ಬುಧವಾರ, ಅಕ್ಟೋಬರ್ 16, 2019
28 °C

ಮಾಸಾಶನ ತಡೆ: ಸದಸ್ಯರ ಆಕ್ರೋಶ

Published:
Updated:

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ 7500ಕ್ಕೂ ಹೆಚ್ಚು ಮಂದಿ ಮಾಸಾಶನವನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಶಶಿಧರ್, ನಿರಂಜನ್ ಹಾಗೂ ದೇವರಾಜು ಮಾತನಾಡಿ, ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ಅರ್ಹ ಫಲಾನಭವಿಗಳ ಮಾಸಾಶನಕ್ಕೆ ಕತ್ತರಿ ಹಾಕಿದ್ದಾರೆ. ನಿರ್ಗತಿಕರು, ಅಂಗವಿಕಲರು, ವಿಧವೆಯವರು ಸರ್ಕಾರ ನೀಡುವ ರೂ. 400 ಮಾಸಾಶನವನ್ನೆ ನಂಬಿ ಜೀವನ ಸಾಗಿಸುತ್ತಿದ್ದು, ಅವರ ಸ್ಥಿತಿ ಚಿಂತಾಜನಕ ವಾಗಿದೆ. ಲೋಪಕ್ಕೆ ಅಧಿಕಾರಿಗಳೇ ಹೊಣೆ ಎಂದು ಆಪಾದಿಸಿದರು. ಸಮಸ್ಯೆ ಪರಿಹಾರದ ಬಗ್ಗೆ ಪ್ರತ್ಯೇಕ ಸಭೆ ಕರೆಯುವಂತೆ ತಹಶೀಲ್ದಾರ್ ಉಮೇಶ್‌ಚಂದ್ರ ಅವರಿಗೆ ಅಧ್ಯಕ್ಷರು ಸೂಚಿಸಿದರು.

ಪಶು ಸಂಗೋಪನಾ ಇಲಾಖೆಯಿಂದ ದೊರೆಯುವ ಅನುದಾನ ಸಹಿತ ಹಸು ಸಾಲದ ಫಲಾನುಭವಿಗಳ ಆಯ್ಕೆಯಲ್ಲಿ ಇಲಾಖಾ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸದಸ್ಯ ಶಶಿಧರ್ ಹಾಗೂ ನಿರಂಜನ್ ಮಾಡಿದ ಆರೋಪಕ್ಕೆ ಸಭೆಯಲ್ಲಿ ಪಶು ಇಲಾಖೆ ಅಧಿಕಾರಿ ಹಾಗೂ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ಹಿಂದೆ  ಪ್ರತಿ ಪಂಚಾಯಿತಿ ವ್ಯಾಪ್ತಿಗೆ ರೂ. 5 ಲಕ್ಷ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಬಳಸಬಾರದೆಂಬ ಮಾರ್ಗಸೂಚಿಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಉಲ್ಲಂಘಿಸಿ ರಸ್ತೆ ಕೆಲಸಕ್ಕೆ ಬಳಸಿದ್ದಾರೆ ಎಂದು ಸದಸ್ಯ ರಮೇಶ್‌ಕುಮಾರ್ ಆರೋಪಿಸಿದರು. ಗ್ರ್ಯಾಂಟ್ ಮನೆ ಪಡೆದ ಫಲಾನುಭವಿಗಳಿಗೆ ಬ್ಯಾಂಕ್ ಪಾಸ್  ಪುಸ್ತಕ ವಿತರಿಸುವಲ್ಲಿ  ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು, ದೂರದ ಹಳ್ಳಿಯಿಂದ ಕಚೇರಿಗೆ ದಿನವೂ ಅಲೆಯುವಂತಾಗಿದೆ ಎಂದು ಸದಸ್ಯೆ ಲತಾ ಕೇಶವಮೂರ್ತಿ ದೂರಿದ ಹಿನ್ನಲೆಯಲ್ಲಿ, ನಾಳೆಯೆ ಪಾಸ್ ಪುಸ್ತಕ ವಿತರಿಸಲಾಗುವುದೆಂದರು.ಪಂಚಾಯಿತಿಗೆ ಸೇರಿದ ಅಂಗಡಿ ಮಳಿಗೆಗಳಿಂದ ರೂ. 7.5 ಲಕ್ಷ ಬಾಡಿಗೆ ಬಾಕಿಯಿದ್ದು, ಸಮಯಕ್ಕೆ ಸರಿಯಾಗಿ ವಸೂಲಾತಿ ಮಾಡುತ್ತಿಲ್ಲವೆಂದು ಸದಸ್ಯ ರು ದೂರಿದರು. ಅಧ್ಯಕ್ಷ ಜಿ.ಆರ್. ಸೀತಾರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಬೀ.ಬಿ.ಫಾತಿಮಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಗಂಗಾಧರ್, ಕಾರ್ಯನಿರ್ವಹಣಾಧಿಕಾರಿ ದಯಾ ನಂದ್ ಭಾಗವಹಿಸಿದ್ದರು.

Post Comments (+)