ಮಂಗಳವಾರ, ಅಕ್ಟೋಬರ್ 15, 2019
29 °C

ಮಾವಿನ ಮಡಿಲಲ್ಲಿ ಸಂಕ್ರಾಂತಿ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಸಂಕ್ರಾಂತಿ ರೈತರ ಹಬ್ಬ. ಸಂಕ್ರಾಂತಿ ಬಂತೆಂದರೆ ರಾಸುಗಳಿಗೆ ಮಾನ್ಯತೆ ಬರುತ್ತದೆ. ಆದ್ದರಿಂದಲೇ ಇಲ್ಲಿ ಸಂಕ್ರಾಂತಿಯನ್ನು `ಎತ್ತುಗಳ ಹಬ್ಬ~ ಎಂದು ಕರೆಯುವುದು ರೂಢಿ.ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿಯನ್ನು ಹಬ್ಬದ ದಿನ ಆಚರಿಸುವುದು ವಿರಳ. ಪ್ರತಿ ಗ್ರಾಮದಲ್ಲೂ ತಮಗೆ ಅನುಕೂಲವಾದ ದಿನ ಹಬ್ಬ ಆಚರಿಸುತ್ತಾರೆ. ಈ ಹಬ್ಬದಲ್ಲಿ ಕಾಟಿಂರಾಯನಿಗೆ ಕೋಳಿ ಬಲಿ ಕೊಡುವ ಪದ್ಧತಿ ಇರುವುದರಿಂದ ಸಾಮಾನ್ಯವಾಗಿ ಶನಿವಾರ, ಸೋಮವಾರ ಆಚರಿಸುವುದಿಲ್ಲ. ಉಳಿದ ಎಲ್ಲ ದಿನಗಳಲ್ಲೂ ಅಲ್ಲಲ್ಲಿ ಸಂಕ್ರಾಂತಿ ಸಂಭ್ರಮ.ಹಬ್ಬದ ದಿನ ದುಡಿಯುವ ಹಸು-ಎತ್ತುಗಳಿಗೆ ಬಿಡುವು. ಬೆಳಿಗ್ಗೆ ಎತ್ತುಗಳ ಕೊಂಬನ್ನು ಸವರಿ, ಮೈ ತೊಳೆದು ಹಸಿರು ಮೇವು ಕೊಡಲಾಗುತ್ತದೆ. ಮಧ್ಯಾಹ್ನದ ಹೊತ್ತಿಗೆ ಕೊಂಬುಗಳಿಗೆ ಬಣ್ಣ ಹಚ್ಚಿ ಅಥವಾ ಸುನ್ನಾರಿ ಅಂಟಿಸುತ್ತಾರೆ. ಬಣ್ಣ ಬಣ್ಣದ ಬಲೂನ್ ಕಟ್ಟುತ್ತಾರೆ. ಎತ್ತಿನ ಮೈಗೆ ಬುರುಕಾ ಹಾಕಿ ಮೆರವಣಿಗೆಗೆ ಸಜ್ಜುಗೊಳಿಸುತ್ತಾರೆ.ಈ ಸಂದರ್ಭದಲ್ಲಿ ಎಮ್ಮೆಗಳನ್ನೂ ಮರೆಯುವುದಿಲ್ಲ. ಎಮ್ಮೆಗಳ ಮೈ ತೊಳೆದು ಕೊಂಬುಗಳಿಗೆ ಸುದ್ದೆ ಮತ್ತು ಕೆಮ್ಮಣ್ಣು ಬಳಿದು ಅಲಂಕರಿಸುತ್ತಾರೆ. ದೊಕ್ಕೆ, ಬುಡಸೆಗಳಿಗೂ ಸುದ್ದೆ, ಕೆಮ್ಮಣ್ಣಿನ ಅಲಂಕಾರ ಮಾಡಲಾಗುತ್ತದೆ.ಗ್ರಾಮದ ಎತ್ತುಗಳು ಏಕ ಕಾಲದಲ್ಲಿ ಹಲಗೆ ಸದ್ದಿನೊಂದಿಗೆ ಬೀದಿಯಲ್ಲಿ ಮೆರವಣಿಗೆ ಹೊರಟು ದೇವಾಲಯದ ಸಮೀಪ ಸೇರುತ್ತವೆ. ಅಲ್ಲಿ ಗ್ರಾಮದ ಮಹಿಳೆಯರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕೆಲವೊಮ್ಮೆ ಗ್ರಾಮದಲ್ಲಿ ಇರುವ ಬಂದೂಕುಗಳನ್ನು ತಂದು ಗಾಳಿಯಲ್ಲಿ ಗುಂಡು ಹಾರಿಸಿ ಎತ್ತುಗಳನ್ನು ಬೆದರಿಸುವುದುಂಟು. ಕೆಲವೊಮ್ಮೆ ರೈತರಿಗೆ ತಣ್ಣೀರು ಎರಚಿ ನೀರಾಟ ಆಡುವುದುಂಟು. ಅಲ್ಲಿಗೆ ಮಧ್ಯಾಹ್ನದ ಅಂಕ ಮುಗಿಯುತ್ತದೆ.