ಶನಿವಾರ, ನವೆಂಬರ್ 16, 2019
21 °C
ಅಧಿಕ ತಾಪಮಾನಕ್ಕೆ ಕುಸಿದ ಇಳುವರಿ; ಗೇಣಿದಾರರ ಕೈಗೆಟುಕದ ಬೆಳೆ

ಮಾವು ಆವಕ ಇಳಿಮುಖ; ಆತಂಕದಲ್ಲಿ ವರ್ತಕ

Published:
Updated:
ಮಾವು ಆವಕ ಇಳಿಮುಖ; ಆತಂಕದಲ್ಲಿ ವರ್ತಕ

ಸಂತೇಬೆನ್ನೂರು:  ಇಲ್ಲಿನ ಮಾವು ಖರೀದಿ ಕೇಂದ್ರಗಳಲ್ಲಿ ಮಾವಿನ ಫಸಲು ಆವಕ ತೀವ್ರ ಇಳಿಮುಖ ಕಂಡಿದೆ. ಪ್ರತಿ ವರ್ಷದಂತೆ ಈ ಬಾರಿ ಬಿರುಸಿನ ವಹಿವಾಟು ಇಲ್ಲದೆ ವರ್ತಕರು ಹಿನ್ನಡೆ ಅನುಭವಿಸಿದ್ದಾರೆ.ಕಳೆದ ಬಾರಿ ಏಪ್ರಿಲ್ ತಿಂಗಳ ಆರಂಭದ ವೇಳೆಗೆ ಇಲ್ಲಿನ ಖರೀದಿ ಕೇಂದ್ರಗಳಿಂದ ಸುಮಾರು 500 ಟನ್‌ಗಳಷ್ಟು ವಿವಿಧ ತಳಿಯ ಮಾವು ಮಾರುಕಟ್ಟೆ ತಲುಪಿತ್ತು. ಈ ಬಾರಿ 100 ಟನ್‌ಗಳಷ್ಟು ಮಾತ್ರ ಖರೀದಿಸಲಾಗಿದೆ. ಶೇ 80ರಷ್ಟು ವಹಿವಾಟು ಕುಸಿತ ಕಂಡಿದೆ. ಮಳೆಯ ಕೊರತೆ, ತಾಪಮಾನದ ಹೆಚ್ಚಳದಿಂದ ಹೂ ಗೊಂಚಲು ಈಚು-ಕಾಯಿಗಳಾಗದೆ ಉದುರಿದ ಕಾರಣ ಇಳುವರಿ ಕುಸಿದಿದೆ ಎನ್ನುತ್ತಾರೆ ಸೌದಾಗರ್ ಫ್ರೂಟ್ ಕಂಪೆನಿ ಮಾಲೀಕ ಜಾವೀದ್.ಕೈಕೊಟ್ಟ ಬಾದಾಮಿ

ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ 2 ಸಾವಿರ ಹೆಕ್ಟೇರ್‌ಗಳಲ್ಲಿ ವಿವಿಧ ತಳಿಯ ಮಾವು ಬೆಳೆಯಲಾಗುತ್ತಿದೆ. ಅವುಗಳಲ್ಲಿ ವ್ಯಾಪಕವಾಗಿ ಬಾದಾಮಿ ತಳಿಯ ಮಾವಿನ ಮರಗಳು ಇವೆ. ಈ ಬಾರಿ ಅವುಗಳಲ್ಲಿ ಶೇ. 10ರಷ್ಟು ಮರಗಳು ಮಾತ್ರ ಫಸಲು ನೀಡಿವೆ. ಉಳಿದಂತೆ ಮರಗಳು ಹೂ ಬಿಟ್ಟಿಲ್ಲ, ಹೂ ಬಿಟ್ಟರೂ ಕಾಯಿಗಳಾಗಿ ಪರಿವರ್ತನೆಗೊಂಡಿಲ್ಲ. ಬಾದಾಮಿ ಮಾವು ಉತ್ಕೃಷ್ಟ ತಳಿ.  ಮಾರುಕಟ್ಟೆಯಲ್ಲಿ ಬೇಡಿಕೆ ಅಧಿಕ. ಬೆಲೆಯೂ ಹೆಚ್ಚು. ಸದ್ಯ ಇಲ್ಲಿನ ಖರೀದಿ ಕೇಂದ್ರಗಳಲ್ಲಿ 1 ಕೆ.ಜಿ. ಬಾದಾಮಿ ಬೆಲೆ  ್ಙ 50 ನಿಗದಿಗೊಳಿಸಲಾಗಿದೆ. ರಸಪೂರಿ, ತೋತಾಪೂರಿ, ನೀಲಂ... ತಳಿಯ ಹಣ್ಣುಗಳನ್ನು ರೈತ, ಗೇಣಿದಾರರಿಂದ ್ಙ 10ರಿಂದ 15ರ ಆಸುಪಾಸಿನಲ್ಲಿ ಖರೀದಿಸಲಾಗುತ್ತಿದೆ ಎನ್ನುತ್ತಾರೆ ವರ್ತಕ ಲಿಯಾಖತ್.ಗೇಣಿದಾರರ ಗೊಂದಲ

ರೈತರ ಮಾವಿನ ತೋಟಗಳನ್ನು ಗೇಣಿದಾರರು ನಿರ್ದಿಷ್ಟ ಅವಧಿಗೆ, ನಿಗದಿತ ಹಣಕ್ಕೆ ಗೇಣಿ ಮಾಡುವುದು ವಾಡಿಕೆ. ಇದು 1 ವರ್ಷದಿಂದ 3 ವರ್ಷದವರೆಗೂ ಗುತ್ತಿಗೆ ರೂಪದಲ್ಲಿರುತ್ತದೆ. ಅದಕ್ಕಾಗಿ ರೈತರಿಗೆ ಮುಂಗಡ ಹಣ ನೀಡಿರುತ್ತಾರೆ.ಫಸಲು ಕೊಯ್ಲು ಆದ ನಂತರ ಹಣ ಸಂದಾಯ ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಈ ಬಾರಿ ಹಲವು ತೋಟಗಳಲ್ಲಿ ಮಾವಿನ ಮರಗಳು ಕಾಯಿ ಇಲ್ಲದೆ ಖಾಲಿ ಹೊಡೆಯುತ್ತಿವೆ. ಈಗಾಗಲೇ ಮುಂಗಡ, ನಿರ್ವಹಣೆ, ಔಷಧಿಗಳಿಗಾಗಿ ಲಕ್ಷಾಂತರ ಬಂಡವಾಳ ಹೂಡಿ ಕೈ ಸುಟ್ಟುಕೊಳ್ಳುವ ಸಂಕಷ್ಟದಲ್ಲಿದ್ದಾರೆ. ಹಲವೆಡೆ ರೈತರಿಗೆ ಮುಂಗಡ ನೀಡಿದ ಗೇಣಿದಾರರು ಬೆಳೆ ಹಾನಿಯಿಂದ ಮತ್ತೆ ತಿರುಗಿ ನೋಡಿಲ್ಲ ಎನ್ನುತ್ತಾರೆ ಅಂಜು.ರೈತರ ಅಳಲು

ಸತತ ಮಳೆ ವೈಫಲ್ಯದಿಂದ ಮಾವು ಬೆಳೆ ಇಳಿಮುಖ ಕಂಡಿದೆ. ಶೀಘ್ರ ಮಳೆ ಬಾರದಿದ್ದಲ್ಲಿ ಮಾವಿನ ಮರಗಳು ಒಣಗುವ ಹಂತ ತಲುಪಿವೆ. ಅಂತರ್ಜಲ ತೀವ್ರಗತಿಯಲ್ಲಿ ಕೆಳಗಿಳಿದ ಕಾರಣ ಬೇರುಗಳಿಗೆ  ತೇವಾಂಶ ಸಿಗದೆ ಒಣಗುವ ಸಾಧ್ಯತೆಗಳಿವೆ. ಮಾವಿನ ಹೂ ಸಮೃದ್ಧವಾಗಿ ಈಚುಗಳಾಗಿ ಪರಿವರ್ತನೆಗೊಳ್ಳಲು 20ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪ ಇರಬೇಕು. ತಾಪಮಾನದ  ಹೆಚ್ಚಳ ಕೂಡ ಈ ಪರಿಸ್ಥಿತಿಗೆ  ಕಾರಣವಾಗಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಕಾಣುತ್ತಿದ್ದ   ರೈತನಿಗೆ ಆಘಾತ ನೀಡಿದೆ ಎನ್ನುತ್ತಾರೆ  ರೈತರಾದ ಎಚ್.ಸಿ. ನಾಗರಾಜ್, ಮಂಜಪ್ಪ, ದೊಡ್ಡಬ್ಬಿಗೆರೆ ಶಿವಕುಮಾರ್.

ಪ್ರತಿಕ್ರಿಯಿಸಿ (+)