ಗುರುವಾರ , ಮೇ 13, 2021
17 °C

ಮಾವಿನ ಇಳುವರಿ ಕುಸಿತ: ಕಂಗಾಲಾದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಸುಮಾರು 1,500 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಈ ಬಾರಿ ಮಾವಿನ ಮರಗಳಲ್ಲಿ ಹೂಗಳು ಕಡಿಮೆಯಾಗಿ, ಇಳುವರಿ ಕುಂಠಿತಗೊಂಡಿದೆ.ಶೇ. 25ರಷ್ಟು ಮಾತ್ರ ಬೆಳೆ ಬಂದಿದ್ದು, ಕೆಲವೊಂದು ಮರಗಳಲ್ಲಿ ಮಾತ್ರ ಕಾಯಿಗಳು ಬಿಟ್ಟಿವೆ. ಬಿ. ದುರ್ಗ ಹೋಬಳಿಯ ಚಿಕ್ಕ ಎಮ್ಮಿಗನೂರು, ಹಿರೇ ಎಮ್ಮಿಗನೂರು, ಚಿಕ್ಕನಕಟ್ಟೆ, ಅಜ್ಜಿಕ್ಯಾತನಹಳ್ಳಿ, ನಂದಿಹಳ್ಳಿ, ತಾಳ್ಯ ಹೋಬಳಿಯ ಮದ್ದೇರು, ಮಲಸಿಂಗನಹಳ್ಳಿ ಮತ್ತು ಪಟ್ಟಣದ ಸುತ್ತಮುತ್ತ ಹೆಚ್ಚಿನ ಮಾವಿನ ತೋಟಗಳಿವೆ. ಈ ಭಾಗದ ಹೆಚ್ಚಿನ ರೈತರು ಬಾದಾಮಿ (ಆಪೂಸ್), ತೋತಾಪುರಿ, ಬೆನೆಶಾನ್ (ಬಂಗನಪಲ್ಲಿ), ಮಲ್ಲಿಕಾ ತಳಿಯ ಮಾವು ಬೆಳೆದಿದ್ದಾರೆ.ಈ ಬಾರಿ ಹೆಚ್ಚು ಬಿಸಿಲು ಇದ್ದ ಪರಿಣಾಮ ಉಷ್ಣಾಂಶ ಹೆಚ್ಚಳದಿಂದ ಮಾವಿನ ಈಚುಗಳು ಉದುರಿದ್ದವು. ಕಳೆದ ಒಂದು ವಾರದಿಂದ ತಾಲ್ಲೂಕಿನ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಇರುವ ಒಂದಿಷ್ಟು ಮಾವಿನ ಮಿಡಿಗಳೂ ಉದುರುತ್ತಿವೆ. ಇನ್ನು ಆಲಿಕಲ್ಲಿನ ಹೊಡೆತಕ್ಕೆ ಸಿಕ್ಕಿದ ಮಾವಿನ ಕಾಯಿಗಳಲ್ಲಿ ಕಪ್ಪು ಚುಕ್ಕೆಗಳಾಗುತ್ತಿದ್ದು, ಕೊಳೆಯುವ ಸ್ಥಿತಿಯಲ್ಲಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಮಾವಿನ ಮರಗಳನ್ನು ಬೆಳೆಸಿದ ರೈತ ಕಂಗಾಲಾಗಿದ್ದಾನೆ.`ಹತ್ತು ಎಕರೆಯಲ್ಲಿ ಬಾದಾಮಿ ತಳಿಯ ಸುಮಾರು 600 ಮಾವಿನ ಮರಗಳನ್ನು ಬೆಳೆಸಿದ್ದೇನೆ. ಕಳೆದ ಎರಡು ವರ್ಷಗಳ ಹಿಂದೆ ಸಮೃದ್ಧ ಮಳೆ ಆಗಿದ್ದರಿಂದ ಹಿಂದಿನ ವರ್ಷ ಉತ್ತಮ ಇಳುವರಿ ಬಂದಿತ್ತು. ಪ್ರತಿ ಮರದಲ್ಲಿ ಸುಮಾರು 600 ರಿಂದ 1,000 ಮಾವಿನ ಕಾಯಿಗಳು ಬಿಟ್ಟಿದ್ದವು.

