ಮಾಸದ ಕರಾಳ ನೆನಪು: ಇತ್ಯರ್ಥವಾಗದ ವ್ಯಾಜ್ಯ

7

ಮಾಸದ ಕರಾಳ ನೆನಪು: ಇತ್ಯರ್ಥವಾಗದ ವ್ಯಾಜ್ಯ

Published:
Updated:
ಮಾಸದ ಕರಾಳ ನೆನಪು: ಇತ್ಯರ್ಥವಾಗದ ವ್ಯಾಜ್ಯ

ಮಂಗಳೂರು: ಕೆಂಜಾರಿನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ಇಂದಿಗೆ ಎರಡು ವರ್ಷ ತುಂಬಿದೆ. ಆದರೆ ಈ ಕರಾಳ ನೆನಪು ನಗರದ ಜನತೆಯ ಸ್ಮೃತಿ ಪಟಲದಿಂದ ಇನ್ನೂ ಮಾಸಿಲ್ಲ. 2010 ಮೇ 22ರಂದು ಬೆಳಕು ಹರಿಯುವ ಮುನ್ನವೇ ನಡೆದ ಈ ದುರಂತವನ್ನು ನೆನದರೆ ನಗರದ ಜನತೆಯ ಮೈ ಇಂದಿಗೂ ಜುಮ್ಮೆನ್ನುತ್ತದೆ.ಮುಂದುವರಿದ ವ್ಯಾಜ್ಯ:ಈ ದುರಂತದಲ್ಲಿ  158 ಪ್ರಯಾಣಿಕರು ಮೃತಪಟಿದ್ದರು. ಮೃತರ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಮೊತ್ತದ ಬಗ್ಗೆ ವ್ಯಾಜ್ಯಗಳು ಇನ್ನೂ ಪೂರ್ತಿ ಇತ್ಯರ್ಥವಾಗಿಲ್ಲ. ಸುಮಾರು ಎರಡು ವರ್ಷಗಳ ವಿಚಾರಣೆ ಬಳಿಕ ಏರ್ ಇಂಡಿಯ ಸಂಸ್ಥೆಯ ಪರಿಹಾರ ಸಂಸ್ಥೆ ಮುಲ್ಲ ಆಂಡ್ ಮುಲ್ಲ 159 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾಗಿ ಹಾಗೂ ಒಟ್ಟು 115 ಕೋಟಿ ಪರಿಹಾರ ನೀಡಿದ್ದಾಗಿ ಹೇಳಿಕೊಂಡಿದೆ. ಈ ಪೈಕಿ 130 ಪ್ರಕರಣಗಳನ್ನು ನೇರವಾಗಿ ಹಾಗೂ 29 ಪ್ರಕರಣವನ್ನು ಕೇರಳ ಹೈಕೋರ್ಟ್ ತೀರ್ಪಿನ ಆಧಾರದಲ್ಲಿ ಇತ್ಯರ್ಥಪಡಿಸಿದ್ದಾಗಿ  ಏರ್ ಇಂಡಿಯಾ ಹೇಳಿದೆ. ಆದರೆ ಸಂಸ್ಥೆ ನೀಡಿದ ಪರಿಹಾರ ಬಹುತೇಕ ಸಂತ್ರಸ್ತ ಕುಟುಂಬಗಳಿಗೆ ತೃಪ್ತಿ ತಂದಿಲ್ಲ.`ಮಾಂಟ್ರಿಯಲ್ ಒಪ್ಪಂದದ ಪ್ರಕಾರ ಪ್ರತಿ ಸಂತ್ರಸ್ತ ಕುಟುಂಬಕ್ಕೆ ಕನಿಷ್ಠ ರೂ 75 ಲಕ್ಷ ಪರಿಹಾರ ಸಿಗಬೇಕು. ಬಳಿಕ ಮೃತರಿಗೆ ಅರ್ಹವಾಗಿ ಸಿಗಬೇಕಾದ ಮೊತ್ತವನ್ನು ಹೆಚ್ಚುವರಿಯಾಗಿ ನೀಡಬೇಕೆಂದು ಆಗ್ರಹಿಸಿ ಕೇರಳ ಮೂಲದ ಅಬ್ದುಲ್ ಸಲಾಂ ಎಂಬವರು ಕೇರಳ ಹೈಕೋಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಅವರ ರಿಟ್ ಅರ್ಜಿಗೆ ಏಕಸದಸ್ಯ ಪೀಠದಿಂದ ಮಾನ್ಯತೆ ಸಿಕ್ಕಿತು. ಈ ಬಗ್ಗೆ ತಗಾದೆ ತೆಗೆದು ಏರ್ ಇಂಡಿಯಾ ಮೇಲ್ಮನವಿ ಸಲ್ಲಿಸಿದಾಗ ವಿಭಾಗೀಯ ಪೀಠವು ಈ ತೀರ್ಪನ್ನು ತಳ್ಳಿ ಹಾಕಿತು. ಆದರೆ ಒಮ್ಮೆ ಪರಿಹಾರ ಪಡೆದವರೂ ಆ ಮೊತ್ತದ ಬಗ್ಗೆ ಅಸಮಾಧಾನ ಇದ್ದರೆ ಮತ್ತೆ ನ್ಯಾಯಾಲಯದಲ್ಲಿ ದಾವೆ ಹೂಡುವುದಕ್ಕೆ ಅವಕಾಶ ಇದೆ ಎಂದು ತೀರ್ಪು ನೀಡಿತ್ತು~ ಎಂದು ಸಂತ್ರಸ್ತ ಕುಟುಂಬದವರಾದ ಮಹಮ್ಮದ್ `ಪ್ರಜಾವಾಣಿ~ಗೆ ತಿಳಿಸಿದರು.`ಮುಲ್ಲಾ ಆಂಡ್ ಮುಲ್ಲ ಸಂಸ್ಥೆ ನೀಡಿದ ಪರಿಹಾರ ತೃಪ್ತಿ ನೀಡದ ಕಾರಣ ರಾಜ್ಯದ 15 ಸಂತ್ರಸ್ತ ಕುಟುಂಬಗಳು ಮಂಗಳೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿವೆ~ ಎಂದು ಸಂತ್ರಸ್ತ ಕುಟುಂಬದವರಲ್ಲಿ ಒಬ್ಬರಾದ ರಜಾಕ್ ತಿಳಿಸಿದರು. ಸ್ಮಾರಕ ನಿರ್ನಾಮ:

ಘಟನೆ ನಡೆದ ಸ್ಥಳದಲ್ಲಿ ಏರ್ ಇಂಡಿಯಾ ಸಂಸ್ಥೆ ಸ್ಮಾರಕವೊಂದನ್ನು ನಿರ್ಮಿಸಿತ್ತು. ಅದನ್ನೂ ಕೂಡಾ ದುಷ್ಕರ್ಮಿಗಳು ಒಡೆದು ಹಾಕಿದ್ದು, ವಿಮಾನ ದುರಂತ ನಡೆದ ಸ್ಥಳದಲ್ಲಿ ಈ ಬಗ್ಗೆ ಯಾವ ಕುರುಹೂ ಇಲ್ಲದಂತಾಗಿದೆ. ಈ ನಡುವೆ ಗುರುತು ಪತ್ತೆಯಾಗದ ಶವಗಳನ್ನು ತಣ್ಣೀರುಬಾವಿ ಬಳಿ ಸಾಮೂಹಿಕ ದಫನ ಮಾಡಲಾಗಿತ್ತು. ಈ ಪ್ರದೇಶದಲ್ಲೂ ಈಗ ಲಾರಿಗಳು ಓಡಾಡುತ್ತಿವೆ.ವಿಮಾನ ನಿಲ್ದಾಣದಲ್ಲಿ ಹೊಸ ಎಟಿಸಿ ಟರ್ಮಿನಲ್~: ವಿಮಾನ ನಿಲ್ದಾಣದಲ್ಲಿರುವ ಅನೇಕ ಲೋಪಗಳನ್ನು ಡಿಜಿಸಿಎ ತಂಡ ಪಟ್ಟಿ ಮಾಡಿ, ಅವುಗಳನ್ನು ಸರಿಪಡಿಸಲು ಸೂಚಿಸಿತ್ತು. ಈ ಪೈಕಿ ಕೆಲವು ಸೂಚನೆಗಳನ್ನು ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಅನುಷ್ಠಾನಗೊಳಿಸಿದೆ. ಶಿಫಾರಸಿನಂತೆ ಹೊಸ ಎಟಿಸಿ ಟರ್ಮಿನಲ್ ಕೂಡಾ ನಿರ್ಮಾಣವಾಗಲಿದೆ.`ಡಿಜಿಸಿಎ ಸೂಚನೆ ಮೇರೆಗೆ ವಿಮಾನ ನಿಲ್ದಾಣದಲ್ಲಿ ಡಿಸ್ಟನ್ಸ್ ಟು ಗೋ ಮಾರ್ಕರ್‌ಗಳನ್ನು ಅಳವಡಿಸಲಾಗಿದೆ. ರನ್‌ವೇಯ ಓವರ್ ಶೂಟ್ ಪ್ರದೇಶ 5 ಶೇಕಡಾದಷ್ಟು ಇಳಿಜಾರು ಇತ್ತು. ಅದನ್ನು ಭರ್ತಿಮಾಡಲಾಗಿದೆ. ರನ್‌ವೇ ಸಮೀಪ ಇದ್ದ ಅಡೆ ತಡೆಗಳನ್ನು ನಿವಾರಿಸಲಾಗಿದೆ~ ಎಂದು ಮಂಗಳೂರು ವಿಮಾನ ನಿಲ್ದಾಣದ ನಿರ್ದೆಶಕ ಎಂ.ಆರ್.ವಾಸುದೇವ್ ಸೋಮವಾರ `ಪ್ರಜಾವಾಣಿ~ಗೆ ತಿಳಿಸಿದರು.`ರನ್ ವೇ ಅಗಲ 150 ಮೀ. ನಷ್ಟು ಮಾತ್ರ ಇರುವುದರಿಂದ, ಅದು ಇನ್ನಷ್ಟು ಶಿಥಿಲಗೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ~ ಎಂದರು.  ಮಂಗಳೂರು ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ ಗೋಪುರವನ್ನು ಸ್ಥಾಪಿಸಿದ ಸ್ಥಳ ಸೂಕ್ತವಾಗಿಲ್ಲ ಎಂದು ಡಿಜಿಸಿಎ ತಂಡ ಹೇಳಿತ್ತು. ಈ ತೀರ್ಮಾನವನ್ನು ಪೂರ್ತಿ ಒಪ್ಪಲಾಗದು. ಆದರೂ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಲಾಗಿದೆ. ಶೀಘ್ರ ಹೊಸ ಟರ್ಮಿನಲ್ ನಿರ್ಮಾಣಗೊಳ್ಳಲಿದೆ~ ಎಂದರು.`ರನ್ ವೇ ಸಂಪರ್ಕ ರಸ್ತೆ ಸಮರ್ಪಕವಾಗಿಲ್ಲದ ಕಾರಣ ಅಗ್ನಿಶಾಮಕ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು. ಹಾಗಾಗಿ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 11.5 ಕೋಟಿ ಬಿಡುಗಡೆ ಮಾಡಿದೆ. ಶೀಘ್ರ ರಸ್ತೆ ನಿರ್ಮಾಣ ಕಾರ್ಯವೂ ನಡೆಯಲಿದೆ. ಅಗ್ನಿ ದುರಂತ ಹತ್ತಿಕ್ಕಲು ಸನ್ನದ್ಧತೆ ದೃಷ್ಟಿಯಿಂದಲೂ ಅಗ್ನಿಶಾಮಕ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ~ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry