ಮಾವಲ್ಲಿ ಹೂವು, ಬೆಳೆಗಾರರಿಗೆ ನೋವು

7

ಮಾವಲ್ಲಿ ಹೂವು, ಬೆಳೆಗಾರರಿಗೆ ನೋವು

Published:
Updated:

ಶ್ರೀನಿವಾಸಪುರ: ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮಾವಿನ ಮರಗಳಲ್ಲಿ ಅಕಾಲಿಕ ಹೂ ಹಾಗೂ ಕಾಯಿ ಕಾಣಿಸಿಕೊಂಡಿದೆ. ಇದು ಬೆಳೆಗಾರರಿಗೆ ಆಶ್ಚರ್ಯದ ಜೊತೆಗೆ ಆತಂಕವನ್ನೂ ಉಂಟು ಮಾಡಿದೆ.ಕಳೆದ ಜೂನ್‌ನಲ್ಲಿ ಮಾವಿನ ಸುಗ್ಗಿ ಮುಕ್ತಾಯವಾಯಿತು. ಮತ್ತೆ ಹೂ ಬರಬೇಕಾದರೆ ಡಿಸೆಂಬರ್, ಜನವರಿ ಬರಬೇಕು. ಆದರೆ ಸೆಪ್ಟೆಂಬರ್ ತಿಂಗಳಲ್ಲಿಯೇ ಕೆಲವು ಮರಗಳಲ್ಲಿ ಹೂವು, ಪಿಂದೆ ಕಾಣಿಸಿಕೊಂಡಿರುವುದು ತಾಳ ತಪ್ಪಿದ ಬೆಳೆಯ ಲಕ್ಷಣವಾಗಿದೆ ಎಂದು ರೈತರು ಅಭಿಪ್ರಾಯಪಡುತ್ತಾರೆ.ಕೆಲವು ಸಲ ಮಾವಿನ ಸುಗ್ಗಿ ಮುಗಿಯುತ್ತಿದ್ದಂತೆ ಕೆಲವು ಮರಗಳಲ್ಲಿ ಹೂವು ಕಾಣಿಸಿಕೊಳ್ಳುವುದುಂಟು. ಅವು ಹೀಚಾಗಿ ಕಾಯಿ ಕಟ್ಟುವುದೂ ಉಂಟು. ಅದನ್ನು ಕಾರ್ತೀಕದ ಬೆಳೆ ಎಂದು ಕರೆಯಲಾಗುತ್ತದೆ. ಬೆಳೆಗಾರರು ಬೆಳೆ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹಾಗೆ ಬಂದ ಕಾಯಿ ಕೋತಿಗಳು ಹಾಗೂ ದನಗಾಹಿಗಳ ಪಾಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಾಗೆ ಬಂದ ಅಕಾಲಿಕ ಮಾವನ್ನು ಕೆಲವರು ಸಂಗ್ರಹಿಸಿ ಮಾರುಕಟ್ಟೆಗೆ ಹಾಕಿ ಹಣ ಸಂಪಾದಿಸುತ್ತಾರೆ. ಈ ಕಾಯಿಯನ್ನು ಉಪ್ಪಿನ ಕಾಯಿ ತಯಾರಿಕೆಗೆ ಬಳಸಲಾಗುತ್ತದೆ.ಆದರೆ ಈಗ ಅಕಾಲಿಕ ಹೂವು ಬೆಳೆಯ ಮಧ್ಯಾವಧಿಯಲ್ಲಿ ಕಾಣಿಸಿಕೊಂಡಿದೆ. ಸಕಾಲಿಕ ಹೂ ಬರಲು ಇನ್ನು ಕೇವಲ ಎರಡು ತಿಂಗಳು ಮಾತ್ರ ಉಳಿದಿದೆ. ಎಲ್ಲ ಮರಗಳಲ್ಲೂ ದಟ್ಟವಾಗಿ ಹೂ ಬಂದುಬಿಟ್ಟರೆ ಗತಿಯೇನು ಎಂದು ಪನಸಮಾಕನಹಳ್ಳಿ ಗ್ರಾಮದ ಮಾವು ಬೆಳೆಗಾರ ಆರ್.ಮಂಜುನಾಥರೆಡ್ಡಿ ಆತಂಕ ವ್ಯಕ್ತಪಡಿಸಿದರು.