ಶುಕ್ರವಾರ, ಜೂನ್ 25, 2021
21 °C

ಮಾಸದಿರಲಿ ಬದುಕಿನ ಬಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೋಳಿ, ಅಬಾಲವೃದ್ಧರಾದಿಯಾಗಿ ಎಲ್ಲಾ ವಯೋಮಾನಕ್ಕೂ ಸಲ್ಲುವ ರಂಗಿನಾಟ. ಸಿಂಥೆಟಿಕ್‌ ಬಣ್ಣದ ಪುಡಿಗಳೊಂದಿಗೆ ಅಬ್ಬರದೊಂದಿಗೆ ಹಬ್ಬ ಮಾಡಿದವರು ಹಬ್ಬದ ತರುವಾಯ ಒಂದಷ್ಟು ಮಂದಿ ಚರ್ಮ, ಕೂದಲು ಮತ್ತು ಕಣ್ಣಿನ ತೊಂದರೆಯನ್ನು ಹೊತ್ತು ವೈದ್ಯರನ್ನು ಭೇಟಿಯಾಗುವುದು ಇದ್ದೇಇರುತ್ತದೆ. ನೈಸರ್ಗಿಕ, ಸಾವಯವ, ಹರ್ಬಲ್‌ ಬಣ್ಣಗಳನ್ನು ಬಳಸಲಾಗದಿದ್ದರೂ ರಾಸಾಯನಿಕಯುಕ್ತ ಬಣ್ಣಗಳನ್ನೇ ಎಚ್ಚರದಿಂದ ಬಳಸುವುದು ಅತ್ಯವಶ್ಯ. ತಪ್ಪಿದರೆ ಕಣ್ಣು, ಕೂದಲು ಮತ್ತು ಚರ್ಮದ ಸಮಸ್ಯೆಗೆ ತುತ್ತಾಗಬೇಕಾದೀತು. ಹೋಳಿ ಆಡುವ ಮುನ್ನ ವಹಿಸಬೇಕಾದ ಎಚ್ಚರಗಳ ಬಗ್ಗೆ ತಜ್ಞರು ಹೀಗೆ ಹೇಳಿದ್ದಾರೆ...ಉತ್ಸಾಹವೇ ಹಬ್ಬದ ಬಣ್ಣ

ಗುಣಮಟ್ಟ, ಇನ್‌ಗ್ರೇಡಿಯೆಂಟ್ಸ್‌ (ಬಳಕೆಯಾದ ಸಾಮಗ್ರಿ) ಬಗ್ಗೆ ಯಾವುದೇ ರೀತಿಯ ಜ್ಞಾನವಿಲ್ಲದೆ ಸಿಂಥೆಟಿಕ್‌ ಬಣ್ಣಗಳನ್ನು ಜನ ಬಳಸುತ್ತಾರೆ. ಇದರಿಂದಾಗಿ ಆ ಪುಡಿಗಳಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರವೂ ಅವರಿಗೆ ಗೊತ್ತಿರುವುದಿಲ್ಲ. ಹೋಳಿಯ ಬಣ್ಣಗಳು ಕಣ್ಣಿನಷ್ಟೇ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುವುದು ಚರ್ಮಕ್ಕೆ. ಮಿಕಾ, ಗ್ಲಾಸ್‌ ಪೌಡರ್‌ನಂತಹ ಅತ್ಯಂತ ಅಪಾಯಕಾರಿ ಅಂಶಗಳು ಹೋಳಿ ಬಣ್ಣದಲ್ಲಿರುತ್ತವೆ. ಚರ್ಮದ ಆರೋಗ್ಯ ಮತ್ತು ಅಂದ ಕಾಪಾಡುವುದು ಎರಡೂ ಸೂಕ್ಷ್ಮ, ಸಂಕೀರ್ಣ.ಕೆಮಿಕಲ್‌ ಹೋಳಿ ಬಣ್ಣಗಳಿಂದ ಚರ್ಮದ ಉರಿ, ಉರಿಯೂತ, ನವೆ/ತುರಿಕೆ, ಗುಳ್ಳೆ, ಕೆಂಪಾಗುವಿಕೆಯಂತಹ ಸಮಸ್ಯೆಗಳನ್ನು ಒಳಗೊಂಡ ಎಕ್ಸಿಮಾ ಡರ್ಮಟೈಟಿಸ್ (eczema dermatitis) ಕಾಣಿಸಿಕೊಳ್ಳುತ್ತದೆ. ಇದು ವಿಶೇಷವಾಗಿ ಒಣಚರ್ಮದವರಿಗೆ ಹೆಚ್ಚಿನ ಆತಂಕವನ್ನು ಒಡ್ಡುತ್ತದೆ. ಮೊದಲೇ ಒಣಚರ್ಮ ಇರುವವರಿಗೆ ಈ ಸಿಂಥೆಟಿಕ್‌ ಬಣ್ಣಗಳು ಚರ್ಮದ ಒಳಹೊಕ್ಕು ಇನ್ನಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಮೊಡವೆ ಇರುವವರಿಗೆ ಅದು ಹೆಚ್ಚಬಹುದು. ಹೀಗಾಗಿ ಚರ್ಮಕ್ಕೆ ಈ ಬಣ್ಣಗಳು ಹಾನಿ ಮಾಡದಂತೆ ಹುಷಾರಾಗಿ ಹೋಳಿ ಆಡುವುದು ಉತ್ತಮ.ಹೀಗೆ ಮಾಡಿ...