ಸಂಜೆ ಗ್ರಾಮದ ಹೊರಗಿನ ಕಾಟಿಂರಾಯನ ಗುಡಿ ಸಮೀಪ ಹಳ್ಳಿ ದನ ಸೇರುತ್ತವೆ. ದನಗಾಹಿಗಳು ಎತ್ತರವಾಗಿ ಹಾಕಿರುವ ಸೌದೆ ರಾಶಿಗೆ ಬೆಂಕಿ ಇಡಲಾಗುತ್ತದೆ. ಆ ಬೆಳಕಿನಲ್ಲಿ ಹುಡುಗರು ಭರಾಟೆ ತಿರುಗಿಸಿ ಸಂಭ್ರಮಿಸುತ್ತಾರೆ. ದನ ಕಾಯುವ ದೇವರಿಗೆ ಕೋಳಿ ಬಲಿ ಕೊಡಲಾಗುತ್ತದೆ. ಕೋಳಿ ತಲೆಗಳು ಪೂಜಾರಿ ಪಾಲಾಗುತ್ತವೆ.ದನಗಳು ಬರುವ ಹಾದಿಯಲ್ಲಿ ಭತ್ತದ ಹುಲ್ಲನ್ನು ಹಾಕಿ ಬೆಂಕಿ ಇಟ್ಟು ದನ ಹಾಯಿಸುವುದು ಒಂದು ವಿಶೇಷ. ಗುಡಿಯಲ್ಲಿ ನೀಡುವ ಅಮದನ್ನವನ್ನು (ಕೋಳಿ ರಕ್ತದಿಂದ ಒದ್ದೆಯಾದ ಅನ್ನ) ದನಗಳ ಮೇಲೆ ಹಾಕುವುದರೊಂದಿಗೆ ಹಬ್ಬದ ಇನ್ನೊಂದು ಅಂಕ ಮುಗಿಯುತ್ತದೆ. ಹಳ್ಳಿಗಾಡಿನಲ್ಲಿ ಸಂಕ್ರಾಂತಿ ಹಬ್ಬದಂದು ದೋಸೆ, ಹಿದಕಿದವರೆ ಸಾರು, ಸಂಜೆಗೆ ನಾಟಿ ಕೋಳಿ ಸಾರು ವಿಶೇಷ ಅಡುಗೆ.ಸಂಕ್ರಾಂತಿ ಹಬ್ಬದ ಮೆರವಣಿಗೆಗೆಂದೇ ಉತ್ತಮ ರಾಸು ಖರೀದಿಸಿ ತಂದು ಸಾಕುತ್ತಿದ್ದ ದಿನಗಳೂ ಇದ್ದವು. ಮೆರವಣಿಗೆಯಲ್ಲಿ ರಾಸು ಕೊಂಡೊಯ್ಯುವುದು ಕೆಲವರಿಗೆ ಪ್ರತಿಷ್ಠೆಯ ವಿಷಯ. ಆದರೆ ಈಚಿನ ವರ್ಷಗಳಲ್ಲಿ ಎತ್ತಗಳ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿ ಸೊರಗಿದೆ. ಬಹಳಷ್ಟು ಗ್ರಾಮಗಳಲ್ಲಿ ಬೆರಳೆಣಿಕೆಯಷ್ಟು ರಾಸುಗಳೂ ಕಂಡುಬರುವುದಿಲ್ಲ. ಎತ್ತುಗಳಿಗೆ ಮೀಸಲಾದ ಹಬ್ಬದಲ್ಲಿ ಎತ್ತುಗಳೇ ಇಲ್ಲದ ಮೇಲೆ ಹಬ್ಬ ಕಳೆ ಕಟ್ಟುವುದಿಲ್ಲ. ಆದರೂ ಇರುವುದರಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಹಬ್ಬದ ಆಚರಣೆ ಮುಂದುವರೆದಿದೆ.ಸುಗ್ಗಿ ಕಾಲದಲ್ಲಿ ಬರುವ ಸಂಕ್ರಾಂತಿಗೆ ಹೆಚ್ಚಿನ ಮಹತ್ವವಿದೆ. ಬಿಡುವಿಲ್ಲದ ದುಡಿತದ ನಡುವೆ ಬಿಡುವು ಮಾಡಿಕೊಂಡು ಆಚರಿಸುವ ಈ ಹಬ್ಬದಲ್ಲಿ ಕಣಜ ತುಂಬುವ ಸಂತಸದ ಸೊಗಡಿದೆ. ಸಂಭ್ರಮದ ಸೊಬಗಿದೆ. 

Post Comments (+)