯಾ ಹೂಂ', `ಏಪ್ರಿಲ್ ಫೂಲ್', `ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಚಿತ್ರಗಳು ಇಲ್ಲಿ ಸುಮಾರು ಒಂದು ವರ್ಷದಷ್ಟು ಕಾಲ ಪ್ರದರ್ಶಿತವಾಗಿದ್ದವು.1970ರಲ್ಲಿ ರಾಜ್‌ಕುಮಾರ್ ನಟಿಸಿದ `ಶ್ರೀಕೃಷ್ಣದೇವರಾಯ' ಚಿತ್ರ ಮೊದಲು ತೆರೆ ಕಂಡಿದ್ದು ಇಲ್ಲಿಯೇ. ನಿಧಾನವಾಗಿ ಸಾಗರ್ ಚಿತ್ರಮಂದಿರ ಕನ್ನಡ ಸಿನಿಮಾಕ್ಕೆ ಆದ್ಯತೆ ನೀಡಲು ಶುರುಮಾಡಿತು. ರಾಜ್‌ಕುಮಾರ್ ತ್ರಿಪಾತ್ರದಲ್ಲಿ ಅಭಿನಯಿಸಿದ `ಶಂಕರ್ ಗುರು' ಇಲ್ಲಿ ಒಂದು ವರ್ಷ ಪ್ರದರ್ಶನ ಕಂಡಿತ್ತು.`ತಮ್ಮತನವನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿರಲಿಲ್ಲ. ಜತೆಗೆ ಕನ್ನಡ ಸಿನಿಮಾಗಳನ್ನು ನೋಡುವವರ ಸಂಖ್ಯೆ ಹೆಚ್ಚಿತ್ತು. ಜನ ಒಂದು ಒಳ್ಳೆಯ ಮನರಂಜನೆಯ ತಾಣ ಹುಡುಕುತ್ತಿದ್ದರು. ಹಿಂದಿ ಸಿನಿಮಾಗಿಂತಲೂ ಕನ್ನಡ ಸಿನಿಮಾ ಹಾಕಿದಾಗ ಜನ ಹೆಚ್ಚು ಬಂದರು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಾವು ಕನ್ನಡ ಸಿನಿಮಾ ಹಾಕತೊಡಗಿದೆವು. ಜನರ ಬೆಂಬಲ ಸಿಕ್ಕಿತು' ಎನ್ನುವುದು ಅಜಯ್ ಪಟೇಲ್ ಅನುಭವದ ಮಾತು.ತಮ್ಮ ತಂದೆಯ ಕಾಲದ ಈ ಚಿತ್ರಮಂದಿರ ಮುಚ್ಚಲು ಅಜಯ್ ಪಟೇಲ್ ಅವರಿಗೆ ಮನಸ್ಸಿಲ್ಲ. ಆದರೆ ಈಗ ಏಕ ಪರದೆಯ ಕಾಲವಲ್ಲ ಎಂಬುದು ಅವರು ಕಂಡುಕೊಂಡ ಸತ್ಯ.ಸಾಗರ್ ಚಿತ್ರಮಂದಿರದಲ್ಲಿ 1,000 ಆಸನಗಳಿವೆ. ಚಿತ್ರ ಬಿಡುಗಡೆಯಾದಾಗ ಮೊದಲ ವಾರ ಒಂದಿಷ್ಟು ಜನ ಬರುತ್ತಾರೆ. ನಂತರ 300 ಆಸನಗಳಷ್ಟೇ ತುಂಬುತ್ತವೆ. ಉಳಿದ 700 ಆಸನಗಳು ಖಾಲಿ ಖಾಲಿ. ಮಲ್ಟಿಪ್ಲೆಕ್ಸ್ ಮಾಡಿದರೆ ಮೂರು ಸ್ಕ್ರೀನ್ ಮಾಡಬಹುದು ಎಂಬ ಯೋಜನೆ ಇದೆ. ಇದರಿಂದ ತಮಗೂ ನಿರ್ಮಾಪಕರಿಗೂ ತೊಂದರೆ ಇಲ್ಲ ಎಂಬುದು ಅವರ ಲೆಕ್ಕಾಚಾರ.ಮಲ್ಟಿಪ್ಲೆಕ್ಸ್ ನಿರ್ಮಾಣವಾದ ನಂತರವೂ ಟಿಕೆಟ್ ಬೆಲೆಯಲ್ಲಿ ಏರಿಕೆ ಮಾಡದಿರಲು ನಿರ್ಧರಿಸಿರುವ ಅಜಯ್, ಚಿತ್ರಮಂದಿರದ ಹೆಸರನ್ನೂ ಬದಲಿಸುವುದಿಲ್ಲವಂತೆ. ಟಿಕೆಟ್ ಬೆಲೆ ರೂ 70 ಆಗಿರುತ್ತದೆ. ರೂ 10, ರೂ 15ಕ್ಕೆಲ್ಲಾ ಪಾಪ್‌ಕಾರ್ನ್ ಸಿಗುತ್ತದೆ ಎಂಬ ಭರವಸೆ ಅವರದು.

ಸಾಯಿರಾ ಬಾನು, ಸಂಜಯ್ ಖಾನ್, ರಾಜ್‌ಕುಮಾರ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಕ್ಷಣಗಳ ನೆನಪಿನ ಬುತ್ತಿಯ ಜೊತೆಗೆ ಹಲವು ಪ್ರಶಸ್ತಿಗಳು ಸಂದ ಹೆಮ್ಮೆಯೂ ಅಜಯ್ ಅವರಿಗಿದೆ.ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಅವಕಾ

ಶಶಶಾಂಕ್, ನಿರ್ದೇಶಕ


ಸಾಗರ್ ಚಿತ್ರಮಂದಿರ ಮುಚ್ಚುತ್ತಿದ್ದಾರೆ ಎಂಬ ವಿಷಯ ಕೇಳಿ ತುಂಬಾ ಬೇಸರವಾಗುತ್ತಿದೆ. ಕೆಂಪೇಗೌಡ ರಸ್ತೆಯಲ್ಲಿದ್ದ ಒಳ್ಳೆಯ ಚಿತ್ರಮಂದಿರ ಅದು. ಮೂಲಭೂತ ಸೌಕರ್ಯ ಕೂಡ ಚೆನ್ನಾಗಿದೆ. ನನ್ನ `ಮೊಗ್ಗಿನ ಮನಸ್ಸು', `ಕೃಷ್ಣನ್ ಲವ್‌ಸ್ಟೋರಿ' ಸಿನಿಮಾಗಳನ್ನು ಅಲ್ಲಿಯೇ ಬಿಡುಗಡೆ ಮಾಡಿದ್ದೆ. ನಿರ್ಮಾಪಕರು, ನಟರಿಗೆ ಇದು ಅದೃಷ್ಟದ ಚಿತ್ರಮಂದಿರ. ಗುಣಮಟ್ಟದ ವಿಷಯದಲ್ಲೂ ಒಂದು ಹೆಜ್ಜೆ ಮುಂದಿದೆ. ಸಾಗರ್ ಚಿತ್ರಮಂದಿರ ಎಂದಾಕ್ಷಣ ನನಗೆ ನೆನಪಾಗುವುದು ಇಲ್ಲಿಯ ಮಾಲೀಕ ರಾಜೇಶ್ ಪಟೇಲ್. ಅವರು ಒಳ್ಳೆಯ ಮನುಷ್ಯ. ಒಂದು ಸಿನಿಮಾದ ಬಗ್ಗೆ ತಿಳಿದುಕೊಂಡು ಚಿತ್ರಮಂದಿರ ನೀಡುತ್ತಿದ್ದರು. ಚಿತ್ರದ ಬಗ್ಗೆ ಅವರಿಗಿದ್ದ ಶಿಸ್ತು, ಪ್ರೀತಿ ಅಗಾಧ.ಈಗ ಅದೇ ಜಾಗದಲ್ಲಿ ಬಹುಪರದೆಯ (ಮಲ್ಟಿಪ್ಲೆಕ್ಸ್) ಚಿತ್ರಮಂದಿರ ಮಾಡುತ್ತಾರೆ ಎಂಬ ಸುದ್ದಿ ಇದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಕೆಟ್ಟದ್ದು ಎಂದು ನಾನು ಹೇಳುವುದಿಲ್ಲ. ಇದರಿಂದ ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಅವಕಾಶ ಸಿಗುತ್ತದೆ. ಸಾಮಾನ್ಯವಾಗಿ ಚಿತ್ರಮಂದಿರದಲ್ಲಿ ಬಾತ್‌ರೂಂ, ಆಸನಗಳು ಸರಿ ಇರುವುದಿಲ್ಲ. ಜನ ಒಳ್ಳೆಯ ವಾತಾವರಣದಲ್ಲಿ ಸಿನಿಮಾ ನೋಡಲು ಅನುಕೂಲವಾಗುತ್ತದೆ. ಅಂಥ ಕಡೆ ಸಿನಿಮಾ ನೋಡುವುದೇ ಮಜಾ.

ಬದಲಾವಣೆ ಸಹಜ!

ಯೋಗರಾಜ್‌ಭಟ್, ನಿರ್ದೇಶಕ


ನನ್ನ ಚಿತ್ರಗಳಾದ `ಮುಂಗಾರು ಮಳೆ', `ಡ್ರಾಮಾ', `ಮನಸಾರೆ' ಮೂರು ಚಿತ್ರಗಳು ಸಾಗರ್ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು. ಈಗ ಆ ಚಿತ್ರಮಂದಿರದ ಪರದೆ ಮುಚ್ಚುತ್ತಿದೆ. ಇದೆಲ್ಲಾ ಕಾಲದ ಮಹಿಮೆ. ಈಗ ಮಲ್ಟಿಪ್ಲೆಕ್ಸ್ ಬಂದಿದೆ.ಮುಂದೊಂದು ದಿನ ಮೊಬೈಲ್‌ನಲ್ಲಿಯೇ ಚಿತ್ರ ಪ್ರದರ್ಶನವಾಗುವ ದಿನ ಬರುತ್ತದೆ. ಆಗ ಜನ ಮಲ್ಟಿಪ್ಲೆಕ್ಸ್ ಒಳ್ಳೆಯದೋ ಮೊಬೈಲ್ ಫೋನ್‌ನಲ್ಲಿ ಚಿತ್ರಪ್ರದರ್ಶನವಾಗುವುದು ಒಳ್ಳೆಯದೋ ಎಂಬ ಪ್ರಶ್ನೆ ಕೇಳುತ್ತಾರೆ ಅಷ್ಟೆ. ಬದಲಾವಣೆ ಸಹಜ.ಯಾವುದೋ ಒಂದು ಚಿತ್ರಮಂದಿರ ಅದೃಷ್ಟ ಎಂದು ಹೇಳುವುದು ದಡ್ಡತನ. ನೋಡುವ ಪ್ರೇಕ್ಷಕ ವರ್ಗ ಮುಖ್ಯ. ಸಿನಿಮಾ ಚೆನ್ನಾಗಿದ್ದರೆ ಜನ ಬಂದು ನೋಡುತ್ತಾರೆ.ನಗರದಲ್ಲಿ ಕಣ್ಣುಮುಚ್ಚಿದ ಚಿತ್ರಮಂದಿರಗಳು

ಅಲಂಕಾರ್, ಪ್ರಭಾತ್, ಕಿನೋ, ಬ್ಲೂ ಮೂನ್, ಬ್ಲೂ ಡೈಮಂಡ್, ಪ್ಲಾಜಾ, ಗ್ಯಾಲ್ಯಾಕ್ಸಿ, ನಂದಾ, ಶಾಂತಿ, ಸ್ವಾಗತ್, ಭಾರತ್, ಮಿನರ್ವಾ, ಶ್ರೀ, ಶಿವಾಜಿ, ಜೈಶ್ರೀ, ಸುಜಾತ, ಇಂಪೀರಿಯಲ್, ಎಂಪೈರ್, ಲಿಡೋ, ಪುಟ್ಟಣ್ಣ, ಕೆಂಪೇಗೌಡ, ಸೆಂಟ್ರಲ್, ಮೆಜೆಸ್ಟಿಕ್, ಗೀತಾ, ಹಿಮಾಲಯ, ಗೀತಾಂಜಲಿ, ಸಂಗಮ್.ಖುಷ್ಬೂ ಬಂದಿದ್ದಳು...

- ರಾಜೀವ್, ವಾಚ್‌ಮನ್
ಮೂವತ್ತು ವರ್ಷದಿಂದ ನಾನು ಈ ಚಿತ್ರಮಂದಿರದಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದೆ. ಮಾಲೀಕರು ಯಾವತ್ತೂ ನಮ್ಮನ್ನು ಕೆಲಸದವರಂತೆ ನೋಡಿಲ್ಲ. ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಸಂಬಳದ ವಿಷಯದಲ್ಲಿ ಯಾವತ್ತೂ ತೊಂದರೆ ಕೊಟ್ಟವರಲ್ಲ.ಮೊದಲೆಲ್ಲಾ ಹಿಂದಿ ಸಿನಿಮಾಗಳೇ ಜಾಸ್ತಿ ಓಡುತ್ತಿದ್ದವು. ಶಾರುಖ್ ಖಾನ್ ಅವರ `ದಿಲ್ ತೋ ಪಾಗಲ್ ಹೈ', `ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ', ಅಜಯ್ ದೇವಗನ್ ಅವರ `ಫೂಲ್ ಔರ್ ಕಾಂಟೆ' ಸಿನಿಮಾಗಳನ್ನು ನೋಡಿದ್ದೇನೆ. ಈ ಸಿನಿಮಾಗಳನ್ನು ಎಷ್ಟು ಬಾರಿ ನೋಡಿದರೂ ಬೇಸರವಾಗುವುದಿಲ್ಲ. ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ಹಾಕಲು ಶುರು ಮಾಡಿದರು. `ಮುಂಗಾರು ಮಳೆ', `ಮೈನಾ', `ಮನಸಾರೆ', `ಅದ್ದೂರಿ' ಸಿನಿಮಾಗಳು ಕೂಡ ಇಲ್ಲಿಯೇ ಯಶಸ್ವಿಯಾಗಿ ಓಡಿವೆ.ಈಗ ಟಿಕೆಟ್ ಬೆಲೆ ಏರಿದೆ. ಮೊದಲೆಲ್ಲಾ ಹೀಗೆ ಇರಲಿಲ್ಲ. ಬಾಲ್ಕನಿಗೆ 80 ಪೈಸೆ, ಸೆಕೆಂಡ್ ಕ್ಲಾಸ್‌ಗೆ 31 ಪೈಸೆ ಇತ್ತು. ಆಗಿನ ಕಾಲ ತುಂಬಾ ಚೆನ್ನಾಗಿತ್ತು. ನನಗಾಗ ರೂ 150 ಸಂಬಳ ಕೊಡುತ್ತಿದ್ದರು. ಆ ಸಂಬಳದಲ್ಲಿ ಸುಖ ಜೀವನ ನಡೆಸಿದ ತೃಪ್ತಿ ನನಗಿದೆ.

ರಾಜ್‌ಕುಮಾರ್, ಖುಷ್ಬೂ ಅವರನ್ನು ನೇರವಾಗಿ ನೋಡಿದ ಅನುಭವ ಕೂಡ ಈ ಚಿತ್ರಮಂದಿರದಿಂದ ನನಗೆ ದಕ್ಕಿತು. ಈ ಚಿತ್ರಮಂದಿರ ಮುಚ್ಚುತ್ತಾರೆ, ಇನ್ನೊಂದು ದೊಡ್ಡ ಕಟ್ಟಡ ಇಲ್ಲಿ ತಲೆ ಎತ್ತುತ್ತದೆ ಎಂಬ ವಿಷಯ ನಮಗೂ ತಿಳಿದಿದೆ. ಇಷ್ಟು ವರ್ಷ ಅನ್ನ ನೀಡಿದ ಈ ಚಿತ್ರಮಂದಿರ ಕೆಡುವುತ್ತಾರೆ ಎಂಬ ಸುದ್ದಿ ಕೇಳಿದಾಗ ನೋವಾಗುತ್ತದೆ. ಇದೆಲ್ಲಾ ಸಹಜ. ನಮಗೆ ಅನ್ನ ನೀಡಿದ ಧಣಿಗಳು ಚೆನ್ನಾಗಿರಲಿ ಎಂಬ ಹಾರೈಕೆ ನಮ್ಮದು.ನೆಮ್ಮದಿ ನೀಡಿದ ಚಿತ್ರಮಂದಿರ

ಸಾಗರ್ ಚಿತ್ರಮಂದಿರದಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆಯಾಗುತ್ತದೆ. 26 ವರ್ಷದಿಂದ ಇಲ್ಲಿ ಬಂದವರಿಗೆ ಕುಳಿತುಕೊಳ್ಳಲು ಕುರ್ಚಿಯನ್ನು ತೋರಿಸುವ ಕೆಲಸ ಮಾಡುತ್ತಿದ್ದೇನೆ. ಖುಷಿಯ ಜತೆಗೆ ನನಗೆ ನೆಮ್ಮದಿ ಸಿಕ್ಕಿದೆ. ನನ್ನ ಹೆಂಡತಿಯನ್ನು ಕರೆದುಕೊಂಡು ಬಂದು ದೇವರಾಜ್ ಅವರ `ಚಿತ್ರಲೇಖಾ' ಸಿನಿಮಾವನ್ನು ಇಲ್ಲಿಯೇ ನೋಡ್ದ್ದಿದೆ.

- ಸಂಜೀವ್ ಕುಮಾರ್, ನೌಕರಹಳೆಯ ಚಿತ್ರಮಂದಿರವೇ ಸೊಗಸು

ಇನ್ನು ಮುಂದೆ ಈ ಮೆಟ್ಟಿಲ ಮೇಲೆ ಕುಳಿತುಕೊಳ್ಳಲು ಆಗುವುದಿಲ್ಲ ಎಂಬುದು ಮನಸ್ಸಿಗೆ ಬೇಸರವೆನಿಸುತ್ತಿದೆ. ಬೆಳಿಗ್ಗೆ ದೇವಸ್ಥಾನಕ್ಕೆ ಬಂದು ಈ ಚಿತ್ರಮಂದಿರದ ಮೆಟ್ಟಿಲ ಮೇಲೆ ಹತ್ತು ನಿಮಿಷ ಕುಳಿತು ಹೋದರಷ್ಟೇ ಮನಸ್ಸಿಗೆ ಸಮಾಧಾನ.ಮೊದಲು ಇದೇ ಜಾಗದಲ್ಲಿ ರಂಗಮಂದಿರವಿತ್ತು. ಆಗ ನಾಟಕ ನೋಡಲು ಇಲ್ಲಿಗೆ ಬರುತ್ತಿದ್ದೆ. ಆಮೇಲೆ ಸಾಗರ್ ಚಿತ್ರ ಮಂದಿರ ಶುರುವಾಯಿತು. ಹಿಂದಿ ಸಿನಿಮಾಗಳ ಜಮಾನ ಅದಾಗಿತ್ತು. ಇಲ್ಲಿ ಬಿಡುಗಡೆಯಾದ ಯಾವ ಸಿನಿಮಾವನ್ನೂ ನಾನು ನೋಡದೇ ಬಿಟ್ಟಿಲ್ಲ. `ಅದ್ದೂರಿ', `ಮೈನಾ'ವರೆಗೆ ಇಲ್ಲಿ ತೆರೆಕಂಡ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ.ನಗರದಲ್ಲಿ ಈಗ ಹಳೆಯ ಚಿತ್ರಮಂದಿರಗಳೆಲ್ಲಾ ಮುಚ್ಚಿ ಹೋಗುತ್ತಿವೆ. ಈ ಪರದೆಯ ಸಿನಿಮಾಗಳನ್ನು ನೋಡುವಾಗ ಸಿಗುವ ಖುಷಿ ಮಾಲ್‌ನಲ್ಲಿ ಸಿಗುವುದಿಲ್ಲ. ನಮ್ಮಂಥ ವಯಸ್ಸಾದವರೆಲ್ಲಾ ಅಲ್ಲಿ ಹೋಗಿ ನೋಡಲು ಆಗುವುದಿಲ್ಲ.

- ಬಾಬುರಾವ್, ಸಾರ್ವಜನಿಕ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.