l ಹೋಳಿ ಆಡುವ ಮುನ್ನ ಮುಖ, ಕತ್ತು, ಕೈ–ಕಾಲಿಗೆ ಎಣ್ಣೆ ಹಚ್ಚಿಕೊಳ್ಳಿ. ಎಣ್ಣೆಯ ಬದಲು ಯಾವುದಾದರೂ ಮಾಯಿಶ್ಚರೈಸರ್‌ ಅಥವಾ ಕೋಲ್ಡ್‌ ಕ್ರೀಮ್‌ ಹಚ್ಚಿದರೂ ಸಾಕು.

l ಉಗುರುಗಳಿಗೆ ಉಗುರುಬಣ್ಣ (ನೇಲ್‌ ಪಾಲಿಶ್) ಹಚ್ಚಿ.

l ಶರೀರದ ಬಹುಪಾಲು ಮುಚ್ಚಿಕೊಳ್ಳುವಂತೆ ಬಟ್ಟೆ ಧರಿಸಿ.

l ಹೋಳಿ ಆಡಿದ ಬಳಿಕ ಉತ್ತಮ ಮಾಯಿಶ್ಚರೈಸರ್‌ ಇರುವ ಸಾಬೂನು ಇಲ್ಲವೇ ಬಾತ್‌ ಜೆಲ್‌ ಬಳಸಿ.

l ಸ್ನಾನದ ಬಳಿಕ ಅಲೊವೆರಾ ಅಥವಾ ಇತರ ಯಾವುದೇ ಉತ್ತಮ ಗಿಡಮೂಲಿಕೆಯ ಅಂಶವನ್ನು ಒಳಗೊಂಡ ಮಾಯಿಶ್ಚರೈಸರ್‌ ಹಚ್ಚಿ. ಬಾಡಿ ಲೋಷನ್‌, ಸೂದಿಂಗ್‌ ಲೋಷನ್‌ ಹಚ್ಚುವುದೂ ಉತ್ತಮ.

– ಡಾ.ಎಂ.ಕೇಶವ

ಕೇಶವಾಸ್ ಸ್ಕಿನ್ ಅಂಡ್‌ ಕಾಸ್ಮೆಟಾಲಜಿ ಕ್ಲಿನಿಕ್‌, ಮತ್ತಿಕೆರೆ

ಕಣ್ಣ ಕಾಳಜಿ

ಬಣ್ಣಗಳ ಹಬ್ಬ ಹೋಳಿ ಬಾಳಿನ ನಾಳೆಗಳನ್ನು ಕಾಡುವ ಹಬ್ಬವಾಗಬಾರದು. ಬಣ್ಣಗಳು ಚಿತ್ತಾಕರ್ಷಕವಾಗಿರುತ್ತವೆ ನಿಜ. ಆದರೆ ಬಣ್ಣ ಎರಚುವಾಗ ತಮ್ಮ ಮತ್ತು ತಮ್ಮ ಎದುರು ನಿಂತಿರುವವರ ಭವಿಷ್ಯದ ಬಗ್ಗೆ ಒಂದು ಕ್ಷಣ ಯೋಚಿಸಬೇಕು. ಬಣ್ಣಗಳಲ್ಲಿ ಅತ್ಯಂತ ಅಪಾಯಕಾರಿಯಾದ ವಿಷಾಂಶಗಳಿರುವುದು ಎಲ್ಲರಿಗೂ ಗೊತ್ತಿದೆ. ಆದರೂ ಹಬ್ಬದ ತರುವಾಯ ನಮ್ಮಲ್ಲಿಗೆ ಮಕ್ಕಳು, ದೊಡ್ಡವರು ಚಿಕಿತ್ಸೆಗಾಗಿ ಬರುತ್ತಲೇ ಇರುತ್ತಾರೆ. ಹಬ್ಬ ಒಂದು ದಿನದ ಮಾತು. ಅದು ಸವಿನೆನಪಾಗಿ ಕಾಡಬೇಕೇ ವಿನಾ ಕಹಿಯಾಗಿ ಅಲ್ಲ.

ಬಣ್ಣದ ಪುಡಿ ಎರಚಿದ ತಕ್ಷಣ ಅದು ದಾಳಿಯಿಡುವುದು ಕಣ್ಣು, ಮೂಗು ಮತ್ತು ಬಾಯಿಗೆ. ಸ್ವಲ್ಪ ಹೊತ್ತಿನಲ್ಲೇ ಕಣ್ಣು ಉರಿ, ಕೆಂಪಾಗುವಿಕೆ ಮತ್ತು ನವೆ ಶುರುವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಪುಡಿ ಅಥವಾ ಪಿಚಕಾರಿಯಲ್ಲಿ ಸ್ಪ್ರೇ ಮಾಡಿದ ಬಣ್ಣದ ನೀರು ಕಣ್ಣಿನೊಳಗೆ ಬಿದ್ದರೆ ತಾತ್ಕಾಲಿಕ ದೃಷ್ಟಿಹೀನತೆಯೂ ಕಾಡಬಹುದು. ಕೆಲವರಿಗೆ ಬಣ್ಣದ ಬುಗ್ಗೆಯನ್ನು ಎಸೆಯುವ ಹುಚ್ಚು ಇರುತ್ತದೆ. ಇದರ ಪರಿವೆಯಿಲ್ಲದೆ ತಮ್ಮ ಪಾಡಿಗೆ ಸಂಚರಿಸುವ ವ್ಯಕ್ತಿಗೆ ಅಪಾಯವು ಬಣ್ಣದ ರೂಪದಲ್ಲಿ ಸದ್ದಿಲ್ಲದೆ ಬಂದೆರಗುತ್ತದೆ.

ವಹಿಸಬೇಕಾದ ಎಚ್ಚರ

l ಬಣ್ಣದ ನೀರಿನಿಂದ ಕಣ್ಣನ್ನು ರಕ್ಷಿಸಲು ತಂಪುಕನ್ನಡಕಗಳನ್ನು ಧರಿಸಬಹುದು.

l ವಾಹನದಲ್ಲಿ ಸಂಚರಿಸುತ್ತಿದ್ದರೆ ಕಿಟಕಿಗಳನ್ನು ಬಂದ್‌ ಮಾಡಿಕೊಂಡರೆ ಸೂಕ್ತ.

l ಕಣ್ಣಿಗೆ ಬಣ್ಣದ ಪುಡಿ/ನೀರು ಬಿದ್ದರೂ ತಕ್ಷಣ ಒಳ್ಳೆಯ ನೀರಿನಲ್ಲಿ ಕಣ್ಣನ್ನು ಹುಷಾರಾಗಿ ತೊಳೆದು ರಾಸಾಯನಿಕದ ಅಂಶ ಕ್ಯಾಟರ್‍ಯಾಕ್ಟ್‌ ಪ್ರವೇಶಿಸದಂತೆ ಎಚ್ಚರವಹಿಸಿ.

l ಹೋಳಿ ಆಡುವ ವೇಳೆ ಕಣ್ಣಿಗೆ ಲೆನ್ಸ್ ಧರಿಸದಿರುವುದು ಸೂಕ್ತವಲ್ಲ.

l ತಕ್ಷಣ ಶುಚಿಯಾದ ಬಟ್ಟೆಯಿಂದ ಕಣ್ಣುಗಳನ್ನು ಕಟ್ಟಿ ನೇತ್ರತಜ್ಞರನ್ನು ಭೇಟಿಯಾಗಿ ಮತ್ತು ಕೂಲಂಕಷವಾಗಿ ತಪಾಸಣೆ ಮಾಡಿಸಿಕೊಳ್ಳಿ.

– ಡಾ.ಅರುಣ್‌ ಸಂಪ್ರತಿ,

ನೇತ್ರ ಮತ್ತು ಮೆಳ್ಳೆಗಣ್ಣು ತಜ್ಞರು, ಸಂಪ್ರತಿ ಐ ಹಾಸ್ಪಿಟಲ್,

ಕುಮಾರಪಾರ್ಕ್‌ ಪೂರ್ವ.

ಸೌಂದರ್ಯ ತಜ್ಞರ ಕಿವಿಮಾತು

ಹೋಳಿ ಆಡುವ ಭರದಲ್ಲಿ ನಾಳಿನ ಬಗ್ಗೆ ಎಚ್ಚರ ತಪ್ಪುವುದು ಸಹಜ. ಆದರೆ ಆಡುವ ಮೊದಲು ಮತ್ತು ನಂತರ ಒಂದಿಷ್ಟು ಸಮಯವನ್ನು ಮೀಸಲಿಟ್ಟರೆ ಕೂದಲು ಮತ್ತು ಚರ್ಮದ ಸೌಂದರ್ಯ ಹದಗೆಡದಂತೆ ಕಾಪಾಡಬಹುದು.

l ಆಡುವ ಮುನ್ನ ಮುಖ, ಕತ್ತು ಮತ್ತು ತೋಳಿಗೆ ಸ್ಕಿನ್‌ ಟೋನರ್‌ ಹಚ್ಚಿ­ಕೊಳ್ಳಿ. ಸೂಕ್ಷ್ಮ ಚರ್ಮ (ಸೆನ್ಸಿಟಿವ್‌ ಸ್ಕಿನ್‌) ಇರುವವರಿಗೆ ಇದು ಕಡ್ಡಾಯ.

l ಹೋಳಿ ಆಡಿದ ನಂತರ ಬಣ್ಣಗಳನ್ನು ಲವಲೇಷವೂ ಉಳಿಯದಂತೆ ತೆಗೆಯುವುದು ದೊಡ್ಡ ಸವಾಲು.

l ಹಸಿ ಹಾಲು ಅತ್ಯುತ್ತಮ ಮತ್ತು ಅತ್ಯಂತ ಸರಳವಾದ ಮಾರ್ಗ. ಯಾವುದೇ ಸೂಪರ್‌ ಮಾರ್ಕೆಟ್‌ಗಳಲ್ಲಿ ಸಿಗುವ ಮಿಲ್ಕ್‌ ಕ್ರೀಮ್‌ನಿಂದ ಮುಖ ತೊಳೆದರೂ ಗುಲಾಲ್‌ನಂತಹ ಗಾಢ ಬಣ್ಣವೂ ಹೋಗುತ್ತದೆ.

l ರೋಸ್‌ ವಾಟರ್‌ನಿಂದ ಒಂದೆರಡು ಸಲ ಮುಖವನ್ನು ಸ್ವಚ್ಛಗೊಳಿಸಬಹುದು. ಕ್ಲೆನ್ಸಿಂಗ್‌ ಮಿಲ್ಕ್‌ ಎಲ್ಲರಿಗೂ ಹೊಂದುವುದಿಲ್ಲ.

l ಗುಳ್ಳೆ (ರ್‍್ಯಾಶಸ್) ಅಥವಾ ನವೆ (ಇಚಿಂಗ್), ಕೆಂಪಾಗುವಿಕೆ (ರೆಡ್‌ನೆಸ್‌) ಮುಂತಾದ ಸಮಸ್ಯೆ ಕಾಣಿಸಿಕೊಂಡರೆ ತುಳಸಿ ಎಲೆ ಮತ್ತು ಪುದೀನಾ ಎಲೆಗಳನ್ನು ಸಮ ಪ್ರಮಾಣದಲ್ಲಿ ರುಬ್ಬಿ, ಕಡ್ಲೆಹಿಟ್ಟಿನೊಂದಿಗೆ ಕಲಸಿ ಫೇಸ್‌ ಪ್ಯಾಕ್‌ ಹಾಕಿಕೊಂಡು 20 ನಿಮಿಷದ ಬಳಿಕ ತೊಳೆಯಬೇಕು.

ಕೂದಲು ತೊಳೆಯಲು

l ರಂಗಿನಾಟವಾಡಿ ಬಂದ ತಕ್ಷಣ ಸ್ನಾನ ಮಾಡುವವರು ಮೊಸರಿಗೆ 5–6 ಹನಿ ಲಿಂಬೆರಸ ಬೆರೆಸಿ ಹಚ್ಚಬಹುದು. ಕೂದಲಿಗೆ ನೀರು ಸೋಕಿಸುವ ಮೊದಲು ಇದನ್ನು ಹಚ್ಚುವುದೂ ತಪ್ಪಲ್ಲ.

l ಮೊಸರು, ಲಿಂಬೆರಸದ ಈ ಮಿಶ್ರಣಕ್ಕೆ ಕಡಲೆಹಿಟ್ಟು ಬೆರೆಸಿ ಸಾಬೂನು, ಶ್ಯಾಂಪೂ ಬದಲು ಬಳಸಬಹುದು. ಅಂಟುವಾಳಕಾಯಿ ಪುಡಿಯನ್ನು ನೀರಲ್ಲಿ ಬೆರೆಸಿಟ್ಟು ಆ ನೀರಿನಿಂದ ಕೂದಲು ತೊಳೆಯಬಹುದು.

l ಕೆಲವರಿಗೆ ಒಂದು ವಾರದ ನಂತರ ತಲೆಬುರುಡೆ ಕೆರೆಯುವುದು ಮತ್ತು ಗುಳ್ಳೆ ಬೀಳುವುದು ಶುರುವಾಗುತ್ತದೆ. ಅಂಥವರು ದಾಸವಾಳದ ಎಲೆ ಮತ್ತು ಬಸಳೆ ಎಲೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ರುಬ್ಬಿ ತಲೆಗೆ ಹಚ್ಚಿ ಕನಿಷ್ಠ 20 ನಿಮಿಷ ಬಿಟ್ಟು ಸ್ನಾನ ಮಾಡಬೇಕು.

–ದೀಪಾ ನಾಗೇಶ್‌

ಸೌಂದರ್ಯ ತಜ್ಞೆ, ಗಾಂಧಿಬಜಾರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.