ಶನಿವಾರ, ಜೂಲೈ 11, 2020
21 °C

ಮಾವುಬೆಳೆಯಲು ರೈತರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾವುಬೆಳೆಯಲು ರೈತರಿಗೆ ಸಲಹೆ

ಕನಕಪುರ: ಮಾವು ಬೆಳೆಯನ್ನು ಪ್ರೋತ್ಸಾಹಿಸಲು ಸರ್ಕಾರ ರೂಪಿಸಿರುವ ಯೋಜನೆಗಳನ್ನು ರೈತರು ಸದ್ಬಳಕೆ ಮಾಡಿಕೊಂಡು ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ರಂಗಸ್ವಾಮಿ ಇಲ್ಲಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ವೆಂಕಟರಾಯನದೊಡ್ಡಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಾವು ಬೇಸಾಯದಲ್ಲಿ ಮೋಹಕ ಬಲೆಗಳ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರೇಷ್ಮೆ ಹೊರತುಪಡಿಸಿದರೆ ಕೃಷಿಯಲ್ಲಿ ಮಾವು ಬೇಸಾಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕೇವಲ 2-3 ವರ್ಷಗಳು ಮಾವಿನ ಸಸಿಗಳನ್ನು ಪೋಷಣೆಮಾಡಿದರೆ ಸಾಕು ಅವು ನಮ್ಮ ಇಡೀ ಕುಟುಂಬವನ್ನು ಜೀವಿತ ಕಾಲದವರೆಗೂ ಆರ್ಥಿಕವಾಗಿ ಸಂರಕ್ಷಣೆ ಮಾಡುತ್ತವೆ ಎಂದರು. ವಿಜ್ಞಾನಿ ಡಾ.ಶಿವಾನಂದ ಮಾತನಾಡಿ, ಮಾವಿನ ಬೇಸಾಯ ಮತ್ತು ಕೊಯ್ಲೋತ್ತರ ತಂತ್ರಜ್ಞಾವನ್ನು ರೈತರು ಸರಿಯಾದ ರೀತಿಯಲ್ಲಿ ಅನುಸರಿಸದ ಕಾರಣ ಶೇ 30 ಫಸಲು ನಷ್ಟವಾಗುತ್ತಿದೆ.ಆದ್ದರಿಂದ  ರೈತರು ತೋಟಗಾರಿಕೆ ಇಲಾಖೆಯವರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ನಷ್ಟವನ್ನು ತಡೆಗಟ್ಟಿ ಹೆಚ್ಚಿನ ಆದಾಯ ಗಳಿಸಬೇಕು.ಗಿಡಗಳಿಗೆ ರಾಸಾಯನಿಕ ಗೊಬ್ಬರ ಹಾಕುವುದನ್ನು ನಿಯಂತ್ರಿಸಿ, ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುವುದಲ್ಲದೆ. ಖರ್ಚು ಸಹ ಕಡಿಮೆಯಾಗಿ ಆದಾಯ ಹೆಚ್ಚಾಗುತ್ತದೆ.ಮುಂದಿನ ದಿನಗಳಲ್ಲಿ ನೀರಿನ ಅಭಾವ ಹೆಚ್ಚಾಗುವುದರಿಂದ ನೀರು ಸಂರಕ್ಷಣೆ ಮಾಡಲು ಹನಿ ನಿರಾವರಿ ಪದ್ಧತಿ ಅಳವಡಿಕೊಳ್ಳಲು ಸಲಹೆ ನೀಡಿದರು.ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ರಘು ಮಾತನಾಡಿ, ಉತ್ತಮ ಫಸಲು ಸಿಗಬೇಕಾದರೆ ಮಾವಿನ ಮರಗಳು ಹೂ ಬಿಡಲು ಪ್ರಾರಂಭಿಸಿದ ದಿನದಿಂದಲೇ ಅವುಗಳಿಗೆ ರೋಗ ತಗುಲದಂತೆ ಪೋಷಣೆಮಾಡಬೇಕು. ಕಾಲಕಾಲಕ್ಕೆ ಔಷಧಿ ಸಿಂಪಡಿಸಿಬೇಕು, ಲಿಂಗಾಕರ್ಷಕ ಬಲೆಗಳನ್ನು ಉಪಯೋಗಿಸಿ ನೊಣ ಮತ್ತು ಓಟೆ ಕೊರಕ ಹುಳುಗಳನ್ನು ನಿಯಂತ್ರಿಸಿ ಹೆಚ್ಚಿನ ಇಳುವರಿ ಪಡೆಯುವಂತೆ ಸೂಚಿಸಿದರು.ಲಿಂಗಾಕರ್ಷಕ ಬಲೆಗಳನ್ನು ಕಟ್ಟುವುದರಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಹಣ್ಣು ಕೊರಕ ಕೀಟಗಳು ಈ ಬಲೆಗೆ ಬೀಳುತ್ತವೆ. ಇದರಿಂದ ಹಣ್ಣಿನ ಗುಣಮಟ್ಟ ಹೆಚ್ಚಾಗುತ್ತದೆ. ಒಂದು ಎಕರೆಗೆ ನೋವಾನ್ ಹಾಕಿರುವ 6 ಲಿಂಗಾಕರ್ಷಕ ಬಲೆಗಳನ್ನು ಕಾಯಿ ಬಂದ ನಂತರ ಮತ್ತು ಹಣ್ಣುಗಳನ್ನು ಕೊಯ್ಲು ಮಾಡುವ 30 ದಿನಗಳ ಮುಂಚೆ ಕಟ್ಟಬೇಕು ಎಂದು ರೈತರಿಗೆ ಮಾಹಿತಿ ನೀಡಿದರು.ತಾ. ಪಂ. ಸದಸ್ಯ ರಂಗಯ್ಯ, ಗ್ರಾ.ಪಂ. ಉಪಾಧ್ಯಕ್ಷ ಸ್ವಾಮಿ, ರೈತ ಮುಖಂಡ ಜೆ.ರಾಮು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹಾಗೂ ನೂರಾರು ರೈತರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ತೋಟಗಾರಿಕೆ ಪಿತಾಮಹ ದಿವಂಗತ ಎಂ.ಎಚ್.ಮರೀಗೌಡ ಅವರ ಸಾಧನೆಗಳ ಸ್ಮರಣೆಯ ಕೈಪಿಡಿಯನ್ನು ರೈತರಿಗೆ ವಿತರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.