ಮಂಗಳವಾರ, ನವೆಂಬರ್ 12, 2019
25 °C

ಮಾವಿನ ಊರಲ್ಲಿ ಮಳೆ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನ ವಿವಿಧೆಡೆ ಬುಧವಾರ ಮಧ್ಯಾಹ್ನ ಮಳೆ ಸುರಿಯಿತು. ಬೆಳಿಗ್ಗೆಯಿಂದ ಬಿಸಿಲು ಸುಡುತ್ತಿತ್ತಾದರೂ, ಮಳೆ ಬರುವ ಸೂಚನೆ ಇರಲಿಲ್ಲ. ಮಧ್ಯಾಹ್ನ ಸುಮಾರು 12.30 ಗಂಟೆ ಸಮಯದಲ್ಲಿ ಇದ್ದಕ್ಕಿದಂತೆ ಮೋಡ ಮುಸುಕಿ, ಕೆಲವೇ ನಿಮಿಷಗಳಲ್ಲಿ ಮಳೆ ಸುರಿಯಿತು.ಮಳೆಯಿಂದಾಗಿ ಜನ ಅಂಗಡಿಗಳ ಮುಂದೆ ನಿಂತು ಆಶ್ರಯ ಪಡೆಯಬೇಕಾಯಿತು. ರಸ್ತೆ ಹಾಗೂ ಚರಂಡಿಗಳಲ್ಲಿ ನೀರು ಹರಿಯಿತು. ಬಿಸಿಯೇರಿದ್ದ ವಾತಾವರಣ ತಂಪಾಯಿತು. ಮಳೆ ಅರ್ಧ ಗಂಟೆಗೂ ಹೆಚ್ಚುಕಾಲ ಸುರಿದ ಪರಿಣಾಮವಾಗಿ ರಸ್ತೆಯಲ್ಲಿ ಜನ ಛತ್ರಿ ಹಿಡಿದು ಕಾಣಿಸಿಕೊಂಡರು.

ತಾಲ್ಲೂಕಿನ ಬಯ್ಯಪ್ಪಲ್ಲಿ, ಅರಿಕೆರೆ, ಪುಂಗನೂರು ಕ್ರಾಸ್, ನಲ್ಲಪ್ಪಲ್ಲಿ, ನೀಲಟೂರು ಮತ್ತಿತರ ಕೆಲವು ಗ್ರಾಮಗಳ ಸಮೀಪ ಮಳೆಯಾಗಿದೆ. ಬಯ್ಯಪ್ಪಲ್ಲಿ ಗ್ರಾಮದ ಸಮೀಪ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಸಿಕ್ಕಿ ಬದನೆ ತೋಟವೊಂದು ನೆಲಕ್ಕುರುಳಿತ್ತು.ಜಾನುವಾರು ಮೇವಿಗಾಗಿ ಬೆಳೆದಿರುವ ಮುಸುಕಿನ ಜೋಳದ ದಂಟಿನ ಒಟ್ಟುಗಳು ನೆಲಕ್ಕುರುಳಿ ಚಾಪೆಯಂತೆ ಕಾಣುತ್ತಿದ್ದವು.

ಕೆಲವು ಗ್ರಾಮಗಳ ಸಮೀಪ ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ಹಳ್ಳಗಳಲ್ಲಿ ನೀರು ಕಾಣಿಸಿಕೊಂಡಿತು. ಜಮೀನುಗಳಲ್ಲೂ ನೀರು ನಿಂತಿತ್ತು. ತೋಟದ ಕೆಲಸದಲ್ಲಿ ನಿರತರಾಗಿದ್ದ ಕೃಷಿ ಕಾರ್ಮಿಕರು ಮಳೆಯಿಂದಾಗಿ ಮನೆಗಳಿಗೆ ಹಿಂದಿರುಗಿದರು. ಹುಣಸೆ ಸಂಸ್ಕರಣೆ ಕೆಲಸಕ್ಕೆ ಮಳೆಯಿಂದ ಅಡ್ಡಿ ಉಂಟಾಯಿತು.ಗಟ್ಟಿ ಮಳೆ ಸುರಿಯಿತಾದರೂ, ಗುಡುಗು ಮಿಂಚಿನ ಆರ್ಭಟ ಇರಲಿಲ್ಲ. ಆಲಿಕಲ್ಲು ಬೀಳಲಿಲ್ಲ. ಆದ್ದರಿಂದ ಮಾವಿನ ಫಸಲಿಗೆ ಹಾನಿ ಉಂಟಾಗಿಲ್ಲ. ಕಳೆದ ಬಾರಿ ಬಿರುಗಾಳಿ ಮತ್ತು ಆಲಿಕಲ್ಲಿನೊಂದಿಗೆ ಸುರಿದ ಮೊದಲ ಮಳೆ ಮಾವಿನ ಫಸಲಿಗೆ ಮಾರಕವಾಗಿ ಪರಿಣಮಿಸಿತ್ತು.

ಈಗ ಸುರಿದ ಮಳೆ ಮಾವಿನ ಕಾಯಿ ಬಲಿಯಲು ನೆರವಾಗಿದೆ. ಕಾಯಿ ಉದುರುವ ಪ್ರಮಾಣ ಕಡಿಮೆ ಆಗುವ ಸಂಭವವೂ ಇದೆ.

ಪ್ರತಿಕ್ರಿಯಿಸಿ (+)