ಮಾವಿನ ಮಡಿಲಲ್ಲಿ ಕಾಗೆಗೆ ಕೋಗಿಲೆ ಬಲಿ

ಶನಿವಾರ, ಜೂಲೈ 20, 2019
28 °C

ಮಾವಿನ ಮಡಿಲಲ್ಲಿ ಕಾಗೆಗೆ ಕೋಗಿಲೆ ಬಲಿ

Published:
Updated:

ಶ್ರೀನಿವಾಸಪುರ: ಈಗ ಕೋಗಿಲೆ ಮರಿಗಳ ಸಂಖ್ಯೆ ಹೆಚ್ಚಿದೆ. ಅವು ಕಾಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆ, ಶಾಲೆ ಪ್ರವೇಶಿಸಿ ಸಿಕ್ಕಿಬೀಳುವುದು ಸಾಮಾನ್ಯವಾಗಿದೆ. ಕಾಗೆಗಳ ಸಹಜ ದಾಳಿಗೆ ಸಿಕ್ಕಿ ಮರಿ ಕೋಗಿಲೆಗಳು ಪ್ರಾಣ ಕಳೆದುಕೊಳ್ಳುತ್ತಿವೆ.ಮಾವಿನ ಮಡಿಲೆಂದೇ ಪ್ರಸಿದ್ಧವಾಗಿರುವ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾವಿನ ತೋಟಗಳು ಹೆಚ್ಚು. ಮಾವಿನ ಮರವೆಂದರೆ ಕೋಗಿಲೆಗೆ ಪಂಚಪ್ರಾಣ. ಹಸಿರೆಲೆ ನಡುವೆ ಕುಳಿತು ಹಾಡುವುದೆಂದರೆ ಖುಷಿ. ಈಚೆಗಂತೂ ಮಾವಿನ ತೋಟಗಳ ಕಡೆ ಹೋದರೆ ಕೋಗಿಲೆ ಗಾನ ಕಿವಿಗೆ ಇಂಪು ನೀಡುತ್ತದೆ.ಸಾಮಾನ್ಯವಾಗಿ ಈ ಕಾಲದಲ್ಲಿ ಕೋಗಿಲೆ ಮರಿಗಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತದೆ. ಕೋಗಿಲೆ ಗೂಡು ಕಟ್ಟುವುದಿಲ್ಲ. ಅದು ಕಾಗೆ ಗೂಡನ್ನು ಹುಡುಕಿ, ಕಾಗೆ ಇಲ್ಲದ ಸಮಯ ಸಾಧಿಸಿ, ಅದರ ಮೊಟ್ಟೆಯನ್ನು ಕೆಳಗೆ ಕೆಡವಿ ತನ್ನ ಮೊಟ್ಟೆಯನ್ನು ಇಟ್ಟು ನಿಶ್ಷಿಂತೆಯಿಂದ ಇದ್ದುಬಿಡುತ್ತದೆ. ಆ ಮೊಟ್ಟೆಗೆ ಕಾಗೆ ಕಾವು ಕೊಡುತ್ತದೆ. ಮರಿಗಳಿಗೆ ಗುಟುಕು ಕೊಡುತ್ತದೆ. ಆದರೆ ರೆಕ್ಕೆ ಬಂದಾಗ ಅದು ಕಾಗೆ ಧ್ವನಿಗೆ ಭಿನ್ನವಾದ ಧ್ವನಿಯಲ್ಲಿ ಕೂಗತೊಡಗುತ್ತದೆ. ಆಗ ಕಾಗೆಗೆ ತಾನು ಕಾವು ಕೊಟ್ಟು ಮರಿ ಮಾಡಿದ ಹಾಗೂ ಗುಟುಕು ಕೊಟ್ಟು ಸಾಕಿದ ಮರಿ ತನ್ನದಲ್ಲ ಎಂದು ಅರಿವಾಗುತ್ತದೆ. ಅದನ್ನು ಕಚ್ಚಿ ಗೂಡಿನಿಂದ ಹೊರದಬ್ಬುತ್ತದೆ.ತನ್ನದಲ್ಲದ ತಪ್ಪಿಗೆ ಕೋಗಿಲೆ ಮರಿ ಕಾಗೆಗಳ ಹಿಂಡಿನಿಂದ ಕಚ್ಚಿಸಿಕೊಳ್ಳಬೇಕಾಗುತ್ತದೆ. ರಕ್ಷಣೆಗೆ ಹತ್ತಿರ ಸಿಗುವ ಕಟ್ಟಡ, ಪೊದೆ, ಮರಗಳನ್ನು ಆಶ್ರಯಿಸುತ್ತದೆ. ಆದರೆ ಕಾಗೆ ಕಾಟದಿಂದ ಪಾರಾಗುವುದು ಅಷ್ಟು ಸುಲಭವಲ್ಲ. ಈ ದಾಳಿ ಸಂದರ್ಭದಲ್ಲಿ ನಾಯಿಗಳು ಬಂದರೆ ನೆಲಕ್ಕೆ ಬಿದ್ದ ಕೋಗಿಲೆ ಮರಿ ನಾಯಿ ಬಾಯಿಗೆ ತುತ್ತಾಗುತ್ತದೆ. ಕೆಲವರು ಇಂಥ ಮರಿಗಳನ್ನು ತಿನ್ನುವುದುಂಟು.ಕೆಲವರು ಕವಿಪ್ರಿಯ ಹಕ್ಕಿ ಕೋಗಿಲೆಯನ್ನು ಬೇಟೆಯಾಡುವುದುಂಟು. ಗೋಣಿ, ಆಲ, ಜಗಳಗಂಟಿ ಮರಗಳ ಹಣ್ಣೆಂದರೆ ಕೋಗಿಲೆಗೆ ಹೆಚ್ಚು ಪ್ರಿಯ. ಹಣ್ಣನ್ನು ತಿನ್ನಲು ಹಿಂಡು ಹಿಂಡಾಗಿ ಬರುವ ಕೋಗಿಲೆಗಳನ್ನು ಬಂದೂಕಿನಿಂದ ಸುಟ್ಟು ಕೊಂಡೊಯ್ಯಲಾಗುತ್ತದೆ. ಈ ಬೇಟೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರುವುದಿಲ್ಲ. ಇಷ್ಟಾದರೂ ತಾಲ್ಲೂಕಿನಲ್ಲಿ ಕೋಗಿಲೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂಬುದು ಸಂತೋಷದ ಸಂಗತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry