ಮಾವು: ಮರುಕಳಿಸಿದ ಅಕಾಲಿಕ ಹೂವಿನ ಸಮಸ್ಯೆ

7

ಮಾವು: ಮರುಕಳಿಸಿದ ಅಕಾಲಿಕ ಹೂವಿನ ಸಮಸ್ಯೆ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನ ಮಾವಿನ ತೋಟ­ಗಳಲ್ಲಿ ಅಕಾಲಿಕ ಮಾವಿನ ಹೂ ಬರುತ್ತಿದೆ. ಬರದ ದವಡೆಗೆ ಸಿಕ್ಕಿ ನಲುಗಿರುವ ರೈತ ಸಮುದಾಯಕ್ಕೆ ಇದು ನುಂಗಲಾಗದ ತುತ್ತಾಗಿ ಪರಿಣಮಿಸಿದೆ.ಮಾವಿನ ಸುಗ್ಗಿ ಮುಗಿದು ಮೂರು ತಿಂಗ­ಳಷ್ಟೇ ಮುಗಿದಿದೆ. ವಾಡಿಕೆಯಂತೆ ಮಾವಿನ ಹೂವು ಕಾಣಿಸಿಕೊಳ್ಳಬೇಕಾದರೆ ಡಿಸೆಂಬರ್‌ ಅಥವಾ ಜನವರಿ ಬರಬೇಕು. ಆದರೆ ಈಗಲೇ  ದಟ್ಟವಾಗಿ ಹೂ ಬರುತ್ತಿದೆ. ಅದನ್ನು ಉಳಿಸಿ­ಕೊಳ್ಳಲೂ ಆಗದೆ, ಬಿಡಲೂ ಆಗದೆ ಮಾವು ಬೆಳೆಗಾರರು ಗೊಂದಲಕ್ಕೆ ಒಳಗಾಗಿದ್ದಾರೆ.ಮಾವಿನ ಸುಗ್ಗಿ ಮುಗಿದನಂತರ ಕೆಲವೊಮ್ಮೆ ಅಪರೂಪಕ್ಕೆ ಹೂ ಬರುವುದುಂಟು. ಆದರೆ ಅಂಥ ಹೂವನ್ನು ಬೆಳೆಗಾರರು ನಿರ್ಲಕ್ಷಿಸುತ್ತಾರೆ. ಗಟ್ಟಿ ಮಳೆಯಾದರೆ ಹೂವು ತಾನಾಗಿಯೇ ಉದುರಿ ನೆಲ ಕಚ್ಚುತ್ತದೆ. ಉಳಿದ ಹೂವು ಕಾಯಿ ಕಟ್ಟಿದರೂ, ಅದು ಕೋತಿಗಳ ಹಾಗೂ ದನಗಾಹಿಗಳ ಪಾಲಾಗುತ್ತದೆ. ಕೆಲವರು ಅಂಥ ಕಾಯಿಯನ್ನು ಸಂಗ್ರಹಿಸಿ ತಂದು ಮಾರು­ಕಟ್ಟೆ­ಯಲ್ಲಿ ಉಪ್ಪಿನ ಕಾಯಿಗೆ ಮಾರುವುದುಂಟು.ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯ ಮರ­ಗಳಲ್ಲಿ ದಟ್ಟವಾಗಿ ಬರುತ್ತಿದೆ. ಇದು ಸಮಸ್ಯೆಗೆ ಕಾರಣವಾಗಿದೆ. ಕೆಲವರು ಹೂವನ್ನು ಕಿತ್ತು­ಹಾಕಲು ಮನಸ್ಸು ಮಾಡಿದ್ದಾರೆ. ಇನ್ನು ಕೆಲ­ವರು ಹೂವಿನ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಕಾರ್ತೀಕ ಕಾಯಿ­ಯನ್ನು ನಂಬಿ ರಕ್ಷಣಾ ಕಾರ್ಯ ಕೈಗೊಂಡಲ್ಲಿ ಮುಂದೆ ಸಕಾಲಿಕ ಫಸಲಿಗೆ ಸಂಚಕಾರ ಬರ­ಬಹುದು ಎಂದು ತಿಳಿದಿದ್ದಾರೆ.ಮಳೆಗಾಲದಲ್ಲಿ ನಿಗದಿತ ಪ್ರಮಾಣದ ಮಳೆ ಸುರಿಯಲಿಲ್ಲ. ವಾತಾವರಣದಲ್ಲಿ ಉಷ್ಣಾಂಶ ಸಾಮಾನ್ಯಕಿಂತ ಹೆಚ್ಚಾಗಿದೆ. ಈ ವಾತಾವರಣ ಮಾವಿನ ಮರಗಳಲ್ಲಿ ಹೂ ಕಾಣಿಸಿಕೊಳ್ಳಲು ಹಿತಕರವಾಗಿದೆ. ಆದ್ದರಿಂದಲೇ ಅಕಾಲದಲ್ಲಿ ಹೂ ಬರುತ್ತಿದೆ. ಆದರೂ ತಡವಾಗಿಯಾದರೂ ಮಳೆಯಾದಲ್ಲಿ ಈ ಹೂವಿನ ಹೆಚ್ಚಿನ ಭಾಗ ಉದುರುತ್ತದೆ. ಉಳಿದ ಹೂವು ರಕ್ಷಣಾ ಕಾರ್ಯ ಕೈಗೊಳ್ಳದಿದ್ದಲ್ಲಿ ರೋಗ ಪೀಡಿತವಾಗಿ ಹಾಳಾಗುತ್ತದೆ. ಸಕಾಲದಲ್ಲಿ ಮಾಮೂಲಿನಂತೆ ಹೂ ಬರುತ್ತದೆ ಎಂದು ಮಣಿಗಾನಹಳ್ಳಿ ಗ್ರಾಮದ ಅನುಭವಿ ಮಾವು ಬೆಳೆಗಾರ ಎನ್‌.ಶ್ರೀರಾಮರೆಡ್ಡಿ ’ಪ್ರಜಾವಾಣಿ’ಗೆ ತಿಳಿಸಿದರು.ಯಾವುದೇ ತೋಟದಲ್ಲಿ ದಟ್ಟವಾಗಿ ಹೂ ಬಂದಲ್ಲಿ ಅದನ್ನು ಉಳಿಸಿಕೊಳ್ಳಬಹುದು. ಅಗತ್ಯ ರಕ್ಷಣಾ ಕಾರ್ಯ ಕೈಗೊಂಡಲ್ಲಿ ಅಕಾಲದಲ್ಲಿ ಮಾವು ದೊರೆತು ಒಳ್ಳೆ ಲಾಭ ಸಿಗುತ್ತದೆ. ಅಂಥ ಅನುಭವ ನನಗಿದೆ ಎಂದು ಹೇಳಿದರು.  ಇತ್ತೀಚಿನ ವರ್ಷಗಳಲ್ಲಿ ಮಾವಿನ ಬೆಳೆಯೂ ತಾಳ ತಪ್ಪುತ್ತಿದೆ. ಅಕಾಲಿಕ ಹೂವಿನ ಸಮಸ್ಯೆ ಮಾತ್ರವಲ್ಲದೆ. ಸಕಾಲಿಕ ಹೂವಿಗೆ ರೋಗಬಾಧೆ ಹೆಚ್ಚಿದೆ. ಹೀಚು. ಕಾಯಿಗೂ ಅದು ತಪ್ಪಿಲ್ಲ. ಏನೆಲ್ಲ ಪ್ರಯತ್ನಗಳ ನಡುವೆಯೂ ಮಾವಿನ ಫಸಲಿಗೆ ಹೆಚ್ಚಿನ ಹಾನಿ ಉಂಟಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry