ಶುಕ್ರವಾರ, ನವೆಂಬರ್ 22, 2019
20 °C

ಮಾವೊಗಳಿಂದ ಸರ್ಕಾರಿ ಕಚೇರಿ, ಠಾಣೆ ಸ್ಫೋಟ

Published:
Updated:

ರಾಂಚಿ (ಪಿಟಿಐ): 48 ಗಂಟೆಗಳ ಜಾರ್ಖಂಡ್ ಬಂದ್‌ಗೆ ಕರೆ ನೀಡಿದ್ದ ಮಾವೊವಾದಿಗಳು, ಎರಡನೇ ದಿನವಾದ ಭಾನುವಾರ ಎರಡು ಸರ್ಕಾರಿ ಕಟ್ಟಡಗಳು ಮತ್ತು ಪೊಲೀಸ್ ಠಾಣೆಯನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.ಮುಂಜಾನೆ ಸುಮಾರು 50ರಷ್ಟು ಮಾವೊವಾದಿಗಳು ಪಲಮು ಜಿಲ್ಲೆಯ ಹರಿಹರ್‌ಗಂಜ್‌ನಲ್ಲಿನ ಕ್ಷೇತ್ರ ಅಭಿವೃದ್ಧಿ ಕಚೇರಿಯನ್ನು ಸ್ಫೋಟಿಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ ಮಾವೊವಾದಿಗಳ ಇನ್ನೊಂದು ತಂಡ ಇದೇ ಅವಧಿಯಲ್ಲಿ ಚೇನ್‌ಪುರದ ಕ್ಷೇತ್ರ ಅಭಿವೃದ್ಧಿ ಕಚೇರಿಯನ್ನೂ ಸ್ಫೋಟಿಸಿತು ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಗುಲ್ಮಾ ಜಿಲ್ಲೆಯ ಚೇನ್‌ಪುರ ಪೊಲೀಸ್ ಠಾಣೆಯ ಮೇಲೆ ಮಾವೊವಾದಿಗಳು ಗುಂಡು ಹಾರಿಸಿದ ವೇಳೆ ಪೊಲೀಸರು ಪ್ರತಿಗುಂಡು ಹಾರಿಸಿದಾಗ ಮಾವೊವದಿಗಳು ಅಲ್ಲಿಂದ ಕಾಲ್ಕಿತ್ತರು ಎಂದು ಅವರು ತಿಳಿಸಿದ್ದಾರೆ.ಇದೇ ವೇಳೆ ಚೆಬ್ರೊ ಮತ್ತು ಚೌಧ್ರಾಯ್‌ಬಾಗ್ ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಮಾವೊವಾದಿಗಳು ಇರಿಸಿದ್ದ ಬಾಂಬ್‌ನ್ನು ಪತ್ತೆ ಹಚ್ಚಿದ ಪೊಲೀಸರು ಬಳಿಕ ಅದನ್ನು ನಿಷ್ಕ್ರಿಯಗೊಳಿಸಿದರು. ಇದರಿಂದಾಗಿ ಸ್ವಲ್ಪ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ತಮ್ಮ ಕೆಲವು ನಾಯಕರುಗಳನ್ನು ವಿರೋಧಿ ಬಣ ಕಳೆದ ತಿಂಗಳು ಹತ್ಯೆ ಮಾಡಿದ್ದನ್ನು ಪ್ರತಿಭಟಿಸಿ `ಪ್ರತಿಭಟನಾ ವಾರ' ಆಚರಿಸಿದ್ದ ಮಾವೊವಾದಿಗಳು, ಬಳಿಕ ಎರಡು ದಿನಗಳ ಬಂದ್‌ಗೆ ಕರೆ ನೀಡಿದ್ದರು.ಕೊಯಮತ್ತೂರು ವರದಿ: ಪಶ್ಚಿಮ ಬಂಗಾಳದಲ್ಲಿ ನಡೆದ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಾವೋವಾದಿ ಶ್ಯಾಮಚರಣ್ ದೋದೋನನ್ನು ಭಾನುವಾರ ಇಲ್ಲಿ ಪೊಲೀಸರು ಬಂಧಿಸಿದರು. ಶನಿವಾರ ಇಲ್ಲಿಗೆ ಆಗಮಿಸಿದ್ದ ಪಶ್ಚಿಮ ಬಂಗಾಳ ಪೊಲೀಸ್ ತಂಡ, ತಮಿಳುನಾಡು ಪೊಲೀಸರ ನೆರವಿನಿಂದ ದೋದೋನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಪ್ರತಿಕ್ರಿಯಿಸಿ (+)