 

ಕಳೆದ ವರ್ಷ ಒಮ್ಮೆಯೂ ಹದಮಳೆ ಬರದ ಪರಿಣಾಮ ಭೂಮಿಯಲ್ಲಿ ತೇವಾಂಶ ಕೊರತೆಯಾಗಿ ಈ ವರ್ಷ ಹೆಚ್ಚು ಮಾವಿನ ಕಾಯಿಗಳು ಬಿಟ್ಟಿಲ್ಲ. ಕೆಲವೊಂದು ಮರಗಳಲ್ಲಿ ಮಾತ್ರ ಕಡಿಮೆ ಪ್ರಮಾಣದಲ್ಲಿ ಕಾಯಿಗಳು ಬಿಟ್ಟಿದ್ದು ಕಾಲು ಭಾಗ ಮಾತ್ರ ಇಳುವರಿ ಬಂದಿದೆ.ಇನ್ನು ಮಳೆ, ಗಾಳಿ, ಆಲಿಕಲ್ಲು, ಮೋಡ ಮತ್ತಿತರ ಹವಾಮಾನ ವೈಪರಿತ್ಯದಿಂದ ಇರುವ ಕಾಯಿಗಳೂ ಕೆಟ್ಟುಹೋಗುವ ಆತಂಕ ಇದೆ. ಕೂಲಿ, ಬೇಸಾಯ, ಗೊಬ್ಬರ, ನೀರು, ಕೀಟನಾಶಕಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು, ಬಂಡವಾಳವೂ ಹಿಂತಿರುಗಿ ಬರುವ ಗ್ಯಾರಂಟಿ ಇಲ್ಲ ಎನ್ನುತ್ತಾರೆ ರೈತ ರೆಹಮತ್ ಉಲ್ಲಾಖಾನ್.`ಕಳೆದ ವರ್ಷ ಮಾವಿನ ಫಸಲು ಹೆಚ್ಚಾಗಿ, ಬೆಲೆ ಪಾತಾಳಕ್ಕೆ ಕುಸಿದಿತ್ತು. 10 ಕೆ.ಜಿ.ಯ ಒಂದು ಬುಟ್ಟಿ ಮಾವಿಗೆ ರೂ.5ರಂತೆ ಮಾರಾಟವಾಗಿ ವ್ಯಾಪಾರಿಗಳು ಮತ್ತು ಗುತ್ತಿಗೆದಾರರು ತೀವ್ರ ನಷ್ಟ ಅನುಭವಿಸಿದ್ದರು. ಬೆಲೆ ಕುಸಿತದಿಂದ ಕೆಲವರು ಮಾವಿನ ಕಾಯಿಗಳನ್ನು ಕೀಳದೆ ಮರದಲ್ಲೇ ಬಿಟ್ಟಿದ್ದರು. ಆದರೆ ಈ ಬಾರಿ ಇಳುವರಿ ಕಡಿಮೆಯಾಗಿದೆ. ಈ ವೇಳೆಗಾಗಲೇ ಮಾರುಕಟ್ಟೆಗೆ ಹೆಚ್ಚು ಮಾವು ಬರಬೇಕಿತ್ತು. ಆದರೆ ಬೆಳೆ ಕೈಕೊಟ್ಟಿರುವುದರಿಂದ ಕಡಿಮೆ ಪ್ರಮಾಣದಲ್ಲಿ ಮಾವು ಬಂದಿದ್ದು, ಬೆಲೆ ಹೆಚ್ಚಳವಾಗಿದೆ.ಸಿಂಧೂರ ತಳಿಯ ಹಣ್ಣುಗಳೇ ರೂ.80 ರಿಂದ ರೂ.100ಗೆ ಕೆ.ಜಿ.ಯಂತೆ ಮಾರಾಟವಾಗುತ್ತಿದ್ದು, ಮಹಾರಾಷ್ಟ್ರದ ರತ್ನಗಿರಿ ಮಾವು ಮಾರುಕಟ್ಟೆಗೆ ಬಂದರೆ ಬೆಲೆ ಸ್ವಲ್ಪ ಇಳಿಯಬಹುದು~ ಎನ್ನುತ್ತಾರೆ ಪ್ರತೀ ವರ್ಷ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ತೋಟ ಗುತ್ತಿಗೆ ಮಡುವ ಪಟ್ಟಣದ ಸೈಯದ್ ಲತೀಫ್ ಮತ್ತು ಸೈಯದ್ ಜಾವೀದ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.