ಈಗ ಕೆಲವು ಮಾವಿನ ಮರಗಳಲ್ಲಿ ಬರುತ್ತಿರುವ ಅಕಾಲಿಕ ಹೂವು ಬರದ ಪರಿಣಾಮ. ಈ ಬಾರಿ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಮಳೆಗಾಲದಲ್ಲೂ ಒಣ ಹವೆ ಮುಂದುವರಿದಿದೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದರೆ ಮಾವಿನ ಮರಗಲ್ಲಿ ಅವಧಿಗೆ ಮೊದಲೇ ಹೂವೂ ಕಾಣಿಸಿಕೊಳ್ಳುತ್ತದೆ. ಗಟ್ಟಿ ಮಳೆಯಾದರೆ ಹೂವು ಉಳಿಯುವುದಿಲ್ಲ. ಮಳೆ ಕೈಕೊಟ್ಟರೆ ಅದು ಸಹಜವಾಗಿಯೇ ಕಾಯಿಕಟ್ಟುತ್ತದೆ ಎಂದು ತಾಲ್ಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ.ಮಲ್ಲಿಕಾರ್ಜುನ ಬಾಬು `ಪ್ರಜಾವಾಣಿ~ಗೆ ತಿಳಿಸಿದರು.ತಾಲ್ಲೂಕಿನಲ್ಲಿ ಈಗ ಮಳೆ ವಾತಾವರಣ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ವಾತಾವರಣ ತಂಪಾಗುತ್ತದೆ. ಮಾವಿನ ಮರಗಳಲ್ಲಿ ಅವಧಿಗೆ ಮುನ್ನ ಹೂ ಬರುವುದು ನಿಲ್ಲುತ್ತದೆ. ರೈತರ ಆತಂಕಕ್ಕೆ ತೆರೆ ಬೀಳುತ್ತದೆ ಎಂದು ಅಭಿಪ್ರಾಯಪಟ್ಟರು.ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ಮಾವಿನ ಮರಗಳು ವರ್ಷ ಬಿಟ್ಟು ವರ್ಷ ಫಸಲಿಗೆ ಬರುತ್ತಿವೆ. ಒಂದು ವರ್ಷ ಪೂರ್ಣ ಪ್ರಮಾಣದ ಫಸಲು ಬಂದರೆ, ಮುಂದಿನ ವರ್ಷ ಫಸಲಿನ ಪ್ರಮಾಣ ಕುಸಿಯುವುದು ಸಾಮಾನ್ಯವಾಗಿದೆ.ಮಾವಿನ ಬೆಳೆಯನ್ನು ಕಾಡುವ ರೋಗ ಹಾಗೂ ಕೀಟಗಳ ಹಾವಳಿಯೂ ಹೆಚ್ಚುತ್ತಿದೆ. ಮಾವಿನ ಫಸಲು ಇಷ್ಟೇ ಕೈಗೆ ಸಿಗುತ್ತದೆ ಎಂದು ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಅಕಾಲಿಕ ಹೂವಿನ ಸಮಸ್ಯೆ ತಲೆದೋರಿದೆ.ನೈಸರ್ಗಿಕ ಬದಲಾವಣೆಗೆ ಹೊಂದಿಕೊಳ್ಳದ ಮಾವು ಬೆಳೆಗಾರರು ಅಕಾಲಿಕ ಹೂವಿನ ರಕ್ಷಣೆಗೆ ಎಂದೂ ಮುಂದಾಗಿಲ್ಲ. ಆದರೆ ತೋಟಗಳಲ್ಲಿ ದಟ್ಟವಾಗಿ ಹೂ ಕಾಣಿಸಿಕೊಂಡರೆ ಅದರ ರಕ್ಷಣಾ ಕ್ರಮ ಕೈಗೊಳ್ಳುವುದು ಜಾಣತನ. ಮುಂಚಿತವಾಗಿ ಫಸಲು ಬರುತ್ತದೆ. ಒಳ್ಳೆ ಬೆಲೆಯೂ ಸಿಗುತ್ತದೆ ಎಂದು ಮಣಿಗಾನಹಳ್ಳಿ ಗ್ರಾಮದ ಅನುಭವಿ ಮಾವು ಬೆಳೆಗಾರ ಎನ್.ಶ್ರೀರಾಮರೆಡ್ಡಿ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry