ಮಾವು ನೇರ ಖರೀದಿ ಕೇಂದ್ರ ಸ್ಥಾಪನೆ

7

ಮಾವು ನೇರ ಖರೀದಿ ಕೇಂದ್ರ ಸ್ಥಾಪನೆ

Published:
Updated:

ಕೋಲಾರ: ರಾಜ್ಯದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಯ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರೈತರಿಂದ ನೇರವಾಗಿ ಮಾವು ಖರೀದಿ ಕೇಂದ್ರ ಸ್ಥಾಪಿಸಲು ಹಾಪ್‌ಕಾಮ್ಸಗೆ ಅವಕಾಶ ಮಾಡಿಕೊಡಲಾಗುವುದು. ಅದಕ್ಕಾಗಿ ರೂ 5 ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ಎಪಿಎಂಸಿ ನಿರ್ದೇಶಕ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.ಮಾವು ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಬೆಳೆಗಾರರು ಮತ್ತು ವರ್ತಕರ ಸಭೆ ನಡೆಸಿದ ಬಳಿಕ ಮಾತನಾಡಿ, ಎಪಿಎಂಸಿ ಆವರಣದಲ್ಲಷ್ಟೇ ಅಲ್ಲದೆ, ಪಟ್ಟಣದಲ್ಲಿಯೂ ನೇರ ಖರೀದಿ ಕೇಂದ್ರ ಸ್ಥಾಪಿಸಲು ಬಯಸಿದರೆ ಅದಕ್ಕೂ ರೂ 5 ಲಕ್ಷ ಬಿಡುಗಡೆ ಮಾಡಲಾಗುವುದು. ಎಪಿಎಂಸಿ ವತಿಯಿಂದಲೇ ಸೌಕರ್ಯ ಕಲ್ಪಿಸಲಾಗುವುದು ಎಂದರು.ಎಪಿಎಂಸಿ ಆವರಣದಲ್ಲಿ ಮಾರುಕಟ್ಟೆ ಘಟಕ ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ಅಲ್ಲಿ ಕಾರ್ಯ ನಿರ್ವಹಿಸಲು ಹೆಚ್ಚುವರಿ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರನ್ನು ನಿಯೋಜಿಸಲಾಗಿದೆ. ವಹಿವಾಟು ನಡೆಯುವಷ್ಟೂ ದಿನ ಈ ಇಬ್ಬರು ಸ್ಥಳದಲ್ಲೇ ಇದ್ದು ರೈತರಿಗೆ ನೆರವು ನೀಡುತ್ತಾರೆ. ಅದರ ಜೊತೆಗೆ ಮೂರು ಕಡೆ ರೈತರ ಕುಂದು ಕೊರತೆಗಳ ವಿಭಾಗ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಬೇರೆ ಜಿಲ್ಲೆಗಳ ಎಂಟು ಮಾರುಕಟ್ಟೆ ಸಹಾಯಕರನ್ನು ನೇಮಿಸಲಾಗಿದೆ ಎಂದು ಹೇಳಿದರು.ಮೊಕದ್ದಮೆ: ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಬಳಸದ ವರ್ತಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚಿಸಲಾಗಿದೆ. ಮಾವನ್ನು ಬಹಿರಂಗವಾಗಿ ಹರಾಜು ಮಾಡುವುದು ಕಡ್ಡಾಯ. ರೈತರಿಂದ ಕಮಿನ್ ಪಡೆಯಬಾರದು. ಬಿಳಿ ಚೀಟಿ ವ್ಯವಹಾರವಿಲ್ಲ. ರಸೀದಿ ನೀಡುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಸಣ್ಣ ತೂಕದ ಯಂತ್ರಗಳ ಜೊತೆಗೆ 10ರಿಂದ 15 ವೇಯಿಂಗ್ ಬ್ರಿಡ್ಜ್‌ಗಳನ್ನು ಅಳವಡಿಸಲಾಗುವುದು.ಮಾರುಕಟ್ಟೆ ಆವರಣದಲ್ಲಿ ಶೌಚಾಲಯ ನಿರ್ಮಿಸಲಾಗುವುದು, ರೈತರಿಗೆ ತಂಗಲು ಶೆಡ್ ವ್ಯವಸ್ಥೆ ಮಾಡಲಾಗುವುದು ಎಂದರು.ಬೆಂಗಳೂರು ಬ್ಯಾಟರಾಯನಪುರ ಬಳಿ ಖಾಸಗಿ ಮಾರುಕಟ್ಟೆಯೊಂದು ನಿರ್ಮಾಣವಾಗಿದ್ದು, ಅಲ್ಲಿ ಜಿಲ್ಲೆಯ ಮಾವು ಬೆಳೆಗಾರರಿಗೆ ಮಾವು ಮಾರಾಟ ಮಾಲು 10 ಸ್ಟಾಲ್‌ಗಳನ್ನು ಹಾಕಿಕೊಡಲಾಗುವುದು. ಇರಾಡಿಯೇಶನ್ (ಯಾವುದೇ ತೋಟಗಾರಿಕೆ ಬೆಳೆಯ ಜೀವಿತಾವಧಿಯನ್ನು ವಿಸ್ತರಿಸುವ) ಕೇಂದ್ರ ಸ್ಥಾಪನೆಗೂ ಚಿಂತನೆ ನಡೆದಿದೆ ಎಂದು ತಿಳಿಸಿದರು.ಮಾರಾಟ ಘಟಕ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೈತರು ಮಾವು ಮಾರಾಟ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಲು ಅವಕಾಶ ಕಲ್ಪಿಸಲಾಗುವುದು. ಪಾಲಿಕೆಯೊಡನೆ ಚರ್ಚೆ ನಡೆದಿದ್ದು, 4-5 ತಿಂಗಳಲ್ಲಿ ಸ್ಥಳ ದೊರಕುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕಿ ಪಿ.ಹೇಮಲತಾ ತಿಳಿಸಿದರು.

ಮಾವು ರಫ್ತು ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.ಮಾವಿನ ಸ್ಲೈಸ್‌ಗಳನ್ನು ತಯಾರಿಸಿ ಮಾರುವ ಸಣ್ಣ ಘಟಕಗಳ ಸ್ಥಾಪನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಿದೆ. ಮಾರುಕಟ್ಟೆಯಲ್ಲಿ ಬಳಸಲು ಕ್ರೇಟ್ಸ್ ಪಡೆಯಲು ಮಾವು ಬೆಳೆಗಾರರ ಸಂಘ ಪ್ರಸ್ತಾವ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ಮಾವು ಮೇಳ ಆಯೋಜಿಸಲು ಸೂಚನೆ ನೀಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry