ಶುಕ್ರವಾರ, ಜೂನ್ 25, 2021
22 °C

ಮಾಸ್ಕೋಕ್ಕೆ ಹಾರಿದ ರಾಯಬಾಗ ಬೆಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಬಾಗ ತಾಲ್ಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳು ಇದ್ದರೂ ಸಹ ರೈತರು ಬೆಳೆದ ಕಬ್ಬು  ಸಕಾಲಕ್ಕೆ ಕಾರ್ಖಾನೆಗೆ ಹೋಗುವುದು ಕಷ್ಟ. ಹೀಗಾಗಿ ತಾಲ್ಲೂಕಿನ ಹಾರೂಗೇರಿಯ ರೈತ ಗಜಬರ ಹುಸೇನಸಾಬ ಜಮಾದಾರ ತನ್ನ ಆರು ಎಕರೆ ಜಮೀನಿನಲ್ಲಿ ಬೆಳೆದ  ಕಬ್ಬನ್ನು ನೂತನ ತಾಂತ್ರಿಕತೆ ಅಳವಡಿಸಿ ಬೆಲ್ಲವನ್ನು ಮಾಡಲು ಪ್ರಾರಂಭಿಸಿದರು. ಈಗ ಈ ಬೆಲ್ಲ ಮಾಸ್ಕೊದತ್ತ ಪಯಣ ಬೆಳೆಸಿದೆ.ಗಜಬರಿನಿಗೆ ಮನೋಜ ಎಂಬುವರು ರಸಾಯನ ಉಪಯೋಗಿಸದೆ ಬೆಲ್ಲ ಮಾಡುವ ವಿಧಿ ವಿಧಾನ ಅಳವಡಿಸುವ ಪದ್ಧತಿ ಹೇಳಿಕೊಟ್ಟರು. ಅದೇ ರೀತಿ ಬೆಲ್ಲವನ್ನು  ಮಾರುಕಟ್ಟೆಗೆ ಕಳಿಸುವುದನ್ನು ತಿಳಿಸಿಕೊಟ್ಟರು. ರಷ್ಯಾದ ಮಾಸ್ಕೊಕ್ಕೆ  ಬೆಲ್ಲವನ್ನು ರಫ್ತು ಮಾಡಲು ಅವಕಾಶ ಮಾಡಿದರು. ಮಾಸ್ಕೊದ ಅಲೆಕ್ಸಾಂಡರ್ ಎಂಬುವವರು ಹಾರೂಗೇರಿಯ ಇವರ ಅಲೆಮನೆಗೆ ಬಂದು ಬೆಲ್ಲವನ್ನು ಪರೀಕ್ಷಿಸಿ ಸಾವಯವ ಬೆಲ್ಲ ಎಂದು ದೃಢೀಕರಿಸಿದರು. ಗಜಬರಿ ಬೆಲ್ಲ ತಯಾರಿಕೆಯಲ್ಲಿ ಯಾವುದೇ ಬಗೆಯ ರಾಸಾಯನಿಕವನ್ನು ಬಳಸದೆ ಇರುವುದರಿಂದ  ಕನಿಷ್ಟ ಐದು ವರ್ಷಗಳವರೆಗೆ ಕೆಡುವುದಿಲ್ಲ.ತಾಲ್ಲೂಕಿನಲ್ಲಿ ಸುಮಾರು 300ಕ್ಕೂ ಹೆಚ್ಚು ಆಲೆಮನೆಗಳಿವೆ. ಆದರೆ ಗಜಬರ ಬೆಲ್ಲ ತಯಾರಿಸುವಲ್ಲಿ ತಮ್ಮದೇ ಆದ ಕ್ರಮವನ್ನು ಅನುಸರಿಸುತ್ತಿದ್ದಾರೆ. ಆಲೆಮನೆಯಲ್ಲಿ ನೂತನ ತಾಂತ್ರಿಕತೆಯ ಅಳವಡಿಕೆ ರಾಜ್ಯದಲ್ಲೇ ಪ್ರಥಮ ತಂತ್ರಜ್ಞಾನವೆನಿಸಿದೆ. ಬೆಲ್ಲ ತಯಾರಿಸುವಾಗ ಕಬ್ಬಿನ ರಸ ಖುದ್ದು ಶುದ್ಧೀಕರಿಸಲ್ಪಡುತ್ತದೆ. ನಸುಕಿನ 4 ಗಂಟೆಗೆ  ಕಬ್ಬನ್ನು ಬಿಸಿ ನೀರಲ್ಲಿ ತೊಳೆದು ಸ್ವಚ್ಛಗೊಳಿಸಿ ಅರೆದರೆ ಪ್ರತಿ ಟನ್‌ಗೆ ಇನ್ನೂ 10 ಕೆ.ಜಿ. ಹೆಚ್ಚಿನ ಇಳುವರಿ ಬರುತ್ತದೆ. ಪ್ರತಿ ಟನ್ ಕಬ್ಬಿಗೆ 135-140 ಕೆ.ಜಿ.ಬೆಲ್ಲ ಉತ್ಪಾದನೆಯೊಂದಿಗೆ ಪ್ರತಿ ದಿನ ಆರು ಸಾವಿರ ಲಾಭ ಸಂಪಾದನೆಯಾಗಲಿದೆ ಎನ್ನುವುದು ಗಜಬರ ಅವರ ಅನುಭವ.ಬೆಲ್ಲ ಈಗಾಗಲೇ ಮಾಸ್ಕೊ ಹಾಗೂ ಹೈದರಾಬಾದಿಗೆ ರಫ್ತು ಆಗುತ್ತಿದೆ. ಹೈದರಾಬಾದಿನ ಗೋದ್ರೆಜ್ ಕಂಪೆನಿಯವರು ಗಜಬರ್ ಅವರ ಗ್ರಾಹಕರಾಗಿದ್ದಾರೆ. ಗಜಬರ್ ಪಾಲಿಗೆ ಆಲೆಮನೆ ಲಾಭದಾಯಕ ಉದ್ಯಮವಾಗಿದ್ದು,  15 ಕುಟುಂಬಗಳು ಜೀವನ ಸಾಗಿಸುತ್ತಿವೆ.ಪ್ರತಿ ದಿನ 10 ಟನ್ ಕಬ್ಬನ್ನು ಕ್ರಸ್ಸಿಂಗ್ ಮಾಡುತ್ತಿದ್ದು, ಬೆಲ್ಲ ಮಾಸ್ಕೊಕ್ಕೆ ರಫ್ತಾಗುತ್ತಿರುವುದು ತಮ್ಮ ಹೆಮ್ಮೆ ಎನ್ನುತ್ತಾರೆ ಗಜಬರ. ರಷ್ಯಾಕ್ಕೆ ಬೆಲ್ಲವನ್ನು ಪರಿಚಯ ಮಾಡಿಸಿದ ಕೀರ್ತಿ ತಾಂತ್ರಿಕ ಸಲಹೆಗಾರ ಮನೋಜ ಅವರಿಗೆ ಸಲ್ಲುತ್ತದೆ ಎನ್ನುತ್ತಾರೆ. ಹೆಚ್ಚಿನ ಮಾಹಿತಿಗೆ ಗಜಬರ ಅವರನ್ನು (ಮೊಬೈಲ್ ಫೋ :9449309121) ಸಂಪರ್ಕಿಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.