ಮಾವಿಗೆ ಕುತ್ತಾದ ಕಾಂಡ ಕೊರಕ

7

ಮಾವಿಗೆ ಕುತ್ತಾದ ಕಾಂಡ ಕೊರಕ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿಗೆ ಕಾಂಡಕೊರಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಇದರಿಂದ ಕಷ್ಟಪಟ್ಟು ಬೆಳೆದ ಮರಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಹುಳುವಿನ ಬಾಧೆ ಹೆಚ್ಚಾಗಿರುವ ಕಡೆ ಮರಗಳು ಒಣಗಿಹೋಗುತ್ತಿವೆ.ಮಾವಿಗೆ ಕೊಂಬೆ ಕೊರಕ ಹುಳುವಿನ ಬಾಧೆ ಸಾಮಾನ್ಯವಾಗಿತ್ತು. ಅದು ಈಗಲೂ ಮುಂದುವರೆದಿದೆ. ಚಿಗುರೊಡೆದ ಭಾಗದಲ್ಲಿ ಕೊಂಬೆಯನ್ನು ಪ್ರವೇಶಿಸುವ ಹುಳುಗಳು ಕೊಂಬೆಗಳನ್ನು ಒಳಗಿನಿಂದಲೇ ತಿಂದು ಒಣಗುವಂತೆ ಮಾಡುತ್ತವೆ. ಈಗ ಕಾಂಡಕೊರಕ ಹುಳುವಿನಿಂದಾಗಿ ಮರದ ಅಸ್ತಿತ್ವಕ್ಕೇ ಸಂಚಕಾರ ಬಂದಿದೆ.ಬಾದಾಮಿ ಜಾತಿಯ ಮರಗಳಲ್ಲಿ ಕಾಂಡಕೊರಕ ಹುಳುವಿನ ಬಾಧೆ ಹೆಚ್ಚಾಗಿ ಕಂಡುಬಂದಿದೆ. ಇದರಿಂದ ಅಧಿಕ ಬೆಲೆಗೆ ಮಾರಾಟವಾಗುವ ಈ ಮಾವಿನ ತಳಿಯನ್ನು ಬೆಳೆದಿರುವ ರೈತರಿಗೆ ಹೆಚ್ಚು ನಷ್ಟವಾಗುತ್ತಿದೆ. ಹುಳು ನಿಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯ ರೈತರು ಯಾವುದೇ ಕ್ರಮ ಕೈಗೊಳ್ಳದಿರುವುದು, ಸಮಸ್ಯೆಯ ಆಳವನ್ನು ಹೆಚ್ಚಿಸಿದೆ.ಈ ಹುಳುಗಳು ಹಿಂದೆ ನೇರವಾಗಿ ಮರದ ಬುಡವನ್ನು ಪ್ರವೇಶಿಸುತ್ತಿದ್ದವು. ಸಣ್ಣ ಕಂಬಿಯನ್ನು ರಂಧ್ರದಲ್ಲಿ ಸೇರಿಸಿ ಹುಳುಗಳನ್ನು ಕೊಲ್ಲಬಹುದಾಗಿತ್ತು. ಆದರೆ ಈಗ ಅವು ರಕ್ಷಣಾತ್ಮಕವಾಗಿ ರಂಧ್ರ ಮಾಡುವುದನ್ನು ಕಲಿತಿವೆ. ರಂಧ್ರವನ್ನು ಹಂತ ಹಂತವಾಗಿ ಕೊರೆದು ಕಂಬಿ ಸೇರಲು ಆಗದಂತೆ ಎಚ್ಚರ ವಹಿಸಿವೆ. ಇದರಿಂದ ಅವುಗಳನ್ನು ಚುಚ್ಚಿ ಸಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ತೊಟ್ಲಿ ಗ್ರಾಮದ ಮಾವು ಬೆಳೆಗಾರ ಟಿ.ಪಿ.ನಾರೆಪ್ಪ ~ಪ್ರಜಾವಾಣಿ~ಗೆ ತಿಳಿಸಿದರು.ಕೋಲಾರ ತೋಟಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಪ್ರೊ.ನಾಚೇಗೌಡ ಹೇಳುವಂತೆ, ಕಾಂಡಕೊರಕ ಹುಳುವಿನ ಬಾಧೆ ಬಾದಾಮಿ ಜಾತಿಯ ಮಾವಿನ ಮರಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಇದಕ್ಕೆ ಕಾರಣ ಅದರ ತಿರುಳಿನ ಮೃದುತ್ವ ಮತ್ತು ರುಚಿ. ಒಂದು ಜಾತಿಯ ನೊಣ, ಮರದ ಬುಡದ ಮೇಲೆ ಏಳುವ ಚಕ್ಕೆಗಳ ಕೆಳಗೆ ಮೊಟ್ಟೆ ಇಡುತ್ತದೆ.ಮೊಟ್ಟೆಯೊಡೆದು ಹೊರಗೆ ಬರುವ ಹುಳುಗಳು ಕಾಂಡದ ಮೇಲ್ಭಾಗವನ್ನು ಸ್ವಲ್ಪ ಸ್ವಲ್ಪವೇ ಕೊರೆಯುತ್ತಾ ಒಳಗೆ ಪ್ರವೇಶಿಸುತ್ತವೆ. ಪ್ರಾರಂಭದ ಹಂತದಲ್ಲಿ ಇದು ಗೊತ್ತಾಗುವುದಿಲ್ಲ. ಬುಡಕ್ಕೆ ಸಾಕಷ್ಟು ಹಾನಿ ಉಂಟಾದ ಮೇಲೆ ಒಂದು ವಿಧವಾದ ರಸ ರಂಧ್ರದಿಂದ ಸೋರಲು ಪ್ರಾರಂಭಿಸುತ್ತದೆ. ಆಗ ಹುಳು ಇರುವುದರ ಬಗ್ಗೆ ತಿಳಿಯುತ್ತದೆ ಎನ್ನುತ್ತಾರೆ.ಈ ಹುಳುವಿನ ಬಾಧೆಯನ್ನು ನಿವಾರಿಸಲು ಮರದ ಬುಡಕ್ಕೆ ಕಾರ್ಬರಿಲ್ ಅಥವಾ ಬೈಟೆಕ್ಸ್ ಲೇಪಿಸಬೇಕು. ನೊಣಗಳು ಸಾಮಾನ್ಯವಾಗಿ ಬುಡದ ಚಕ್ಕೆಯ ಕೆಳಗೆ ಮೊಟ್ಟೆ ಇಡುವುದರಿಂದ ಬುಡಕ್ಕೆ ಪ್ಲಾಸ್ಟಿಕ್ ಹಾಳೆ ಸುತ್ತಬೇಕು. ಬುಡವನ್ನು ಪ್ರವೇಶಿಸಿರುವ ಹುಳುಗಳನ್ನು ಕಂಬಿಯಿಂದ ಚುಚ್ಚಿ ಕೊಲ್ಲಬೇಕು. ರಂಧ್ರಕ್ಕೆ ಸೀಲ್ ಮಾಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.ಕಾಂಡ ಕೊರಕ ಹುಳುವಿನ ನಿಯಂತ್ರಣ ಅಷ್ಟು ಸುಲಭವಲ್ಲ. ಕಾಂಡವನ್ನು ರಕ್ಷಿಸಲು ನೋಡಿದರೆ, ನೊಣ ಇನ್ನೂ ಮೇಲ್ಭಾಗದ ರೆಂಬೆಗಳನ್ನು ಆರಿಸಿಕೊಂಡು, ಅಲ್ಲಿನ ಚೆಕ್ಕೆ ಕೆಳಗೆ ಮೊಟ್ಟೆ ಇಟ್ಟು ಸಂತಾನೋತ್ಪತ್ತಿಗೆ ಯತ್ನಸುತ್ತದೆ. ಆದ್ದರಿಂದ ಮಾವು ಬೆಳೆಗಾರರು ಇದರ ನಿವಾರಣೆಗೆ ಸಾಂಘಿಕ ಪ್ರಯತ್ನ ಮಾಡಬೇಕು. ಇಲ್ಲವಾದರೆ ಹೆಚ್ಚಿನ ಹಾನಿಯನ್ನು ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ.ಇತ್ತೀಚಿನ ವರ್ಷಗಳಲ್ಲಿ ಮಾವಿನ ಬೆಳೆಗೆ ಬರುವ ರೋಗಗಳ ಸಂಖ್ಯೆ ಹೆಚ್ಚುತ್ತಿದೆ. ಹುಳು ಬಾಧೆಯೂ ಹೆಚ್ಚಿದೆ. ಅದರಲ್ಲೂ ಕೊಂಬೆ ಹಾಗೂ ಕಾಂಡ ಕಚ್ಚಿ ತಿನ್ನುತ್ತಿರುವ ಹುಳುಗಳು ಮಾವಿನ ಮರಗಳ ಬೆಳವಣಿಗೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಇದನ್ನು ಸಮರ್ಥವಾಗಿ ಎದುರಿಸದಿದ್ದಲ್ಲಿ ಅನಾಹುತ ತಪ್ಪಿದ್ದಲ್ಲ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry